ADVERTISEMENT

ಒಳನೋಟ: ನಲ್ಲಿ ನೀರು ಕುಡಿಯಲೂ ಯೋಗ್ಯವಲ್ಲ!

ಕೆ.ಎಸ್.ಗಿರೀಶ್
Published 2 ಜುಲೈ 2022, 21:14 IST
Last Updated 2 ಜುಲೈ 2022, 21:14 IST
ಕಲಬುರಗಿ ನಗರ ವಿವೇಕಾನಂದ ನಗರದಲ್ಲಿ ಪೂರೈಕೆಯಾದ ಹಸಿರು ಬಣ್ಣದ ನೀರು
ಕಲಬುರಗಿ ನಗರ ವಿವೇಕಾನಂದ ನಗರದಲ್ಲಿ ಪೂರೈಕೆಯಾದ ಹಸಿರು ಬಣ್ಣದ ನೀರು   

ಮಡಿಕೇರಿ: ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳ ಘಟಕಗಳಲ್ಲಿ ಶುದ್ಧೀಕರಣಗೊಂಡ ಬಳಿಕವೂ ನಗರ ಪ್ರದೇಶದ ಮನೆಗಳಿಗೆ ನಲ್ಲಿ ಮೂಲಕ ತಲುಪುವಷ್ಟರಲ್ಲಿ ನೀರು ಮತ್ತೆ ಅಶುದ್ಧಗೊಳ್ಳುತ್ತದೆ. ಬೇರೆಯೇ ಬಣ್ಣಕ್ಕೆ ತಿರುಗುತ್ತದೆ!

ನದಿ ಮೂಲದಿಂದ ಬರುವ ನೀರನ್ನು ಮೊದಲು ಮೇಲಿನಿಂದ ಕೆಳಗೆ ರಭಸವಾಗಿ ಬೀಳುವಂತೆ ಮಾಡಲಾಗುತ್ತದೆ. ನಂತರ ನದಿಯೊಳಗಿನ ನೀರಿನಲ್ಲಿ ಸೇರಿರಬಹುದಾದ ವಿವಿಧ ಅನಿಲ ಅಂಶಗಳು ಹೊರಬರುವಂತೆ ಮಾಡಲಾಗುತ್ತದೆ. ಜೊತೆಗೆ, ಈ ವಿಧಾನದಿಂದ ಆಮ್ಲಜನಕವು ನೀರಿನ ಜತೆ ಸೇರುತ್ತದೆ.

ನಂತರ, ಸಣ್ಣ ಪ್ರಮಾಣದಲ್ಲಿ ಕ್ಲೋರಿನ್‌ ಸೇರಿಸಿ ಸೆಡಿಮೆಂಟೇಷನ್‌ ಪ್ಲಾಂಟ್‌ಗೆ ಸಣ್ಣ ಕಾಲುವೆ ಮೂಲಕ ಹರಿಸಲಾಗುತ್ತದೆ. ಅಲ್ಲಿ ಕನಿಷ್ಠ 3 ಗಂಟೆ ನೀರು ನಿಂತು, ತಿಳಿಯಾದ ಬಳಿಕ ಪಾಲಿ ಅಲ್ಯುಮಿನಿಯಂ ಕ್ಲೋರೈಡ್‌ (ಪಿಎಚ್‌ಸಿ) ಸೇರಿಸಲಾಗುತ್ತದೆ. ಸಾಮಾನ್ಯ ವಾಗಿ ಈ ರಾಸಾಯನಿಕ ಅಂಶವನ್ನು ಪ್ರತಿ ಲೀಟರ್‌ ನೀರಿಗೆ ನಿಗದಿತ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಅದರಿಂದ ನೀರಿನಲ್ಲಿನ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ADVERTISEMENT

ಬಳಿಕ ನೀರನ್ನು ‘ರ‍್ಯಾಪಿಡ್ ಸ್ಯಾಂಡ್ ಫಿಲ್ಟರ್‌’ಗೆ ಹಾಯಿಸಲಾಗುತ್ತದೆ. ಅಲ್ಲಿ ಮರಳು ಮತ್ತು ಕಲ್ಲುಗಳ ಮೂಲಕ ನೀರು ಹರಿದು ಸಂಪ್‌ನಲ್ಲಿ ಶೇಖರಣೆಗೊಳ್ಳುತ್ತದೆ. ನಂತರ, ಬ್ಯಾಕ್ಟೀರಿಯಾಮುಕ್ತಗೊಳಿಸಲು ನಿಗದಿತ ಪ್ರಮಾಣದಲ್ಲಿ ಕ್ಲೋರಿನ್‌ ಅನ್ನು ಸೇರಿಸಿ, ಅಂತಿಮವಾಗಿ ಶುದ್ಧೀಕರಣಗೊಳಿಸಲಾಗುತ್ತದೆ.

‘ಈ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿರುತ್ತದೆ’ ಎಂದು ಮೈಸೂರಿನ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ಕೊಳವೆಬಾವಿಯ ನೀರಿನ ಮಿಶ್ರಣ

ಮೈಸೂರು ಸೇರಿ ಬಹುತೇಕ ನಗರಗಳಲ್ಲಿ ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ಲಭ್ಯವಿರುವ ನೀರಿನ ಜೊತೆ ಕೊಳವೆ ಬಾವಿ ನೀರನ್ನು ನೇರವಾಗಿ ಸೇರಿಸಲಾಗುತ್ತಿದೆ. ಶುದ್ಧೀಕರಣ ಆಗಿರದ ಕೊಳವೆಬಾವಿಯ ನೀರಿನಲ್ಲಿ ಅಪಾಯಕಾರಿ ಸೂಕ್ಷ್ಮಾಣುಜೀವಿ, ಅನಗತ್ಯ ಲವಣಗಳು ಇರುತ್ತವೆ.

ಬಹುತೇಕ ಕಡೆ ಕೊಳವೆಬಾವಿಗಳ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ. ಕೊಳವೆಬಾವಿಯ ನೀರು, ಶುದ್ಧೀಕರಣಗೊಂಡ ನೀರಿನ ಜೊತೆ ಮಿಶ್ರಣಗೊಂಡು ಮನೆಗೆ ತಲುಪುವಷ್ಟರಲ್ಲಿ ಪುನಃ ಕಲುಷಿತಗೊಳ್ಳುತ್ತದೆ.

ನಲ್ಲಿಗೆ ತಲುಪುವಷ್ಟರಲ್ಲಿ ಮಾಲಿನ್ಯ

ಶುದ್ಧೀಕರಣಗೊಂಡ ನೀರು ಕೊಳವೆಗಳ ಮೂಲಕ ಹರಿದು ಓವರ್‌ ಹೆಡ್‌ ಟ್ಯಾಂಕ್ ತಲುಪಿ, ಮನೆಗಳ ನಳಕ್ಕೆ ತಲುಪುವಷ್ಟರಲ್ಲಿ ನದಿ ನೀರಿಗಿಂತಲೂ ಅಧಿಕ ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಓವರ್‌ ಹೆಡ್‌ ಟ್ಯಾಂಕ್‌ನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅಪಾಯಕಾರಿ ಸೂಕ್ಷ್ಮಾಣುಜೀವಿಗಳು ನೀರಿನಲ್ಲಿ ಸೇರುತ್ತವೆ. ಒಳಚರಂಡಿ ನೀರಿನ ಪೈಪ್‌ಗಳ ಜೊತೆಗೆ ನೀರಿನ ಪೈಪ್‌ಗಳೂ ಸೇರುವುದರಿಂದ ಕುಡಿಯುವ ನೀರಿನ ಜೊತೆ ಒಳಚರಂಡಿ ನೀರೂ ಸೇರಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.