
ಬೆಂಗಳೂರು: ‘ಏಳೆಂಟು ವರ್ಷಗಳ ಹಿಂದೆ ನನ್ನ ತೋಟದಲ್ಲಿದ್ದ 10 ಗಂಧದ ಮರಗಳು ಕಳವಾದವು. ಈವರೆಗೆ 200ಕ್ಕೂ ಹೆಚ್ಚು ಗಂಧದ ಮರಗಳನ್ನು ಯಾರೋ ಕಡಿದು ಒಯ್ದಿದ್ದಾರೆ. ಐದು ಪ್ರಕರಣದಲ್ಲಿ ಎಫ್‌ಐಆರ್ ಆಗಿದೆ. ಆದರೆ ಗಂಧದ ಮರಗಳ ಕಳ್ಳತನ ನಿಂತಿಲ್ಲ’ – ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಕೃಷಿಕ ದಿನೇಶ್ ಅವರ ವಿಷಾದದ ಮಾತುಗಳಿವು.
‘ನಮ್ಮ ಜಮೀನಿನಲ್ಲಿ ಬೆಳೆದಿದ್ದ ಗಂಧದ ಮರಗಳ ಕಟಾವಿಗೆ ಅನುಮತಿ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆ. ವರ್ಷ ಕಳೆದರೂ ಅನುಮತಿ ಸಿಕ್ಕಿರಲಿಲ್ಲ. ಅರಣ್ಯ ಸಚಿವರಿಂದ ಹೇಳಿಸಿದ ನಂತರ ಪ್ರಕ್ರಿಯೆ ಮುಂದುವರಿಯಿತು. ಬೆಳೆದು ನಿಂತಿರುವ ಮರಗಳನ್ನು ರಕ್ಷಿಸಿಕೊಳ್ಳುವುದೇ ಬಹುದೊಡ್ಡ ಸವಾಲು’– ಕಲಬುರಗಿಯ ಕೃಷಿಕ ರಾಜೇಂದ್ರ ಯರನಾಳೆ ಅವರ ಬೇಸರದ ನುಡಿಗಳಿವು.
ಇದು ಎರಡೂವರೆ ದಶಕದಿಂದ ಕರ್ನಾಟಕದಲ್ಲಿ ಶ್ರೀಗಂಧದ ಬೆಳೆಯುತ್ತಿರುವ ಬಹುತೇಕ ಬೆಳೆಗಾರರ ಪಡಿಪಾಟಲು !
ಶ್ರೀಗಂಧ ಜಗತ್ತಿನ ಅತ್ಯಂತ ಬೆಲೆ ಬಾಳುವ ಮರ. ಒಣ ಪ್ರದೇಶಗಳಲ್ಲಿ ವಿಶೇಷವಾಗಿ ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಈ ಪರಾವಲಂಬಿ ಮರವನ್ನು ಕೃಷಿಯಾಗಿ ಅಥವಾ ಮುಕ್ತವಾಗಿ ಬೆಳೆದು, ಮಾರಾಟ ಮಾಡುವುದಕ್ಕೆ ಸರ್ಕಾರದ ನಿರ್ಬಂಧವಿತ್ತು. 2002ರಲ್ಲಿ ಆ ನಿರ್ಬಂಧವನ್ನು ತೆರವುಗೊಳಿಸಿದ ಸರ್ಕಾರ, ‘ಶ್ರೀಗಂಧ ಬೆಳೆಯಿರಿ ಶ್ರೀಮಂತರಾಗಿರಿ’ ಎಂದು ಕೃಷಿಕರನ್ನು ಪ್ರೋತ್ಸಾಹಿಸಿತು. ಕೃಷಿಕರ ಮನದಲ್ಲಿ ‘ಸಿರಿವಂತಿಕೆ’ಯ ಕನಸನ್ನು ಬಿತ್ತಿ, ಬೆಳೆಯುವವರಿಗೆ ಗಂಧದ ಸಸಿಗಳನ್ನು ವಿತರಿಸಿ, ಅವುಗಳನ್ನು ಬೆಳೆಸಲು ಪ್ರೋತ್ಸಾಹಧನವನ್ನೂ ನೀಡಿತು.
ಶಿವಮೊಗ್ಗದಲ್ಲಿರುವ ಅರಣ್ಯ ಇಲಾಖೆಯ ಶ್ರೀಗಂಧ ಕೋಠಿ
ಸರ್ಕಾರದ ಪ್ರೋತ್ಸಾಹ, ‘ಉತ್ಪ್ರೇಕ್ಷಿತ ಪ್ರಚಾರ’ದಿಂದಾಗಿ, ಎರಡೂವರೆ ದಶಕಗಳಲ್ಲಿ ರಾಜ್ಯದಾದ್ಯಂತ ಸಾವಿರಾರು ಎಕರೆಯಲ್ಲಿ ಶ್ರೀಗಂಧ ವಿಸ್ತರಿಸಿಕೊಂಡಿದೆ. ಪ್ರಸ್ತುತ ರಾಜ್ಯದಲ್ಲಿರುವ ಗಂಧದ ಕೃಷಿಕರಲ್ಲಿ ಶೇ 95 ರಷ್ಟು ದೊಡ್ಡ ಹಿಡುವಳಿದಾರರು, ಉದ್ದಿಮೆದಾರರೇ ಇದ್ದಾರೆ. ಇವರಲ್ಲೂ ಗಂಧ ಬೆಳೆದು ‘ಕೋಟಿ’ ಹಣ ಕಂಡವರು ಮಾತ್ರ ಬೆರಳೆಣಿಕೆಯಷ್ಟು.
ಅರಣ್ಯ ಇಲಾಖೆ ಪ್ರಕಾರ, ರಾಜ್ಯದಲ್ಲಿ 4,699 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧದ ಕೃಷಿ ಇದೆ. ಆದರೆ, ಬೆಳೆಗಾರರ ಪ್ರಕಾರ 20 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಶ್ರೀಗಂಧದ ಮರಗಳಿವೆ. ಹೆಚ್ಚು ಶ್ರೀಗಂಧ ಬೆಳೆಯುವ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೋಲಾರ ಅಗ್ರಸ್ಥಾನದಲ್ಲಿವೆ. ತುಮಕೂರು, ಹಾಸನ, ಚಾಮರಾಜನಗರ, ದಾವಣಗೆರೆ, ಮೈಸೂರು, ಕಲಬುರಗಿ, ಬಾಗಲಕೋಟೆ, ಮೈಸೂರು ಮತ್ತು ಧಾರವಾಡ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ.
ಕಳ್ಳತನವೇ ಪ್ರಮುಖ ಸವಾಲು
2005-06ರ ನಂತರ ರಾಜ್ಯದಲ್ಲಿ ಶ್ರೀಗಂಧದ ಕೃಷಿ ಆರಂಭವಾಯಿತು. ದಶಕ ತುಂಬುವ ಹೊತ್ತಿಗೆ ಶ್ರೀಗಂಧದ ಗಿಡಗಳು ಮರಗಳಾದಂತೆ, ಅವುಗಳ ಕಳ್ಳತನವೂ ಆರಂಭವಾಯಿತು. ಕಳ್ಳತನದ ತೀವ್ರತೆ ಎಷ್ಟಿದೆ ಎಂದರೆ, ವಾರಕ್ಕೆ ರಾಜ್ಯದಲ್ಲಿ ಯಾವುದಾದರೂ ಒಂದು ಕಡೆ ಗಂಧದ ಮರಗಳ್ಳತನದ ಒಂದೋ ಎರಡೋ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ವರ್ಷಗಟ್ಟಲೆ ಶ್ರಮವಹಿಸಿ ಬೆಳೆಸಿದ ಮರಗಳು ಕಟಾವಿಗೆ ಬರುವ ವೇಳೆಗೆ ಕಳ್ಳರ ಪಾಲಾಗುತ್ತಿವೆ. ಕೆಲ ದಿನದ ಹಿಂದೆ ಕೋಲಾರ ಜಿಲ್ಲೆ ಮಾಲೂರು ಸಮೀಪದಲ್ಲಿ ಜಮೀನೊಂದರಲ್ಲಿ 100ಕ್ಕೂ ಹೆಚ್ಚು ಗಂಧದ ಮರಗಳು ಬುಡಸಹಿತ ಕಳ್ಳತನವಾಗಿದೆ ಎಂಬ ಸುದ್ದಿ ಬಂದಿದೆ. ಗಂಧದ ಮರವನ್ನು ಮುಕ್ತವಾಗಿ ಬೆಳೆಸುವ ನಿರ್ಬಂಧ ಸಡಿಲಗೊಳಿಸಿ ಇಪ್ಪತ್ತು ವರ್ಷಗಳ ಕಳೆದರೂ, ಕಳವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ.
ಶಿವಮೊಗ್ಗದ ಶ್ರೀಗಂಧ ಕೋಠಿಯಲ್ಲಿ ದಾಸ್ತಾನು ಮಾಡಿರುವ ಶ್ರೀಗಂಧದ ಕೊರಡುಗಳು
‘ಶ್ರೀಗಂಧದ ಮರಗಳ ಕಟಾವು, ಸಾಗಣೆಗಾಗಿ ಅರಣ್ಯ ಇಲಾಖೆಗೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಕೆಲವೇ ತಿಂಗಳುಗಳಲ್ಲಿ ಕಳ್ಳತನ ನಡೆಯುತ್ತಿದೆ' ಎಂದು ಕೋಲಾರದ ಶ್ರೀಗಂಧ ಕೃಷಿಕ ಶ್ರೀನಿವಾಸರೆಡ್ಡಿ ಕಳ್ಳತನದ ಮಗ್ಗುಲೊಂದನ್ನು ತೆರೆದಿಡುತ್ತಾರೆ. ‘ಮರಗಳ್ಳತನದ ಭಯದಿಂದಾಗಿ ಕೆಲವು ಬೆಳೆಗಾರರು ಜಮೀನಿನಲ್ಲಿ ಶ್ರೀಗಂಧದ ಮರಗಳಿವೆ ಎಂಬುದನ್ನು ಪಹಣಿಯಲ್ಲಿ ಉಲ್ಲೇಖಿಸಲು ಯೋಚಿಸುತ್ತಾರೆ. ಬಹಿರಂಗವಾಗಿ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ‘ ಎಂದು ಬೆಳೆಗಾರರು ಹೇಳುತ್ತಾರೆ. ‘ತೋಟಗಳಲ್ಲಿರುವ ಶ್ರೀಗಂಧದ ಮಾಹಿತಿ ಯಾವುದೋ ಒಂದು ಮೂಲದಿಂದ ಸೋರಿಕೆಯಾಗುತ್ತದೆ. ಮರಗಳ್ಳತನದ ದೂರು ನೀಡಿದರೂ ಪೊಲೀಸರು ಸರಿಯಾದ ತನಿಖೆ ನಡೆಸಿ, ಅವರನ್ನು ಹಿಡಿಯುತ್ತಿಲ್ಲ’ ಎಂದು ಬೆಳೆಗಾರರು ಅರಣ್ಯ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಅದಕ್ಕೆ ಕೆಲವೊಂದು ಘಟನೆಗಳನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತಾರೆ.
ಗಂಧದ ಮರದ ಮೌಲ್ಯ ನಿರ್ಧಾರವಾಗುವುದು ಮರದೊಳಗಿನ ‘ಹಾರ್ಟ್‌ವುಡ್’ನ (ಚೇಗು) ಗುಣ– ಗಾತ್ರದ ಮೇಲೆ. ಮರ ತಜ್ಞರ ಪ್ರಕಾರ ಗಂಧದ ಸಸಿ ನಾಟಿ ಮಾಡಿದ 6 ರಿಂದ 8 ವರ್ಷಗಳ ನಂತರ ಮರದಲ್ಲಿ ಚೇಗು ಬೆಳವಣಿಗೆ ಶುರುವಾಗುತ್ತದೆ. ಆದರೆ, ಹಣದ ದುರಾಸೆಗೆ ಕಳ್ಳರು ಎಳೆಯ ಮರಗಳನ್ನೇ ಕದ್ದೊಯ್ಯುತ್ತಿ ದ್ದಾರೆ. ಕೆಲವು ಕಡೆ ಮರಗಳನ್ನು ಸ್ವಲ್ಪ ಕೊಯ್ದು ಗಂಧದ ಪರಿಮಳ ಬಾರದಿದ್ದರೆ ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದಾರೆ. ಕಳ್ಳರ ಹಾವಳಿ ತಡೆಯಲಾಗದೇ, ಹಲವು ಬೆಳೆಗಾರರು, ‘ಗಂಧದ ಸಹವಾಸವೇ ಬೇಡ’ ಎನ್ನುತ್ತಾ ಕಿರಿ ವಯಸ್ಸಿನ ಮರಗಳನ್ನು ತೆಗೆಸಿ, ಆ ಜಾಗದಲ್ಲಿ ಅಡಿಕೆ, ತೆಂಗು, ಹಣ್ಣಿನ ಗಿಡಗಳಂತಹ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಮರಗಳ ರಕ್ಷಣೆಗೆ ಹರಸಾಹಸ
‘ಶ್ರೀಗಂಧದ ಮರಗಳನ್ನು ರಕ್ಷಿಸಿಕೊಳ್ಳುವುದು ಬೆಳೆದವರ ಜವಾಬ್ದಾರಿ’ ಎಂದು ಅರಣ್ಯ ಇಲಾಖೆ ಹೇಳುತ್ತದೆ. ಶ್ರೀಗಂಧದ ಕೃಷಿಕರು, ಬೆಳೆದ ಮರಗಳ ರಕ್ಷಣೆಗೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ಮರಗಳಿಗೆ ಚೈನ್ ಲಿಂಕ್ ಮೆಷ್ ಬೇಲಿ ಹಾಕುತ್ತಿದ್ದಾರೆ. ಜಮೀನಿನ ಸುತ್ತ ಬಿದಿರಿನ ಮರಗಳನ್ನು ಬೆಳೆಸಿದ್ದಾರೆ. ಹತ್ತಾರು ನಾಯಿಗಳನ್ನು ಸಾಕಿದ್ದಾರೆ. ಸೋಲಾರ್ ದೀಪ, ಸೋಲಾರ್ ವಿದ್ಯುತ್ ಬೇಲಿ ಹಾಕಿಸಿದ್ದಾರೆ. ಪರವಾನಗಿ ಸಹಿತ ಬಂದೂಕುಗಳನ್ನು ಇಟ್ಟುಕೊಂಡಿದ್ದಾರೆ. ಫ್ಲಡ್‌ಲೈಟ್ ಬೆಳಕು, ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಂತಹ ಪ್ರಯತ್ನಗಳನ್ನೂ ಮಾಡಿದ್ದಾರೆ. ‘ಇವುಗಳನ್ನು ದಾಟಿಯೂ ಕಳ್ಳತನಗಳು ನಡೆಯುತ್ತಿವೆ. ನಮ್ಮ ಹೈಟೆಕ್ ರಕ್ಷಣೆಗಿಂತ, ಕಳ್ಳರ ಉಪಕರಣಗಳು ಹರಿತವಾಗಿವೆ‘ ಎನ್ನುತ್ತಾರೆ ರೈತರು. ‘ನನ್ನ ತೋಟಕ್ಕೆ ಸೋಲಾರ್ ಬೇಲಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನಾಯಿಗಳ ಸಾಕಣೆ ಎಲ್ಲ ಮಾಡಿದ್ದರೂ ಕಳ್ಳತನ ನಿಂತಿಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಗುಂಡ್ಲುಪೇಟೆ ಸಮೀಪದಲ್ಲಿ ಗಂಧದ ಮರಗಳನ್ನು ಬೆಳೆಸಿದರುವ ಪ್ರೊ. ಮಾದೇವ್ ಭರಣಿ.
ಪ್ರೊ.ಮಾದೇವ ಭರಣಿ ಅವರ ಚಾಮರಾಜನಗರದ ಗುಂಡ್ಲುಪೇಟೆಯ ಅಂಚಿನಲ್ಲಿರುವ ತೋಟದಲ್ಲಿ ಕೆಲ ದಿನದ ಹಿಂದೆ ಕಳ್ಳರು ಶ್ರೀಗಂಧದ ಮರವನ್ನು ಕತ್ತರಿಸಿರುವುದು
ಅಂದ ಹಾಗೆ, ಈವರೆಗೂ ಶ್ರೀಗಂಧ ಕಳ್ಳತನದ ಬಹುಪಾಲು ಪ್ರಕರಣಗಳಲ್ಲಿ ಕಳವು ಮಾಡಿದ ವ್ಯಕ್ತಿಗಳನ್ನಷ್ಟೇ ಪೊಲೀಸರು ಬಂಧಿಸಿದ್ದಾರೆ. ಆದರೆ, ಕಳ್ಳರು ಕದ್ದ ಮರಗಳನ್ನು ಖರೀದಿಸುವ ಒಬ್ಬ ರಿಸೀವರ್(ಅಕ್ರಮ ಖರೀದಿದಾರ)ನನ್ನೂ ಪೊಲೀಸರು ಹಿಡಿದಿಲ್ಲ ಎಂಬುದು ಬೆಳೆಗಾರರ ಆರೋಪ. ‘ಶ್ರೀಗಂಧ ಕಳವಿನ ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಳ್ಳತನದ ದೊಡ್ಡ ಜಾಲವಿದ್ದಂತೆ ಕಾಣುತ್ತಿದೆ. ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಈ ಜಾಲವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ಕೆ.ಅಮರನಾರಾಯಣ್ ಸರ್ಕಾರವನ್ನು ಒತ್ತಾಯಿಸುತ್ತಾರೆ.
ಕದ್ದ ಮಾಲು ಹೋಗುವುದೆಲ್ಲಿಗೆ ?
2020 ರಿಂದ 2025ರವರೆಗೆ ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ 810 ಶ್ರೀಗಂಧ ಕಳವು ಪ್ರಕರಣ ದಾಖಲಾಗಿದೆ. 408 ಆರೋಪಿಗಳನ್ನು ಬಂಧಿಸಲಾಗಿದೆ. 48.94 ಟನ್ ಶ್ರೀಗಂಧ ವಶಪಡಿಸಿ ಕೊಳ್ಳಲಾಗಿದೆ ಎಂದು ಸರ್ಕಾರ, ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ಮಾಹಿತಿ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಧಾರವಾಡದಲ್ಲಿ 23, ಬಾಗಲಕೋಟೆಯಲ್ಲಿ ಏಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಶ್ರೀಗಂಧ ಮರಗಳ ಕಳವು ಪ್ರಕರಣ ದಾಖಲಾಗಿವೆ. ಆದರೆ, ಎಷ್ಟೋ ಪ್ರಕರಣಗಳಲ್ಲಿ ಕಳವಾಗಿರುವ ಎಲ್ಲಾ ಶ್ರೀಗಂಧದ ಮರಗಳು ಪತ್ತೆಯಾಗುತ್ತಿಲ್ಲ, ಕಳ್ಳರೂ ಪತ್ತೆಯಾಗುವುದಿಲ್ಲ. ಪತ್ತೆಯಾಗದ ಮರಗಳು ಎಲ್ಲಿ ಮಾರಾಟವಾಗುತ್ತವೆ. ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಬೇರೆ ಕಡೆಗೆ ಮಾರಾಟವಾಗುವುದು ಹೇಗೆ? ಕದ್ದ ಮರಗಳನ್ನು ಯಾರು ಖರೀದಿಸುತ್ತಾರೆ? ಇದು ಯಕ್ಷಪ್ರಶ್ನೆಯಾಗಿದೆ.
ದೂರು ಸ್ವೀಕಾರ ವಿಳಂಬ:
ಗಂಧದ ಮರ ಕಳವಾದಾಗ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಅರಣ್ಯ ಇಲಾಖೆ ಕಡೆಗೆ, ಅರಣ್ಯ ಇಲಾಖೆಗೆ ಹೋದರೆ ಪೊಲೀಸರ ಕಡೆ ಕೈತೋರುತ್ತಾರೆ. ಈ ಕಾರಣಕ್ಕಾಗಿ, ಕೆಲವರು ಮರ ಕಳ್ಳತನವಾದರೂ, ದೂರು ಕೊಡಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ಪೊಲೀಸ್ ಮಹಾ ನಿರ್ದೇಶಕರ ದೂರು ದಾಖಲಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದ್ದಾರೆ. ಇಷ್ಟಾದರೂ ವ್ಯವಸ್ಥೆಗೆ ರೋಸತ್ತ ರೈತರು ಶ್ರೀಗಂಧ ಮರಗಳ ಕಳ್ಳತನ ಪ್ರಕರಣಗಳನ್ನು ದಾಖಲಿಸಲು ಆಸಕ್ತಿವಹಿಸುತ್ತಿಲ್ಲ ಎಂಬ ಮಾಹಿತಿ ಇವೆ.
ಶ್ರೀಗಂಧದ ಮರ ಬೆಳೆಯುತ್ತಾ ಹೋದಂತೆ ಚೇಗಿನ / ಕೊರಡಿನ (ಹಾರ್ಟ್‌ವುಡ್) ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಸಣ್ಣ ವಯಸ್ಸಿನ ಮರಗಳಲ್ಲಿ ಕೊರಡಿನ ಪ್ರಮಾಣ ಕಡಿಮೆ ಇರುತ್ತದೆ ಮತ್ತು ತೊಗಟೆ ಮತ್ತು ಕೊರಡಿನ ಮಧ್ಯದ ಬಿಳಿಯ ಮರದ ಭಾಗ (ಸ್ಯಾಪ್‌ವುಡ್) ಹೆಚ್ಚು ಇರುತ್ತದೆ. ಮಾರುಕಟ್ಟೆಯಲ್ಲಿ ಸ್ಯಾಪ್‌ವುಡ್ ಬೆಲೆ ಕಡಿಮೆ. ಇಂಥ ಕಡಿಮೆ ವಯಸ್ಸಿನ ಮರಗಳನ್ನು ಕಟಾವು ಮಾಡಿ ಮಾರಿದಾಗ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಹಾಗಾಗಿ ಗಂಧದ ಗಿಡ ನೆಟ್ಟು 15 ರಿಂದ 20 ವರ್ಷಗಳ ನಂತರವೇ ಕಟಾವು ಮಾಡಿ ಮಾರಬೇಕು.– ಡಾ. ಎ.ಎನ್. ಅರುಣ್ ಕುಮಾರ್, ಹಿರಿಯ ವಿಜ್ಞಾನಿ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು
ಬೆಳೆಗಾರರಿಗೆ ಮರಗಳವು, ದೂರು ದಾಖಲಿನ ಸಮಸ್ಯೆ ಒಂದೆಡೆಯಾದರೆ, ಬೆಳೆದ ಮರಗಳನ್ನು ಕಟಾವು ಮಾಡಲು ಹಾಗೂ ಮಾರುಕಟ್ಟೆಗೆ ಸಾಗಿಸಲು ಅರಣ್ಯ ಇಲಾಖೆಗೆ ಅನುಮತಿ ಪಡೆಯುವುದು ಸವಾಲಿನ ಕೆಲಸವಾಗಿದೆ. ‘ಕೆಲವು ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಕಟಾವು–ಸಾಗಾಟಕ್ಕೆ ಅನುಮತಿ ಸಿಕ್ಕಿಲ್ಲ. ಇಷ್ಟೆಲ್ಲ ಸಾಹಸ ಮಾಡಿ ಪರವಾನಗಿ ಪಡೆದು ಸರ್ಕಾರ ನಿಗದಿಪಡಿಸಿರುವ ‘ಕೋಠಿ’(ಖರೀದಿ ಕೇಂದ್ರ)ಗಳಿಗೆ ಗಂಧದ ಮರಗಳನ್ನು ಕಳಹಿಸಿದರೂ, ಅಲ್ಲಿ ಮರಗಳ ಹರಾಜು ನಡೆದು, ಮಾರಾಟವಾಗಿ ಬೆಳೆಗಾರರಿಗೆ ಹಣ ಸಿಗುವುದಕ್ಕೆ ಮತ್ತೆ ವರ್ಷಗಳೇ ಬೇಕಾಗುತ್ತವೆ’ ಎಂದು ಶ್ರೀಗಂಧ ಬೆಳೆಗಾರರ ಸಂಘದವರು ದಾಖಲೆ ಸಹಿತ ಉದಾಹರಣೆಗಳನ್ನು ನೀಡುತ್ತಾರೆ.
ಮೌಲ್ಯವರ್ಧನೆಗೂ ಅನುಮತಿ ಇಲ್ಲ
ಶ್ರೀಗಂಧದ ಮರದಲ್ಲಿ, ಚೇಗು, ಅದರ ಮೇಲಿರುವ ಬಿಳಿ ಪದರ(ಸ್ಯಾಪ್‌ವುಡ್), ತೊಗಟೆ, ಬೇರು ಎಲ್ಲವುದಕ್ಕೂ ಅದರದ್ದೇ ಆದ ಬೆಲೆ ಇದೆ. ಬಹುಶಃ ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುವ ಏಕೈಕ ಮರ ಇದು. ಇಂಥ ‘ಬಹುಪಯೋಗಿ’ ಶ್ರೀಗಂಧ ಕೊರಡನ್ನು ಯಾರು ಬೇಕಾದರೂ 3 ಕೆ.ಜಿವರೆಗೂ ಖರೀದಿಸಿ, ದಾಸ್ತಾನಿಟ್ಟುಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅರಣ್ಯ ಕಾನೂನಿನ ಪ್ರಕಾರ, ಶ್ರೀಗಂಧ ಬೆಳೆದವರಿಗೂ ಇಲಾಖೆಯ ಅನುಮತಿ ಇಲ್ಲದೇ ಒಂದೇ ಒಂದು ಮರದ ಒಂದು ತುಂಡನ್ನೂ ದಾಸ್ತಾನು ಮಾಡಿಕೊಳ್ಳಲು ಅವಕಾಶವಿಲ್ಲ.
‘ಎಷ್ಟೋ ಮರಗಳವು ಪ್ರಕರಣಗಳಲ್ಲಿ ಕಳ್ಳರು ಮರದ ಕಾಂಡ ಕತ್ತರಿಸಿಕೊಂಡು ಹೋಗಿ, ಒಂದಷ್ಟು ತುಂಡುಗಳು, ಬೇರು ಸಹಿತ ಮರದ ಬಡ್ಡೆ ಉಳಿಸಿರುತ್ತಾರೆ. ಇವುಗಳನ್ನು ಬಳಸಲು ಬೆಳೆಗಾರರು ಇಲಾಖೆಗೆ ಅನುಮತಿ ಕೇಳಿದರೆ, ತಕ್ಷಣಕ್ಕೆ ನೀಡುವುದಿಲ್ಲ. ಹೀಗಾಗಿ ಕೆಲವೊಮ್ಮೆ ಅವೆಲ್ಲ ಅಲ್ಲೇ ಮಣ್ಣುಪಾಲಾಗುತ್ತವೆ. ಇಂಥ ಉಳಿಕೆಗಳನ್ನು ಮೌಲ್ಯವರ್ಧಿಸಿ ಉತ್ಪನ್ನಗಳನ್ನಾಗಿಸಲು ಬೆಳೆದವರಿಗೆ ಅನುಮತಿ ನೀಡಿದರೆ, ಒಂದಷ್ಟು ಹಣ ಸಿಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ನಿಯಮಗಳು ಬದಲಾಗಬೇಕು’ ಎಂದು ಬೆಳೆಗಾರ ದಿನೇಶ್ ಅಭಿಪ್ರಾಯಪಡುತ್ತಾರೆ.
ಐದಾರು ವರ್ಷಗಳ ಶ್ರೀಗಂಧದ ಮರ
ಇಷ್ಟೆಲ್ಲ ಅಡೆತಡೆಗಳ ನಡುವೆ ಸೆಂಟ್ರಲ್ ವಿಸ್ತಾ ಮೇಲ್ವಿಚಾರಣಾ ಸಮಿತಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಶ್ರೀಗಂಧದ ಅಭಿವೃದ್ಧಿ ಸಮಿತಿಯ ವರದಿಯಲ್ಲಿ, ಶ್ರೀಗಂಧವನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಖಿಲ ಕರ್ನಾಟಕ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿಕರ ಸಂಘ ಕೂಡ 'ಶ್ರೀಗಂಧ ಕೃಷಿ ಯೋಜನೆ, ರೈತರ ಕಲ್ಯಾಣ ಹಾಗೂ ಆರ್ಥಿಕ ಸದೃಢತೆಗಾಗಿ ರೂಪಿಸಲಾಗಿದೆ. ಇದು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ, ಈ ಕೃಷಿಯ ಅಭಿವೃದ್ಧಿಗಾಗಿ ಬ್ಯಾಂಕ್‌ನಿಂದ ಸಾಲ, ವಿಮೆ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಕೃಷಿ ಜಮೀನಿನಲ್ಲಿ ಬೆಳೆಯುವ ಶ್ರೀಗಂಧವನ್ನು ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿ' ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಮಾತ್ರವಲ್ಲ, ರಾಜ್ಯದಲ್ಲಿ ಶ್ರೀಗಂಧದ ಕೃಷಿಕರು ಎದುರಿಸುತ್ತಿರುವ ಈ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಪತ್ರಗಳ ಮೂಲಕ ತಿಳಿಸಿ, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಇಂಥ ಶ್ರೀಗಂಧದ ಪರಿಮಳ ನಾಡಿನ ಬೆಳೆದವರ ಬಾಳಲ್ಲಿ ಪರಿಮಳ ತರಬೇಕಿತ್ತು. ಬದಲಿಗೆ, ಬೆಳೆದವರು ಉಸಿರು ಕಟ್ಟುವಂತಾಗಿದೆ. ಬೆಳೆದಿರುವುದನ್ನು ಕಡಿದು ಮಾರಲಾಗದೇ, ರಕ್ಷಿಸಿಕೊಳ್ಳಲೂ ಆಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಶ್ರೀಗಂಧ ಕೃಷಿ ಬಗ್ಗೆ ‘ಸಂಶೋಧನೆ ಮತ್ತು ಅಭಿವೃದ್ಧಿ’ಯ ಜೊತೆಗೆ, ಇನ್ನಷ್ಟು ರೈತ ಸ್ನೇಹಿ ‘ನೀತಿ’ಗಳನ್ನು ಸರ್ಕಾರ ನಿರೂಪಿಸಬೇಕಿದೆ ಎನ್ನುತ್ತಾರೆ ತಜ್ಞರು.
‘ಹಣ ನೀಡಲು ಆರು ತಿಂಗಳು ಬೇಕು’
ಅರಣ್ಯ ಇಲಾಖೆ ಬೆಳೆಗಾರರು/ಕೃಷಿಕರಿಂದ ಶ್ರೀಗಂಧದ ಮರಗಳನ್ನು ಖರೀದಿಸಲು ಶಿವಮೊಗ್ಗ ಧಾರವಾಡ ಮತ್ತು ಮೈಸೂರಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಜೊತೆಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಕರಕುಶಲ ನಿಗಮದ ಘಟಕಗಳಲ್ಲೂ ಶ್ರೀಗಂಧ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ.
‘ಶ್ರೀಗಂಧಕ್ಕೆ ಬೆಲೆ ನಿಗದಿ ಮಾಡುವಾಗ ಹಾರ್ಟ್‌ವುಡ್ ಅನ್ನು 20 ವರ್ಗಗಳನ್ನಾಗಿ ಮಾಡುತ್ತೇವೆ. ಅದರ ಕಾಂಡವನ್ನು ಎಬಿಸಿ ಎಂದು ಮೂರು ವರ್ಗ ಎಲೆ ಚಕ್ಕೆ ತೊಗಟೆ ಬೇರು ಆಧರಿಸಿಯೂ ಗುಣಮಟ್ಟ ನಿಗದಿಯಾಗುತ್ತದೆ. ಶ್ರೀಗಂಧ ತಂದುಕೊಟ್ಟ 6 ತಿಂಗಳ ಒಳಗಾಗಿ ಹಣ ಪಾವತಿಸುತ್ತೇವೆ‘ ಎಂದು ಶಿವಮೊಗ್ಗ ಶ್ರೀಗಂಧ ಕೋಠಿಯ ಉಸ್ತುವಾರಿ ಎಸಿಎಫ್ ಎಸ್.ಒ.ದಿನೇಶ್ ಹೇಳುತ್ತಾರೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಬೇರು ಸಹಿತ ಶ್ರೀಗಂಧದ ಮರ ಕಳವಿಗೆ ಯತ್ನಿಸಿರುವುದು
‘ಉತ್ಪನ್ನದ ವರ್ಗೀಕರಣ ಹಾಗೂ ಪರಿವರ್ತನೆ ನಂತರವೇ ಬೆಲೆ ನಿಗದಿಯಾಗುತ್ತದೆ. ಈ ಕಾರಣದಿಂದ ಕೆಲವೊಮ್ಮೆ ರೈತರಿಗೆ ಹಣ ನೀಡಿಕೆ ತಡವಾಗುತ್ತದೆ. ಸರ್ಕಾರದಿಂದ ಅನುದಾನ ಬಂದ ಹಾಗೆ ತ್ವರಿತವಾಗಿ ಹಣ ವಿತರಿಸಲಾಗುತ್ತಿದೆ. ಉತ್ಪನ್ನದ ಒಟ್ಟು ಮೌಲ್ಯದಲ್ಲಿ ಶೇ 10ರನ್ನು ಮೇಲ್ವಿಚಾರಣೆ ಶುಲ್ಕ ಎಂದು ಕಳೆದು ಶೇ 90ರಷ್ಟು ಹಣವನ್ನು ರೈತರಿಗೆ ನೀಡಲಾಗುತ್ತಿದೆ’ ಎನ್ನುತ್ತಾರೆ ಮೈಸೂರು ಶ್ರೀಗಂಧ ಕೋಠಿಯ ಉಸ್ತುವಾರಿ ಎಸಿಎಫ್ ವಿನೀತಾ.
ಸರ್ಕಾರದಿಂದ ಈಗ ಪ್ರತಿ ಕೆ.ಜಿ ಶ್ರೀಗಂಧದಕ್ಕೆ ₹12000ದಿಂದ ₹13700ರವರೆಗೆ ಬೆಲೆ ನಿಗದಿ ಮಾಡಿ ಖರೀದಿಸಲಾಗುತ್ತಿದೆ. ಸದ್ಯ ಮೊದಲ ದರ್ಜೆಯ ಶ್ರೀಗಂಧಕ್ಕೆ ಕೆ.ಜಿ.ಗೆ ₹17700ರವರೆಗೂ ಬೆಲೆ ಇದೆ. ಗುಣಮಟ್ಟ ಕಡಿಮೆ ಆದಂತೆ ಬೆಲೆಯೂ ಇಳಿಯುತ್ತದೆ’ ಎನ್ನುತ್ತಾರೆ ಕೋಠಿಯ ಉಸ್ತುವಾರಿಗಳು.
ಒಳಕ್ಕೆ 36 ಟನ್ ಮಾರಿದ ಲೋಕೇಶ್ವರ
ಶ್ರೀಗಂಧ ಬೆಳೆದು ಟನ್‌ಗಳಲ್ಲಿ ಮಾರಾಟ ಮಾಡಿ ಯಶಸ್ವಿಯಾದವರ ಸಂಖ್ಯೆ ವಿರಳ. ಇಂಥ ಯಶಸ್ವಿ ಕೃಷಿಕರಲ್ಲಿ ಶಿವಮೊಗ್ಗದ ಎ.ಲೋಕೇಶ್ವರ ಒಬ್ಬರು. ಇವರು 2006ರಲ್ಲಿ ಶ್ರೀಗಂಧ ಕೃಷಿ ಆರಂಭಿಸಿದರು. ಅನೇಕ ಏಳು–ಬೀಳುಗಳ ನಡುವೆ ಗಂಧ ಬೆಳೆದು 2021–2023ರ ಅವಧಿಯಲ್ಲಿ 36 ಟನ್‌ನಷ್ಟು ಶ್ರೀಗಂಧ ಮಾರಾಟ ಮಾಡಿದ್ದಾರೆ. ಮೊದಲು 12 ಎಕರೆಯಲ್ಲಿ 6 ಸಾವಿರ 7 ಎಕರೆಯಲ್ಲಿ 3 ಸಾವಿರ ಶ್ರೀಗಂಧದ ಗಿಡಗಳನ್ನು ಅಡಿಕೆ ನಡುವೆ ನಾಟಿ ಮಾಡಿದರು. ನೀರು ಗೊಬ್ಬರ ಪೋಷಕಾಂಶಗಳ ಪೂರೈಕೆಯ ಆರೈಕೆ. ಜೊತೆಗೆ ನಾಲ್ಕೈದು ಕಾವಲುಗಾರರು ನಾಯಿಗಳು ಹೊನಲು ಬೆಳಕಿನಂತಹ ರಕ್ಷಣಾ ಕ್ರಮಗಳ ನಡುವೆ ಶ್ರೀಗಂಧ ಬೆಳೆದರು.
ಶ್ರೀಗಂಧದ ಮರ ರಕ್ಷಣೆಗೆ ತಂತಿ ಬೇಲಿ ಹಾಕಿರುವುದು ಬಿದಿರು ಮೆಳೆ ಬೆಳೆಸಿರುವುದು
‘ಇಷ್ಟೆಲ್ಲ ರಕ್ಷಣೆ ಇದ್ದರೂ ನೂರಾರು ಮರಗಳು ಕಳವಾದವು. ಪೊಲೀಸು ಕಂಪ್ಲೇಂಟ್ ಅಂತ ಸುತ್ತಾಡಿ ಸಾಕಾಯ್ತು. ನನ್ನ ನೋಡಿ ಸಾಕಷ್ಟು ಜನರು ನೂರಾರು ಎಕರೆಯಲ್ಲಿ ಬೆಳೆದಿದ್ದಾರೆ. ಹಾಗೆ ಬೆಳೆದವರೂ ಕಳ್ಳತನ ತಡೆಯದೇ ತೆಗೆದು ಹಾಕಿದ್ದಾರೆ. ಸಣ್ಣ ರೈತರು ಶ್ರೀಗಂಧ ಬೆಳೆಯುವುದು ಸ್ವಲ್ಪ ಕಷ್ಟ’ ಎನ್ನುತ್ತಾರೆ ಅವರು.
‘ಮಾರಾಟದ ದಿನವೇ ಶೇ 25ರಷ್ಟು ಹಣ ನೀಡಿ’
’ರೈತರು ಒಮ್ಮೆಲೆ ಸಾವಿರಾರು ಶ್ರೀಗಂಧದ ಸಸಿ ನೆಡಬಾರದು. ಶ್ರೀಗಂಧ ಎಲ್ಲ ನೆಲದಲ್ಲೂ ಬೆಳೆಯುವುದಿಲ್ಲ. ಮೊದಲು 100–200 ಸಸಿ ನೆಟ್ಟು ನಂತರ ಶ್ರೀಗಂಧ ಕೃಷಿಯ ಬಗ್ಗೆ ನಿರ್ಧಾರ ತಳೆಯಬೇಕು’ ಎಂಬುದು ಅರಣ್ಯ ಮತ್ತು ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್ ಸಲಹೆ
‘ಶ್ರೀಗಂಧದ ಕಟಾವು ಮತ್ತು ಸಾಗಣೆಗೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸಲು ಕೈಗಾರಿಕಾ ವಲಯದಿಂದ ಲಾಬಿ ನಡೆದಿದೆ. ಈ ವಿಚಾರದಲ್ಲಿ ಮುಕ್ತ ಅವಕಾಶ ನೀಡಿದರೆ ಶ್ರೀಗಂಧದ ಕಳವು ಇನ್ನಷ್ಟು ಹೆಚ್ಚುವ ಅಪಾಯವಿದೆ. ಹೀಗಾಗಿ ಸರ್ಕಾರ ರೈತರ ಸ್ನೇಹಿ ನೀತಿ ರೂಪಿಸಿ ಅವರ ಹಿತ ಕಾಯಬೇಕು’ ಎಂದು ಸಲಹೆ ನೀಡುತ್ತಾರೆ.
ಜಗಳೂರು ತಾಲ್ಲೂಕಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಶ್ರೀಗಂಧ ಬೆಳೆ.
‘ಸರ್ಕಾರಕ್ಕೆ ಶ್ರೀಗಂಧ ಮಾರುವ ರೈತರಿಗೆ ಮಾರಾಟದ ದಿನವೇ ಶೇ 25ರಷ್ಟು ಹಣ ಪಾವತಿಸಿ ಕಾಲಮಿತಿಯೊಳಗೆ ಉಳಿದ ಹಣವನ್ನೂ ಸಂದಾಯ ಮಾಡುವ ವ್ಯವಸ್ಥೆಯಾಗಬೇಕು. ಆಗ ರೈತರು ಆಸಕ್ತಿಯಿಂದ ಶ್ರೀಗಂಧ ಬೆಳೆಯುತ್ತಾರೆ’ ಎನ್ನುವುದು ಅವರ ಅಭಿಪ್ರಾಯ.
ಅನುಮತಿ ಪ್ರಕ್ರಿಯೆ ಚುರುಕಿಗೆ ಕ್ರಮ: ಖಂಡ್ರೆ
ಪಹಣಿಯಲ್ಲಿ ಶ್ರೀಗಂಧ ಬೆಳೆಯ ಉಲ್ಲೇಖಿವಿದ್ದರೆ ಮರ ಕಟಾವು ಮತ್ತು ಸಾಗಾಟಕ್ಕೆ ಅನುಮತಿ ನೀಡಲು ಕಂದಾಯ ಇಲಾಖೆ ಅಭಿಪ್ರಾಯ ಕೇಳುವ ಅಗತ್ಯವಿರುವುದಿಲ್ಲ. ಪಹಣಿಯಲ್ಲಿ ಶ್ರೀಗಂಧದ ಬೆಳೆ ದಾಖಲಾಗದಿದ್ದರೆ ಆಗ ಕಂದಾಯ ಇಲಾಖೆ ಅಭಿಪ್ರಾಯ ಕೇಳಿ ಅನುಮತಿ ನೀಡುವುದಕ್ಕೆ ವಿಳಂಬವಾಗುತ್ತದೆ. ಆದರೂ ಈ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕಾಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
‘ಶ್ರೀಗಂಧ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಘೋಷಿಸಿದರೆ ಅರಣ್ಯ ಇಲಾಖೆಗೆ ಶ್ರೀಗಂಧದ ಮೇಲೆ ಯಾವುದೇ ನಿಯಂತ್ರಣ ವಿರುವುದಿಲ್ಲ. ಆಗ ಕಾಡಿನಲ್ಲಿ ಬೆಳೆದಿರುವ ಗಂಧದ ಮರಗಳೂ ಕಳುವಾಗುವ ಅಪಾಯವಿರುತ್ತದೆ. ಹೀಗಾಗಿ ಈ ಬೇಡಿಕೆ ಈಡೇರಿಕೆ ಕಷ್ಟ’ ಎಂದೂ ಹೇಳಿದ್ದಾರೆ. ಗಂಧದ ಮರಗಳ್ಳತನದ ವಿಷಯದಲ್ಲಿ ಯಾವುದೋ ಒಂದು ಪ್ರಕರಣವನ್ನೇ ಆಧಾರವಾಗಿಟ್ಟುಕೊಂಡು ಅದನ್ನೇ ಸಾರ್ವತ್ರೀಕರಿಸಿ ಇಲಾಖೆಯನ್ನು ದೂರುವುದು ಸರಿಯಲ್ಲ. ಗಂಧದ ಮರ ಕಳವಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಹಾಗೇನಾದರೂ ಸಿಬ್ಬಂದಿ ಮಾಹಿತಿ ನೀಡಿದ್ದಲ್ಲಿ ಅದು ತನಿಖೆಯಲ್ಲಿ ಬಹಿರಂಗವಾಗುತ್ತದೆ ಎಂದು ವಿವರಿಸಿದ್ದಾರೆ.
ಲಿಂಕ್‌ಮೆಷ್ ರಕ್ಷಣೆಯ ಶ್ರೀಗಂಧದ ಮರದೊಂದಿಗೆ ಶಿವಮೊಗ್ಗ ಎ.ಲೋಕೇಶ್ವರಪ್ಪ
ಗಂಧದ ಮರ ಕಳ್ಳತನ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕೆಂಬ ಬೆಳೆಗಾರರ ಬೇಡಿಕೆಗೆ ಪ್ರತಿಕ್ರಿಯಿ ಸಿರುವ ಅವರು‘ಶ್ರೀಗಂಧ ಮರ ಕಳವು ಪ್ರಕರಣಗಳನ್ನು ಎಲ್ಲ ಪೊಲೀಸ್ ಠಾಣೆಗಳಲ್ಲೂ ಕಡ್ಡಾಯವಾಗಿ ದಾಖಲಿಸಿ ಕೊಳ್ಳಬೇಕೆಂದು ಡಿಜಿಪಿ ಸೂಚಿಸಿದ್ದಾರೆ. ಎಲ್ಲ ಪ್ರಕರಣಗಳನ್ನೂ ಪೊಲೀಸರೇ ತನಿಖೆ ನಡಸಿ ಕ್ರಮ ಕೈಗೊಳ್ಳುತ್ತಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
’ಸಂಶೋಧನೆಗಳು ನಡೆಯಲಿ’
ಗಂಧದ ಮರಗಳ ಬೇರುಗಳಲ್ಲಿ ಹೆಚ್ಚು ತೈಲದ ಅಂಶವಿರುತ್ತದೆ. ಹೀಗಾಗಿ ಕಡಿಮೆ ಅವಧಿಯಲ್ಲಿ (15 ವರ್ಷಗಳ ಬದಲು 6 ವರ್ಷಗಳಲ್ಲಿ) ಬೇರುಗಳು ಬಲಿಯುವಂತೆ ಮಾಡುವ ಕುರಿತು ಆಸ್ಟ್ರೇಲಿಯಾದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಬೆಳೆಯುವ ಶ್ರೀಗಂಧದ ಮರಗಳಿಗೆ ದ್ರವರೂಪದ ಹಾರ್ಮೋನು ನೀಡಿ ಕಾಂಡಗಳಲ್ಲಿ ಬೇಗ ಹಾರ್ಟ್‌ವುಡ್ ಅಭಿವೃದ್ಧಿಯಾಗಿ ಸುವಂತಹ ಪ್ರಯತ್ನಗಳೂ ಅಲ್ಲಿ ನಡೆಯುತ್ತಿವೆ. ನಮ್ಮ ಸರ್ಕಾರವೂ ಇಂಥ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಿ ಶ್ರೀಗಂಧದ ಮರಗಳ ಕಟಾವು ಅವಧಿಯನ್ನು ಕಡಿಮೆಗೊಳಿಸಿದರೆ ಬೆಳೆಗಾರರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಬೆಳೆಯುವವರ ಸಂಖ್ಯೆಯೂ ಹೆಚ್ಚಾಗುತ್ತದೆ. –ಡಾ. ವಾಸುದೇವ ಆರ್. ಡೀನ್ ಅರಣ್ಯ ಮಹಾವಿದ್ಯಾಲಯ ಶಿರಸಿ
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ. (ಪೂರಕ ಮಾಹಿತಿ: ಜಿತೇಂದ್ರ, ಜಿ.ಎಚ್.ವೆಂಕಟೇಶ್, ಬಸವರಾಜ ಸಂಪಳ್ಳಿ, ಬಸವರಾಜ ಹವಾಲ್ದಾರ, ಬಿ.ಜೆ.ಧನ್ಯಪ್ರಸಾದ್, ಗಣಪತಿ ಹೆಗಡೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.