ಹುಬ್ಬಳ್ಳಿ: ‘ಮೃತರನ್ನು ಸ್ಮಶಾನಕ್ಕೆ ತಂದವರು, ಅಂತ್ಯಕ್ರಿಯೆ ನೆರವೇರಿಸಿ ನೋವಿನಲ್ಲೇ ಮನೆಗೆ ಮರಳುತ್ತಾರೆ. ಅವರು ಪದೇ ಪದೇ ಬರಲ್ಲ. ಬಹುತೇಕ ಜನರಿಗೆ ಸ್ಮಶಾನದ ಆಸುಪಾಸಿನಲ್ಲಿ ಓಡಾಡಲು ಹಿಂಜರಿಕೆ. ಹಲವರಿಗೆ ಅದರ ಬಗ್ಗೆ ಮಾತನಾಡಲು ಭಯ. ಆದರೆ, ನಮಗೆ ಅದೇ ಆಸರೆ. ಅದೇ ಬದುಕು. ಒಂದರ್ಥದಲ್ಲಿ ಅದೇ ಎಲ್ಲವೂ...’
ಹೀಗೆ ಹೇಳಿ, ಮಾತು ಮುಂದುವರಿಸಲು ಆಗದೇ ಹುಬ್ಬಳ್ಳಿಯ ಬಸಪ್ಪ ಮೌನವಾದರು. ಅವರಿಗೆ ಸ್ಮಶಾನದ ಜೊತೆಗಿನ ನಂಟು ಹಲವು ವರ್ಷಗಳದ್ದು. ಕುಟುಂಬದ ಸದಸ್ಯರೊಂದಿಗೆ ಬದುಕು ಕಟ್ಟಿಕೊಂಡಿದ್ದು, ಪ್ರತಿದಿನವೂ ಸಾವನ್ನು ಹತ್ತಿರದಿಂದ ಕಂಡಿದ್ದು, ಮನಸ್ಥಿತಿ ಗಟ್ಟಿ ಮಾಡಿಕೊಂಡಿದ್ದು...ಹೀಗೆ ಒಟ್ಟಾರೆ ದುರ್ಗಮ ಹಾದಿಯಲ್ಲೇ ಅವರ ಜೀವನ ಸಾಗಿದೆ.
‘ಸ್ಮಶಾನ ಕಾಯುವುದು ಹೊರತುಪಡಿಸಿ, ಬೇರೆ ಏನೂ ಗೊತ್ತಿಲ್ಲ’ ಎಂದು ಹೇಳುವಾಗ ಕಣ್ಣಂಚಿನಲ್ಲಿ ನೀರು ಇತ್ತು. ಕಾರಣ, ಅವರದ್ದು ಬದುಕಿದ್ದರೂ ಸತ್ತಂತಹ ಸ್ಥಿತಿ. ಅವರ ಜೀವನ ಸುಧಾರಿಸಿಲ್ಲ. ನೆಮ್ಮದಿ ಜೊತೆಗಿಲ್ಲ. ಸರ್ಕಾರದ ಭರವಸೆ, ಜನಪ್ರತಿನಿಧಿಗಳ ಆಶ್ವಾಸನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ.
ಬಹುತೇಕ ಸ್ಮಶಾನ ಕಾರ್ಮಿಕರ ಸ್ಥಿತಿ ಬಸಪ್ಪಗಿಂತ ಹೆಚ್ಚು ಭಿನ್ನವೇನಿಲ್ಲ. ಶವ ಹೂಳಲು ಕುಣಿ ತೆಗೆಯುವುದು, ಸುಡಲು ಕಟ್ಟಿಗೆ ವ್ಯವಸ್ಥೆ ಮಾಡುವುದು ಮತ್ತು ಸ್ಮಶಾನ ಕಾಯುವುದು ನಿತ್ಯದ ಕಾಯಕ. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ರೀತಿ ನ್ಯಾಯಯುತ ಫಲಾಪೇಕ್ಷೆ ನಿರೀಕ್ಷಿಸುವಂತಿಲ್ಲ. ಒಂದು ವೇಳೆ ನಿರೀಕ್ಷಿಸಿದರೂ ಅದು ಸುಲಭವಾಗಿ ದಕ್ಕಲ್ಲ.
ರಾಜ್ಯದಲ್ಲಿ ಅಂದಾಜು 50 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಸ್ಮಶಾನಗಳಿವೆ. ಲಿಂಗಾಯತ, ಬ್ರಾಹ್ಮಣ, ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಸೇರಿದ ಸಮುದಾಯ ಸ್ಮಶಾನ ಹಾಗೂ ಖಬರಸ್ತಾನಗಳಿವೆ. ಕೆಲ ಕಡೆ ಆಯಾ ಜಾತಿಗಳಿಗೆ ಸೇರಿದ ಸ್ಮಶಾನವೂ ಇದೆ. ಒಟ್ಟಾರೆ 2 ಲಕ್ಷಕ್ಕೂ ಹೆಚ್ಚು ಸ್ಮಶಾನ ಕಾರ್ಮಿಕರು ಇದ್ದಾರೆ. ಕೆಲವರು ಹತ್ತಾರು ವರ್ಷಗಳಿಂದ ಕೆಲಸದಲ್ಲಿದ್ದರೆ, ಇನ್ನೂ ಕೆಲವರಿಗೆ ಇದೇ ಕುಲಕಸುಬು.
ಸಾರ್ವಜನಿಕ ಸ್ಮಶಾನಗಳಲ್ಲಿ ಹಿಂದುಳಿದ ಸಮುದಾಯದವರ ಅಂತ್ಯಕ್ರಿಯೆಗೆ ‘ಸ್ಮಶಾನ ಕಾವಲುಗಾರರು’ ಇರುತ್ತಾರೆ. ಇವರಲ್ಲಿ ಬಹುತೇಕರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. ಲಿಂಗಾಯತ, ಬ್ರಾಹ್ಮಣ, ಮುಸ್ಲಿಂ, ಕ್ರೈಸ್ತರ ಸ್ಮಶಾನಗಳಲ್ಲಿ ಆಯಾ ಸಮುದಾಯದವರೇ ‘ಎಲ್ಲವೂ’ ನಿಭಾಯಿಸುತ್ತಾರೆ. ಸ್ಮಶಾನ ಕಾರ್ಮಿಕರು ಸಾಮಾಜಿಕವಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಅತಿ ಹಿಂದುಳಿದ ಸ್ಥಿತಿಯಲ್ಲಿದ್ದಾರೆ. ಇಂತಹ ಜನರಿಗೆ ಮದುವೆಗೆ ಹೆಣ್ಣು ಮತ್ತು ಗಂಡು ಸಿಗುವುದು ಸಹ ದೊಡ್ಡ ಸಮಸ್ಯೆಯಾಗಿದೆ.
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಮಶಾನ, ಚಿತಾಗಾರಗಳಲ್ಲಿನ ಕೆಲಸಗಾರರಿಗೆ ತಿಂಗಳಿಗೆ ₹14 ಸಾವಿರ, ಮಹಾನಗರ ಪಾಲಿಕೆ ವ್ಯಾಪ್ತಿಯ ಮಸಣಗಳಲ್ಲಿನ ಕಾರ್ಮಿಕರಿಗೆ ₹13 ಸಾವಿರ, ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಕಾರ್ಮಿಕರಿಗೆ ₹10 ಸಾವಿರ ವೇತನ ನೀಡಬೇಕು ಎಂಬ ಪ್ರಸ್ತಾವ ಸರ್ಕಾರದ ಮುಂದಿದೆ. ಆದರೆ, ಅದು ಜಾರಿಯಾಗಿಲ್ಲ’ ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕ ಯು.ಬಸವರಾಜ ಆರೋಪಿಸುತ್ತಾರೆ.
ಸಾರ್ವಜನಿಕ ಸ್ಮಶಾನ ಕಾರ್ಮಿಕರನ್ನು ‘ಸತ್ಯ ಹರಿಶ್ಚಂದ್ರ ಬಳಗ’ ಎಂದು ಕರೆಯಬೇಕು ಎಂದು ಈ ಹಿಂದೆ ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದರು. ಅದು ಅನುಷ್ಠಾನವಾಗಲಿಲ್ಲ. ‘300ಕ್ಕೂ ಹೆಚ್ಚು ಸ್ಮಶಾನ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲಾಗುವುದು’ ಎಂಬ ಭರವಸೆ ಕೆಲವರಿಗೆ ಮಾತ್ರ ದಕ್ಕಿತು.
ಬಿಬಿಎಂಪಿ, ಮಂಗಳೂರು ಹಾಗೂ ಮೈಸೂರು ಮಹಾನಗರ ಪಾಲಿಕೆ ನಿರ್ವಹಣೆಯ ವಿದ್ಯುತ್ ಚಿತಾಗಾರಗಳಲ್ಲಿ ಕೆಲ ಸಿಬ್ಬಂದಿ ಕಾಯಂ ಆಗಿದ್ದಾರೆ. ಇನ್ನೂ ಕೆಲವರು ಸೇವಾವಧಿ ಆಧಾರಿಸಿ ವೇತನ ಪಡೆಯುತ್ತಾರೆ. ಕೆಲವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ಸಾರ್ವಜನಿಕ ಸ್ಮಶಾನ ಕಾವಲುಗಾರರಿಗೆ ತಿಂಗಳಿಗೆ ಕನಿಷ್ಠ ₹4,800 ರಿಂದ ₹7,275 ವೇತನ ನೀಡಲು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. 2011ರ ಏಪ್ರಿಲ್ 21ರಲ್ಲಿನ ರಾಜ್ಯಪತ್ರದಲ್ಲಿ ಇದರ ಉಲ್ಲೇಖವಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.
‘ಸಾರ್ವಜನಿಕ ಸ್ಮಶಾನಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳ ಪೂರ್ತಿ ಕೆಲಸವಿರಲ್ಲ. ಹಾಗಾಗಿ ಕಾಯಂ ಮಾಡುವುದು ಕಷ್ಟ’ ಎಂಬುದು ರಾಜ್ಯ ಸರ್ಕಾರದ ವಾದ. ‘ಸ್ಮಶಾನ ನಿರ್ವಾಹಕರು ಎಂದು ಗುತ್ತಿಗೆ ಆಧಾರದಲ್ಲಿ ನೇಮಿಸಿ, ನಿಗದಿತ ಪ್ರೋತ್ಸಾಹಧನ ಕೊಡಿ’ ಎಂಬುದು ಸ್ಮಶಾನ ಕಾರ್ಮಿಕರ ಪ್ರತಿವಾದ. ಅಸಲಿಗೆ, ಅವರಿಗೆ ಸ್ಮಶಾನದಲ್ಲಿ ಕೂರಲು, ನಿಲ್ಲಲು ಅಥವಾ ಇರಲು ಕನಿಷ್ಠ ಕೊಠಡಿಯೂ ಇಲ್ಲ.
ಕೋಲಾರದ ರುದ್ರಭೂಮಿಯ ಪುಟ್ಟ ಕೊಠಡಿಯಲ್ಲಿ ಜನಿಸಿದ ಆನಂದ ಅವರಿಗೆ ‘ಸ್ಮಶಾನ’ದ ಸಂಕೋಲೆಯಿಂದ ಹೊರ ಬರಲು ಸಾಧ್ಯವಾಗಿಲ್ಲ. ಅವರ ತಂದೆ ವೆಂಕಟೇಶ ಮತ್ತು ಅಜ್ಜ ಮುನಿಯಪ್ಪ ಅವರಿಗೂ ಸ್ಮಶಾನವೇ ಆಸರೆ ಆಗಿತ್ತು. ಬರೋಬ್ಬರಿ 60ಕ್ಕೂ ಹೆಚ್ಚು ವರ್ಷಗಳಿಂದ ಈ ಕುಟುಂಬ ಈ ಸ್ಮಶಾನದಲ್ಲೇ ಬದುಕು ಸವೆಸಿದೆ.
‘ಕಾವಲುಗಾರರಾಗಿ ಸ್ಮಶಾನ ಸ್ವಚ್ಛಗೊಳಿಸುವುದು ಸೇರಿ ಹಲವು ಕೆಲಸ ಮಾಡುತ್ತೇವೆ. ಆದರೆ, ನಮಗೆ ಇರಲು ಸರಿಯಾದ ಮನೆ ಇಲ್ಲ. ಹೆಣ ತರುವವರಿಗೆ ಪೂಜೆ ಮಾಡಲೆಂದು ಕಟ್ಟಿಸಿದ ಪುಟ್ಟ ಕೊಠಡಿಯಲ್ಲೇ ವಾಸವಿದ್ದೇವೆ. ಅಮ್ಮ ಮುನಿವೆಂಕಟಮ್ಮ, ಪತ್ನಿ ನಳಿನಿ, ಮಕ್ಕಳು, ಸಹೋದರರು ಜೊತೆಗಿದ್ದಾರೆ’ ಎಂದು ಆನಂದ್ ತಿಳಿಸಿದರು.
ಆನಂದ್ ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಬೇರೆಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂಬ ಗುರಿ ಹೊಂದಿದ್ದಾರೆ. ‘ಅನಕ್ಷರತೆ ಕಾರಣ ನಮ್ಮ ತಾತಾ, ತಂದೆ ಸ್ಮಶಾನ ಕಾಯ್ದರು. ನಾನೂ ಕೂಡ ಓದು–ಬರಹ ಕಲಿಯಲಿಲ್ಲ. ಸ್ಮಶಾನ ಕಾಯುವ ಕೆಲಸದಲ್ಲಿ ಶ್ರದ್ಧೆಯಿದೆ. ಆದರೆ, ಸೌಲಭ್ಯಗಳು ಇಲ್ಲದೆ ಮತ್ತು ನಿಯಮಿತ ವೇತನವಿಲ್ಲದೇ ಕುಟುಂಬ ನಿರ್ವಹಣೆ ತುಂಬಾನೇ ಕಷ್ಟ. ಅನಾರೋಗ್ಯ ಉಂಟಾದರೆ, ಚಿಕಿತ್ಸೆಗೆ ಹಣ ಇರಲ್ಲ’ ಎಂದು ಅವರು ಕಣ್ಣೀರಾದರು.
ಈ ಎಲ್ಲದರ ಮಧ್ಯೆ ದುಡಿಮೆಗಾಗಿ ಬಹುತೇಕ ಜನ ಅದರಲ್ಲೂ ಯುವಜನರು ಮಹಾನಗರಗಳಿಗೆ ಮತ್ತು ಹೊರರಾಜ್ಯಗಳಿಗೆ ಗುಳೆ ಹೋಗುತ್ತಾರೆ. ಕುಟುಂಬಕ್ಕೆ ಆಧಾರಸ್ತಂಭ ಆಗಬೇಕಾದ ಯುವಜನರೇ ಮನೆಯಿಂದ ಹೊರಟರೆ, ಕುಟುಂಬ ಸದಸ್ಯರು ಸೇರಿದಂತೆ ಹಿರಿಯರು ಅನಾಥಸ್ಥಿತಿ ಅನುಭವಿಸುತ್ತಾರೆ. ಅವರು ಮೃತಪಟ್ಟರೆ, ಸ್ಮಶಾನಕ್ಕೆ ಒಯ್ದು ಮಣ್ಣು ಮಾಡಲು ಜನ ಇರಲ್ಲ. ಗುಳೆ ಹೋದವರು ಆರ್ಥಿಕ ಸಂಕಷ್ಟದಿಂದ ಊರುಗಳಿಗೆ ಮರಳಲು ಆಗುವುದಿಲ್ಲ.
‘ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಪ್ರದೇಶದಲ್ಲಿನ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಉದ್ಯೋಗಾವಕಾಶಗಳಿಲ್ಲ. ಉನ್ನತ ಶಿಕ್ಷಣ ಪಡೆದರೂ ಕೆಲಸ ಸಿಗಲ್ಲ. ಸ್ಮಶಾನ ಕಾಯುವ ಕೆಲಸದಿಂದ ಬಿಡುಗಡೆ ಆಗಬೇಕೆಂದು ಬಯಸಿದರೂ ಬೇರೆ ಬೇರೆ ಕಾರಣದಿಂದ ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೂ ಅವರಿಗೆ ಉದ್ಯೋಗ ಸಿಗದಿದ್ದರೆ, ನಮ್ಮಂತೆಯೇ ಅನಿವಾರ್ಯವಾಗಿ ಸ್ಮಶಾನ ಕಾಯಬೇಕಾಗುತ್ತದೆ’ ಎಂದು ಯಾದಗಿರಿಯ ಬಸಣ್ಣ ಹೇಳಿದರು.
ಸ್ಮಶಾನ ಕಾಯುವ ಕಾರ್ಮಿಕರಷ್ಟೇ ಅಲ್ಲ, ಸ್ಮಶಾನಗಳು ಸಹ ಸುಸ್ಥಿತಿಯಲ್ಲಿ ಇಲ್ಲ. ಬಹುತೇಕ ಸಾರ್ವಜನಿಕ ಸ್ಮಶಾನಗಳಲ್ಲಿ ಕುಡಿಯುವ ನೀರು ಸೌಲಭ್ಯ ಇಲ್ಲ. ಸ್ವಚ್ಛತೆ ಇಲ್ಲ. ಕೆಲ ಕಡೆ ಸ್ಮಶಾನ ಒತ್ತುವರಿಯಾಗಿದ್ದರೆ, ಕೆಲ ಕಡೆ ಶವಗಳ ಮೇಲೆ ಶವಗಳನ್ನು ಹೂಳಲಾಗುತ್ತದೆ. ನಿರ್ಜನ ವಾತಾವರಣ ಇರುವ ಕಾರಣ ಸ್ಮಶಾನ ಕೆಲ ಬಾರಿ ಮದ್ಯವ್ಯಸನಿಗಳ ತಾಣವಾಗಿಯೂ ಮಾರ್ಪಡುತ್ತದೆ. ಎಲ್ಲಿ ಬೇಕೆಂದಲ್ಲಿ ಮದ್ಯದ ಬಾಟ್ಲಿ, ಸಿಗರೇಟು, ಬೀಡಿ ಮುಂತಾದವು ಎಸೆದು, ಮನಬಂದಂತೆ ಗಲೀಜು ಮಾಡುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಉಮಳೆಜೂಗ್ ಎಂಬ ದ್ವೀಪ ಗ್ರಾಮವು ಕಾಳಿನದಿ ಮಧ್ಯೆ ಇದೆ. ಅಲ್ಲಿ ಸಮರ್ಪಕ ಸೇತುವೆ ವ್ಯವಸ್ಥೆ ಇಲ್ಲ, ಸಂಪರ್ಕ ರಸ್ತೆಯೂ ಇಲ್ಲ. ಸ್ಮಶಾನವೂ ಇಲ್ಲ. ಆ ಗ್ರಾಮದಲ್ಲಿ ಯಾರಾದರೂ ಮೃತರಾದರೆ ದೇಹವನ್ನು ದೋಣಿಯ ಮೂಲಕ ಸಮೀಪದ ಊರಿಗೆ ಒಯ್ದು ಅಲ್ಲಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ.
ಗುಡ್ಡಗಾಡು, ಅರಣ್ಯ ಭೂಮಿ, ಸಮುದ್ರ ಆವರಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲ. ಕೆಲವೇ ಗ್ರಾಮಗಳಲ್ಲಿ ಸ್ಮಶಾನಕ್ಕೆ ವ್ಯವಸ್ಥಿತ ಶೆಡ್, ಕಾಂಪೌಂಡ್ ಗೋಡೆಗಳಿವೆ. ಇನ್ನುಳಿದಂತೆ ನೂರಾರು ಗ್ರಾಮಗಳಲ್ಲಿ ಗ್ರಾಮದ ಹೊರವಲಯದ ಕಾಡು, ಕೆಲವೆಡೆ ಮೃತರ ಕುಟುಂಬಕ್ಕೆ ಸೇರಿದ ಜಮೀನುಗಳೇ ಸ್ಮಶಾನವಾಗಿದೆ. ಊರಾಚೆಗಿನ ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ಕೊರಕಲು ಬಿದ್ದ ಹಳ್ಳ ಕೊಳ್ಳ ದಾಟಿ, ಗುಡ್ಡಗಳನ್ನು ಏರಿ ಶವಗಳ ಅಂತ್ಯಕ್ರಿಯೆ ಮಾಡಬೇಕು.
ರಾಜ್ಯದ ಇನ್ನೂ ಹಲವು ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನಗಳಿಲ್ಲ. ಜಮೀನು, ಹೊಳೆಯ ಬದಿ ಅಥವಾ ಊರು ಹೊರಗಿನ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಬೆಳಗಾವಿ ಜಿಲ್ಲೆಯ 233 ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲ. ಇಲ್ಲಿ ವಿವಿಧ ಸಮುದಾಯಗಳ ಜನರು ಶವಗಳ ಅಂತ್ಯಕ್ರಿಯೆಗೆ ಪರದಾಡುತ್ತಾರೆ. ಊರಿಗೆ ಅಥವಾ ಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಪದೇ ಪದೇ ಒತ್ತಾಯಿಸಿದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಕೆಲ ಗ್ರಾಮಗಳಲ್ಲಿ ಸ್ಥಳೀಯ ಮುಖಂಡರು ಅಂತ್ಯಕ್ರಿಯೆ ನಡೆಸಲು ಮತ್ತು ಸ್ಮಶಾನದ ಸಲುವಾಗಿ ತಮ್ಮ ಹೊಲಗಳನ್ನು ಬಿಟ್ಟುಕೊಟ್ಟಿದ್ದಾರೆ. ಕೆಲ ಕಡೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಭೂಮಿ ಅಭಿವೃದ್ಧಿ ಮಾಡಿ, ಸ್ಮಶಾನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸುಳೇಬಾವಿ, ಚಚಡಿ, ಮಾರಿಹಾಳ, ಮುನವಳ್ಳಿ, ಬೆಟಗೇರಿ, ಸಾಂಬ್ರಾ, ಐನಾಪುರ, ಸದಲಗಾ, ಮಂಗಾವತಿ, ತೋಪಿನಕಟ್ಟಿ, ಅವರಗೋಳ, ಪಾರಿಶ್ವಾಡ, ಗುಡಸ್, ರಕ್ಷಿ, ಮುದೇನೂರ, ಮುಗಳಖೋಡ ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದವರ ಸ್ಮಶಾನಕ್ಕೆ ಇನ್ನೂ ಹೋರಾಟಗಳು ನಡೆದಿವೆ. ‘ಜಿಲ್ಲೆಯಲ್ಲಿ ಸ್ಮಶಾನಗಳ ಅಭಿವೃದ್ಧಿಗಾಗಿ, ಪ್ರತಿ ಸ್ಮಶಾನಕ್ಕೆ ₹5 ಲಕ್ಷದಂತೆ ₹2 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಸಚಿವ ಸತೀಶ ಜಾರಕಿಹೊಳಿ ಸೂಚಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 43 ಸೇರಿ ಜಿಲ್ಲೆಯಾದ್ಯಂತ 879 ಸ್ಮಶಾನಗಳಿವೆ. ಈ ಸ್ಮಶಾನಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಂದರೂ ಕುಡಿಯುವ ನೀರು, ಕನಿಷ್ಠ ಸೌಕರ್ಯ ಒದಗಿಸಿಲ್ಲ. ಗದಗ ತಾಲ್ಲೂಕಿನ ಎಂಟು ಗ್ರಾಮಗಳಿಗೆ ಸ್ಮಶಾನಗಳೇ ಇಲ್ಲ. ರೋಣ, ನರಗುಂದ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ತಾಲ್ಲೂಕಿನ ಕೆಲ ಗ್ರಾಮಗಳಲ್ಲೂ ಇದೇ ಸ್ಥಿತಿ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಮಶಾನಗಳಿಗೆ ಹೋಗಲು ರಸ್ತೆಗಳಿಲ್ಲ. ಬಹುತೇಕ ಒತ್ತುವರಿಯಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಡೆಯುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿ ಈ ವಿಚಾರವನ್ನು ಮುಖಂಡರು ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೆ, ಸಮಸ್ಯೆ ಬಗೆಹರಿದಿಲ್ಲ. ಚಿಕ್ಕಬಳ್ಳಾಪುರದ ನಕ್ಕಲಕುಂಟೆ ಮತ್ತಿತರ ಸ್ಮಶಾನಗಳಲ್ಲಿ ಜಾಗ ಇಲ್ಲ. ವಿದ್ಯುತ್ ಚಿತಾಗಾರ ನಿರ್ಮಾಣವಾಗಿ ವರ್ಷವಾದರೂ ಉದ್ಘಾಟನೆ ಆಗಿಲ್ಲ.
‘ಸ್ಮಶಾನಕ್ಕೆ ಜಾಗ ಕಲ್ಪಿಸಿಕೊಡುವುದು ಮತ್ತು ಸ್ಮಶಾನ ಸ್ಥಳವು ಸಮಾಧಿಗಳಿಂದ ತುಂಬಿದ್ದರೆ, ಪರ್ಯಾಯ ರೂಪದಲ್ಲಿ ಮತ್ತೊಂದು ಸ್ಥಳವನ್ನು ಗುರುತಿಸಿ ಅಂತ್ಯಕ್ರಿಯೆ ಮಾಡಲು ಜನರಿಗೆ ಅನುಕೂಲ ಮಾಡಬೇಕು. ಸಾರ್ವಜನಿಕ ಸ್ಮಶಾನಗಳಿಗೆ ಸೌಲಭ್ಯ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಗತ್ಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಈ ಹೊಣೆಗಾರಿಕೆ ನಿಭಾಯಿಸುವುದು ಆಯಾ ಸ್ಥಳೀಯ ಸಂಸ್ಥೆಗಳ ಕರ್ತವ್ಯ ಎಂದು ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್ (ಕೆಎಂಸಿ) ನಲ್ಲಿ ಸೂಚಿಸಲಾಗಿದೆ. ಆದರೆ, ಇದಾಗುತ್ತಿಲ್ಲ’ ಎಂಬುದು ರಾಜ್ಯ ಮಸಣ ಕಾರ್ಮಿಕರ ಸಂಘದವರ ಆರೋಪ.
ದಾವಣಗೆರೆಯ ಗಾಂಧಿನಗರದಲ್ಲಿ ಇರುವ ಸ್ಮಶಾನದ ಆವರಣ
ಸ್ಮಶಾನ ಕಾರ್ಮಿಕರನ್ನು ನೇಮಿಸಿ, ಕನಿಷ್ಠ ವೇತನ ನೀಡುವುದರ ಜೊತೆಗೆ ಅಗತ್ಯ ಸೌಲಭ್ಯ ಹಾಗೂ ಗುಂಡಿ ತೋಡುವ ಪರಿಕರ ನೀಡಬೇಕು. ಸ್ಮಶಾನ ಹೊಂದಿರದ ಊರುಗಳಲ್ಲಿ ಅದಕ್ಕಾಗಿ ಜಾಗ ಮೀಸಲಿಡಬೇಕು ಎಂದು ಕೋರಿ ವರ್ಷಗಳಿಂದ ಹೋರಾಟ ನಡೆದಿದೆ. ಸ್ಪಂದನೆ ಸಿಕ್ಕಿಲ್ಲ.ಯು.ಬಸವರಾಜ, ಸಂಚಾಲಕ, ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ
ಸಾರ್ವಜನಿಕ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸ್ಮಶಾನ ಸಮಸ್ಯೆ ಇರುವ ಕಡೆ ಸರ್ಕಾರದ ಖರಾಬು ಭೂಮಿ ನೀಡಬೇಕು ಎಂಬ ನಿಯಮವಿದೆ. ಆದರೆ, ಯಾವುದೂ ಅನುಷ್ಠಾನವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ.ಕೆ.ಸಿ.ರಾಜಾಕಾಂತ, ದಸಂಸ ಮುಖಂಡ. ಚಿಕ್ಕಬಳ್ಳಾಪುರ
‘ನಮ್ಮ ಕೆಲಸಕ್ಕೆ ಸಮಯ ಎಂಬುದು ಇಲ್ಲ. ಅಮಾವಾಸ್ಯೆ–ಹುಣ್ಣಿಮೆ ಏನನ್ನೂ ಲೆಕ್ಕಿಸದೆ ಯಾವಾಗ ಕರೆದರೂ ಪಿಕಾಸಿ ಗುದ್ದಲಿ ಹಾರೆ ಹಿಡಿದು ಕೆಲಸಕ್ಕೆ ಸಿದ್ಧರಾಗುತ್ತೇವೆ. ಶವಗಳು ಬಂದರಷ್ಟೇ ನಮ್ಮ ಜೀವನ. ನಮ್ಮ ಬದುಕಿಗೆ ಭದ್ರತೆ ಇಲ್ಲ. ಸೂರಿಲ್ಲ. ಈಗ ರಟ್ಟೆಯಲ್ಲಿ ಶಕ್ತಿ ಇದೆ ಮಾಡುತ್ತೇವೆ. ಮುಂದೆ ವಯಸ್ಸಾದ ಮೇಲೆ ನಮಗ್ಯಾರು ಆಸರೆ? ನಮ್ಮನ್ನೇ ನಂಬಿರುವ ಕುಟುಂಬದವರ ಗತಿಯೇನು’ ಎಂಬುದು ದಾವಣಗೆರೆಯ ಗಾಂಧಿನಗರದ ರುದ್ರಭೂಮಿಯ ಸ್ಮಶಾನ ಕಾರ್ಮಿಕರಾದ ವೈ.ಮೈಲಪ್ಪ ಎಚ್.ಮಂಜಪ್ಪ ಪಿ.ಮಹಾಂತೇಶ್ ಎ.ನಾಗರಾಜ ಅವರ ಆತಂಕ. ‘ಕೋವಿಡ್ ಸಮಯದಲ್ಲಿ ದಿನಕ್ಕೆ 15 ರಿಂದ 20 ಶವ ಬರುತಿತ್ತು. ವಾಹನಗಳಲ್ಲಿ ಇಲ್ಲವೇ ಗೇಟ್ ಮುಂದೆ ಶವಗಳನ್ನು ಇರಿಸಿ ಹಣವನ್ನು ಕವರ್‌ನಲ್ಲಿ ಇಟ್ಟು ಬಿಸಾಡಿ ಹೋಗುತ್ತಿದ್ದರು. ಆ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಭಯ ಆತಂಕ ಮತ್ತು ಅನಿಶ್ಚಿತತೆ ಕಾಡುತ್ತದೆ. ರಾತ್ರಿ ಹಗಲೆನ್ನದೆ ಕೆಲಸ ಮಾಡುವುದರ ಜೊತೆಗೆ ಯಾವಾಗ ಯಾರಿಗೆ ಕೊರೊನಾ ಬರುತ್ತೆಂದು ಹೆದರಿಕೆ ಆಗುತಿತ್ತು. ಕೋವಿಡ್ ದಿನಗಳಲ್ಲಿ ಅಲ್ಲದೇ ನಂತರದ ದಿನಗಳಲ್ಲಿ ಕಷ್ಟಪಟ್ಟು ದುಡಿದರೂ ನಮ್ಮ ಬದುಕು ಮಾತ್ರ ಸುಧಾರಣೆ ಕಾಣುತ್ತಿಲ್ಲ’ ಎಂದು ಮೈಲಪ್ಪ ತಿಳಿಸಿದರು.
ಪರಿಕರ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರ್ವಜನಿಕ ಸ್ಮಶಾನ ಕಾರ್ಮಿಕರು ಮನವಿ ಸಲ್ಲಿಸಿದರೆ ಪರಿಶೀಲಿಸುವೆ. ಇತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರುವೆ. ಸಂತೋಷ್ ಲಾಡ್ ಕಾರ್ಮಿಕ ಇಲಾಖೆ ಸಚಿವ –– ಗ್ರಾಮೀಣ ಭಾಗದಲ್ಲಿ ಮಸಣ ಕಾರ್ಮಿಕರನ್ನು ಗುರುತಿಸಿ ಸೌಲಭ್ಯ ನೀಡಲು ಮತ್ತು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶವ ಹೂಳಲು ಕುಣಿ ತೋಡುವ ಕೆಲಸ ಸೇರಿಸಲು ಕೋರಿಕೆ ಇದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಬೇಕು. ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ.
-ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
ಸಾರ್ವಜನಿಕ ಸ್ಮಶಾನಗಳಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಸ್ಮಶಾನ ಸಮಸ್ಯೆ ಇರುವ ಕಡೆ ಸರ್ಕಾರದ ಖರಾಬು ಭೂಮಿ ನೀಡಬೇಕು ಎಂಬ ನಿಯಮವಿದೆ. ಆದರೆ ಯಾವುದೂ ಅನುಷ್ಠಾನವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ.
-ಕೆ.ಸಿ.ರಾಜಾಕಾಂತ ದಸಂಸ ಮುಖಂಡ. ಚಿಕ್ಕಬಳ್ಳಾಪುರ.
ಸ್ಮಶಾನ ಕಾರ್ಮಿಕರನ್ನು ನೇಮಿಸಿ ಕನಿಷ್ಠ ವೇತನ ನೀಡುವುದರ ಜೊತೆಗೆ ಅಗತ್ಯ ಸೌಲಭ್ಯ ಹಾಗೂ ಗುಂಡಿ ತೋಡುವ ಪರಿಕರ ನೀಡಬೇಕು. ಸ್ಮಶಾನ ಹೊಂದಿರದ ಊರುಗಳಲ್ಲಿ ಅದಕ್ಕಾಗಿ ಜಾಗ ಮೀಸಲಿಡಬೇಕು ಎಂದು ಕೋರಿ ವರ್ಷಗಳಿಂದ ಹೋರಾಟ ನಡೆದಿದೆ. ಸ್ಪಂದನೆ ಸಿಕ್ಕಿಲ್ಲ.
-ಯು.ಬಸವರಾಜ ಸಂಚಾಲಕ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ
ಸ್ಮಶಾನಕ್ಕೆ ಮೀಸಲಿಟ್ಟ ಅನುದಾನ ಬೇರೆ ಕಾಮಗಾರಿಗೆ ಬಳಕೆ ಆಗುತ್ತಿದೆ. ಎಲ್ಲ ಸ್ಮಶಾನಗಳ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್ ಮಾಡಿ ಅನುದಾನ ನೀಡಬೇಕು. ಸ್ಮಶಾನಗಳಲ್ಲಿ ಅಂತ್ಯಕ್ರಿಯೆಗಳು ಸುಗಮವಾಗಿ ನಡೆಯಬೇಕು. ಯಾವುದೇ ಸಮಸ್ಯೆಗೆ ಆಸ್ಪದ ನೀಡಬಾರದು.
-ವಹಿದಾಖಾನಂ ಕಿತ್ತೂರು ಸದಸ್ಯೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಸ್ಮಶಾನ ಕಾರ್ಮಿಕರ ಮಕ್ಕಳಿಗೆ ವಿಶೇಷ ಪ್ರವರ್ಗಗಳಡಿ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಯ ವಿನಾಯಿತಿ ನೀಡಿ ಶೇ 5ರಷ್ಟು ಸ್ಥಾನಗಳಿಗೆ 6ನೇ ತರಗತಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಅವರು ‘ಮಸಣ ಕಾರ್ಮಿಕ ಕುಟುಂಬದವರು’ ಎಂಬ ಪ್ರಮಾಣ ಪತ್ರ ನೀಡಬೇಕು. ಸಮಸ್ಯೆ ತಲೆದೋರಿದರೆ ಇಲಾಖೆಯ ಸಹಾಯವಾಣಿಗೆ (9482300400) ಸಂಪರ್ಕಿಸಬಹುದು.
–ಪಿ.ಮಣಿವಣ್ಣನ್ ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ.
ಪ್ರತಿ ಸಾರ್ವಜನಿಕ ಮಸಣಕ್ಕೆ ಒಬ್ಬರಂತೆ ‘ಮಸಣ ನಿರ್ವಾಹಕರು’ ನೇಮಕಾತಿ ಆಗಬೇಕು.
ಮಸಣ ಕಾರ್ಮಿಕರ ಹಾಗೂ ಅವರ ಕುಟುಂಬಗಳ ಸದಸ್ಯರ ಗಣತಿ ಕಾರ್ಯ ನಡೆಸಬೇಕು.
45 ವರ್ಷ ಮೇಲ್ಪಟ್ಟ ಸ್ಮಶಾನ ಕಾರ್ಮಿಕರಿಗೆ ಸಹಾಯಧನ ₹3 ಸಾವಿರ ಪಿಂಚಣಿ ನೀಡಬೇಕು.
ಕುಣಿ ಅಗೆಯುವ ಮುಚ್ಚುವ ಕಾರ್ಮಿಕರಿಗೆ ಅಗತ್ಯ ಸಲಕರಣೆ ಒದಗಿಸಬೇಕು.
ಈ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಬೇಕು.
ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ದಲಿತ ಸಮುದಾಯದ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು.
ಉದ್ಯೋಗ ಖಾತ್ರಿ ಯೋಜನೆಯಡಿ ಕುಣಿ ಅಗೆಯುವ ಮುಚ್ಚುವ ಕೆಲಸವನ್ನು ತಂದು ಆಯಾ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ₹ 3500 ಕೂಲಿ ಪಾವತಿಸಬೇಕು.
ಸ್ಮಶಾನದ ಸಮಸ್ಯೆ ಕಾಡದಿರಲಿಯೆಂದು ದಾವಣಗೆರೆಯ ಲೇಬರ್ ಕಾಲೊನಿಯಲ್ಲಿ ರಾಜನಹಳ್ಳಿ ಭೀಮರಾಯಪ್ಪ ಹನುಮಂತಪ್ಪ ಅವರ ಕುಟುಂಬದವರು ಸ್ಮಶಾನಕ್ಕಾಗಿ ಆರು ಎಕರೆ ಜಾಗವನ್ನು ದಾನ ನೀಡಿದ್ದಾರೆ. ಇಲ್ಲಿ ಶವವನ್ನು ಸುಡುವ ವ್ಯವಸ್ಥೆ ಮಾತ್ರ ಇದ್ದು ಅಂತ್ಯಕ್ರಿಯೆಗೆ ನೆರವಾಗಲು ವ್ಯಕ್ತಿಯೊಬ್ಬರನ್ನು ನೇಮಿಸಿ ಸಂಬಳವನ್ನೂ ನೀಡುತ್ತಿದ್ದಾರೆ. ವಾಸಕ್ಕೆ ಸ್ಮಶಾನದ ಆವರಣದಲ್ಲೇ ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾರೆ. ವಿದ್ಯುತ್ ನೀರಿನ ಬಿಲ್‌ಗಳನ್ನು ರಾಜನಹಳ್ಳಿ ಕುಟುಂಬದವರೇ ಪಾವತಿಸುತ್ತಾರೆ.
ಪೂರಕ ಮಾಹಿತಿ: ಪ್ರಜಾವಾಣಿ ಬ್ಯೂರೋಗಳಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.