ADVERTISEMENT

ಬರಲಿದೆ ಗೋಡಂಬಿ ಪಟಾಕಿ!

ಕೊಳ್ಳೇಗಾಲ ಶರ್ಮ
Published 2 ನವೆಂಬರ್ 2022, 4:07 IST
Last Updated 2 ನವೆಂಬರ್ 2022, 4:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೋಡಂಬಿ ಪಟಾಕಿಯೇ?

ಢಂ ಪಟಾಕಿ! ಲಕ್ಷ್ಮಿ ಪಟಾಕಿ!! ಬೆಳ್ಳುಳ್ಳಿ ಪಟಾಕಿ!! ಚಿನಕುರುಳಿ, ರಾಕೆಟ್ಟು – ಅಂತೆಲ್ಲ ಕೇಳಿದ್ದೀವಿ. ಇದು ಯಾವ ತೆರನ ಪಟಾಕಿ ಎಂಬ ಅನುಮಾನ ಕಾಡಿತೇ? ತಮಿಳುನಾಡಿನ ಶ್ರೀವಿಲ್ಲಿಪುತ್ತೂರಿನಲ್ಲಿರುವ ಕಲಶಲಿಂಗಂ ಶೈಕ್ಷಣಿಕ ಹಾಗೂ ಸಂಶೋಧನಾ ಅಕಾಡೆಮಿಯ ರಸಾಯನ ವಿಜ್ಞಾನಿ ಮಣಿಕಂಠನ್‌ ರಾಜೇಂದ್ರನ್‌ ಅವರ ಆಲೋಚನೆ ಫಲ ಕೊಟ್ಟಲ್ಲಿ ಮುಂದೆ ಗೋಡಂಬಿಯ ಸಿಪ್ಪೆಯಿಂದ ಮಾಡಿದ ಪಟಾಕಿಗಳೂ ಸಿಡಿಯಬಹುದು. ಇದು ಅಪ್ಪಟ ಹಸಿರು ಪಟಾಕಿ. ಹಸಿರು ಎನ್ನುವ ಹೆಸರಿಗೆ ಅನ್ವರ್ಥವಾದಂತಹ ಪಟಾಕಿ.

ಹಾಗಿದ್ದರೆ ಈಗಿರುವ ಹಸಿರು ಪಟಾಕಿಗಳು? – ಎಂದಿರಾ. ಅವು ಹೆಸರಿಗೆ ಹಸಿರು. ಆದರೆ ನಾವು ಸಾಮಾನ್ಯವಾಗಿ ಹಸಿರು ಎನ್ನುವ ಪದವನ್ನು ಬಳಸಿ ಸೂಚಿಸುವ ಪರಿಸರವನ್ನಾಗಲಿ, ಸಸ್ಯರಾಶಿಯನ್ನಾಗಲಿ ಸೂಚಿಸುವುದಿಲ್ಲ. ಬದಲಿಗೆ ಅದರಿಂದುಂಟಾಗುವ ಅಪಾಯ ಕಡಿಮೆ ಎನ್ನುವ ಕಾರಣಕ್ಕೆ ಹಸಿರು ಎನ್ನುವ ಹೆಸರು ಪಡೆದುಕೊಂಡಿವೆ ಅಷ್ಟೆ. ಮಣಿಕಂಠನ್‌ ರಾಜೇಂದ್ರನ್‌ ತಂಡದ ಕನಸು ನನಸಾದರೆ ಆಗ ಪಟಾಕಿಗಳು ಸಸ್ಯಗಳ ಭಾಗದಿಂದಲೇ ತಯಾರಾದಂತೆ. ಏಕೆಂದರೆ, ರಾಜೇಂದ್ರನ್‌ ತಂಡ ಗೋಡಂಬಿಯ ಹೊರಗಿರುವ ಮರದಂತಹ ಕಠಿಣವಾದ ಹೊಟ್ಟನ್ನೇ ಪಟಾಕಿಯಲ್ಲಿ ಸುಡುವ ಮದ್ದನ್ನಾಗಿ ಉಪಯೋಗಿಸಬೇಕೆಂದು ಯೋಜಿಸಿದ್ದಾರೆ. ಇದರ ಫಲವಾಗಿ ಅತ್ಯಮೂಲ್ಯವಾದ ರಾಸಾಯನಿಕ ಗಂಧಕದ ಬಳಕೆ ಕಡಿಮೆಯಾಗುವುದಷ್ಟೆ ಅಲ್ಲ, ಗಂಧಕ ಉರಿದ ಫಲವಾಗಿ ಗಾಳಿಗೆ ಸೇರುವ ಗಂಧಕದ ಡಯಾಕ್ಸೈಡ್‌ ಎನ್ನುವ ಮಲಿನ ಅನಿಲದ ಪ್ರಮಾಣವೂ ಕಡಿಮೆಯಾಗುತ್ತದೆಯಂತೆ.

ADVERTISEMENT

ಹಸಿರು ಪಟಾಕಿಗಳೆಂದರೆ ಇನ್ನೇನಲ್ಲ. ಪಟಾಕಿಗಳು ಸಿಡಿಯುವಂತೆ ಮಾಡಿ, ಬೆಳಕಿನ ಕಿಡಿಗಳನ್ನು ಚೆಲ್ಲುವ, ಶಬ್ದ ಮಾಡುವ ರಾಸಾಯನಿಕಗಳ ಪೊಟ್ಟಣಗಳು. ಸುಲಭವಾಗಿ ಉರಿಯುವ ವಸ್ತುಗಳು, ಅವು ಉರಿಯಲು ಬೇಕಾದ ಆಕ್ಸಿಜನನ್ನು ಒದಗಿಸುವ ಪೊಟ್ಯಾಸಿಯಂ ನೈಟ್ರೇಟಿನಂತಹ ಆಕ್ಸಿಡೈಸರ್‌ಗಳು ಶೇ 60, ಪ್ರಖರವಾಗಿ ಉರಿದು ವಿವಿಧ ಬಣ್ಣದ ಬೆಳಕು ಚೆಲ್ಲುವ ಕ್ರೋಮಿಯಂ, ಅಲ್ಯುಮಿನಿಯಂನಂತಹ ಲೋಹಗಳು ಶೇಕಡ 20ರಷ್ಟು ಹಾಗೂ ತಟಕ್ಕನೆ ಉರಿದು ಅಪಾರ ಪ್ರಮಾಣದಲ್ಲಿ ಅನಿಲವಾಗುವ ಗಂಧಕದಂತಹ ಇಂಧನಗಳು ಶೇ 20ರಷ್ಟು ಸಿಡಿಯುವ ಪಟಾಕಿಗಳಲ್ಲಿ ಇರುತ್ತದೆ. ಇಂಧನ ತಟಕ್ಕನೆ ಉರಿದು ಅಪಾರ ಅನಿಲ ಸೃಷ್ಟಿಯಾದರಷ್ಟೆ ಪಟಾಕಿ ‘ಢಂ’ ಎನ್ನುತ್ತದೆ. ಇಲ್ಲದಿದ್ದರೆ ಅದು ಟುಸ್‌ ಪಟಾಕಿ. ಇಂತಹ ವಸ್ತುಗಳೆಲ್ಲವೂ ಉರಿದಾಗ ಗಾಳಿಯನ್ನು ಮಲಿನಗೊಳಿಸುವ ನೈಟ್ರೊಜನ್‌ ಡಯಾಕ್ಸೈಡ್‌, ಕಾರ್ಬನ್‌ ಮಾನಾಕ್ಸೈಡ್‌ ಹಾಗೂ ಗಂಧಕದ ಆಕ್ಸೈಡ್‌ಗಳಿರುವ, ಅತಿ ಸೂಕ್ಷ್ಮವಾದ ಇದ್ದಿಲಿನ ಕಣಗಳು ಮತ್ತು ಲೋಹದ ಕಣಗಳಿರುವ ಹೊಗೆಯನ್ನು ಹೊಮ್ಮಿಸುತ್ತವೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೂ ಪರಿಸರಕ್ಕೂ ಹಾನಿ ತರುವ ವಸ್ತುಗಳು ಹಸಿರು ಪಟಾಕಿಗಳ ಹೊಗೆಯಲ್ಲಿ ಇವುಗಳ ಪ್ರಮಾಣ ಕಡಿಮೆ ಇದೆ ಎನ್ನುವುದಕ್ಕಾಗಿಯೇ ಅದಕ್ಕೆ ‘ಹಸಿರು’ ಎನ್ನುವ ಬಿರುದು.

ಗಾಳಿಯನ್ನು ಅತಿ ಹೆಚ್ಚು ಮಲಿನಗೊಳಿಸುವ, ಪಟಾಕಿಯಲ್ಲಿರುವ ಗಂಧಕದ ಪ್ರಮಾಣವನ್ನು ಕಡಿಮೆ ಮಾಡಲು ಗೋಡಂಬಿಸಿಪ್ಪೆಯನ್ನು ಬಳಸಬಾರದೇಕೆ ಎನ್ನುವುದೇ ಮಣಿಕಂಠನ್‌ ರಾಜೇಂದ್ರನ್‌ ಅವರ ಯೋಚನೆ. ಕಾರಣವಿಷ್ಟೆ. ಗೋಡಂಬಿಯ ಗಟ್ಟಿಯಾದ ಚಿಪ್ಪಿನಲ್ಲಿ ಸಾಕಷ್ಟು ಎಣ್ಣೆ ಇರುತ್ತದೆ. ಈ ಎಣ್ಣೆ ಚರ್ಮವನ್ನೂ ಸುಡಬಲ್ಲುದು. ಎಣ್ಣೆಯನ್ನು ತೆಗೆದ ನಂತರ ಉಳಿಯುವ ಪುಡಿ ಅಪ್ಪಟ ಸೆಲ್ಯುಲೋಸ್‌ ಪುಡಿ. ಸೆಲ್ಯುಲೋಸ್‌ ಎನ್ನುವುದು ಹತ್ತಿ ಹಾಗೂ ಹುಲ್ಲಿನಲ್ಲಿರುವ ವಸ್ತು. ಪಟಾಕಿಯಲ್ಲಿರುವ ಕಾಗದವನ್ನೂ ಅದರಿಂದಲೇ ಮಾಡಿರುತ್ತಾರೆ. ಆದರೆ ಗೋಡಂಬಿ‌ಚಿಪ್ಪಿನ ಪುಡಿ ಥೇಟ್‌ ಗಂಧಕದಂತೆಯೇ ಉರಿದು ಹೊಗೆಯನ್ನು ಉಗುಳಬಲ್ಲುದು.
ಇಂತಹ ಪುಡಿಯನ್ನು ಪಟಾಕಿಯಲ್ಲಿ ಬೆರೆಸಿದರೆ ಗಂಧಕದ ಬಳಕೆಯನ್ನು ಕಡಿಮೆ ಮಾಡಬಹುದು ಎನ್ನುವ ಉದ್ದೇಶದಿಂದ ರಾಜೇಂದ್ರನ್‌ ತಂಡ ಪ್ರಯೋಗಗಳನ್ನು ಕೈಗೊಂಡಿತು. ಶೇ 20ರಷ್ಟು ಗಂಧಕದ ಬದಲಿಗೆ ಹದಿನೈದು ಹಾಗೂ ಹತ್ತು ಪಾಲು ಗಂಧಕವನ್ನು, ಐದು ಅಥವಾ ಹತ್ತು ಪಾಲು ಗೋಡಂಬಿ ಚಿಪ್ಪಿನ ಪುಡಿಯೊಟ್ಟಿಗೆ ಬೆರೆಸಿ ಪಟಾಕಿಗಳನ್ನು ತಯಾರಿಸಿದೆ. ಈ ಪಟಾಕಿಗಳನ್ನು ಸುಟ್ಟರೆ ಅಪಾಯವಿಲ್ಲವೇ ಎಂದು ಪರೀಕ್ಷಿಸಿದೆ. ಜೊತೆಗೇ ಅವು ನಾವು ಪಟಾಕಿಗಳಲ್ಲಿ ನಿರೀಕ್ಷಿಸಿದಂತಹ ಸದ್ದು ಹಾಗೂ ಬೆಳಕನ್ನು ನೀಡಬಲ್ಲುದೇ ಎಂದೂ ಗಮನಿಸಿದೆ.

ಪಟಾಕಿಗಳ ಸದ್ದು ಹಾಗೂ ಬೆಳಕು ಕಡಿಮೆಯಾದಲ್ಲಿ ಬಳಕೆದಾರರಿಗೆ ಇಷ್ಟವಾಗಲಿಕ್ಕಿಲ್ಲ. ಅದು ಪಟಾಕಿ ಎನ್ನಿಸಿಕೊಳ್ಳುವುದೂ ಇಲ್ಲ. ಹೀಗಾಗಿ ಪರ್ಯಾಯವಾಗಿ ಕೂಡಿಸಿ ವಸ್ತುಗಳ ಪ್ರಮಾಣವನ್ನು ಎಚ್ಚರಿಕೆಯಿಂದ ತೂಗಬೇಕು. ರಾಜೇಂದ್ರನ್‌ ತಂಡದ ಪರೀಕ್ಷೆಗಳ ಪ್ರಕಾರ ಶೇ 5ರಷ್ಟು ಗೋಡಂಬಿಚಿಪ್ಪಿನ ಪುಡಿಯನ್ನು ಬೆರೆಸಿ ತಯಾರಿಸಿದ ಪಟಾಕಿ ಸಾಮಾನ್ಯ ಪಟಾಕಿಯಷ್ಟೆ ಬೇಗನೆ ಹೊತ್ತಿಕೊಂಡಿತಲ್ಲದೆ, ಸರಿಸುಮಾರು ಅಷ್ಟೇ ಸದ್ದನ್ನು ಹೊಮ್ಮಿಸಿತಂತೆ. ಹೀಗಾಗಿ ಐದು ಶತಾಂಶ ಕಡಿಮೆ ಗಂಧಕವನ್ನು ಉಪಯೋಗಿಸುವ ಪಟಾಕಿಗಳ ತಯಾರಿಕೆ ಸಾಧ್ಯ – ಎಂದು ಈ ಸಂಶೋಧನೆಯ ವಿವರಗಳನ್ನು ಪ್ರಕಟಿಸಿರುವ ‘ಬಯೋಮಾಸ್‌ ಕನ್ವರ್‌ಶನ್‌ ಅ್ಯಂಡ್‌ ಬಯೋರಿಫೈನರಿ’ ಪತ್ರಿಕೆ ವರದಿ ಮಾಡಿದೆ.

ಅಂದ ಹಾಗೆ, ಗೋಡಂಬಿ ಕಾರ್ಖಾನೆಗಳಲ್ಲಿ ತ್ಯಾಜ್ಯವಾಗಿ ಗುಡ್ಡಗಟ್ಟಲೆ ಕೂಡಿಕೊಳ್ಳುವ ಈ ವಸ್ತುವಿನಂತಹುದೇ ಅಕರೋಟಿನ ಚಿಪ್ಪು, ಬಾದಾಮಿಯ ಚಿಪ್ಪು ಮುಂತಾದವು ಕೂಡ ಮುಂದೆ ಹಸಿರು ಪಟಾಕಿಗಳ ಅಂಶಗಳಾಗಬಹುದು. ಆಗ ನಿಜಕ್ಕೂ ಹಸಿರಿನಿಂದ ಹುಟ್ಟಿದ ವಸ್ತುವನ್ನೇ ಬಳಸಿ ತಯಾರಿಸಿದ ಹಸಿರು ಪಟಾಕಿ ಸಿಗಲಿದೆ. ಆ ದಿನಕ್ಕೆ ಕಾಯಬೇಕಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.