ADVERTISEMENT

ಗೋಪ್ಯತೆ ನೆರಳಲ್ಲಿ ವಿಕೃತಿ

ಸಂತ್ರಸ್ತೆ ಹೆಸರಲ್ಲಿ ಆಪ್ತೆಗೆ ನಿವೇಶನ l ಸವಲತ್ತಿಗೆ ಅಧಿಕಾರಿಗಳೇ ಅಡ್ಡಗಾಲು

ಡಿ.ಬಿ, ನಾಗರಾಜ
Published 6 ಜುಲೈ 2019, 20:15 IST
Last Updated 6 ಜುಲೈ 2019, 20:15 IST
   

ಮೈಸೂರು: ಲೈಂಗಿಕ ಶೋಷಣೆಗೆ ತುತ್ತಾದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಬೇಕೆಂಬ ಉದಾತ್ತ ಆಶಯಗಳೊಂದಿಗೆ ಜಾರಿಗೊಳಿಸಿರುವ ಕಾರ್ಯಕ್ರಮಗಳು ನಾನಾ ಇಲಾಖೆ ಅಧಿಕಾರಿಗಳ ಹೊಣೆಗೇಡಿತನದಿಂದ ಅರ್ಹರ ಪಾಲಿಗೆ ಮರೀಚಿಕೆಯಾಗಿವೆ.

ಅನುಷ್ಠಾನದ ತಳ ಹಂತದ ಅಧಿಕಾರಿಗಳ ಕರಾಮತ್ತಿನ ‘ಕೈ ಚಳಕ’ಕ್ಕೆ ಸರ್ಕಾರದ ಯಾವುದೇ ಸೌಲಭ್ಯ ದಮನಿತ ಮಹಿಳಾ ಸಮೂಹವನ್ನು ತಲುಪಿಲ್ಲ. ಹತ್ತೆಂಟು ವಿಘ್ನಗಳ ನಡುವೆಯೂ ಸೌಲಭ್ಯಗಳಿಗಾಗಿ ಸಂತ್ರಸ್ತ ಮಹಿಳೆಯರು ಅಧಿಕಾರಿಗಳ ಬಳಿ ಹೋಗಿ ನಿಂತರೆ, ಸಹಾನುಭೂತಿಯ ಆಷಾಢಭೂತಿತನ‌‌ ಬಿಟ್ಟರೆ ಬೇರೇನೂ ದೊರೆಯುತಿಲ್ಲ.‌‌

ದಮನಿತ ಮಹಿಳೆಯರಿಗೆ (ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯರಿಗೆ) ನಿವೇಶನ ನೀಡಬೇಕು. ಸೂರು ಕಟ್ಟಿಕೊಳ್ಳಲು ಆರ್ಥಿಕ ನೆರವು ಒದಗಿಸಬೇಕು ಎಂಬುದು ಆ ಕಾರ್ಯಕ್ರಮಗಳಲ್ಲೊಂದು. ಇದು ಉಳಿದ ಯೋಜನೆಗಳಂತಲ್ಲ, ನಿವೇಶನ ನೀಡುವ ಸಂದರ್ಭ ದಮನಿತರ ಗುರುತು ಬಹಿರಂಗಪಡಿಸಬಾರದು. ಯಾವೊಂದು ದಾಖಲೆ ಕೇಳಬಾರದು. ಗೋಪ್ಯತೆ ಕಾಪಾಡಬೇಕಾದುದ್ದು ಕಡ್ಡಾಯ. ಆದರೆ, ಈ ಗೋಪ್ಯತೆ ನಿಯಮವೇ ಕೆಳ ಹಂತದ ಅಧಿಕಾರಿಗಳ ಪಾಲಿಗೆ ವರವಾಗಿದೆ. ಇದರಿಂದಾಗಿ, ‌ ಯಾರಿಗೆ ಯೋಜನೆಯ ಪ್ರಯೋಜನ ಸಿಗಬೇಕಿತ್ತೋ ಅವರು ಅದೇ ಸ್ಥಿತಿಯಲ್ಲಿರುವಂತಾಗಿದೆ.

ADVERTISEMENT

ಸೌಲಭ್ಯಗಳನ್ನು ಒದಗಿಸುವ ವಿಷಯದಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲೊಲ್ಲ ಎಂಬ ವಾತಾವರಣ ಬಹುತೇಕ ಜಿಲ್ಲೆಗಳಲ್ಲಿ ನಿರ್ಮಾಣಗೊಂಡಿದೆ. ದಮನಿತ ಮಹಿಳೆಯರು ನಿವೇಶನ ಕೋರಿ ತಳ ಹಂತದ ಅಧಿಕಾರಿಗಳಾದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿ ಹೋಗಿ ನಿಂತರೆ ಸಾಕು; ಇನ್ನೊಮ್ಮೆ ಸೌಲಭ್ಯ ಕೇಳಿಕೊಂಡು ಅತ್ತ ಸುಳಿಯಬಾರದು ಎನ್ನುವಂತಹ ಸನ್ನಿವೇಶ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.

ಆ ಮಹಿಳೆಯರು ನಿವೇಶನ ಕೋರಿ ಅಧಿಕಾರಿ ಬಳಿತೆರಳಿದರೆ, ‘ನಿಮಗೆ ನಿವೇಶನ ಒದಗಿಸಿ, ಮನೆ ಕಟ್ಟಿಕೊಡಬೇಕು ಎಂಬುದು ಸರ್ಕಾರದ ಸೂಚನೆ. ನಮ್ಮ ಆಶಯವೂ ಅದೇ ಆಗಿದೆ. ಆದರೆ ನೀವು ಸೂಕ್ತ ದಾಖಲೆ ಒದಗಿಸಬೇಕು. ನಂತರ ನಿಮ್ಮಂಥವರ ದಾಖಲೆಗಳನ್ನು ಕ್ರೋಡೀಕರಿಸಿ, ಒಂದೇ ಕಡೆ ನಿವೇಶನ ಮಂಜೂರು ಮಾಡುತ್ತೇವೆ. ಆ ಬಳಿಕ ನಿವೇಶನದ ಮುಂಭಾಗದಲ್ಲಿ ನಿಮ್ಮನ್ನು ನಿಲ್ಲಿಸಿ ಫೋಟೊ ತೆಗೆಯಬೇಕು. ನಿಮ್ಮಂಥವರಿಗಾಗಿ ಪ್ರತ್ಯೇಕ ಕಾಲೊನಿ ನಿರ್ಮಿಸಿ ನಾಮಫಲಕವೊಂದನ್ನು ತೂಗು ಹಾಕಬೇಕಾಗುತ್ತದೆ’ ಎಂಬ ಪೀಠಿಕೆಯನ್ನು ಸಂಬಂಧಿಸಿದ ಅಧಿಕಾರಿ ಹಾಕುತ್ತಿದ್ದಂತೆಯೇ, ‘ನೀವೂ ಬೇಡ, ನಿಮ್ಮ ನಿವೇಶನವೂ ಬೇಡ’ ಎಂದು ಕೈ ಮುಗಿದು ವಾಪಸ್‌ ಬಂದ ದಮನಿತ ಮಹಿಳೆಯರು ಚಾಮರಾಜನಗರ ಜಿಲ್ಲೆಯಲ್ಲಿ ಹಲವರಿರುವುದು ತಮ್ಮ ಗಮನಕ್ಕೆ ಬಂದಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ.

‘ಹಾಸನ ಜಿಲ್ಲೆಯಲ್ಲಿ ಈ ಮಹಿಳೆಯರಿಗಾಗಿ 51 ನಿವೇಶನ ಕೊಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಆಡಳಿತ ತಿಳಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿಚಾರಿಸಿದರೆ,ಗೋಪ್ಯತೆ ಅಂಶ ಪ್ರಸ್ತಾಪಿಸಿ, ಯಾವ ಮಾಹಿತಿಯನ್ನೂ ಕೊಡುವುದಿಲ್ಲ. ಸಿಇಒ ಜತೆ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ನಿವೇಶನಗಳು ಅರ್ಹ ದಮನಿತೆಯರಿಗೆ ಸಿಕ್ಕಿವೆಯಾ? ಅಥವಾ ಅವರ ಹೆಸರಿನಲ್ಲಿ ಬೇರೆಯವರು ಲಪಟಾಯಿಸಿದ್ದಾರಾ? ಎಂಬ ಸಂಶಯ ಕಾಡುತ್ತಿದೆ. ನಮ್ಮ ಸಂಪರ್ಕದಲ್ಲಿರುವ ಯಾವೊಬ್ಬ ದಮನಿತ ಮಹಿಳೆಗೂ ನಿವೇಶನ ಸಿಕ್ಕಿಲ್ಲ. ಇದು ಅನುಮಾನ ಹೆಚ್ಚಿಸಿದೆ’ ಎಂದು ಅವರು ಆರೋಪಿಸುತ್ತಾರೆ.

‘ನಿವೇಶನಕ್ಕೆ ಮನವಿ ಸಲ್ಲಿಸಿದವರಿಗೆ ವೃತ್ತಿ ನಮೂದಿಸುವಂತೆ ಸೂಚಿಸಿದ ಅಧಿಕಾರಿಗಳಿದ್ದಾರೆ. ನಾವು ಕೇಳುವ ದಾಖಲೆ ಒದಗಿಸಿ, ನಿಮ್ಮಂತಹವರಿಗೆಲ್ಲ ಒಂದೆಡೆ ನಿವೇಶನ ಮಂಜೂರು ಮಾಡಿ, ಕಾಲೊನಿ ನಿರ್ಮಿಸಿದರಾಯ್ತು ಎಂದ ಅಧಿಕಾರಿ ವರ್ಗವೂ ಇದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನಾಮಫಲಕ ತೂಗು ಹಾಕಿಕೊಳ್ಳಲು ಹಿಂಜರಿದ ಈ ಮಹಿಳೆಯರು, ಸರ್ಕಾರಿ ಸೌಲಭ್ಯಗಳ ಸಹವಾಸವೇ ಬೇಡ ಎಂದು ದೂರ ಸರಿದಿದ್ದಾರೆ’ ಎನ್ನುತ್ತಾರೆ ಮೈಸೂರಿನ ‘ಒಡನಾಡಿ’ ಸಂಸ್ಥೆಯ ಸ್ಟ್ಯಾನ್ಲಿ.

‘ದಮನಿತರನ್ನು ಸರ್ಕಾರಿ ಯೋಜನೆಯ ಸನಿಹವೇ ಸುಳಿಯದಂತೆ ನೋಡಿಕೊಳ್ಳುವ ಕೆಳ ಹಂತದ ಅಧಿಕಾರಶಾಹಿ; ಮತ್ತೊಂದೆಡೆ ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂಬುದನ್ನೇ ದಾಳವನ್ನಾಗಿಸಿಕೊಂಡು, ದಮನಿತರ ಹೆಸರಿನಲ್ಲಿ ತಮ್ಮ ಅತ್ಯಾಪ್ತ ಮಹಿಳೆಯರಿಗೆ/ ಪ್ರೀತಿ ಪಾತ್ರಳಾದಾಕೆಗೆ ನಿವೇಶನ ಮಂಜೂರು ಮಾಡಿರುವುದು ಚಾಮರಾಜನಗರ, ಹಾಸನ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧೆಡೆ ಬೆಳಕಿಗೆ ಬಂದಿವೆ. ಇಲ್ಲಷ್ಟೇ ಅಲ್ಲ. ಸರ್ಕಾರದ ನಾನಾ ಇಲಾಖೆಗಳಿಗೆ ಈ ರೋಗ ಹಬ್ಬಿದೆ. ಸದುದ್ದೇಶದಿಂದ ಜಾರಿಗೊಳಿಸಿರುವ ಕಾರ್ಯಕ್ರಮವೊಂದು ಭ್ರಷ್ಟರಿಂದಾಗಿ ಹಳಿ ತಪ್ಪಿದೆ’ ಎನ್ನುತ್ತಾರೆ ಅವರು.

‘ಉದ್ಯೋಗಿನಿ ಯೋಜನೆಯಡಿ ಅಸಹಾಯಕ ಮಹಿಳೆಗೆ ₹ 3 ಲಕ್ಷ ನೆರವು ನೀಡಬೇಕು. ಇದರಲ್ಲಿ ಶೇ 40 ಸಬ್ಸಿಡಿ ಇರಲಿದೆ. ಸಬ್ಸಿಡಿಗಾಗಿ ಮಾತ್ರ ಬರುತ್ತಾರೆ. ಸಾಲ ತೀರಿಸುವುದಿಲ್ಲ ಎನ್ನುವ ಕಾರಣಕ್ಕಾಗಿ ಇಂಥ ಯಾವೊಬ್ಬ ಮಹಿಳೆಗೂ ಬಿಡಿಗಾಸಿನ ನೆರವೂ ಸಿಕ್ಕಿಲ್ಲ. ದಮನಿತ ಮಹಿಳೆ ಎಂದು ಅರಿವಾಗುತ್ತಿದ್ದಂತೆಯೇ ಹತ್ತಿರಕ್ಕೂ ಬಿಟ್ಟುಕೊಳ್ಳಲ್ಲ. ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಾರೆ’ ಎಂದು ಆರೋಪಿಸುತ್ತಾರೆ ಸ್ಟ್ಯಾನ್ಲಿ.

ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದ ತಕ್ಷಣವೇ ಸಂತ್ರಸ್ತೆಗೆ ತುರ್ತು ಪರಿಹಾರ ನೀಡಬೇಕು. ಬಾಲಕಿಯಾದರೆ ಕರ್ನಾಟಕ ಮಕ್ಕಳ ನಿಧಿಯಿಂದ, ಯುವತಿ/ಮಹಿಳೆ ಆಗಿದ್ದರೆ ಸ್ಥೈರ್ಯ ನಿಧಿಯಿಂದ ವಿತರಣೆಯಾಗುವಂತೆ ನಿಗಾ ವಹಿಸಬೇಕು. ಇದರ ಜತೆಗೆ ಪರಿಣಾಮಕಾರಿ ಪುನರ್ವಸತಿ ಕಲ್ಪಿಸಬೇಕು’ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ದಮನಿತ ಮಹಿಳೆಯರ ಜೀವನದ ಸ್ಥಿತಿಗತಿಯ ಅಧ್ಯಯನ ಸಮಿತಿ ( ಜಯಮಾಲಾ ನೇತೃತ್ವದ ಸಮಿತಿ)ಯ ಶಿಫಾರಸ್ಸಿನ ಮೇರೆಗೆ ಆದೇಶ ಹೊರಡಿಸಿದೆ. ಆದರೆ ಬಹುತೇಕರಿಗೆ ವರ್ಷಗಳು ಗತಿಸಿದರೂ ಬಿಡಿಗಾಸು ಸಿಕ್ಕಿಲ್ಲ. 2018ರಲ್ಲಿ ದಾಖಲಾದ ಅತ್ಯಾಚಾರ ಸಂಬಂಧಿತ 1,065 ಪ್ರಕರಣಗಳಲ್ಲಿ ನೊಂದವರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಒಡನಾಡಿ ಸಂಸ್ಥೆಯ ಪರಶುರಾಮ್.

ದಮನಿತ ಮಹಿಳೆಯರಿಗೆ ಪಡಿತರ ಚೀಟಿ, ಆಧಾರ್‌, ಮತದಾನ ಚೀಟಿ, ಆರೋಗ್ಯ ಕಾರ್ಡ್‌ ಸಹಿತ ಕಡ್ಡಾಯ ನಾಗರಿಕ ಪ್ರಾತಿನಿಧ್ಯದ ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಜಯಮಾಲಾ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಈ ಮಹಿಳೆಯರಿಗೆ, ಈ ಮೊದಲೇ ತಮ್ಮ ಹೆಸರಿನಲ್ಲಿ ಯಾವುದಾದರೊಂದು ದಾಖಲಾತಿ ಕಾರ್ಡ್‌ ಇದ್ದರೆ ಮಾತ್ರ ಅದು ಅವರ ಗುರುತಿನ ಚೀಟಿ ಆಗಿರಲಿದೆ. ಬಾಲಕಿಯಿದ್ದಾಗ ದೌರ್ಜನ್ಯಕ್ಕೀಡಾಗಿ, ಸಮಾಜಕ್ಕೆ ಅಂಜಿ ಮನೆಬಿಟ್ಟು ಬಂದವರು ಎಲ್ಲಿಂದ ದಾಖಲೆಗಳನ್ನು ತರಬೇಕು? ಹೊಸ ಬದುಕು ಕಟ್ಟಿಕೊಳ್ಳಲು ಪರವೂರಿಗೆ ಬಂದವರಿಗೆ ಇಂದಿಗೂ ನಾಗರಿಕ ಪ್ರಾತಿನಿಧ್ಯದ ಗುರುತಿನ ಚೀಟಿಗಳನ್ನು ಕೊಡಲು ಅಧಿಕಾರಿ ವರ್ಗ ನಿರಾಕರಿಸುವುದು ಎಗ್ಗಿಲ್ಲದೆ ನಡೆದಿದೆ.

ಸಿಗುವ ಸೂರಿನ ಮುಂದೆಯೂ ಕಳಂಕದ ಫಲಕ ಹಾಕಿಕೊಳ್ಳಬೇಕಾದ ಆತಂಕದಲ್ಲಿ , ದುಡಿದು ಬದುಕು ಕಟ್ಟಿಕೊಳ್ಳುವ ಅವಕಾಶಕ್ಕೂ ಕಲ್ಲು ಹಾಕುವ ವ್ಯವಸ್ಥೆಯಲ್ಲಿ, ತನ್ನ ತಪ್ಪಿದ್ದೋ ಇಲ್ಲದೆಯೋ ಅನುಭವಿಸುವ ಅವಮಾನದ ಕುದಿಯಲ್ಲಿ ದಮನಿತ ಮಹಿಳೆಯರು ಬೇಯುತ್ತಿದ್ದಾರೆ.

ನೆರವಿನ ನೆಪದಲ್ಲಿ ಆಡುವ ಕುಹಕಕ್ಕೆ ಕಿವಿ ತೂತಾಗಿ ಅವರು ಮತ್ತೆ, ಒಲ್ಲದ ಮನಸ್ಸಿನಿಂದ ಸಮಾಜಕ್ಕೆ ಸಲ್ಲದ ಬದುಕಿಗೇ ಹೊರಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.

***

‘ದಮನಿತರನ್ನು ಸರ್ಕಾರಿ ಯೋಜನೆ ಸನಿಹ ಸುಳಿಯದಂತೆ ನೋಡಿಕೊಳ್ಳುವ ಕೆಳ ಹಂತದ ಅಧಿಕಾರಶಾಹಿ, ಗೋಪ್ಯತೆ ಹೆಸರಿನಲ್ಲಿ ತಮ್ಮ ಅತ್ಯಾಪ್ತ ಮಹಿಳೆಯರಿಗೆ ನಿವೇಶನ ಮಂಜೂರು ಮಾಡಿರುವ ನಿದರ್ಶನಗಳಿವೆ.’

–ಸ್ಟ್ಯಾನ್ಲಿ, ಒಡನಾಡಿ ಸೇವಾ ಸಂಸ್ಥೆ, ಮೈಸೂರು

‘ಅತ್ಯಾಚಾರ ಪ್ರಕರಣ ದಾಖಲಾದ ತಕ್ಷಣವೇ ಸಂತ್ರಸ್ತೆಗೆ ತುರ್ತು ಪರಿಹಾರ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಬಹುತೇಕರಿಗೆ ವರ್ಷಗಳು ಗತಿಸಿದರೂ ಬಿಡಿಗಾಸು ಸಿಕ್ಕಿಲ್ಲ. 2018ರಲ್ಲಿ ದಾಖಲಾದ ಅತ್ಯಾಚಾರ ಸಂಬಂಧಿತ 1,065 ಪ್ರಕರಣಗಳಲ್ಲಿ ಇದುವರೆಗೂ ಪರಿಹಾರ ನೀಡಿಲ್ಲ.’

– ಪರಶುರಾಮ್, ಒಡನಾಡಿ ಸೇವಾ ಸಂಸ್ಥೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.