ADVERTISEMENT

ಏನಿದು ನ್ಯಾಷನಲ್ ಹೆರಾಲ್ಡ್ ಹಗರಣ? ಸೋನಿಯಾ,ರಾಹುಲ್‌ ಪಾತ್ರವೇನು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2022, 11:48 IST
Last Updated 13 ಜೂನ್ 2022, 11:48 IST
ರಾಹುಲ್‌, ಸೋನಿಯಾ
ರಾಹುಲ್‌, ಸೋನಿಯಾ   

ಬೆಂಗಳೂರು: ದೇಶದಾದ್ಯಂತನ್ಯಾಷನಲ್ ಹೆರಾಲ್ಡ್ (ಪತ್ರಿಕೆ) ಹಗರಣ ಮತ್ತೆ ಚರ್ಚೆಯಾಗುತ್ತಿದೆ. ಈಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಇತ್ತ ಕಾಂಗ್ರೆಸ್‌ ಪಕ್ಷದ ನಾಯಕರು ಈ ವಿಚಾರಣೆಯನ್ನು ವಿರೋಧಿಸಿ ದೇಶದ ನಾನಾ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗಾಗಿ ನೋಟಿಸ್‌ ನೀಡಿದೆ. ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಜೂನ್‌ 23ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ. ಸೋಮವಾರ (ಇಂದು) ರಾಹುಲ್‌ ಗಾಂಧಿ ನೀಡಿದ ಹೇಳಿಕೆಗಳನ್ನು ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿದೆ.

ADVERTISEMENT

ಈ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಯಾಕೆ ವಿಚಾರಣೆಗೆ ಕರೆದಿದೆ? ಇವರಿಗೂ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕಾ ಸಂಸ್ಥೆಗೂ ಏನು ಸಂಬಂಧ? ಇಡಿ ತನಿಖೆಯ ವ್ಯಾಪ್ತಿ ಏನು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

1937ರಲ್ಲಿ ಮಾಜಿ ಪ್ರಧಾನಿ, ದಿವಂಗತ ಜವಾಹರ ಲಾಲ್‌ ನೆಹರೂ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಎಂಬ ಕಂಪೆನಿಯನ್ನು ಪ್ರಾರಂಭ ಮಾಡಿತು. 1938ರಲ್ಲಿ ನೆಹರೂ ನೇತೃತ್ವದಲ್ಲಿ ಎಜೆಎಲ್‌ ಕಂಪನಿ ಇಂಗ್ಲಿಷ್‌ ಭಾಷೆಯ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಣೆ ಆರಂಭಿಸಿತು. ಬಳಿಕ ನವಜೀವನ್‌ (ಹಿಂದಿ) ಮತ್ತು ಕ್ವಾಮಿ ಆವಾಜ್‌ (ಉರ್ದು) ಪತ್ರಿಕೆಗಳನ್ನು ಪ್ರಾರಂಭ ಮಾಡಿತು.

ನೆಹರೂ ಅವರು ಪ್ರಧಾನಿಯಾಗಿದ್ದಾಗ ಎಜೆಎಲ್‌ ಕಂಪನಿಗೆ ಸಾಕಷ್ಟು ಪ್ರಮಾಣದಲ್ಲಿ ದೇಣಿಗೆ ಹರಿದುಬಂದಿತ್ತು. ಹಾಗೇ ನೆಹರೂ ಅವರು ಕಂಪನಿಗೆ ದೇಶದ ವಿವಿಧ ಭಾಗಗಳಲ್ಲಿ ಜಮೀನನ್ನು ಮಂಜೂರು ಮಾಡಿದ್ದರು. ಎಜೆಎಲ್ (ಸದ್ಯ ಈ ಕಂಪನಿಯನ್ನು ರಾಹುಲ್‌ ಗಾಂಧಿ ಖರೀದಿ ಮಾಡಿದ್ದಾರೆ) ಕಂಪನಿ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸುಮಾರು ₹ 5 ಸಾವಿರ ಕೋಟಿಗಳಷ್ಟು ಆಸ್ತಿಯನ್ನು ಹೊಂದಿದೆ.

ಆರ್ಥಿಕ ಸಂಕಷ್ಟ,ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವೈಫಲ್ಯ ಹಾಗೂ ಜಾಹೀರಾತು ಆದಾಯದ ಕೊರತೆ ಪರಿಣಾಮವಾಗಿ2007ರ ಏಪ್ರಿಲ್‌ 1ರಂದುನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಲಾಯಿತು. ಹಾಗೇ ನವಜೀವನ್‌, ಕ್ವಾಮಿ ಆವಾಜ್‌ ಪತ್ರಿಕೆಗಳನ್ನು ನಿಲ್ಲಿಸಲಾಯಿತು.

2011ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲಾ ಶೇ 38ರಷ್ಟು ಷೇರು ಹೂಡಿಕೆ ಮಾಡಿ ಯಂಗ್ ಇಂಡಿಯಾ ಲಿಮಿಟೆಡ್‌ (ವೈಐಎಲ್‌) ಎಂಬ ಕಂಪನಿ ಪ್ರಾರಂಭಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡಿಸ್‌ ಮತ್ತು ಮೋತಿಲಾಲ್‌ ವೋರಾ ಈ ಕಂಪನಿಯ ಆಡಳಿತ ಮಂಡಳಿ ಸೇರಿಕೊಂಡರು. ಇದರಲ್ಲಿ ವೋರಾ ಮತ್ತು ಫರ್ನಾಂಡಿಸ್‌ ತಲಾ ಶೇ 24ರಷ್ಟು ಷೇರುಗಳನ್ನು ಹೊಂದಿದ್ದರು.

ಹಣಕಾಸು ನಷ್ಟದಲ್ಲಿದ್ದ ಎಜೆಎಲ್‌ ಕಂಪನಿಯನ್ನು ₹90.21 ಕೋಟಿ ಮೊತ್ತಕ್ಕೆ ವೈಐಎಲ್‌ ಕಂಪನಿ ಖರೀದಿ ಮಾಡಿತು. ಇದರಲ್ಲಿ ₹50 ಲಕ್ಷ ಮೊತ್ತವನ್ನು ಕಾಂಗ್ರೆಸ್‌ ತನ್ನ ಖಜಾನೆಯಿಂದಲೇ ವರ್ಗಾಯಿಸಿತು. ಎಜೆಎಲ್‌ ಒಡೆತನದಲ್ಲಿದ್ದ ಹೆರಾಲ್ಡ್‌ ಹೌಸ್‌ನ ನವೀಕರಣಕ್ಕೆ ವೈಐಎಲ್‌ ₹1 ಕೋಟಿ ನೆರವು ನೀಡಿತು.

ಎಜೆಎಲ್‌ನ ಖರೀದಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ 2012ರ ಜೂನ್‌ನಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನಂತರ ಈ ಪ್ರಕರಣದಲ್ಲಿ ಇರುವವರು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್‌ ಸೂಚನೆ ನೀಡಿತ್ತು.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೆಸ್‌ ಮುಖಂಡ ಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್‌, ಪತ್ರಕರ್ತ ಸುಮನ್ ದುಬೆ, ದೂರಸಂಪರ್ಕ ಎಂಜಿನಿಯರ್‌ ಸ್ಯಾಮ್‌ ಪಿತ್ರೊಡ ಮತ್ತು ಯಂಗ್ ಇಂಡಿಯಾ ಲಿಮಿಟೆಡ್‌ ಕಂಪನಿಯನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ. ಇವರಲ್ಲಿಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್‌ ನಿಧನರಾಗಿದ್ದಾರೆ.

ಎಜೆಎಲ್‌ ಕಂಪನಿಯ ಒಟ್ಟು ಆಸ್ತಿ ಹಾಗೂ ಅದರ ಖರೀದಿ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿರುವುದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಹಿಂದೆತಾಂತ್ರಿಕ ಕಾರಣಗಳಿಂದ ತನಿಖೆ ನಿಲ್ಲಿಸುವುದಾಗಿ ಇಡಿ ಹೇಳಿತ್ತು. ಆದರೆ ಈ ತನಿಖೆಯನ್ನು ಮತ್ತೆ ಆರಂಭಿಸುವುದಾಗಿ 2015ರ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಪ್ರಕಟಿಸಿತ್ತು.

ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದೆ. ಕಳೆದ ಏಪ್ರಿಲ್‌ ತಿಂಗಳಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಸೋಮವಾರ ರಾಹುಲ್‌ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಇದೇ ತಿಂಗಳಲ್ಲಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.