
ಕಲೆರಹಿತ ಕಾಂತಿಯುತ ತ್ವಚೆ ಎಲ್ಲರಿಗೂ ಇಷ್ಟ.ಆದರೆ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ದೂಳಿನಿಂದ ನಯವಾದ ಸುಂದರ ತ್ವಚೆ ಹೊಂದುವುದು ಕನಸೇ ಸರಿ. ಆದರೆ ಬರೀ ಈ ಕಾರಣಗಳಿಂದ ಅಷ್ಟೇ ಅಲ್ಲ, ಆಹಾರಕ್ರಮದಿಂದಲೂ ಈ ಮೊಡವೆ ಕಿರಿಕಿರಿ ಉಂಟಾಗಬಹುದು. ಒಂದು ಬಾರಿ ಮೊಡವೆ ಕಾಣಿಸಿಕೊಂಡಿತು ಎಂದರೆ ಅದರ ಕಿರಿಕಿರಿ ಮುಗಿಯುವುದೇ ಇಲ್ಲ. ಈ ಕಿರಿಕಿರಿಯಿಂದ ಯಾರಾದರೂ ಬೇಸತ್ತಿದ್ದರೆ ಈಗ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳುವುದು ಉತ್ತಮ.
ಹಾಲಿನ ಉತ್ಪನ್ನಗಳು, ಖಾರದ, ಕರಿದ ಪದಾರ್ಥಗಳ ಅತಿಸೇವನೆ, ಬ್ರೆಡ್‌ನಂತಹ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮುಖದಲ್ಲಿ ಮೊಡವೆ ಕಾಣಿಸುತ್ತದೆ.ಅಚ್ಚರಿಯ ವಿಷಯವೆಂದರೆ ಅತಿ ಹೆಚ್ಚು ಕಾಫಿ ಸೇವನೆಯಿಂದಲೂ ಮೊಡವೆ ಕಾಣಿಸಿಕೊಳ್ಳಬಹುದು. ಹಾಗಾಗಿ ಹೆಚ್ಚು ಕಾಫಿ ಸೇವನೆಯ ದುರಭ್ಯಾಸವನ್ನು ಬಿಟ್ಟುಬಿಡಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ದಿನದಲ್ಲಿ ಹೆಚ್ಚು ಬಾರಿ ಕಾಫಿ ಸೇವಿಸುವ ಚಟ ಹೊಂದಿರುವವರಿಗೆ ಮೊಡವೆ ಸಮಸ್ಯೆ ಎದುರಾಗಬಹುದು. ದೇಹದ ಹಾರ್ಮೋನ್ ಅಸಮತೋಲನದಿಂದ ಮೊಡವೆ ಬರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಂಸ್ಕರಿತ ಆಹಾರ ಹಾಗೂ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕು. ಹಾಗೇ ಕಾಫಿ ಸೇವನೆಯನ್ನೂ ಕಡಿಮೆ ಮಾಡಿ,ತಾಜಾ ಹಣ್ಣುಗಳು, ತರಕಾರಿಗಳು ಹಾಗೂ ಜ್ಯೂಸ್‌ಗಳನ್ನು ಹೆಚ್ಚು ಸೇವಿಸಿ ಎಂಬ ಸಲಹೆ ವೈದ್ಯರದು.
ಕಾಫಿಯಲ್ಲಿರುವ ಕೆಲ ರಾಸಾಯನಿಕ ಗುಣಲಕ್ಷಣಗಳು ಒತ್ತಡ ಹೆಚ್ಚಿಸುವ ಹಾರ್ಮೋನ್‌ಗಳನ್ನು ಜಾಸ್ತಿ ಮಾಡುತ್ತವೆ. ಇದು ಮೊಡವೆಯನ್ನು ಹೆಚ್ಚು ಮಾಡುತ್ತದೆ ಎಂದು
ವೈದ್ಯರು ಎಚ್ಚರಿಸಿದ್ದಾರೆ.
ಸುಂದರ, ಕಾಂತಿಯುತ ಚರ್ಮಕ್ಕೆ ಯಥೇಚ್ಛವಾಗಿ ನೀರು ಕುಡಿಯುವುದು ಬಹುಮುಖ್ಯ. ನಿರ್ಜಲೀಕರಣದಿಂದಲೂ ಅನೇಕ ಚರ್ಮ ರೋಗಗಳು ಕಾಣಿಸಿಕೊಳ್ಳಬಹುದು. ಕಾಫಿ ಕುಡಿಯುವುದರಿಂದ ನೀರಿನಾಂಶ ದೇಹಕ್ಕೆ ಸೇರಿದರೂ ಅತಿ ಹೆಚ್ಚು ಕಾಫಿ ಕುಡಿಯುವುದು ಹಾಗೂ
ಆಹಾರದ ಬದಲಾಗಿ ಕಾಫಿ ಸೇವನೆ ಮಾಡುವ ಚಟ ಹೊಂದಿದವರಲ್ಲಿ ಕಾಫಿಯ ಕೆಲ ಅಂಶಗಳು ಆಮ್ಲಗಳಾಗಿ ಪರಿವರ್ತನೆ ಹೊಂದುತ್ತದೆ.ಇದು ದೇಹದಲ್ಲಿನ ಅಗತ್ಯ ವಿಟಮಿನ್‌ಗಳು ಹಾಗೂ ಖನಿಜಾಂಶಗಳನ್ನು ದೇಹದಿಂದ ಹೊರ ಹಾಕುತ್ತದೆ. ಇದು ಸಮಸ್ಯೆಗೆ ದಾರಿಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.