ADVERTISEMENT

Recipe| ಬಜ್ಜಿ ಮೆಣಸಿನ ಬಗೆ ಬಗೆ ಖಾದ್ಯ

ಸೌಖ್ಯ ಮೋಹನ್
Published 3 ಮಾರ್ಚ್ 2023, 19:31 IST
Last Updated 3 ಮಾರ್ಚ್ 2023, 19:31 IST
ಕಾಯಿರಸ
ಕಾಯಿರಸ   

‘ಬಜ್ಜಿ ಮೆಣಸು/ ಬೋಂಡಾ ಮೆಣಸಿನಕಾಯಿಯನ್ನು ಸ್ಟಫ್ಡ್ ಬೋಂಡಾಕ್ಕೆ ಹೆಚ್ಚು ಬಳಸುತ್ತೇವೆ. ಆದರೆ, ಇದರಿಂದ ಇನ್ನಷ್ಟು ವೈವಿಧ್ಯಮಯ ಖಾದ್ಯಗಳನ್ನು ಮಾಡಬಹುದು.ಅಪರೂಪಕ್ಕೊಮ್ಮೆ ಈ ರೀತಿಯ ಸರಳ ರಸರುಚಿಗಳು ಖುಷಿ ಕೊಡುತ್ತವೆ. ಅಂಥ ವಿಶಿಷ್ಟ ಖಾದ್ಯಗಳ ಸರಳ ರೆಸಿಪಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಸೌಖ್ಯ ಮೋಹನ್ ತಲಕಾಲುಕೊಪ್ಪ.

ಕಾಯಿರಸ

ಬೇಕಾಗುವ ಸಾಮಗ್ರಿ: ಬೋಂಡ ಮೆಣಸು 4-5, ಕಾಯಿತುರಿ 1 ಕಪ್, ಬಿಳಿ ಎಳ್ಳು 3 ಚಮಚ, ಈರುಳ್ಳಿ ದೊಡ್ದದು, ಅಚ್ಚ ಖಾರದ ಪುಡಿ/ಮೆಣಸಿನ ಪುಡಿ 2 ಚಮಚ, ರಸಂ ಪುಡಿ ಒಂದು ಚಮಚ, ಉಪ್ಪು, ಹುಣಿಸೇಹಣ್ಣು ಸ್ವಲ್ಪ, ಬೆಲ್ಲ ಚೂರು, ಅರಿಸಿನಪುಡಿ ಕಾಲು ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕಾಯಿರಸ ಮಸಾಲ ಪೌಡರ್ 3 ಚಮಚ,

ADVERTISEMENT

ಕಾಯಿರಸ ಮಸಾಲ ಪೌಡರ್ ತಯಾರಿಸುವ ವಿಧಾನ: 3 ಚಮಚ ಕಡ್ಲೆಬೇಳೆ, 2 ಚಮಚ ಉದ್ದಿನಬೇಳೆ, ಒಂದು ಚಮಚ ಜೀರಿಗೆ, 1 ಚಮಚ ಕೊತ್ತಂಬರಿ ಇವನ್ನು ಬಾಣಲೆಯಲ್ಲಿ ಹುರಿದು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ.

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಕರಿಬೇವು

ಮಾಡುವ ವಿಧಾನ: ಮೊದಲು ಈ ಮೆಣಸಿನ ತೊಟ್ಟಿನ ಭಾಗ ತೆಗೆದು ಉಳಿದ ಭಾಗವನ್ನು ಸ್ವಲ್ಪ ಉದ್ದವಾಗಿ ಹೆಚ್ಚಿಕೊಳ್ಳಿ. ಎಳ್ಳನ್ನು ಹುರಿದುಕೊಳ್ಳಿ. ಕಾಯಿತುರಿಗೆ 2 ಚಮಚ ಹುರಿದ ಎಳ್ಳು, ಮೆಣಸಿನಪುಡಿ, ರಸಂ ಪುಡಿ, ಕಾಯಿರಸ ಮಸಾಲ ಪುಡಿ ಮತ್ತು ಹುಣಿಸೇಹಣ್ಣು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ

ಒಗ್ಗರಣೆಗೆ ಇಟ್ಟು ಮೇಲೆ ಹೇಳಿದ ವಸ್ತುಗಳನ್ನು ಹಾಕಿ. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, ಹುರಿಯಿರಿ. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, ಹುರಿಯಿರಿ. ಆಮೇಲೆ ಮೆಣಸಿನ ಹೋಳುಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಉಪ್ಪು ಮತ್ತು ಅರಿಶಿಣ ಸೇರಿಸಿ. ಬೆಲ್ಲವನ್ನು ಹಾಕಿ ಕೈಯಾಡಿಸಿ ರುಬ್ಬಿದ ಮಿಶ್ರಣವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ, ಇಳಿಸಿ. ಮೇಲಿನಿಂದ ಹುರಿದ ಎಳ್ಳು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ.

ರಾಯತ

ಬೇಕಾಗುವ ಸಾಮಗ್ರಿ: ಬಜ್ಜಿ ಮೆಣಸು 2-3, ಮೊಸರು ಒಂದು ದೊಡ್ಡ ಕಪ್, ಉಪ್ಪು, ಕೊತ್ತಂಬರಿ ಸೊಪ್ಪು, ಅರಿಶಿಣ, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು

ಮಾಡುವ ವಿಧಾನ: ಮೊದಲು ಈ ಮೆಣಸಿನ ತೊಟ್ಟಿನ ಭಾಗ ತೆಗೆದು ಉಳಿದ ಭಾಗವನ್ನು ಹೆಚ್ಚಿಕೊಳ್ಳಿ. ಒಗ್ಗರಣೆಗೆ ಬೇಕಾದ ಸಾಮಗ್ರಿ ಹಾಕಿ, ಸಾಸಿವೆ ಸಿಡಿದ ನಂತರ ಹೆಚ್ಚಿದ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಹುರಿಯುವಾಗ ಉಪ್ಪು ಸೇರಿಸಿ. ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಅರಿಸಿನ ಹಾಕಿ. ಮೆಣಸು ಸ್ವಲ್ಪ ಬಾಡುವವರೆಗೆ ಹುರಿದುಕೊಳ್ಳಿ. ಅದ ತಣಿದ ನಂತರ ಮೊಸರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ರುಚಿ ರುಚಿ ರಾಯತ ರೆಡಿ. ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಬಹುದು.

ಪಲ್ಯ

ಬೇಕಾಗುವ ಸಾಮಗ್ರಿ: ಬಜ್ಜಿ ಮೆಣಸು 4-5, ಆಲೂಗೆಡ್ಡೆ 2-3, ಉಪ್ಪು, ಕೊತ್ತಂಬರಿ ಸೊಪ್ಪು ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಕರಿಬೇವು

ಮಾಡುವ ವಿಧಾನ: ಬಜ್ಜಿಮೆಣಸನ್ನು ಸ್ಲೈಸ್ ಮಾಡಿ ಸ್ವಲ್ಪ ದೊಡ್ಡದಾಗಿ ಹೆಚ್ಚಿಕೊಳ್ಳಿ. ಆಲೂಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಸೇರಿಸಿ ನುರಿದುಕೊಳ್ಳಿ. ಒಗ್ಗರಣೆಗೆ ಎಲ್ಲಾ ಸಾಮಗ್ರಿ ಹಾಕಿ. ಅದಕ್ಕೆ ಹೆಚ್ಚಿದ ಬಜ್ಜಿ ಮೆಣಸು ಹಾಕಿ ಹುರಿಯಿರಿ. ಸ್ವಲ್ಪವೇ ಉಪ್ಪು ಹಾಕಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. ನಂತರ ನುರಿದ ಆಲೂಗೆಡ್ಡೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ಅರಿಶಿಣದ ಪುಡಿ ಹಾಕುವುದು ಬೇಡ, ದೋಸೆ, ಚಪಾತಿ, ಮೊಸರನ್ನಕ್ಕೆ ಚೆನ್ನಾಗಿರುತ್ತದೆ. ಇದಕ್ಕೆ ಮಸಾಲಪುಡಿ ಬೇಕಾದರೂ ಸ್ವಲ್ಪ ಹಾಕಿಕೊಳ್ಳಬಹುದು.

ಬಜ್ಜಿ ರೈಸ್

ಬೇಕಾಗುವ ಸಾಮಗ್ರಿ: ಬೋಂಡ ಮೆಣಸು 4-5 , ಉದುರಾದ ಅನ್ನ 4 ಕಪ್, ಈರುಳ್ಳಿ 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಪೆಪ್ಪೆರ್ ಪೌಡರ್ ಕಾಲು ಚಮಚ, ಹಸಿ ಮೆಣಸು 1, ಉಪ್ಪು, ನಿಂಬೆ ರಸ, ಎಣ್ಣೆ 4 ರಿಂದ 5 ಚಮಚ, ಜೀರಿಗೆ
ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆಯನ್ನು ಸೇರಿಸಿ. ಈರುಳ್ಳಿ ಮತ್ತು ಹಸಿ ಮೆಣಸನ್ನು ಹೆಚ್ಚಿ ಅದಕ್ಕೆ ಹಾಕಿ ಹುರಿಯಿರಿ, ಚಿಟಿಕೆ ಉಪ್ಪು ಸೇರಿಸಿ. ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹೆಚ್ಚಿದ ಮೆಣಸು ಸೇರಿಸಿ, ಉಪ್ಪು ಮತ್ತು ಪೆಪ್ಪರ್ ಪೌಡರ್ ಹಾಕಿ ಬಾಡಿಸಿ, ಮೆಣಸು ಉಪ್ಪನ್ನು ಹೀರಿಕೊಳ್ಳಬೇಕು. ನಂತರ ಅನ್ನವನ್ನು ಹಾಕಿ, ಚೆನ್ನಾಗಿ ಮಿಶ್ರ ಮಾಡಿ, ಸ್ವಲ್ಪ ಹುರಿಯಿರಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.