ಎಐ ಚಿತ್ರ
ಕಣಕಾಲಮಠ
ಬೆಂಗಳೂರು: ದ್ವಿತೀಯ ಪಿಯು 2024ರ ಫಲಿತಾಂಶದಲ್ಲಿ ಉತ್ತಮ ಅಂಕ ಪಡೆದಿದ್ದ ಧಾರವಾಡದ ಸಂಪಿಗೆ ನಗರದ ವಿದ್ಯಾರ್ಥಿನಿ ಮನೆಯಲ್ಲಿ ಸಂಭ್ರಮ ತುಂಬಿತ್ತು. ಸ್ಥಳೀಯ ಗಣ್ಯರು, ಬಂಧುಗಳು, ಸ್ನೇಹಿತರು, ಕುಟುಂಬದ ಹಿತೈಷಿಗಳು ಆಕೆಯ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸುತ್ತಿದ್ದರು.
ಆದರೆ.. ಧಾರವಾಡ ಜಿಲ್ಲೆಯ ಯಾವುದೇ ಪಿಯು ಕಾಲೇಜಿನ ಮುಂದೆ ಹಾಕಿದ್ದ ಸಾಧನಾ ಫಲಕದಲ್ಲಿ ಆಕೆಯ ಭಾವಚಿತ್ರ ಕಾಣಲಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಯಾವುದೇ ಕಾಲೇಜಿನ ಅಡಳಿತ ಮಂಡಳಿ, ಉಪನ್ಯಾಸಕ ವರ್ಗ ಅಲ್ಲಿ ಸುಳಿಯಲಿಲ್ಲ. ಕಾರಣ.. ಆ ಜಿಲ್ಲೆಯ ರ್‍ಯಾಂಕ್ ಗಳಿಕೆ, ಫಲಿತಾಂಶ ವೃದ್ಧಿಗೆ ಆಕೆಯ ಕೊಡುಗೆ ಇರಲಿಲ್ಲ. ಆ ವಿದ್ಯಾರ್ಥಿನಿ ಪಿಯು ಓದಿದ್ದು ಉಡುಪಿ ಜಿಲ್ಲೆಯ ಒಂದು ವಸತಿ ಶಾಲೆಯಲ್ಲಿ. ಆಕೆಯಷ್ಟೇ ಅಲ್ಲ. ಉಡುಪಿ ಮತ್ತು ಮಂಗಳೂರಿನ ಬಹುತೇಕ ವಸತಿ ಶಾಲೆಗಳಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆಯುತ್ತಿದ್ದಾರೆ.
ಪ್ರತಿ ಬಾರಿ ದ್ವಿತೀಯ ಪಿಯು ಫಲಿತಾಂಶ ಬಂದಾಗಲೂ ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿಯ ಅವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರಿಗೆ ಮೊದಲ ಎರಡು ಸ್ಥಾನ ಕಾಯಂ. ಮೊದಲ 10 ಸ್ಥಾನ ಪಡೆಯುತ್ತಿರುವುದು ದಕ್ಷಿಣ ಕರ್ನಾಟಕದ ಜಿಲ್ಲೆಗಳೇ. ಪ್ರತಿ ವರ್ಷವೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಉನ್ನತ ಸ್ಥಾನದ ಶ್ರೇಯ ದೊರಕಿಸುವಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಕೊಡುಗೆ ಗಣನೀಯ.
‘ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲಿ ನಮ್ಮಲ್ಲೂ ಉತ್ತಮ ಶಾಲೆಗಳಿವೆ. ಪದವಿಪೂರ್ವ ಕಾಲೇಜುಗಳಲ್ಲೂ ಪ್ರತಿಭಾವಂತ ಶಿಕ್ಷಕರು ಸಿಗುತ್ತಾರೆ. ಆದರೆ, ರಾಜ್ಯ ಪರೀಕ್ಷಾ ಮಂಡಳಿಗಳ ದ್ವಿತೀಯ ಪಿಯು ಪರೀಕ್ಷೆ ಜತೆಗೆ, ಸ್ಪರ್ಧಾತ್ಮಕ ಶಿಕ್ಷಣ ಜಗತ್ತಿನಲ್ಲಿ ಸಿಇಟಿ, ನೀಟ್, ಜೆಇಇ, ಐಐಟಿಯಂತಹ ಪ್ರವೇಶ ಪರೀಕ್ಷೆಗಳಿಗೂ ಏಕಕಾಲಕ್ಕೆ ಮಕ್ಕಳನ್ನು ಸಿದ್ಧಪಡಿಸುವುದು ಬಹುಮುಖ್ಯ. ಮಂಗಳೂರು, ಉಡುಪಿ ಜಿಲ್ಲೆಯ ಹಲವೆಡೆ ಇರುವ ವಸತಿ ಶಾಲೆಗಳು ಎರಡಕ್ಕೂ ಆದ್ಯತೆ ನೀಡಿವೆ. ಹಾಗಾಗಿ, ಉಡುಪಿ ಜಿಲ್ಲೆಯ ಕಾರ್ಕಳದ ಬಳಿಯ ಖಾಸಗಿ ವಸತಿ ಕಾಲೇಜಿಗೆ ಮಗಳನ್ನು ಸೇರಿಸಿದ್ದೆವು. ಆಕೆ ಉತ್ತಮ ಫಲಿತಾಂಶವನ್ನೂ ಪಡೆದಿದ್ದಾಳೆ. ನೀಟ್ ರ್‍ಯಾಂಕಿಂಗ್‌ನಲ್ಲೂ ಉನ್ನತ ಶ್ರೇಣಿ ಪಡೆದಿದ್ದಾಳೆ. ವೈದ್ಯಕೀಯ ಕೋರ್ಸ್ ಪ್ರವೇಶದ ನಿರೀಕ್ಷೆಯಲ್ಲಿ ಇದ್ದೇವೆ’ ಎನ್ನುತ್ತಾರೆ ಧಾರವಾಡದ ಪೋಷಕರಾದ ಸುಧಾ–ಸಂಜೀವ್ ಕುಮಾರ್ ದಂಪತಿ.
2024ರ ಪಿಯು ಫಲಿತಾಂಶದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲೆರಡು ಸ್ಥಾನ ಪಡೆದಿವೆ. ಯಾದಗಿರಿ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಜಿಲ್ಲೆಗಳು ಕೊನೆ ಸ್ಥಾನದಲ್ಲಿವೆ. ಪ್ರತಿಭಾವಂತ ವಿದ್ಯಾರ್ಥಿಗಳ ವಲಸೆಯೂ ಅಂತಹ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ, ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಒಂದು ಕಾರಣವಾಗಿದೆ.
ಉನ್ನತ ಶ್ರೇಣಿ ವಿದ್ಯಾರ್ಥಿಗಳಿಗಷ್ಟೇ ಮನ್ನಣೆ:
ಎಸ್‌ಎಸ್‌ಎಲ್‌ಸಿ ನಂತರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಕರಾವಳಿ, ಬೆಂಗಳೂರು ಸೇರಿದಂತೆ ದಕ್ಷಣ ಕರ್ನಾಟಕದ ಕೆಲ ಜಿಲ್ಲೆಗಳ ಪಿಯು ಕಾಲೇಜುಗಳಿಗೆ ಮಕ್ಕಳು ಸೇರುತ್ತಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಣಿ ಪಡೆದವರಿಗಷ್ಟೇ ಆ ಕಾಲೇಜುಗಳು ಪ್ರವೇಶ ನೀಡುತ್ತವೆ.
‘ಕಡಿಮೆ ಅಂಕ ಪಡೆದ ಮಕ್ಕಳು ಉತ್ತರ ಕರ್ನಾಟಕದ ತಮ್ಮ ಜಿಲ್ಲೆಗಳಲ್ಲೇ ಲಭ್ಯವಿರುವ ಕಾಲೇಜು, ಕೋರ್ಸ್‌ಗಳಿಗೆ ಸೇರುತ್ತಾರೆ. ಪ್ರತಿಭಾವಂತ ಮಕ್ಕಳ ಇಂತಹ ಶೈಕ್ಷಣಿಕ ವಲಸೆಯ ಪರಿಣಾಮವಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಫಲಿತಾಂಶದ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದರೆ, ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತೂ ಹಿಂದುಳಿಯುತ್ತಿವೆ. ಶೈಕ್ಷಣಿಕ ಮೂಲಸೌಕರ್ಯ ಕೊರತೆ, ಶಿಕ್ಷಕರ ಕೊರತೆ ಮಧ್ಯೆ ಪ್ರತಿಭಾ ಪಲಾಯನವೂ ಬಹುಮುಖ್ಯ ಅಂಶ’ ಎನ್ನುತ್ತಾರೆ ಹಾವೇರಿ ಜಿಲ್ಲೆ ಬಂಕಾಪುರದ ಪರಶುರಾಮ ಸತ್ಯಪ್ಪನವರ್.
ಎಸ್‌ಎಸ್‌ಎಲ್‌ಸಿ, ಪಿಯು ಫಲಿತಾಂಶದಲ್ಲಿ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಕಲ್ಯಾಣ ಕರ್ನಾಟಕ ಭಾಗದಿಂದ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಪಿಯು ಶಿಕ್ಷಣ ಪಡೆಯಲು ತೆರಳುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ವಸತಿ ಸಹಿತ ಇರುವ ಕಾಲೇಜುಗಳಿಗೆ ಕಳುಹಿಸುತ್ತಾರೆ. ಇದಕ್ಕಾಗಿ ₹2 ಲಕ್ಷದಿಂದ ₹5 ಲಕ್ಷದವರೆಗಿನ ಶುಲ್ಕವನ್ನೂ ಪಾವತಿ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡಬಿದಿರೆ, ಪುತ್ತೂರು, ಉಡುಪಿ ಜಿಲ್ಲೆಯ ಕಾರ್ಕಳ ಸೇರಿದಂತೆ ವಿವಿಧ ವಸತಿಯುತ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ.
ಕಲ್ಯಾಣ ಕರ್ನಾಟಕದಲ್ಲಿ ಪ್ರತಿ ವರ್ಷ ಕೆಕೆಆರ್‌ಡಿಬಿಯಿಂದ ನೂರಾರು ಕೋಟಿ ಖರ್ಚು ಮಾಡಿದರೂ ಇನ್ನೂ ಅಗತ್ಯ ಮೂಲಸೌಕರ್ಯಗಳನ್ನು ಶಾಲಾ, ಕಾಲೇಜುಗಳಿಗೆ ಕಲ್ಪಿಸಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರ ಕೊರತೆಯು ಕಲ್ಯಾಣ ಕರ್ನಾಟಕ ಭಾಗದ ಮಕ್ಕಳನ್ನು ಕಾಡುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 20 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಳೆದ ವರ್ಷದ ಸಾರ್ವತ್ರಿಕ ವರ್ಗಾವಣೆಯಲ್ಲಿ ದಕ್ಷಿಣ ಕರ್ನಾಟಕ ಮೂಲದ ಬಹುತೇಕ ಶಿಕ್ಷಕರು ವರ್ಗಾವಣೆ ಪಡೆದುಕೊಂಡು ತಮ್ಮ ಜಿಲ್ಲೆಗಳಿಗೆ ವಾಪಸಾಗಿದ್ದಾರೆ. ಹೀಗಾಗಿ, ಅತಿಥಿ ಶಿಕ್ಷಕರ ಮೇಲೆಯೇ ಶಾಲೆಗಳನ್ನು ನಡೆಸುವ ಅನಿವಾರ್ಯತೆ ಇದೆ. ಮುಖ್ಯ ಶಿಕ್ಷಕರೊಬ್ಬರನ್ನು ಹೊರತುಪಡಿಸಿ ಉಳಿದ ಶಿಕ್ಷಕರೆಲ್ಲ ‘ಅತಿಥಿಗಳೇ’ ಇರುವ ಸ್ಥಿತಿ ಬಹುತೇಕ ಶಾಲೆಗಳಲ್ಲಿದೆ. ಇದು ಸಹ ಈ ಜಿಲ್ಲೆಗಳು ಶೈಕ್ಷಣಿಕವಾಗಿ ಕಳಪೆ ಸಾಧನೆಗೆ ಕಾರಣವಾಗಿದೆ.
‘ಗುಣಮಟ್ಟದ ಶಿಕ್ಷಣ ದೊರೆಯದೇ ಇರುವುದರಿಂದ ಈ ಬಾರಿ ಕಲಬುರಗಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಕಡೆಯ ಸ್ಥಾನವನ್ನು ಪಡೆದಿತ್ತು. ಹೀಗಾಗಿ, ಆರ್ಥಿಕ ಅನುಕೂಲವಿರುವ ಪೋಷಕರು ತಮ್ಮ ಮಕ್ಕಳನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುತ್ತಿದ್ದಾರೆ’ ಎನ್ನುತ್ತಾರೆ ಕಲಬುರಗಿಯ ಅರ್ಥಶಾಸ್ತ್ರಜ್ಞೆ, ನಿವೃತ್ತ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ.
ಬೀದರ್ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಹೋಗಿ ಬರಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಹಾಗೂ ಬೆಂಗಳೂರಿಗೆ ಹೋಗುತ್ತಾರೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ನೆರೆಯ ಹೈದರಾಬಾದ್, ಪುಣೆ, ಮುಂಬೈಗೆ ಹೋಗುತ್ತಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಹೋಗುವ ರೂಢಿ ಇದೆ. ಬಡತನದ ಹಿನ್ನೆಲೆ ಇರುವ ವಿದ್ಯಾರ್ಥಿಗಳು ತುಮಕೂರಿನ ಸಿದ್ಧಗಂಗಾ ಮಠ, ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಹೋಗುತ್ತಾರೆ. ಕೆಲವರು ಧಾರವಾಡದ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ.
‘ದ್ವಿತೀಯ ಪಿಯು ಪರೀಕ್ಷೆ–1ಲ್ಲಿ ತೇರ್ಗಡೆಯಾದ ಹಲವರು ಕರಾವಳಿ ಜಿಲ್ಲೆಗಳಿಗೆ ತೆರಳಿದರೂ, ಮೂರು ಪರೀಕ್ಷೆಗಳ ಫಲವಾಗಿ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಈಗಾಗಲೇ 20 ಸಾವಿರ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಪರೀಕ್ಷೆ–3 ಫಲಿತಾಂಶದ ನಂತರ ಇನ್ನೂ 5 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು’ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುರೇಶ ಅಕ್ಕಣ್ಣ.
ಎಐ ಚಿತ್ರ: ಕಣಕಾಲಮಠ
‘ನೀಟ್–2025ರಲ್ಲಿ ರಾಜ್ಯಕ್ಕೆ ಮೊದಲಿಗರಾದ ವಿಜಯಪುರದ ನಿಖಿಲ್ ಸೊನ್ನದ ಅವರಂಥ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮಂಗಳೂರು, ಉಡುಪಿ, ಬೆಂಗಳೂರಿಗೆ ಶಿಕ್ಷಣಕ್ಕಾಗಿ ವಲಸೆ ಹೋಗುವುದರಿಂದ ಇನ್ನುಳಿಯುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಅಂದರೆ ಆರ್ಥಿಕವಾಗಿ ಬಡಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮವಹಿಸಿ ನಮ್ಮ ಶಿಕ್ಷಕರು, ಉಪನ್ಯಾಸಕರು ಪಾಠ, ತರಬೇತಿ ನೀಡುತ್ತಾರೆ. ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಬಾರದೇ ಇದ್ದರೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅವಕಾಶ ಗಿಟ್ಟಿಸುತ್ತಿದ್ದಾರೆ’ ಎನ್ನುತ್ತಾರೆ ವಿಜಯಪುರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಕೆ.ಹೊಸಮನಿ.
'ಬುದ್ಧಿವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮವಿಲ್ಲದೇ ರ‍್ಯಾಂಕ್ ಪಡೆಯುವಂತೆ ಮಾಡಬಹುದು. ಆದರೆ, ಸಾಮಾನ್ಯ ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉತ್ತರ ಕರ್ನಾಟಕ ಶಾಲಾ, ಕಾಲೇಜುಗಳ ಶ್ರಮ ಕಡೆಗಣಿಸುವಂತಿಲ್ಲ' ಎಂಬುದು ಅವರ ವಾದ.
‘ಉತ್ತರ ಕರ್ನಾಟಕ ವಿದ್ಯಾರ್ಥಿಗಳು ಮಂಗಳೂರು, ಉಡುಪಿ ಭಾಗದ ವಸತಿ ಶಾಲಾ, ಕಾಲೇಜುಗಳಿಗೆ ವಲಸೆ ಹೋಗಲು ಇನ್ನೊಂದು ಮುಖ್ಯ ಕಾರಣವೂ ಇದೆ. ಈ ಭಾಗದ ನೌಕರರು, ಸ್ಥಿತಿವಂತ ರೈತರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತಮ್ಮೊಂದಿಗೆ ಇಟ್ಟುಕೊಂಡರೆ ಮಾತು ಕೇಳಲ್ಲ, ಮೊಬೈಲ್, ಟಿವಿ ವೀಕ್ಷಣೆ ತಪ್ಪಿಸುವುದು ಕಷ್ಟ ಅಥವಾ ಗುರಿ ಸಾಧಿಸಲು ಆಗಲ್ಲ ಎಂಬ ಕಾರಣಕ್ಕೂ ಮಂಗಳೂರು, ಉಡುಪಿ ಭಾಗದ ವಸತಿ ಶಾಲೆಗೆ ಕಳುಹಿಸುತ್ತಾರೆ’ ಎನ್ನುತ್ತಾರೆ ಹೊಸಮನಿ.
‘ನಮ್ಮಲ್ಲಿ ಪ್ರತಿಷ್ಠಿತ ಮತ್ತು ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಕೊರತೆ ಇಲ್ಲ. ಆದರೆ, ಕರಾವಳಿಗೆ ಹೋಲಿಸಿದರೆ ವಸತಿ ಶಿಕ್ಷಣ ಸಂಸ್ಥೆಗಳು ಕಡಿಮೆ ಇವೆ. ವಿದ್ಯಾರ್ಥಿಗಳು ಉಡುಪಿ, ಮಂಗಳೂರಿನ ಶಿಕ್ಷಣ ಸಂಸ್ಥೆಗಳತ್ತ ಸಾಗಲು ಇದೂ ಒಂದು ಕಾರಣ’ ಎನ್ನುತ್ತಾರೆ ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ.
‘ನಮ್ಮಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಿರಂಗವಾಗಿ ಭವ್ಯತೆಯಿಂದ ಕೂಡಿವೆ. ಕೆಲವೆಡೆ ಅತ್ಯುತ್ತಮ ಭೌತಿಕ ಸೌಕರ್ಯ ಒದಗಿಸಲಾಗಿದೆ. ಆದರೆ, ಪಾಠ ಮಾಡಲು ನುರಿತ ಶಿಕ್ಷಕರಿಲ್ಲ. ಅಧ್ಯಯನ ಕೊರತೆಯೂ ಬಹಳಷ್ಟು ಉಪನ್ಯಾಸಕರಲ್ಲಿ ಕಾಣುತ್ತಿದೆ. ಕರಾವಳಿಯಲ್ಲಿ ಉಪನ್ಯಾಸಕರು ಪರಿಶ್ರಮ ವಹಿಸಿ ಪಾಠ ಮಾಡುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಯೋಜನಾಬದ್ಧವಾಗಿ ಕಲಿಕಾ ಚಟುವಟಿಕೆ ಕೈಗೊಳ್ಳುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆಯೂ ನಿಗಾ ವಹಿಸುತ್ತಾರೆ. ಇವೆಲ್ಲ ಕಾರಣಕ್ಕಾಗಿ ಆರ್ಥಿಕವಾಗಿ ಸಶಕ್ತ ಪಾಲಕರು ಕರಾವಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ರಾಮಕೃಷ್ಣ ಮರಾಠೆ.
ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿನ ಕಾಲೇಜುಗಳನ್ನು ತೊರೆಯಲು ಹಲವು ಕಾರಣಗಳು ಇರಬಹುದು. ಆದರೆ, ಪಿಯು ಕಾಲೇಜುಗಳನ್ನು ಅರಸಿ ಕರಾವಳಿಯತ್ತಲೇ ಮುಖ ಮಾಡುವ ಕಾರಣಗಳೂ ಅಷ್ಟೇ ಮುಖ್ಯವಾಗಿವೆ.
ದಕ್ಷಿಣ ಕನ್ನಡ 205 ಪದವಿ ಪೂರ್ವ ಕಾಲೇಜುಗಳಿದ್ದು, ಅವುಗಳಲ್ಲಿ ಸರ್ಕಾರಿ ಕಾಲೇಜುಗಳ ಸಂಖ್ಯೆ 55 ಮಾತ್ರ. 15ಕ್ಕೂ ಅಧಿಕ ವಸತಿಸಹಿತ ಕಾಲೇಜುಗಳಿವೆ. ವಸತಿ ಸಹಿತ ಕಾಲೇಜುಗಳಲ್ಲಿ ಶೇ 90ಕ್ಕೂ ಅಧಿಕ ವಿದ್ಯಾರ್ಥಿಗಳು ಹೊರ ಜಿಲ್ಲೆಯವರು. ವಸತಿ ರಹಿತ ಖಾಸಗಿ ಕಾಲೇಜುಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಹೊರಜಿಲ್ಲೆಯವರು. ಅವರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ವಿದ್ಯಾರ್ಥಿಗಳ ಪ್ರಮಾಣ ಶೇ 35ರಷ್ಟಿದೆ ಎಂದು ಖಾಸಗಿ ಪಿಯು ಕಾಲೇಜುಗಳ ಸಂಘದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ದ್ವಿತೀಯ ಪದವಿಪೂರ್ವ ಪರೀಕ್ಷೆ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಇಲ್ಲಿನ ಶೈಕ್ಷಣಿಕ ಗುಣಮಟ್ಟವೂ ಕಾರಣ. ಕೇವಲ ಖಾಸಗಿ ಕಾಲೇಜುಗಳು ಮಾತ್ರವಲ್ಲ, ಅಲ್ಲಿನ ಸರ್ಕಾರ ಕಾಲೇಜುಗಳೂ ಫಲಿತಾಂಶವೂ ಉತ್ತಮವಾಗಿದೆ.
ಬಹುತೇಕ ಪಿಯು ಕಾಲೇಜುಗಳಲ್ಲಿ ಪಠ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಂದ ಪುನರಾವರ್ತನೆ ಅಭ್ಯಾಸಗಳನ್ನು ಮಾಡಿಸುತ್ತಾರೆ. ಜಿಲ್ಲಾ ಮಟ್ಟದಲ್ಲೂ ಮಧ್ಯವಾರ್ಷಿಕ ಪರೀಕ್ಷೆ, ವಾರ್ಷಿಕ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸುತ್ತವೆ. ಪರೀಕ್ಷಾ ಅವ್ಯವಹಾರಗಳಿಗೆ ಅವಕಾಶ ಆಗದಂತೆ ಎಚ್ಚರ ವಹಿಸುತ್ತವೆ. ಈ ಕ್ರಮಗಳಿಂದ ಫಲಿತಾಂಶ ಉತ್ತಮವಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಘದ ಅಧ್ಯಕ್ಷ ಜಯಾನಂದ ಎನ್. ಸುವರ್ಣ ಮಾಹಿತಿ ನೀಡಿದರು.
ಇಲ್ಲಿನ ಖಾಸಗಿ ಪಿಯು ಕಾಲೇಜುಗಳು ನೀಟ್, ಸಿಇಟಿ, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿಯನ್ನು ನೀಡುತ್ತವೆ. ಆಯಾ ಕಾಲೇಜಿನದ್ದೇ ಆದ ಪ್ರಶ್ನೆ ಪತ್ರಿಕೆ ರೂಪಿಸಿ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಾಲಮಿತಿಯೊಳಗೆ ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತವೆ. ಅತ್ಯಂತ ಬುದ್ಧಿವಂತ, ಬುದ್ಧಿವಂತ, ಸಾಧಾರಣ ಎಂದು ವರ್ಗೀಕರಿಸಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾದ ತರಬೇತಿ ಒದಗಿಸುತ್ತವೆ. ಕೆಲವು ಕಾಲೇಜುಗಳಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೂ ತರಗತಿಗಳು ನಡೆಯುವುದುಂಟು. ಎಷ್ಟೇ ಅನಿವಾರ್ಯ ಕಾರಣಗಳಿದ್ದರೂ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುವುದಿಲ್ಲ. ವಿದ್ಯಾರ್ಥಿಗಳು ಅನಾರೋಗ್ಯಕ್ಕೊಳಗಾದರೂ ರಜೆ ಪಡೆಯಲು ವೈದ್ಯರ ಪ್ರಮಾಣಪತ್ರ ಹಾಜರುಪಡಿಸಬೇಕಾದಷ್ಟು ಕಠಿಣ ನಿಯಮಗಳನ್ನು ಕೆಲ ಕಾಲೇಜುಗಳು ಪಾಲಿಸುತ್ತವೆ.
‘ಈ ನಿಯಮಗಳು ಕಠೋರ ಎನಿಸಬಹುದು. ಆದರೆ ಕಲಿಕೆಯ ವಾತಾವರಣವನ್ನು ಕಾಪಾಡಲು ಇಂತಹ ಶಿಸ್ತು ಅನಿವಾರ್ಯ. ವಿದ್ಯಾರ್ಥಿಗಳೂ ಕ್ರಮೇಣ ಈ ಕಠಿಣ ನಿಯಮಗಳಿಗೆ ಒಗ್ಗಿಕೊಳ್ಳುತ್ತಾರೆ. ಸಹಪಾಠಿಗಳ ನಡುವಿನ ಪೈಪೋಟಿಯಿಂದಾಗಿ ವಿದ್ಯಾರ್ಥಿಗಳಲ್ಲಿ ತಾವೂ ಉತ್ತಮ ಸಾಧನೆ ಮಾಡಬೇಕೆಂಬ ಹಂಬಲ ಮೂಡುತ್ತದೆ. ಉತ್ತಮ ಫಲಿತಾಂಶ ಪಡೆಯಬೇಕೆಂಬ ಸೆಳೆತವೂ ಇಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಕಾರಣ’ ಎಂದು ಉಪನ್ಯಾಸಕರೊಬ್ಬರು ವಿಶ್ಲೇಷಿಸಿದರು.
ನೀಟ್, ಜೆಇಇ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೌಲಭ್ಯ ಇಲ್ಲದ ಇಲ್ಲಿನ ಖಾಸಗಿ ಪಿಯು ಕಾಲೇಜುಗಳಲ್ಲಿ ವಾರ್ಷಿಕ ₹ 50 ಸಾವಿರದಿಂದ ₹ 1 ಲಕ್ಷದವರೆಗೆ ಶುಲ್ಕ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಒದಗಿಸುವ ಪಿಯು ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ ₹ 1 ಲಕ್ಷದಿಂದ ₹ 4 ಲಕ್ಷದವರೆಗೂ ಇದೆ. ವಸತಿ ಕಾಲೇಜುಗಳಲ್ಲಿ ವಾರ್ಷಿಕ ₹ 3ಲಕ್ಷದಿಂದ ₹ 5ಲಕ್ಷದವರೆಗೂ ಶುಲ್ಕವಿದೆ.
ಕೆಲ ಕಾಲೇಜುಗಳು ಬೇರೆ ಜಿಲ್ಲೆಗಳಿಗೆ ತಂಡಗಳನ್ನು ಕಳುಹಿಸಿ ಅಲ್ಲಿನ ಪ್ರೌಢಶಾಲೆಗಳಲ್ಲಿ ತಮ್ಮ ಶಿಕ್ಷಣ ಸಂಸ್ಥೆಯ ಬಗ್ಗೆ ಪ್ರಚಾರ ಮಾಡುತ್ತವೆ. ರ‍್ಯಾಂಕ್ ಪಡೆದ ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಮೂಲಕವೂ ಕಾಲೇಜಿನ ಶೈಕ್ಷಣಿಕ ವಾತಾವರಣದ ಬಗ್ಗೆ ಸದಭಿಪ್ರಾಯ ಮೂಡುವಂತೆ ಮಾಡುತ್ತವೆ. ಕೆಲವು ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕವನ್ನು ಹೇಳಿ, ನಂತರ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೆ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ಪ್ರಚಾರ ಮಾಡಿಯೂ ವಿದ್ಯಾರ್ಥಿಗಳನ್ನು ಸೆಳೆಯುತ್ತವೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಕೋಚಿಂಗ್, ಶೈಕ್ಷಣಿಕ ವರ್ಷದಲ್ಲಿ ಮುಗಿಸಬೇಕಾದ ಪಠ್ಯಕ್ರಮವನ್ನು ಮೂರು– ನಾಲ್ಕು ತಿಂಗಳುಗಳಲ್ಲಿ ಮುಗಿಸಿ, ಪುನರಾವರ್ತನೆ ಮಾಡುವುದು ಮುಂತಾದ ತಂತ್ರಗಳೂ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಸೆಳೆಯುತ್ತವೆ. ಪ್ರತಿ ಜಿಲ್ಲೆಯಲ್ಲೂ ಸ್ಪರ್ಧಾತ್ಮಕ ಶೈಕ್ಷಣಿಕ ಜಗತ್ತಿಗೆ ಪ್ರವೇಶ ನೀಡುವಂತಹ ಶಿಕ್ಷಣ ವಾತಾವರಣ ನಿರ್ಮಾಣವಾದರೆ ಈ ರೀತಿಯ ವಲಸೆ ತಪ್ಪಿ ಜಿಲ್ಲಾ ಸಮತೋಲನ ಉಂಟಾಗಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಯೊಂದು ಪಠ್ಯ ವಿಷಯಕ್ಕೂ ಪ‍್ರತ್ಯೇಕ ಅಧ್ಯಾಪಕರ ಸಂಘಗಳಿದ್ದು, ಅವು ವಿಷಯವಾರು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತವೆ. ಮಾದರಿ ಪ‍್ರಶ್ನೆಪತ್ರಿಕೆ, ನಿಖರ ಉತ್ತರ, ಅಂಕ ಹಂಚಿಕೆ ಬಗ್ಗೆ ತರಬೇತಿ ನೀಡುತ್ತವೆ. ಅಣಕು ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬುತ್ತವೆ. ಸಮರ್ಪಣಾ ಭಾವದ ಅಧ್ಯಾಪಕ ವೃಂದವೂ ಇಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಕಾರಣಜಯಾನಂದ ಎನ್. ಸುವರ್ಣ,ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ
ಪೂರಕ ವರದಿ: ಮನೋಜುಕುಮಾರ್ ಗುದ್ದಿ, ಪ್ರವೀಣ್ ಕುಮಾರ್ ಪಿ.ವಿ, ಬಸವರಾಜ ಸಂಪಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.