ADVERTISEMENT

ರಸಾಸ್ವಾದ | ತರಕಾರಿ ಹೆಚ್ಚಬಹುದು ತರಹೇವಾರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 0:30 IST
Last Updated 21 ಜೂನ್ 2025, 0:30 IST
<div class="paragraphs"><p>ಕಾವ್ಯಾ</p></div>

ಕಾವ್ಯಾ

   

ಮಗು ನೋಡಿಕೊಳ್ಳುವ ಅನಿವಾರ್ಯಕ್ಕಾಗಿ ಆಯುರ್ವೇದ ವೈದ್ಯ ವೃತ್ತಿಗೆ ಗುಡ್‌ಬೈ ಹೇಳಿದ ಕಾವ್ಯಾ, ಈಗ ‘ಯೂಟ್ಯೂಬ್ ಪಾಕಶಾಲೆ’ಯ ಮೂಲಕ ಜನರಿಗೆ ಆಹಾರ ಮತ್ತು ಆರೋಗ್ಯದ ಪಾಠ ಮಾಡುತ್ತಿದ್ದಾರೆ. ಬೆಳಗಿನ ದಿಢೀರ್‌ ತಿಂಡಿ, ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ, ಸುಲಭದ ಅಡುಗೆ ಹೇಳಿಕೊಡುವ ‘ಕಾವ್ಯಾಸ್‌ ಕುಕಿಂಗ್‌ ಚಾನೆಲ್‌’ನ ಒಡತಿ ಡಾ. ಕಾವ್ಯಾ ಹವ್ಯಾಸಕ್ಕಾಗಿ ಈ ಪಯಣ ಶುರು ಮಾಡಿದವರು. ಅವರು ಹಾಸನ ಜಿಲ್ಲೆಯ ಆಲೂರಿನವರು.

ಉದ್ಯೋಗಸ್ಥ ಮಹಿಳೆಯರ ಬೆಳಗಿನ ಧಾವಂತ, ಅಡುಗೆಯ ಬಗೆಗಿನ ಚಿಂತೆ, ನಾಳೆಗೆ ಏನು? ರಾತ್ರಿಗೆ ಏನು? ಹಬ್ಬಕ್ಕೆ ಏನು? ಅಮಾವಾಸ್ಯೆಗೆ ಏನು ಅಡುಗೆ?... ಹೀಗೆ ಹಲವು ಪ್ರಶ್ನೆಗಳನ್ನು ಸ್ವತಃ ಎದುರಿಸಿದ್ದ ಅವರು ಅವೆಲ್ಲಕ್ಕೂ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

ADVERTISEMENT

2017ರಲ್ಲಿ ತಮ್ಮ ಪಾಕಶಾಲೆ ತೆರೆದ ಕಾವ್ಯಾ, ನಾಲ್ಕು ವರ್ಷ ಉದ್ಯೋಗದೊಂದಿಗೆ ಚಾ‌ನೆಲ್‌ಗೂ ಸಮಯ ಕೊಡುತ್ತಿದ್ದರು. ಆಗ ವಾರದಲ್ಲಿ ಮೂರು ರೆಸಿಪಿಗಳು ಪಾಕಪ್ರಿಯರ ಕದ ತಟ್ಟುತ್ತಿದ್ದವು. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಉದ್ಯೋಗ, ಚಾನೆಲ್‌, ಕುಟುಂಬ ನಿರ್ವಹಣೆ ಭಾರವೆನಿಸಿ ವೈದ್ಯ ವೃತ್ತಿಗೆ ವಿದಾಯ ಹೇಳಿ ಪಾಕಶಾಲೆಯ ಕಾಯಂ ಶಿಕ್ಷಕಿಯಾದರು. ಜೊತೆಗೆ, ಆಸ್ಪತ್ರೆಯಲ್ಲಿ ಹೇಳುತ್ತಿದ್ದ ಆರೋಗ್ಯದ ಪಾಠ ಅಡುಗೆ ಮನೆಗೆ ಸ್ಥಳಾಂತರಗೊಂಡಿತು. ಆಗಿನಿಂದ ದಿನವೂ ಒಂದೊಂದು ಖಾದ್ಯದ ಘಮ ಪಾಕಶಾಲೆಯನ್ನು ಆವರಿಸುತ್ತಿದೆ.

ಚಾನೆಲ್‌ ಆರಂಭದ ನಾಲ್ಕು ತಿಂಗಳಲ್ಲೇ ಚಂದಾದಾರರ ಸಂಖ್ಯೆ 15,000 ದಾಟಿತ್ತು. ಈಗ 6.73 ಲಕ್ಷಕ್ಕೆ ಏರಿದೆ. ಅಡುಗೆ ಚಾನೆಲ್‌ ಅನ್ನೇ ‘ವ್ಲಾಗ್‌’ ಆಗಿ ಪರಿವರ್ತಿಸಿಕೊಂಡಿರುವ ಕಾವ್ಯಾ, ಅಡುಗೆ ಪಾಠ ಮಾಡುವ ಶೈಲಿ ಇತರರಿಗಿಂತ ಭಿನ್ನ. ಇಲ್ಲಿ ರೆಸಿಪಿಗಳು ಸಿದ್ಧ ಮಾದರಿಯಲ್ಲಿ ಇರದೆ, ತಯಾರಿಕೆಯ ವಿವಿಧ ಮಜಲುಗಳಿರುತ್ತವೆ. ಪುಲಾವ್‌, ಬಿಸಿಬೇಳೆಬಾತ್‌,  ತರಕಾರಿ ಸಾಂಬಾರ್‌, ವೆಜಿಟೆಬಲ್‌ ಬಾತ್‌... ಹೀಗೆ ಒಂದೊಂದು ರೆಸಿಪಿಗೂ ತರಕಾರಿ ಹೆಚ್ಚಿಕೊಳ್ಳುವ ವಿಧಾನ ಭಿನ್ನ. ಆ ಎಲ್ಲ ವಿವರಣೆಯೂ ಈ ವ್ಲಾಗ್‌ನಲ್ಲಿ ಸ್ಥಾನ ಪಡೆದಿದೆ. ಆರಂಭಿಕ ಅಡುಗೆ ಕಲಿಯುವವರಿಗೆ ಇಂತಹ ಸಣ್ಣ ಸಣ್ಣ ಸಂಗತಿಗಳೂ ಹೆಚ್ಚು ಇಷ್ಟವಾಗುತ್ತವೆ ಎನ್ನುವುದು ಕಾವ್ಯಾ ಅವರ ಅನಿಸಿಕೆ. ಇನ್ನು ಮನೆಯಲ್ಲಿ ಇರುವ ಪದಾರ್ಥಗಳನ್ನೇ ಬಳಸಿಕೊಂಡು ನಿತ್ಯದ ಅಡುಗೆಯನ್ನು ಭಿನ್ನವಾಗಿ, ರುಚಿಕಟ್ಟಾಗಿ ಮಾಡುವ ವಿಧಾನವು ಪಾಕಪ್ರಿಯರನ್ನು ಸೆಳೆದಿದೆ. ರಾತ್ರಿ ಅನ್ನ ಮಿಕ್ಕಿದ್ದರೆ ಅದಕ್ಕೆ ಇನ್ನಷ್ಟು ಪದಾರ್ಥಗಳನ್ನು ಬಳಸಿ ಪೌಷ್ಟಿಕಾಂಶಯುಕ್ತ ತಿನಿಸು ತಯಾರಿಸುವುದು, ಬ್ರೆಡ್‌ ಉಳಿದಿದ್ದರೆ ಸಿಹಿ ಖಾದ್ಯ ತಯಾರಿಸುವುದು, ಪುಲಾವ್‌ ಉಳಿದಿದ್ದರೆ ಮತ್ತೊಂದು ರೆಸಿಪಿ ತಯಾರಿಸುವುದು... ಇಂತಹ ವಿಡಿಯೊಗಳು ಹೆಚ್ಚು ವೀಕ್ಷಣೆ ಪಡೆದಿವೆ. ಅಡುಗೆ ಮಾಡುವುದಷ್ಟೇ ಅಲ್ಲ, ಮಾಡಿದ ಬಳಿಕ ಅಡುಗೆ ಕೋಣೆ ಸ್ವಚ್ಛಗೊಳಿಸುವ ವಿಧಾನವನ್ನೂ ಕಾವ್ಯಾ ಹೇಳಿಕೊಡುತ್ತಾರೆ.

‘ಅಡುಗೆ ಎಂದರೆ ಖಾದ್ಯ ತಯಾರಿಸುವುದಷ್ಟೇ ಅಲ್ಲ, ಅದನ್ನೂ ಮೀರಿದ ಬಹಳಷ್ಟು ಸಂಗತಿಗಳು ಇರುತ್ತವೆ. ಅವೆಲ್ಲವನ್ನೂ ವಿಡಿಯೊದಲ್ಲಿ ಹೇಳುವುದನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಖಾದ್ಯ ತಯಾರಿಸಲು ಒಂದು ಪದಾರ್ಥ ಇಲ್ಲದಿದ್ದರೂ ಹೆಣ್ಣುಮಕ್ಕಳು ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಅದಕ್ಕೆ ಪರ್ಯಾಯ ಪದಾರ್ಥ ಬಳಸಬಹುದು ಎಂದು ತಿಳಿದಾಗ ಅವರಿಗೆ ಸಮಾಧಾನವಾಗುತ್ತದೆ. ಈಗೆಲ್ಲ ಸಣ್ಣ ಕುಟುಂಬಗಳೇ ಹೆಚ್ಚು. ಅಡುಗೆಯನ್ನು ಇಬ್ಬರು ಅಥವಾ ಮೂವರಿಗೆ ಆಗುವಷ್ಟು ಪ್ರಮಾಣದಲ್ಲಿ ತೋರಿಸಿದ ವಿಡಿಯೊಗಳು ಹೆಚ್ಚು ವೀಕ್ಷಣೆ ಪಡೆದಿವೆ’ ಎನ್ನುವುದು ಕಾವ್ಯಾ ಅವರ ಅನುಭವದ ನುಡಿ.

ಸಿಹಿ ಖಾದ್ಯಕ್ಕೆ ಮನ್ನಣೆ: ಹಬ್ಬದ ಸಮಯದಲ್ಲಿ ತಯಾರಿಸುವ ಸಾಂಪ್ರದಾಯಿಕ ಅಡುಗೆಗಳು, ಸಿಹಿ ಖಾದ್ಯಗಳನ್ನು ಹೆಚ್ಚು ಜನ ಇಷ್ಟಪಡುತ್ತಾರೆ. ಅವರು ಮೊದಲು ತಯಾರಿಸಿದ ಜಾಮೂನು ರೆಸಿಪಿ ಅತಿ ಹೆಚ್ಚು ವೀಕ್ಷಣೆ ಪಡೆದಿದೆ. ಬ್ರೆಡ್‌ ಜಾಮೂನ್‌, ಬೂಸ್ಟ್‌ ಬರ್ಫಿಯಂತಹ ವಿಶೇಷ ತಿನಿಸುಗಳ ಜೊತೆಗೆ ಮೈಸೂರ್‌
ಪಾಕ್‌, ಚಂಪಾಕಲಿ, ಜಿಲೇಬಿ, ಜಹಾಂಗೀರ್‌, ಸಿಹಿಬೂಂದಿ, ಬೀಟ್‌ರೂಟ್‌ ಹಲ್ವಾ... ಆಹಾ! ಬಾಯಲ್ಲಿ ನೀರೂರಿಸುವ ತರಹೇವಾರಿ ಸಿಹಿ ಖಾದ್ಯಗಳ ರೆಸಿಪಿಗಾಗಿ ತಡಕಾಡುವ ಹೆಂಗಳೆಯರಿಗೆ ಇಲ್ಲಿ ನಿರಾಶೆಯಾಗದು. ಪತಿ ಪ್ರದೀಪ್‌ ಅವರ ಸಹಕಾರ ಕಾವ್ಯಾ ಅವರ ಬೆನ್ನಿಗಿದೆ.

ಕಾವ್ಯಾ

ಹಾರ್ಲಿಕ್ಸ್‌ ಬರ್ಫಿ

ಬೇಕರಿಯಲ್ಲಿ ಸಿಗುವ ಬಗೆಬಗೆಯ ಸಿಹಿ ಭಕ್ಷ್ಯಗಳು ಮನೆಯಲ್ಲೇ ತಯಾರಾದರೆ?! ಆ ಮನೆಯವರ ಖುಷಿಗೆ ಎಣೆಯುಂಟೇ? ಸಿಹಿ ತಿನಿಸುಗಳನ್ನು ಹೆಚ್ಚು ಇಷ್ಟಪಡುವ ಕಾವ್ಯಾ, ಬೇಕರಿಯಲ್ಲಿ ಸಿಗುವ ಸ್ವೀಟ್‌ ರೆಸಿಪಿಗಳಿಗೆ ತಮ್ಮ ಮನೆಯನ್ನೇ ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ. ಹಾರ್ಲಿಕ್ಸ್‌ ಬರ್ಫಿ ಅವರ ಪ್ರಯೋಗಶೀಲತೆಗೆ ಸಾಕ್ಷಿ. ‘ಕೆ.ಜಿ.ಗೆ ₹ 600 ಕೊಟ್ಟು ಬೇಕರಿಯಲ್ಲಿ ತರೋದಕ್ಕಿಂತ, ಬಾಯಲ್ಲಿಟ್ಟರೆ ಕರಗುವ ಈ ಸಿಹಿಯನ್ನು ಮನೆಯಲ್ಲೇ 15 ನಿಮಿಷದಲ್ಲಿ ತಯಾರಿಸಬಹುದು’ ಎನ್ನುವ ಒಕ್ಕಣೆ ಅವರದು. ಹಾರ್ಲಿಕ್ಸ್‌ ಅನ್ನು ಹಾಲಿಗೆ ಹಾಕಿಕೊಟ್ಟರೆ ಮೂಗು ಮುರಿಯುವ ಮಕ್ಕಳು ಇನ್ನು ಮುಂದೆ ಹಾರ್ಲಿಕ್ಸ್‌ ಬರ್ಫಿಗಾಗಿ ಅಮ್ಮನ ಮುಂದೆ ಬೇಡಿಕೆ ಇಡಬಹುದು. ಈ ರೆಸಿಪಿ ತಯಾರಿ ನಿಮಗಾಗಿ...

ಬೇಕಾಗುವ ಸಾಮಗ್ರಿ:

ಮುಕ್ಕಾಲು ಕಪ್‌ ಕಡಲೆಹಿಟ್ಟು, ಕಾಲು ಕಪ್‌ ಹಾರ್ಲಿಕ್ಸ್‌, (ಹಾರ್ಲಿಕ್ಸ್‌ ಬದಲು ಬೂಸ್ಟ್‌ ಸಹ ಬಳಸಬಹುದು), ಅರ್ಧ ಕಪ್ ಅಡುಗೆ ಎಣ್ಣೆ, ಅರ್ಧ ಕಪ್‌ ತುಪ್ಪ, ಒಂದು ಕಪ್‌ ಸಕ್ಕರೆ, ಕಾಲು ಕಪ್‌ ನೀರು. ಕಡಲೆಹಿಟ್ಟು ಹಾಗೂ ಹಾರ್ಲಿಕ್ಸ್‌ ಎರಡನ್ನೂ ಜರಡಿಯಲ್ಲಿ ಸಾಣಿಸಬೇಕು. ಅದಕ್ಕೆ ಎಣ್ಣೆ ಹಾಕಿ ಗಂಟಿಲ್ಲದಂತೆ ಮಿಕ್ಸ್‌ ಮಾಡಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಸಕ್ಕರೆ, ನೀರು ಹಾಕಿ ಕುದಿಸಿ ಒಂದೆಳೆ ಪಾಕ ಬಂದ ಬಳಿಕ, ಎಣ್ಣೆಯಲ್ಲಿ ಕಲಸಿಟ್ಟುಕೊಂಡ ಕಡಲೆಹಿಟ್ಟು– ಹಾರ್ಲಿಕ್ಸ್‌ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಈ ಮಿಶ್ರಣ ಒಂದು ಕುದಿ ಬಂದ ಬಳಿಕ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ ಕೈಯಾಡಿಸುತ್ತಿರಬೇಕು. ಕಡಲೆಹಿಟ್ಟು ತುಪ್ಪ ವನ್ನು ಹೀರಿಕೊಂಡ ಬಳಿಕ ಮತ್ತೆ ಸ್ವಲ್ಪ ತುಪ್ಪ ಹಾಕಿ ಕೈಯಾಡಿಸಬೇಕು. ಮೂರನೇ ಬಾರಿ ತುಪ್ಪ ಹಾಕಿದ ಬಳಿಕ ಸ್ವಲ್ಪ ಹೊತ್ತು ಕೈಯಾಡಿಸುತ್ತಾ ಕುದಿಸಿ, ಬರ್ಫಿ ಹದಕ್ಕೆ ಬಂದ ಬಳಿಕ ಸ್ಟವ್‌ ಆಫ್‌ ಮಾಡಿ. ತುಪ್ಪ ಸವರಿದ ತಟ್ಟೆಗೆ ಹಾಕಿ ಏಳೆಂಟು ನಿಮಿಷ ತಣಿಯಲು ಬಿಡಬೇಕು. ತಣ್ಣಗಾದ ಬಳಿಕ ಕತ್ತರಿಸಿ.

ಹಾರ್ಲಿಕ್ಸ್‌ ಬರ್ಫಿ

ನಿರೂಪಣೆ: ಸುಮಾ ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.