ADVERTISEMENT

Explainer: ಸುನಿತಾ ವಿಲಿಯಮ್ಸ್ ಭೂಮಿಗೆ ಆಗಮನ, ಕಾಡಿದ ಕಲ್ಪನಾ ಚಾವ್ಲಾ ನೆನಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 11:29 IST
Last Updated 19 ಮಾರ್ಚ್ 2025, 11:29 IST
ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ   

ಬೆಂಗಳೂರು: 9 ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಇಂದು ಸುರಕ್ಷಿತವಾಗಿ ಇನ್ನಿತರ ಮೂವರು ಗಗನಯಾನಿಗಳ ಜೊತೆಗೆ ಭೂಮಿಗೆ ಹಿಂದಿರುಗಿದ್ದಾರೆ.

ಕಳೆದ ವರ್ಷ ಕ್ರೂ–9 ಮಿಷನ್ ಅಡಿ ಬುಚ್ ವಿಲ್ಮೋರ್ ಜೊತೆ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ, ಬಾಹ್ಯಾಕಾಶ ನೌಕೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ನಿಗದಿತ ಸಮಯದಲ್ಲಿ ಭೂಮಿಗೆ ಹಿಂದಿರುಗಲಾಗದೆ 9 ತಿಂಗಳಿನಿಂದ ಅಲ್ಲಿಯೇ ಉಳಿದಿದ್ದರು. ಇದೀಗ, ಟ್ರಾನ್ಸ್‌ಪೋರ್ಟರ್–13 ಮಿಷನ್ ಮೂಲಕ ಇನ್ನಿಬ್ಬರು ಗಗನಯಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿ, ಅವರ ಜೊತೆಯೇ ಸುನಿತಾ ಮತ್ತು ವಿಲ್ಮೋರ್ ಅವರನ್ನು ಕರೆತರಲಾಗಿದೆ.

ನಾಸಾದ ಗಗನಯಾನಿಗಳಾದ ವಿಲಿಯಮ್ಸ್, ನಿಕ್ ಹೇಗ್, ಬುಚ್ ವಿಲ್ಮೋರ್ ಮತ್ತು ರೋಸ್ಕೋಸ್ಮೋಸ್ ಗಗನಯಾನಿ ಅಲೆಕ್ಸಾಂಡರ್ ಗೋರ್ಬುನೋವ್ ಬುಧವಾರ ಮುಂಜಾನೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಿದರು. ಫ್ಲೋರಿಡಾದ ಟಲ್ಲಹಸ್ಸಿ ಕರಾವಳಿಗೆ ನೌಕೆ ಆಗಮಿಸಿದೆ.

ADVERTISEMENT

ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನ ಪರೀಕ್ಷಾ ಪೈಲಟ್‌ಗಳಾದ ವಿಲಿಯಮ್ಸ್ ಮತ್ತು ವಿಲ್ಮೋರ್‌ಗೆ ಕಳೆದ ವರ್ಷ ಜೂನ್ 5ರಂದು ಬಾಹ್ಯಾಕಾಶಕ್ಕೆ ತೆರಳಿದ್ದರು. ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ವೈಫಲ್ಯಗಳಿಂದಾಗಿ ಎಂಟು ದಿನಗಳ ಕಾರ್ಯಾಚರಣೆಯು ಒಂಬತ್ತು ತಿಂಗಳುಗಳಿಗಿಂತ ಹೆಚ್ಚು ಕಾಲ ನಡೆಯಿತು. ಆದರೂ ಗಗನಯಾನಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಕಲ್ಪನಾ ಚಾವ್ಲಾ ನೆನಪು

ಯಶಸ್ವಿ ಬಾಹ್ಯಾಕಾಶಯಾನದ ಮೂಲಕ ಹೆಮ್ಮೆ ತಂದ ಸುನಿತಾ ವಿಲಿಯಮ್ಸ್ ಅವರನ್ನು ದೇಶದಾದ್ಯಂತ ಕೊಂಡಾಡಲಾಗುತ್ತಿದೆ. ಇದೇ ರೀತಿ ದೇಶದ ಹಿರಿಮೆಯನ್ನು ಎತ್ತಿ ಹಿಡಿದು ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತದ ಮತ್ತೊಬ್ಬ ಕುವರಿ ಕಲ್ಪನಾ ಚಾವ್ಲಾ ಅವರನ್ನು ನೆನಪಿಸಿಕೊಳ್ಳಲೇಬೇಕಾದ ಸಮಯ ಇದಾಗಿದೆ.

2003ರಲ್ಲಿ ಕೊಲಂಬಿಯಾದಿಂದ ಕಲ್ಪನಾ ಬಾಹ್ಯಾಕಾಶಯಾನ ಕೈಗೊಂಡಿದ್ದರು. 2003ರ ಫೆಬ್ರುವರಿ1ರಂದು ಭೂಮಿಗೆ ಹಿಂದಿರುಗಲು ಸಮಯ ನಿಗದಿಯಾಗಿತ್ತು. ಆದರೆ, ಬಾಹ್ಯಾಕಾಶ ನೌಕೆಯು ಭೂಮಿ ವಾತಾವರಣಕ್ಕೆ ಮರುಪ್ರವೇಶಿಸುವ 16 ನಿಮಿಷಗಳ ಮೊದಲು ವಿಫಲಗೊಂಡು ಆರು ಗಗನಯಾನಿಗಳ ಜೊತೆ ಕಲ್ಪನಾ ಚಾವ್ಲಾ ಸಹ ಮೃತಪಟ್ಟಿದ್ದರು.

ಕಲ್ಪನಾ ಬದುಕಿದ್ದರೆ ಅವರಿಗೆ ಈಗ 62 ವರ್ಷ ವಯಸ್ಸಾಗಿರುತ್ತಿತ್ತು. ಬಾಹ್ಯಾಕಾಶಯಾನ ಕೈಗೊಂಡ ಮೊದಲ ಭಾರತೀಯ ಗಗನಯಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

1962ರ ಮಾರ್ಚ್‌ 17ರಂದು ಹರಿಯಾಣದ ಕರ್ನಾಲ್‌ನಲ್ಲಿ ಜನಿಸಿದ್ದ ಕಲ್ಪನಾ ಚಾವ್ಲಾ, ಪಂಜಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. 1984ರಲ್ಲಿ ಅಮೆರಿಕಕ್ಕೆ ತೆರಳಿ, ಯೂನಿವರ್ಸಿಟಿ ಆಫ್‌ ಟೆಕ್ಸಾಸ್‌ನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ, 1988ರಲ್ಲಿ ಕೊಲರಾಡೊ ಯೂನಿವರ್ಸಿಟಿಯಿಂದ ಇದೇ ವಿಷಯದಲ್ಲಿ ಪಿಎಚ್‌.ಡಿ ಪಡೆದಿದ್ದರು.

ಎರಡು ಬಾಹ್ಯಾಕಾಶಯಾನ

ಕಲ್ಪನಾ ಅವರ ಶೈಕ್ಷಣಿಕ ಶ್ರೇಷ್ಠತೆ ಮತ್ತು ದೃಢಸಂಕಲ್ಪ ಅವರನ್ನು 1994ರಲ್ಲಿ ನಾಸಾಗೆ ಕರೆದೊಯ್ದಿತು. 1997ರ ಹೊತ್ತಿಗೆ, ಅವರು ಯಾವುದೇ ಭಾರತೀಯ ಮಹಿಳೆ ಸಾಧಿಸದ ಸಾಧನೆಯನ್ನು ಮಾಡಿದ್ದರು. ನಾಸಾದ ಗಗನಯಾನಿಯಾದರು.

ಕಲ್ಪನಾ ಚಾವ್ಲಾ ಎರಡು ಬಾಹ್ಯಾಕಾಶ ಯಾನಗಳನ್ನು ಕೈಗೊಂಡರು. ಅವು ಅವರ ಹೆಸರನ್ನು ಇತಿಹಾಸದಲ್ಲಿ ಚಿರಸ್ಥಾಯಿಯಾಗಿಸಿದವು.

ಅಂದಿನ ಪ್ರಧಾನಿ ಐ.ಕೆ. ಗುಕ್ರಾಲ್ ಜೊತೆ ಬಾಹ್ಯಾಕಾಶ ನಿಲ್ದಾಣದಿಂದಲೇ ಸಂವಾದ

1997ರಲ್ಲಿ ಅವರ ಮೊದಲ ಮಿಷನ್, ಎಸ್‌ಟಿಎಸ್-87 ಕೊಲಂಬಿಯಾದಿಂದ ಆರಂಭವಾಗಿತ್ತು. ಅಲ್ಲಿ ಅವರು ಮಿಷನ್ ಸ್ಪೆಷಲಿಸ್ಟ್ ಮತ್ತು ರೋಬೋಟಿಕ್ ಆರ್ಮ್ ಆಪರೇಟರ್ ಆಗಿ ಸೇವೆ ಸಲ್ಲಿಸಿದ್ದರು. ಈ ಪ್ರಯಾಣವು ಅವರನ್ನು ಬಾಹ್ಯಾಕಾಶಯಾನ ಕೈಗೊಂಡ ಭಾರತ ಮೂಲದ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಅವರಿಗೆ ತಂದುಕೊಟ್ಟಿತ್ತು.

ಈ ಕಾರ್ಯಾಚರಣೆಯ ಸಮಯದಲ್ಲಿ, ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಅವರು ಚಾವ್ಲಾ ಅವರೊಂದಿಗೆ ಮಾತನಾಡಿದ್ದರು.

‘ಕಲ್ಪನಾ, ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ಭಾರತದ ದೇಶದ ಪ್ರತಿಯೊಬ್ಬರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ವಿಶೇಷವಾಗಿ, ಭಾರತದ ಮಹಿಳೆ ಮತ್ತು ಯುವತಿ ಅಂತಹ ಪ್ರವರ್ತಕ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ’ಎಂದು ಹೇಳಿದ್ದರು.

ಈ ವೇಳೆ ಕಲ್ಪನಾ ಚಾವ್ಲಾ ಬಾಹ್ಯಾಕಾಶವನ್ನು ‘ಕತ್ತಲೆ ಆಕಾಶದ ಗುಮ್ಮಟ ಮತ್ತು ಎಲ್ಲೆಡೆ ನಕ್ಷತ್ರಗಳು...ಕಥಾಪುಸ್ತಕದಂತಿದೆ’ಎಂದು ಬಣ್ಣಿಸಿದ್ದರು.

ಬಾಹ್ಯಾಕಾಶದಿಂದ ಹಿಮಾಲಯದ ವರ್ಣನೆ ಮಾಡಿದ್ದ ಕಲ್ಪನಾ

ಕೆಲವು ದಿನಗಳ ಹಿಂದೆ, ನಾವು ಆರ್ಬಿಟರ್‌ನಿಂದ ಹಿಮಾಲಯವನ್ನು ಕಂಡೆವು. ಹಿಮಾಲಯದ ನೋಟವು ತುಂಬಾ ಅದ್ಭುತವಾಗಿದ್ದು, ಅದು ನಮ್ಮೆಲ್ಲರಿಗೂ ಸೇರಿದ್ದು ಎಂದು ಬಾಹ್ಯಾಕಾಶದಿಂದ ಭಾರತವನ್ನು ನೋಡಿದ ಅನುಭವವನ್ನು ಕಲ್ಪನಾ ಪ್ರಧಾನಿ ಜೊತೆ ಹಂಚಿಕೊಂಡಿದ್ದರು.

2003ರಲ್ಲಿ ಅವರ ಎರಡನೇ ಮಿಷನ್ ಎಸ್‌ಟಿಎಸ್‌-107 ಸಹ ಕೊಲಂಬಿಯಾದಿಂದ ಆರಂಭಗೊಡಿತ್ತು. ಬಾಹ್ಯಾಕಾಶದಲ್ಲಿ ಪ್ರಮುಖ ವೈಜ್ಞಾನಿಕ ಪ್ರಯೋಗ ನಡೆಸುವುದನ್ನು ಈ ಯಾನ ಒಳಗೊಂಡಿತ್ತು. ಫೆಬ್ರುವರಿ 1ರಂದು ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವಾಗ ನೌಕೆಯು ವಿಭಜನೆಯಾದಾಗ ದುರಂತ ಸಂಭವಿಸಿತ್ತು.

ಕಲ್ಪನಾ ಚಾವ್ಲಾ ಅವರ ಹೆಸರು ಬಾಹ್ಯಾಕಾಶ ಇತಿಹಾಸದಲ್ಲಿ ಅಮರವಾಗಿದೆ. ಸೋಮವಾರ ಅವರ ಜನ್ಮ ಜಯಂತಿಯಾಗಿದ್ದು, ಭಾರತೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವರಿಗೆ ಗೌರವ ಸಲ್ಲಿಸಿದೆ.

ಕಲ್ಪನಾ ಚಾವ್ಲಾ ಗೌರವಾರ್ಥ ನಾಸಾ, ಬಾಹ್ಯಾಕಾಶ ನೌಕೆಯೊಂದಕ್ಕೆ ಅವರ ಹೆಸರಿಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.