ADVERTISEMENT

ಒಳನೋಟ | ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಜೀವ ತೆಗೆದರು

ಸಂತೋಷ ಜಿಗಳಿಕೊಪ್ಪ
Published 18 ಜೂನ್ 2022, 20:01 IST
Last Updated 18 ಜೂನ್ 2022, 20:01 IST
ಲಿಂಗರಾಜ್
ಲಿಂಗರಾಜ್   

ಬೆಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತರ ಬದುಕು, ಕತ್ತಿ ಮೇಲಿನ ನಡಿಗೆಯಂತೆ. ಭ್ರಷ್ಟರ ಮುಖವಾಡವನ್ನು ದಾಖಲೆ ಸಮೇತ ಬಯಲು ಮಾಡುವ ಕಾರ್ಯಕರ್ತರಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚು. ಇದಕ್ಕೆ ನಿದರ್ಶನ, ಬೆಂಗಳೂರಿನಲ್ಲಿ 2012ರ ನವೆಂಬರ್ 20ರಂದು ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಲಿಂಗರಾಜ್ ಕೊಲೆ ಪ್ರಕರಣ.

ಚಾಮರಾಜಪೇಟೆಯ ಆಜಾದ್ ನಗರ ವಾರ್ಡ್ ಕಾರ್ಪೋರೇಟರ್ ಆಗಿದ್ದ ಗೌರಮ್ಮ ಹಾಗೂ ಪತಿ ಗೋವಿಂದರಾಜು ಗಳಿಸಿದ್ದ ₹ 500 ಕೋಟಿ ಅಕ್ರಮ ಆಸ್ತಿಯ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಕೊಟ್ಟ ಕಾರಣ ‘ಮಹಾ ಪ್ರಚಂಡ’ ಮಾಸಪತ್ರಿಕೆ ಸಂಪಾದಕರೂ ಆಗಿದ್ದ ಲಿಂಗರಾಜ್ ಹತ್ಯೆಯಾದ ಪ್ರಕರಣ ಅಚ್ಚಳಿಯದೇ ನೆನಪಿನಲ್ಲಿ ಉಳಿದಿದೆ.

2012ರ ನವೆಂಬರ್ 9ರಂದು ತಮ್ಮ ಮನೆ ಮೇಲೆ ಲೋಕಾಯುಕ್ತ ದಾಳಿ ಆಗುತ್ತಿದ್ದಂತೆ ಲಿಂಗರಾಜ್ ವಿರುದ್ಧ ಹರಿಹಾಯ್ದಿದ್ದ ಗೋವಿಂದರಾಜು, ಅವರ ಹತ್ಯೆಗಾಗಿ ರೌಡಿ ಗೋರಿಪಾಳ್ಯದ ಚಂದ್ರು ಎಂಬಾತನಿಗೆ ₹ 7.50 ಲಕ್ಷ ಸುಪಾರಿ ಕೊಟ್ಟಿದ್ದ. ಸಹಚರರ ಗುಂಪು ಕಟ್ಟಿಕೊಂಡು ಚಾಮರಾಜಪೇಟೆಯ ಬಿ.ಎಂ.ಕೆ ಬಡಾವಣೆಯ ವಿಠ್ಠಲ್ ನಗರದಲ್ಲಿರುವ ಲಿಂಗರಾಜ್ ಮನೆಗೆ ನುಗ್ಗಿದ್ದ ರೌಡಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದ. ಈ ಘಟನೆ ರಾಜ್ಯದ ಕಾನೂನು ವ್ಯವಸ್ಥೆಯನ್ನೇ ಪ್ರಶ್ನಿಸಿತ್ತು. ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಹತ್ಯೆ ಭೇದಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.

ADVERTISEMENT

₹ 15,000 ಸಂಬಳದಿಂದ ₹ 500 ಕೋಟಿ: ‘ಲೋಕೋಪಯೋಗಿ ಇಲಾಖೆಯಲ್ಲಿ ಡಿ–ಗ್ರೂಪ್ ನೌಕರನಾಗಿದ್ದ ಗೋವಿಂದರಾಜು, ₹ 15,000 ಸಂಬಳ ಪಡೆಯುತ್ತಿದ್ದ. ಹೆಚ್ಚು ಹಣ ಸಂಪಾದನೆಗಾಗಿ ರಿಯಲ್ ಎಸ್ಟೇಟ್ ಶುರು ಮಾಡಿದ್ದ. ಶ್ರೀಮಂತನಾಗುತ್ತಿದ್ದಂತೆ ಕೆಲಸ ಬಿಟ್ಟು ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದ. ಆಜಾದ್ ನಗರ ವಾರ್ಡ್‌ನಿಂದ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದ. ಪತ್ನಿ ಅಧಿಕಾರವನ್ನು ತಾನೇ ಚಲಾಯಿಸುತ್ತಿದ್ದ’ ಎಂಬ ಸಂಗತಿಯನ್ನು ಎಸ್‌ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.

‘ಗೌರಮ್ಮ ಹಾಗೂ ಗೋವಿಂದರಾಜು ಅಕ್ರಮಗಳ ಬಗ್ಗೆ ತಿಳಿದಿದ್ದ ಲಿಂಗರಾಜ್, ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಪಡೆದಿದ್ದರು. ಇದು ಗೊತ್ತಾಗುತ್ತಿದ್ದಂತೆ ಲಿಂಗರಾಜ್‌ ಅವರನ್ನು ಸಂಪರ್ಕಿಸಿದ್ದ ಗೋವಿಂದರಾಜ್, ₹ 5 ಲಕ್ಷ ನೀಡುವುದಾಗಿ ಹೇಳಿದ್ದರು. ಅದಕ್ಕೆ ಸೊಪ್ಪು ಹಾಕದ ಲಿಂಗರಾಜ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದಾದ ನಂತರ ಲೋಕಾಯುಕ್ತ ದಾಳಿ ಆಗಿ, ಗೋವಿಂದರಾಜು ಮಾನ ಹರಾಜಾಗಿತ್ತು. ಅದೇ ಕೋಪದಲ್ಲಿ ಆತ, ಲಿಂಗರಾಜ್ ಕೊಲೆ ಮಾಡಿಸಿದ್ದ’ ಎಂಬ ಮಾಹಿತಿಯೂ ಪಟ್ಟಿಯಲ್ಲಿತ್ತು.

ಜೀವಾವಧಿ ಶಿಕ್ಷೆ: ಲಿಂಗರಾಜ್ ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ಸಿಸಿಎಚ್ 59ನೇ ನ್ಯಾಯಾಲಯ, ಗೌರಮ್ಮ, ಗೋವಿಂದರಾಜು, ರೌಡಿ ಚಂದ್ರು ಸೇರಿದಂತೆ 12 ಅಪರಾಧಿಗಳಿಗೆ 2020ರಲ್ಲೇ ಜೀವಾವಧಿ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.