ಮಡಿಕೇರಿ: ‘ಇಲ್ಲಿರುವ ಹುಲಿಗಳು ನಿಮ್ಮನ್ನು ಏನೂ ಮಾಡದಿರಬಹುದು. ಆದರೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ)ದ ನಿಯಮಗಳು ನಿಮ್ಮನ್ನು ಬಿಡುವುದಿಲ್ಲ. ನೀವು ಇಂದಲ್ಲ ನಾಳೆ ಹೊರ ಹೋಗಲೇಬೇಕು. ಮುಂದೆ ಯಾವ ಕಾನೂನು ಬರುತ್ತದೋ ಗೊತ್ತಿಲ್ಲ. ಈಗ ಒಳ್ಳೆಯ ಪ್ಯಾಕೇಜ್ ಇದೆ. ಹೊರಗೆ ಬಂದು ಬಿಡಿ’ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಮತ್ತೊಂದೆಡೆ, ಬುಡಕಟ್ಟು ಕಲ್ಯಾಣ ಇಲಾಖೆಯವರು ಬಂದು ‘ನಾವು ನಿಮ್ಮೊಂದಿಗೆ ಇದ್ದೇವೆ. ಇಲ್ಲಿಯೇ ಮೂಲಸೌಕರ್ಯ ಕೊಡಿಸುತ್ತೇವೆ’ ಎಂದು ಭರವಸೆ ಕೊಟ್ಟು ಕಾಡು ಬಿಡದಂತೆ ಸೂಚಿಸಿ ತೆರಳುತ್ತಾರೆ. ಇವರಿಬ್ಬರಲ್ಲಿ ಯಾರನ್ನು ನಂಬಬೇಕೋ ತಿಳಿಯುತ್ತಿಲ್ಲ ಎಂಬುದು ಕಾಡಿನ ಆದಿವಾಸಿಗಳ ಗೊಂದಲ.
ಈ ಮಧ್ಯೆ ‘ಕಾಳಿ ಹುಲಿ ಮೀಸಲು ಪ್ರದೇಶವೂ ಸೇರಿದಂತೆ ರಾಜ್ಯದ ವಿವಿಧೆಡೆ ಅರಣ್ಯವಾಸಿಗಳನ್ನು ಕಾನೂನು ಬಾಹಿರವಾಗಿ ಸ್ಥಳಾಂತರ ಮಾಡಲಾಗುತ್ತಿರುವ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಬುಡಕಟ್ಟು ಸಚಿವಾಲಯವು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.
ಬುಡಕಟ್ಟು ಕಲ್ಯಾಣ ಸಚಿವಾಲಯವು ಕಾಡಿನೊಳಗೆ ಬದುಕಲು ಇಚ್ಛಿಸುವವರಿಗೆ ಅರಣ್ಯದೊಳಗೆ ವೈಯಕ್ತಿಕ ಹಕ್ಕು, ಸಮುದಾಯ ಹಕ್ಕುಗಳು ಸೇರಿದಂತೆ ಎಲ್ಲ ಬಗೆಯ ಮೂಲಸೌಲಭ್ಯ ಕೊಡಬೇಕು ಎಂದು ಹೇಳುತ್ತದೆ. ಆದರೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ನಿಯಮಗಳು ಹುಲಿ ಸಂರಕ್ಷಿತ ಅರಣ್ಯದಲ್ಲಿ ಇರುವವರನ್ನು ಒತ್ತಾಯವಾಗಿ ಸ್ಥಳಾಂತರಿಸಿ ಎಂದು ಹೇಳದೇ ಹೋದರೂ, ಸ್ವಯಂಪ್ರೇರಿತ ಪುನರ್ವಸತಿ ಯೋಜನೆಯ ಹೆಸರಿನಲ್ಲಿ ಕಾಡಿನಿಂದ ಹಂತಹಂತವಾಗಿ ಹೊರತನ್ನಿ ಎಂದು ಹೇಳುತ್ತದೆ. ಸರ್ಕಾರದ ಈ ಬಗೆಯ ಇಬ್ಬಗೆಯ ನೀತಿಗಳು ಅಧಿಕಾರಿಗಳಲ್ಲೂ ಗೊಂದಲ ಮೂಡಿಸಿವೆ.
ಎನ್‌ಟಿಸಿಎ ನಿಯಮಾವಳಿಗಳು ‘ನಿರ್ಣಾಯಕ ಹುಲಿ ಆವಾಸ ಸ್ಥಾನ (ಕೋರ್ ಕ್ರಿಟಿಕಲ್)’ಗಳಲ್ಲಿ ವಾಸಿಸುತ್ತಿರುವವರನ್ನು ಹಂತಹಂತವಾಗಿ ಹೊರತನ್ನಿ ಎಂದು ಹೇಳುವುದರಿಂದಲೇ ಅರಣ್ಯ ಅಧಿಕಾರಿಗಳು ಕಾಡಿನೊಳಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಕೊಡಲು ಸತಾಯಿಸುತ್ತಿದ್ದಾರೆ ಎಂದು ಆದಿವಾಸಿಗಳು ದೂರುತ್ತಾರೆ. ಇದರಿಂದ ರೋಸಿದ ಜನರು ಕಾಡಿನಿಂದ ಹೊರಬರಲು ನಿರ್ಧರಿಸಿದರೂ, ಅವರಿಗೆ ನೀಡಿರುವ ಪ್ಯಾಕೇಜ್ ‘ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಿದೆ.
ಪುನರ್ವಸತಿ ನಡೆದಿರುವ ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ನೂ ಉಲ್ಲಂಘಿಸಲಾಗಿದೆ ಎಂಬ ಆರೋಪಗಳಿವೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಅವರು ಅರಣ್ಯವಾಸಿಗಳ ಸ್ಥಳಾಂತರ ಕುರಿತು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ, ‘2020ರಿಂದ 2025ರವರೆಗೆ ಕಾಳಿ ಹುಲಿ ಮೀಸಲಿನಿಂದ ಒಟ್ಟು 498 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 240 ಕುಟುಂಬಗಳನ್ನು ಬಫರ್ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ’ ಎನ್ನುವುದು ಸಚಿವರ ಉತ್ತರದಲ್ಲೇ ಇದೆ. ಒಟ್ಟಾರೆ ಹುಲಿ ಅಭಯಾರಣ್ಯದಿಂದ ಅರಣ್ಯವಾಸಿಗಳನ್ನು ಹೊರಗೆ ತರುವುದು ಸರ್ಕಾರದ ಉದ್ದೇಶವಾಗಿದೆ ಎನ್ನುವುದು ಸ್ಟಷ್ಟವಾಗಿದೆ.
ಪುನರ್ವಸತಿ ಎನ್ನುವುದು ಜನಕೇಂದ್ರಿತ ಪ್ಯಾಕೇಜ್ ಆಗಿರದೇ ಕೇವಲ ಅರಣ್ಯ ಕೇಂದ್ರಿತ ಪ್ಯಾಕೇಜ್ ಆಗಿದೆ ಎಂದು ಅರಣ್ಯವಾಸಿಗಳು ಆರೋಪಿಸುತ್ತಾರೆ. 18 ವರ್ಷದ ಒಳಗೆ ಎಷ್ಟೇ ಮಕ್ಕಳಿದ್ದರೂ ಪತಿ, ಪತ್ನಿ ಇಬ್ಬರಿಗೂ ಸೇರಿದಂತೆ ಕೊಡುವುದು ಕೇವಲ ₹ 15 ಲಕ್ಷ. ಇಷ್ಟರಲ್ಲಿ ಕಾಡಿನಿಂದ ಹೊರಗೆ ಜಮೀನು ಖರೀದಿಸಿ ಮನೆ ಕಟ್ಟಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವೇ ಎಂಬುದು ಅವರ ಪ್ರಶ್ನೆ. ಹೋಗಲಿ, ಪುನರ್ವಸತಿ ಯೋಜನೆಯನ್ನಾದರೂ ಒಪ್ಪೋಣ ಎಂದರೆ, ಈಗಾಗಲೆ ಪುನರ್ವಸತಿಗೊಂಡಿರುವವರಿಗೆ ನೀಡಿರುವ ಮನೆಗಳು, ಅವರಿಗೆ ಕೊಟ್ಟಿರುವ ಸೌಲಭ್ಯಗಳು, ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಕಾಡಿನೊಳಗೆ ವನ್ಯಜೀವಿಗಳೊಂದಿಗೆ ಬದುಕುವುದೇ ವಾಸಿ ಎಂದು ಅರಣ್ಯವಾಸಿಗಳು ಹೇಳುತ್ತಾರೆ.
ಪ್ಯಾಕೇಜ್ ಒಪ್ಪಿದರೂ ಕೃಷಿ ಮಾಡಲು ಬರದ ಗಿರಿಜನರಿಗೆ ನಾಗರೀಕ ಸಮಾಜಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಅನುಕೂಲವಾಗುತ್ತದೆ ಎನ್ನುವ ಆಗ್ರಹ ಸಹ ಇದೆ. ಪ್ಯಾಕೇಜ್ ಮೊತ್ತವನ್ನು ಏರಿಕೆ ಮಾಡಿ, ಪುನರ್ವಸತಿ ಹೊಂದುವ ಗಿರಿಜನರಿಗೆ ಯೋಜನಾ ನಿರಾಶ್ರಿತ ಪ್ರಮಾಣಪತ್ರ ನೀಡಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಪರಿಸರ ಕಾರ್ಯಕರ್ತ ಗಿರಿಧರ ಕುಲಕರ್ಣಿ ಮಾಡಿರುವ ಮನವಿಗೆ ಸರ್ಕಾರ ಕಿವುಡಾಗಿದೆ.
ಒತ್ತುವರಿದಾರರಿಗೂ ಪರಿಹಾರ: ಇದೇ ಮಾರ್ಚ್ 10ರಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರು ಕನಕಪುರ ತಾಲ್ಲೂಕಿನ ಕುರಿಮಂದೆ ಹಾಗೂ ಸಂಭಾಪುರ ಗ್ರಾಮಗಳ ಜನರಿಗೆ ಪರ್ಯಾಯ ವಾಸಸ್ಥಳ ಕಲ್ಪಿಸುವ ಕುರಿತು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಅರಣ್ಯ ಸಚಿವರು, ‘ಸದರಿ ಗ್ರಾಮಗಳು ಅರಣ್ಯ ಒತ್ತುವರಿ ಗ್ರಾಮಗಳಾಗಿದ್ದು, ಇಲ್ಲಿರುವ ಜನರಿಗೆ ಪರ್ಯಾಯ ಗ್ರಾಮ ಅಥವಾ ವಾಸಸ್ಥಳ ಕಲ್ಪಿಸಲು ಕಾನೂನಿನ ಅಡಿಯಲ್ಲಿ ಅವಕಾಶವೇ ಇಲ್ಲ’ ಎಂದು ಉತ್ತರಿಸಿದ್ದಾರೆ.
ಕುಳಗಿ ವನ್ಯಜೀವಿ ವಲಯ ವ್ಯಾಪ್ತಿಯ ಕಲಭಾವಿ, ಆಡಿಟ್ ಸಂಖ್ಯೆ 2, ಅಮಗಾವ್ ಹಾಗೂ ಕುಂಬಾರವಾಡ ವನ್ಯಜೀವಿ ವಲಯ ವ್ಯಾಪ್ತಿಯ ಸುಲಾವಳಿ ಸೇರಿದಂತೆ ಹಲವೆಡೆ ಅರಣ್ಯ ಅತಿಕ್ರಮಣ ಆಗಿದೆ ಎಂದು ಪುನರ್ವಸತಿ ಪೂರ್ವಭಾವಿ ಸಭೆಯಲ್ಲಿ ಅಂದಿನ ಡಿಸಿಎಫ್ ಅವರೇ ಮಾಹಿತಿ ನೀಡಿದ್ದರು. ಈ ಮಾಹಿತಿ ಸಭೆಯ ನಡಾವಳಿಯಲ್ಲಿ ದಾಖಲಾಗಿದೆ. ಆದರೂ ಅಲ್ಲಿದ್ದ ನೂರಾರು ಕುಟುಂಬಗಳಿಗೆ ಪರಿಹಾರ ನೀಡಿ ಸ್ಥಳಾಂತರಿಸಲಾಗಿದೆ. ಅರಣ್ಯ ಒತ್ತುವರಿಯು ಶಿಕ್ಷಾರ್ಹ ಅಪರಾಧ. ಹೀಗಿರುವಾಗ, ಒತ್ತುವರಿ ಮಾಡಿದವರಿಗೆ ಪರಿಹಾರ ನೀಡಿ ಸ್ಥಳಾಂತರಿಸಿದ್ದು, ಕಾಯ್ದೆಗಳ ಉಲ್ಲಂಘನೆ. ಅಧಿಕಾರಿಗಳೇ ಕಾನೂನು ಮುರಿದರೆ ಯಾರ ಬಳಿ ದೂರುವುದು ಎಂದು ಪರಿಸರವಾದಿಗಳ ತಕರಾರು ತೆಗೆಯುತ್ತಾರೆ.
ನಡೆಯದ ಗ್ರಾಮಸಭೆ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯದ ತಳೇವಾಡಿ ಗ್ರಾಮಸ್ಥರ ಸ್ಥಳಾಂತರ ಪ್ರಕ್ರಿಯೆ ಕೂಡ ಅನುಮಾನಗಳನ್ನು ಹುಟ್ಟುಹಾಕಿದೆ. ಇಲ್ಲಿ ಈಗಲೂ 13 ಹಾಡಿಗಳಿವೆ. 754 ಕುಟುಂಬಗಳಿವೆ. 3,059 ಜನ ವಾಸವಿದ್ದಾರೆ. ಇದರಲ್ಲಿ ತಳೇವಾಡಿಯ ಜನ ಮಾತ್ರ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮೇ 17ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಲಾ ₹ 10 ಲಕ್ಷದ ಪರಿಹಾರದ ಚೆಕ್ ಕೂಡ ನೀಡಿದ್ದಾರೆ. ಇಲ್ಲಿನ ಕುಟುಂಬಗಳ ಪುನರ್ವಸತಿ ಕುರಿತು 2024ರ ಆಗಸ್ಟ್‌ನಲ್ಲಿ ಜರುಗಿದ ಸಭೆಗೆ ಯಾವೊಬ್ಬ ಅಧಿಕಾರಿಯೂ ಹಾಜರಾಗಿಲ್ಲ. 2025ರ ಜನವರಿಯಲ್ಲಿ ಜರುಗಿದ ಸಭೆಗೂ ಕಿರಿಯ ಅಧಿಕಾರಿಗಳು ಮಾತ್ರ ಹಾಜರಾದರು.
‘ಸ್ಥಳಾಂತರಕ್ಕೂ ಮುನ್ನ ಗ್ರಾಮಸಭೆ ನಡೆಸಿ ಪ್ರಸ್ತಾವಗಳನ್ನು ಜಿಲ್ಲಾ ಮಟ್ಟದ ಸಮಿತಿ ಮುಂದೆ ಇಡಬೇಕು ಎಂದು ಕೇಂದ್ರ ಬುಡಕಟ್ಟು ಸಚಿವಾಲಯದ ನಿಯಮ ಇದ್ದರೂ ತಳೇವಾಡಿಯಲ್ಲಿ ಗ್ರಾಮಸಭೆಯನ್ನೇ ನಡೆಸಿಲ್ಲ. ಬದಲಿಗೆ ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ‘ನಿರಾಕ್ಷೇಪಣಾ ಪತ್ರ’ ನೀಡಲಾಗಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ ಅಡಿ ಗೊತ್ತಾಗಿದೆ. ಸ್ಥಳಾಂತರ ಮಾಡುವ ಪೂರ್ವದಲ್ಲಿ ಹಕ್ಕುಗಳನ್ನು ಗುರುತಿಸಿ ಇತ್ಯರ್ಥ ಮಾಡುವ ಪ್ರಕ್ರಿಯೆ ಆಗಬೇಕು ಹಾಗೂ ಗ್ರಾಮ ಸಭೆಯ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. ಆದರೆ, ತಳೇವಾಡಿ ಗ್ರಾಮಸ್ಥರ ಪುನರ್ವಸತಿ ವಿಚಾರದಲ್ಲಿ ಈ ಎಲ್ಲ ನಿಯಮ ಉಲ್ಲಂಘಿಸಲಾಗಿದೆ’ ಎಂದು ಬೆಳಗಾವಿಯ ಆರ್‌ಟಿಐ ಕಾರ್ಯಕರ್ತ ರಾಘವೇಂದ್ರ ಆರೋಪಿಸುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಅರಣ್ಯವಾಸಿಗಳು ಇಚ್ಚಿಸಿದಲ್ಲಿ ಮಾತ್ರ ಸ್ಥಳಾಂತರಿಸಲು ಕೇಂದ್ರ ಸರ್ಕಾರದ ಅನುಮತಿ ಇದೆ. ಇದಕ್ಕೆ ಗ್ರಾಮಸಭೆ ನಡೆಸಿ ನಿರ್ಣಯ ಅಂಗೀಕರಿಸಬೇಕು ಎಂಬ ನಿಯಮವಿಲ್ಲ. ತಳೇವಾಡಿ ಗ್ರಾಮ ಸ್ಥಳಾಂತರದಲ್ಲಿ ಯಾವುದೇ ಲೋಪ ಆಗದಂತೆ ಕ್ರಮ ವಹಿಸಲಾಗಿದೆ. 27 ಕುಟುಂಬಗಳು ಈಗಾಗಲೇ ಸ್ವಯಂಪ್ರೇರಣೆಯಿಂದ ಹೊರಬರಲು ಒಪ್ಪಿಕೊಂಡಿವೆ. ತಲಾ ಕುಟುಂಬಕ್ಕೆ ₹ 10 ಲಕ್ಷದ ಚೆಕ್ ನೀಡಲಾಗಿದೆ. 2ನೇ ಕಂತಿನಲ್ಲಿ ₹ 5 ಲಕ್ಷ ನೀಡಲಾಗುವುದು’ ಎಂದು ಹೇಳಿದರು.
ಸಂಪುಟ ನಭೆ ನಡೆದರೂ ಮುಗಿಯದ ಬವಣೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಈಚೆಗೆ ಸಂಪುಟ ಸಭೆ ನಡೆದರೂ ಅಲ್ಲಿನ ಗಿರಿಜನರಿಗೆ ಅಭಿವೃದ್ಧಿ ಕುರಿತ ಲವಲೇಶ ಭರವಸೆಯೂ ಇಲ್ಲ. ಇಲ್ಲಿರುವ 11 ಹಾಡಿಗಳಲ್ಲಿ 9 ಹಾಡಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ. ರಸ್ತೆ ಸೌಲಭ್ಯವಂತೂ ಹೇಳತೀರದಾಗಿದೆ. ಅನಾರೋಗ್ಯಪೀಡಿತರನ್ನು ಡೋಲಿಯಲ್ಲಿ ಎತ್ತಿಕೊಂಡು ಹೋಗಬೇಕಿದೆ. ಎಷ್ಟೋ ಗರ್ಭಿಣಿಯರಿಗೆ ಹೀಗೆ ಎತ್ತಿಕೊಂಡು ಹೋಗುವಾಗಲೇ ಹೆರಿಗೆಯಾಗಿದೆ. ‘ಬರೀ ಭರವಸೆಗಳಷ್ಟೇ ಸಿಗುತ್ತಿವೆ. ಊರು ಹುಟ್ಟಿದಾಗ ಹೇಗಿತ್ತೋ ಹಾಗೆಯೇ ನಮ್ಮ ಪರಿಸ್ಥಿತಿ ಇದೆ’ ಎಂದು ನಿರಾಶೆಯಿಂದ ಹೇಳುತ್ತಾರೆ ಇಲ್ಲಿನ ಮೆಂದಾರೆ ಗ್ರಾಮ ಪಂಚಾಯಿತಿ ಸದಸ್ಯ ಮಾದಯ್ಯ.
ಇಂತಹ ಉಸಿರುಗಟ್ಟುವ ಸ್ಥಿತಿಯ ವಿರುದ್ಧ ಸಿಡಿದೆದ್ದ ಇಂಡಿಗನತ್ತ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಮತಗಟ್ಟೆಯನ್ನೇ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಪುನರ್ವಸತಿಗೆ ಒಪ್ಪಿದ ಅರಣ್ಯದಂಚಿನ ಚಂಗಡಿ ಗ್ರಾಮಸ್ಥರು ಇನ್ನೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ವರ್ಷಗಳು ಉರುಳಿದರೂ ಇದರ ಕಡತ ಸರ್ಕಾರದ ತಿಜೋರಿಯಲ್ಲೆ ದೂಳು ತಿನ್ನುತ್ತಿದೆ.
ಕಾಡಿನಲ್ಲಿರುವ ದಯನೀಯ ಪರಿಸ್ಥಿತಿ ಬೇಡ ಎಂದು ಸರ್ಕಾರದ ಮಾತುಗಳನ್ನು ನಂಬಿ ಕಾಡಿನಿಂದ ಹೊರ ಬಂದ ನಾಗರಹೊಳೆ ಗಿರಿಜನ ಸಮುದಾಯದವರ ಬದಕು ಹಸನಾಗಿಲ್ಲ. 3,418 ಕುಟುಂಬಗಳು 1972 ರಿಂದಲೂ ಪುನರ್ವಸತಿಗಾಗಿ ಹೋರಾಟ ನಡೆಸಿವೆ ಎನ್ನುತ್ತಾರೆ ‘ಡೀಡ್’ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್.
ಪುನರ್ವಸತಿಯಾದ ಕೇಂದ್ರದಲ್ಲೂ ಮೂಲಸೌಕರ್ಯ ಮರೀಚಿಕೆ ಎನಿಸಿದೆ. ಕೊಟ್ಟಿರುವ ಭೂಮಿಯನ್ನು ಶುಂಠಿ ಬೆಳೆಯುವವರಿಗೆ ಗುತ್ತಿಗೆ ನೀಡಿದ್ದು, ಲಾಭ ಶುಂಠಿ ಬೆಳೆಗಾರರ ಪಾಲಾಗುತ್ತಿದೆ. ಕಾಡಿನೊಳಗೆ ಇದ್ದಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಹಲವರಲ್ಲಿವೆ. ಈ ಪರಿಸ್ಥಿತಿ ಕಂಡ ಬಹಳಷ್ಟು ಹಾಡಿಗಳ ನಿವಾಸಿಗಳು ಕಾಡಿನಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಅತ್ತ ಮೂಲ ಸೌಕರ್ಯವೂ ಇಲ್ಲ, ಇತ್ತ ಪುನರ್ವಸತಿಯೂ ಇಲ್ಲದಂತಹ ಸ್ಥಿತಿ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತ ಮತ್ತು ಉದ್ಯಾನದೊಳಗೇ ಇರುವ ಹಳ್ಳಿಗಳದ್ದಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ಕಂದಾಯ ಜಾಗದಲ್ಲಿರುವ 1,300 ಕುಟುಂಬಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಅವುಗಳ ಪೈಕಿ 650 ಕುಟುಂಬಗಳು ಸ್ವಇಚ್ಛೆಯಿಂದ ಹೊರಬರಲು ಒಪ್ಪಿದ್ದು, 350 ಸ್ಥಳಾಂತರವೂ ಆಗಿದೆ. ಇನ್ನೂ 300ಕ್ಕೂ ಹೆಚ್ಚು ಕುಟುಂಬಗಳು ಹೊರಬರಲು ಸಾಧ್ಯವಾಗಿಲ್ಲ. ಅದಕ್ಕೆ ಬೇಕಿರುವ ಪ್ರಕ್ರಿಯೆ ಮತ್ತು ಜಾಗ ಗುರುತಿಸುವ ಕೆಲಸ ಆಗಿಲ್ಲ. ಸ್ಥಳಾಂತರದ ಕನವರಿಕೆಯಲ್ಲೇ ಕಾಡಿನ ವಾಸ ಗಿರಿಜನರಿಗೆ ಮುಂದುವರಿದಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಹಳ್ಳಿಗಳಿಗೆ ರಸ್ತೆ ಮಾಡಲು ಅರಣ್ಯ ಅವಕಾಶ ನೀಡುತ್ತಿಲ್ಲ. ಅವರನ್ನು ಅಲ್ಲಿಂದ ಹೊರಗೆ ತರಬೇಕು ಎಂಬ ಉದ್ದೇಶ ಇದೆ. ಆದರೆ, ಆ ಪ್ರಕ್ರಿಯೆ ಆಗದೆ, ಇತ್ತ ರಸ್ತೆ ಸೇರಿ ಮೂಲ ಸೌಕರ್ಯ ಇಲ್ಲವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿಂದ ಕಾಡಿನೊಳಗೆ ಜನರು ನರಳುತ್ತಿದ್ದರೂ ಅರಣ್ಯ ಇಲಾಖೆ ಸಫಾರಿಗಾಗಿ ಎಲ್ಲ ಬಗೆಯ ಮೂಲಸೌಕರ್ಯ ನೀಡಿ, ಲಾಭ ಮಾಡಿಕೊಳ್ಳುತ್ತಿದೆ. ಇದು ಕಾಡಿನೊಳಗಿನ ಜನರಲ್ಲಿ ಸಿಟ್ಟು ತರಿಸಿದ್ದು, ‘ನಮಗೊಂದು ನಿಯಮ, ಅವರಿಗೊಂದು ನಿಯಮವಾ’ ಎಂದು ಕೋಪದಲ್ಲೇ ಪ್ರಶ್ನಿಸುತ್ತಾರೆ.
ಹುಲಿ ಯೋಜನೆಯಡಿ ಪುನರ್ವಸತಿ; ಯಾವುದಕ್ಕೆ ಎಷ್ಟು ಹಣ?
ಹುಲಿ ಯೋಜನೆಯ ಪುನರ್ವಸತಿ ಯೋಜನೆಯಡಿ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ತಲಾ ₹15 ಲಕ್ಷ ನೀಡಲಾಗುತ್ತದೆ. 2021ಕ್ಕೂ ಮೊದಲು ಆ ಮೊತ್ತ ₹10 ಲಕ್ಷ ಇತ್ತು. ಇದರಲ್ಲಿ ಎರಡು ಆಯ್ಕೆಗಳಿವೆ, ಪುನರ್ವಸತಿ ಅಥವಾ ಸ್ಥಳಾಂತರಕ್ಕೆ ಒಪ್ಪುವ ಆದರೆ, ಅರಣ್ಯ ಇಲಾಖೆಯಿಂದ ಪುನರ್ವಸತಿಗೆ ಒಪ್ಪದ ಕುಟುಂಬಗಳಿಗೆ ₹15 ಲಕ್ಷ ನೀಡಲಾಗುತ್ತದೆ. ಇವರಿಗೆ ಅರಣ್ಯ ಇಲಾಖೆಯಿಂದ ಯಾವುದೇ ರೀತಿ ವ್ಯವಸ್ಥೆ ಮಾಡಿಕೊಡುವುದಿಲ್ಲ. ಪುನರ್ವಸತಿಗೆ ಒಪ್ಪುವ ಕುಟುಂಬಗಳಿಗೆ ಕೃಷಿ ಭೂಮಿ,ಮನೆ, ಹಕ್ಕುಪತ್ರ, ಪ್ರೋತ್ಸಾಹ ಧನ ಮತ್ತು ಸಮುದಾಯ ಸೌಲಭ್ಯಗಳನ್ನೂ ನೀಡುತ್ತದೆ. ₹15 ಲಕ್ಷ ವೆಚ್ಚದಲ್ಲಿ ಇವೆಲ್ಲವನ್ನೂ ಮಾಡಿಕೊಡಲಾಗುತ್ತದೆ.
ಒಂದು ಕುಟುಂಬದಲ್ಲಿ ಗಂಡ– ಹೆಂಡತಿ ಮತ್ತು ಅವರಿಗೆ 18 ವರ್ಷ ವಯಸ್ಸು ಮೀರಿದ ಮಕ್ಕಳಿದ್ದರೆ, ಆ ಮಕ್ಕಳಲ್ಲಿ, ಅವಿವಾಹಿತ ಗಂಡು ಅಥವಾ ಹೆಣ್ಣಿದ್ದರೆ ಅವರಿಗೆ ತಲಾ ₹15 ಲಕ್ಷ ನೀಡಬೇಕು ಎಂಬ ನಿಯಮವಿದೆ. ಅವರಿಗೆ ವಿವಾಹವಾಗಿದ್ದರೆ, ಪ್ಯಾಕೇಜ್ ಮೊತ್ತ ಅನ್ವಯವಾಗುವುದಿಲ್ಲ. ಆದರೆ, ಸರ್ಕಾರಗಳು 18 ಮೀರಿದ ಅವಿವಾಹಿತರಿಗೆ ಹಣ ನೀಡುತ್ತಿಲ್ಲ ಎಂಬ ಆರೋಪವಿದೆ.
ಪ್ಯಾಕೇಜ್ ಮೊತ್ತದ ಬಳಕೆ ಹೇಗೆ?: ಕೃಷಿ ಭೂಮಿ ಪಡೆದು ಅಭಿವೃದ್ಧಿ ಮಾಡಲು ಪ್ಯಾಕೇಜ್‌ನ ಮೊತ್ತದಲ್ಲಿ ಶೇ 35 ಬಳಸಲಾಗುತ್ತದೆ. ಮನೆ ಕಟ್ಟಿಕೊಳ್ಳಲು ಜಾಗ ಮತ್ತು ಮನೆ ನಿರ್ಮಾಣಕ್ಕೆ ಶೇ 30 ರಷ್ಟು ಹಣ. ಪ್ರೋತ್ಸಾಹ ಧನಕ್ಕೆ ಶೇ 5. ಸಮುದಾಯ ಸೌಲಭ್ಯಗಳಾದ ಸಂಪರ್ಕ ರಸ್ತೆ, ನೀರಾವರಿ, ಕುಡಿಯುವ ನೀರು ವಿದ್ಯುತ್ ಮತ್ತು ಇತರ ಸೌಲಭ್ಯಗಳಿಗೆ ಪ್ಯಾಕೇಜ್‌ನ ಶೇ 10 ರಷ್ಟು ಮೊತ್ತ ಬಳಸಲಾಗುತ್ತದೆ. ಆದರೆ ಪುನರ್ವಸತಿಗಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಕೊಡಲು ತಯಾರಿಲ್ಲ.
ಸ್ಥಳಾಂತರಗೊಂಡ ಕುಟುಂಬಗಳು
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 430 ಕುಟುಂಬಗಳು
ನಾಗರಹೊಳೆಯಲ್ಲಿ 800 ಕುಟುಂಬಗಳು (ಇನ್ನೂ 450 ಕುಟುಂಬಗಳು ಸ್ಥಳಾಂತರ ಆಗಬೇಕಿವೆ)
ಕಾಳಿ ಹುಲಿ ಸಂರಕ್ಷಿತ ಪ್ರದೇಶ 450 ಕುಟುಂಬಗಳು
ಭದ್ರಾ ಹುಲಿ ಯೋಜನೆ: ಪುನರ್ವಸತಿ ಯಶೋಗಾಥೆ
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಹರಡಿರುವ ಭದ್ರಾ ಹುಲಿ ಯೋಜನೆ ಪ್ರದೇಶದ ಕಾಡಿನಲ್ಲಿದ್ದ 16 ಗ್ರಾಮಗಳ 736 ಕುಟುಂಬಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿದೆ. ದೇಶದಲ್ಲಿ ಯಶಸ್ವಿಯಾಗಿ ಪುನರ್ವಸತಿಯಾದ ಮೊದಲ ಯೋಜನೆ ಎನ್ನುವ ಹೆಗ್ಗಳಿಕೆ ಇದಕ್ಕಿದೆ.
1960ರಲ್ಲಿ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ಭದ್ರಾ ಅಣೆಕಟ್ಟು ನಿರ್ಮಿಸಲಾಯಿತು. ನರಸಿಂಹರಾಜಪುರ– ತರೀಕೆರೆ, ಚಿಕ್ಕಮಗಳೂರು–ನರಸಿಂಹರಾಜಪುರ ಸಂಪರ್ಕ ರಸ್ತೆಗಳು ಈ ಕಾಡಿನಲ್ಲಿ ಹಾದುಹೋಗಿದ್ದವು. ಹೆಬ್ಬೆ, ಮಾಡ್ಲಾ, ಹಿಪ್ಲಾ, ಕೆಸವೆ, ಮುತ್ತೋಡಿ, ಕರುವಾನೆ, ಮಾಡ್ಲಾ–ವಡ್ಡಿಹಟ್ಟಿ, ಹೆಬ್ಬೆ–ಕುರಕಲುಮನೆ, ಬಿದರೆ, ಶಿರಗೊಳ, ಬಾಳೆಗದ್ದೆ, ಮಠ, ಹುಣಸೆಕಟ್ಟೆ, ಹೆಗ್ಗರಮತ್ತುವಾನೆ, ಕಂಚಗಾರ ಮತ್ತು ಮಧುಗುಣಿ ಗ್ರಾಮಗಳು ಈ ಅರಣ್ಯ ಪ್ರದೇಶದಲ್ಲಿದ್ದವು. ಜಲಾಶಯ ನಿರ್ಮಾಣ ನಂತರ ಈ ಗ್ರಾಮಗಳ ಸಂಪರ್ಕ ರಸ್ತೆಗಳು ಬಂದ್ ಆದವು.
1976ರಲ್ಲಿ ಆಗಿನ ಅರಣ್ಯ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿ ಚರ್ಚಿಸಿ, ಗ್ರಾಮಗಳ ಸ್ಥಳಾಂತರ ಮತ್ತು ಪುನರ್ವಸತಿಗೆ ನಿರ್ಧರಿಸಿದರು. ಕಾಡಿನಿಂದ ಹೊರಹೋಗಲು ಮೊದಲು ಜನರು ಆಸಕ್ತಿ ತೋರಿರಲಿಲ್ಲ. 1992ರಲ್ಲಿ ಆಗಿನ ಜಿಲ್ಲಾಧಿಕಾರಿ ಸುಬ್ರಹ್ಮಣ್ಯ ಮತ್ತು ಡಿಎಫ್‌ಒ ಅವರು ಕಾಡಿನಲ್ಲಿನ ಈ ಗ್ರಾಮಗಳವರ ಜಮೀನು, ಮನೆ ಆಸ್ತಿ ವಿವರ, ಪುನರ್ವಸತಿಗೆ ಬೇಕಾಗುವ ಅನುದಾನ ಕುರಿತು ವರದಿ ಸಿದ್ಧಪಡಿಸಿದರು.
ಕೇಂದ್ರ ಸರ್ಕಾರವು 1996ರಲ್ಲಿ ಭೂಸ್ವಾಧೀನ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ₹ 1.64 ಕೋಟಿ ಅನುದಾನ ಬಿಡುಗಡೆಗೊಳಿಸಿತು. ಸ್ವಾಧೀನ ಕಾರ್ಯವನ್ನು ಕೇಂದ್ರ ಸರ್ಕಾರ ಹಾಗೂ ಪುನರ್ವಸತಿ ಕಾರ್ಯವನ್ನು ರಾಜ್ಯ ಸರ್ಕಾರ ನಿರ್ವಹಿಸಬೇಕು ಎಂದು ಒಪ್ಪಂದವಾಯಿತು. ಕಾರಣಾಂತರಗಳಿಂದ ಭೂಸ್ವಾಧೀನಕ್ಕೆ ಬಿಡುಗಡೆಯಾಗಿದ್ದ ಅನುದಾನ ಬಳಕೆಯಾಗದೆ ಉಳಿಯಿತು.
1998ರಲ್ಲಿ ಭದ್ರಾ ವನ್ಯಜೀವಿ ವಿಭಾಗದ ಡಿಎಫ್‌ಒ ಆಗಿ ಪುಸ್ತುತ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಯತೀಶ್ ಕುಮಾರ್ ಡಿ. ನೇಮಕವಾದರು. 1999ರಲ್ಲಿ ಅನುದಾನ (₹ 1.64 ಕೋಟಿ) ಪುನರ್‌ವಿನಿಯೋಗಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆದ ನಂತರ, ರಾಜ್ಯ ಸರ್ಕಾರವು ₹ 50 ಲಕ್ಷ ಬಿಡುಗಡೆ ಮಾಡಿತು. 1999ರಲ್ಲಿ ಭೂಸ್ವಾಧೀನ ಶುರುವಾಯಿತು. ಪರಿಹಾರದ ಪ್ಯಾಕೇಜ್ ಕುರಿತು 2001 ಮಾರ್ಚ್ 28ರಂದು ಸಂಪುಟದಲ್ಲಿ ತೀರ್ಮಾನವಾಯಿತು.
ಪುನರ್ವಸತಿ ಕಲ್ಪಿಸಲು ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕೆಳಗೂರಿನಲ್ಲಿ ಜಾಗ ಗುರುತಿಸಲಾಯಿತು. ಪರಿಹಾರದ ಚೆಕ್ ಅನ್ನು ಮನೆಬಾಗಿಲಿಗೆ ತಲುಪಿಸಿ, ಹಕ್ಕುಪತ್ರಗಳನ್ನು ನೀಡಲಾಯಿತು. 2001ರಲ್ಲಿ ಜಾಗ ಹಂಚಿಕೆ ಮಾಡಲಾಯಿತು. 2002ರಲ್ಲಿ ಕುಟುಂಬಗಳು ಸ್ಥಳಾಂತರದವು. ಇಡೀ ಪ್ರಕ್ರಿಯೆಗೆ ₹ 14 ಕೋಟಿ ವೆಚ್ಚವಾಯಿತು.
ಭೂರಹಿತರಿಗೆ ಮನೆ ಸಹ ನೀಡಲಾಗಿತ್ತು. ಎಂ.ಸಿ.ಹಳ್ಳಿ ಭಾಗದಲ್ಲಿ ನೀರಾವರಿ ಪ್ರದೇಶದ ಭೂಮಿ, ಕುಟುಂಬಗಳಿಗೆ ನಿವೇಶನ, ಜಮೀನು, ಮೂಲಸೌಕರ್ಯ (ಶಾಲೆ, ಆಸ್ಪತ್ರೆ, ರಸ್ತೆ, ನೀರು...) ಒದಗಿಸಲಾಗಿದೆ. ಅದೇ ರೀತಿ ಕೆಳಗೂರಿನಲ್ಲೂ ಸೌಲಭ್ಯ ಕಲ್ಪಿಸಲಾಗಿದೆ. ಕುಟುಂಬಗಳ ಬದುಕು ಹಸನಾಗಿದೆ. ಪುರ್ನವಸತಿ ಆಗಿದ್ದರಿಂದ ಉದ್ಯೋಗ, ಮಕ್ಕಳ ಶಿಕ್ಷಣ, ಎಲ್ಲದಕ್ಕೂ ಅನುಕೂಲವಾಗಿದೆ ಎಂದು ಯತೀಶ್ ಹೇಳುವರು.
ಸ್ಥಳಾಂತರ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಬಹಳಷ್ಟು ಸವಾಲು, ಅಡೆತಡೆಗಳು ಎದುರಾದವು. ನಿವೇಶನರಹಿತ ಸ್ಥಳೀಯರಿಗೆ ಹಂಚಿಕೆಗೆ ಜಾಗ ಬೇಕು, ಹೊರಗಿನವರಿಗೆ ಎಂ.ಸಿ.ಹಳ್ಳಿಯಲ್ಲಿ ಜಾಗ ಕೊಡಬಾರದು ಎಂದು ತರೀಕೆರೆ ಕ್ಷೇತ್ರದ ಆಗಿನ ಶಾಸಕ ತಕರಾರು ಎತ್ತಿದರು. ಅದನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಹರಿಸಿದರು. ತೊಡಕು, ಸವಾಲುಗಳು, ಸಮಸ್ಯೆಗಳು ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದೆವು ಎನ್ನುವರು.
ರಾಷ್ಟ್ರದಲ್ಲಿ ಪುನರ್ವಸತಿ ಹೇಗಿರಬೇಕು ಎನ್ನುವದಕ್ಕೆ ಇದೊಂದು ಸಾಕ್ಷಿಯಾಗಿದೆ.
ಅರಣ್ಯವಾಸಿಗಳ ಪ್ರತಿಕ್ರಿಯೆ
ಅರಣ್ಯ ಒತ್ತುವರಿ ಮಾಡಿದ ಕುಟುಂಬಗಳಿಗೆ ಪರಿಹಾರ ನೀಡಿ, ಸ್ಥಳಾಂತರ ಮಾಡುವ ಮೂಲಕ ಕಾಯ್ದೆ ಉಲ್ಲಂಘನೆಗೆ ಪ್ರಚೋದಿಸಲಾಗಿದೆ. ಅರ್ಜಿಗಳ ಇತ್ಯರ್ಥ ಆಗುವ ಮುನ್ನವೇ ಸ್ಥಳಾಂತರಿಸಲಾಗಿದೆ. ಇಷ್ಟಾದರೂ ಕಾಳಿ ಹುಲಿ ಮೀಸಲಿನ ಪುನರ್ವಸತಿ ಯೋಜನೆಯನ್ನು ‘ಮಾದರಿ ಯೋಜನೆ’ ಎಂದು ಬಿಂಬಿಸಲಾಗುತ್ತಿದೆ.– ರೇಷ್ಮಾ, ಮಾನವ ಹಕ್ಕು ಹೋರಾಟಗಾರ್ತಿ, ದಕ್ಷಿಣಕನ್ನಡ ಜಿಲ್ಲೆ
ಸರ್ಕಾರ ಗಿರಿಜನರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾಗಿದೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸವಲತ್ತು ಇಲ್ಲ. ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಅಲ್ಪ ಮಟ್ಟದ ಸುಧಾರಣೆ ಕಂಡಿದ್ದು ಭವಿಷ್ಯದ ಕುಡಿಗಳಿಗೆ ಧ್ವನಿ ಸಿಗುವ ವಿಶ್ವಾಸವಿದೆ.– ಹರ್ಷ, ಆದಿವಾಸಿ ಗಿರಿಜನ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ, ಹೆಮ್ಮಿಗೆ ಹಾಡಿ, ಹುಣಸೂರು ತಾ.
ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಾಡಿಗಳು ಮತ್ತು ಕಾಡಂಚಿನ ಕೋಮಲಾಪುರ ಹಾಡಿ, ಹರಳಹಳ್ಳಿಹಾಡಿ, ಅತ್ತಿಗೆಹಾಡಿ ಜನರು ವಿದ್ಯುತ್, ನೀರು, ರಸ್ತೆ, ಮನೆ ಇಲ್ಲದೆ ಕಾಡಿನ ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ.–ವಡ್ಡರಗುಡಿ ಪುಟ್ಟಬಸವ, ಲ್ಯಾಂಪ್ಸ್ ಮಾಜಿ ಅಧ್ಯಕ್ಷ, ಎಚ್.ಡಿ.ಕೋಟೆ ತಾಲ್ಲೂಕು.
ಪರಿಕಲ್ಪನೆ: ಜಿ.ಡಿ.ಯತೀಶ್‌ಕುಮಾರ್
ಪೂರಕ ಮಾಹಿತಿ: ಎಸ್.ರವಿಪ್ರಕಾಶ್, ಮಲ್ಲಿಕಾರ್ಜುನ ನಾಲವಾರ, ಎಚ್.ಎಸ್.ಸಚ್ಚಿತ್, ಮೋಹನ್‌ಕುಮಾರ್ ಸಿ., ಬಿ.ಜೆ.ಧನ್ಯಪ್ರಸಾದ್, ಸಂತೋಷ್ ಚಿನಗುಡಿ, ಎಸ್.ಕೆ.ವಿಜಯಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.