ADVERTISEMENT

ಬೆಣ್ಣೆ ಚಕ್ಕುಲಿ, ನಿಪ್ಪಟ್ಟು: ಇಲ್ಲಿದೆ ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನ

ರೇವತಿ ಎಂ.ಬಿ.
Published 12 ಡಿಸೆಂಬರ್ 2025, 12:41 IST
Last Updated 12 ಡಿಸೆಂಬರ್ 2025, 12:41 IST
   

ಸಾಮಾನ್ಯವಾಗಿ ಸಂಜೆ ಟೀ ಹಾಗೂ ಕಾಫಿಯ ಜೊತೆ ತಿನ್ನಲು ಏನಾದರು ಎಣ್ಣೆಯಲ್ಲಿ ಕರಿದ ತಿಂಡಿಗಳು ಬೇಕಾಗುತ್ತವೆ. ಅದರಲ್ಲಿ ಪ್ರಮುಖವಾಗಿರುವ ಮುರುಕ್ಕು, ಕೋಡುಬಳೆ, ನಿಪ್ಪಟ್ಟು, ಬೆಣ್ಣೆ ಚಕ್ಲಿ ಇತ್ಯಾದಿ ತಿಂಡಿಗಳನ್ನು ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು.

ಬೆಣ್ಣೆ ಚಕ್ಲಿ

ಬೆಣ್ಣೆ ಚಕ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು:

ADVERTISEMENT

ಅಕ್ಕಿಹಿಟ್ಟು ಎರಡು ಕಪ್, ಹುರಿದ ಉದ್ದಿನ ಹಿಟ್ಟು ಒಂದು ಕಪ್, ‌ಜೀರಿಗೆ ಒಂದು ಟೀ ಚಮಚ, ಬೆಣ್ಣೆ ಒಂದು ದೊಡ್ಡ ನಿಂಬೆ ಗಾತ್ರ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ಮಾಡೋದು ಹೇಗೆ?

ಅಕ್ಕಿಹಿಟ್ಟು ಹಾಗೂ ಉದ್ದಿನ ಹಿಟ್ಟನ್ನು ಜರಡಿ ಮಾಡಿ ಒಂದು ಪಾತ್ರೆಗೆ ಹಾಕಿ. ನಂತರ ಉಪ್ಪು, ಜೀರಿಗೆ, ಬೆಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಚಕ್ಕುಲಿ ಅಚ್ಚಿನಲ್ಲಿ ನೇರವಾಗಿ ಎಣ್ಣೆಗೆ ಒತ್ತಿ ಕರಿಯಿರಿ. ಟೀ, ಕಾಫಿ ಜೊತೆಗೆ ಬೆಣ್ಣೆ ಚಕ್ಲಿ ಸವಿಯಲು ಸಿದ್ಧ.

ನಿಪ್ಪಟ್ಟು

ನಿಪ್ಪಟ್ಟು ಮಾಡೋದು ಹೇಗೆ?

ಬೇಕಾಗುವ ಸಾಮಾಗ್ರಿಗಳು:

ಅಕ್ಕಿಹಿಟ್ಟು ಒಂದು ಕಪ್, ‌ಬಾಂಬೆ ರವಾ ಎರಡು ಟೀ ಚಮಚ, ಮೈದಾ ಒಂದು ಟೀ ಚಮಚ, ಹುರಿದ ನೆಲಕಡಲೆ ಎರಡು ಟೀ ಚಮಚ, ಕಡಲೆ ಒಂದು ಟೀ ಚಮಚ, ಎಳ್ಳು ಒಂದು ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕರಿಬೇವು, ಕರಿಯಲು ಎಣ್ಣೆ.

ಮಾಡೋದು ಹೇಗೆ?

ಮೊದಲಿಗೆ ನೆಲಕಡಲೆ ಹಾಗೂ ಪುಟಾಣಿ ಕಡಲೆಯನ್ನು ತರಿತರಿಯಾಗಿ ಹುಡಿಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಹಾಕಿ, ಅದಕ್ಕೆ ಅಕ್ಕಿಹಿಟ್ಟು ಬಾಂಬೆ ರವಾ, ಎಳ್ಳು, ಮೆಣಸಿನಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕರಿಬೇವನ್ನು ಸಣ್ಣಗೆ ಹೆಚ್ಚಿ ಹಾಕಿ. ಎರಡು ಟೀ ಚಮಚ ಎಣ್ಣೆಯನ್ನು ಬಿಸಿಮಾಡಿ ಹಾಕಿ. ನೀರನ್ನು ಉಗುರು ಬೆಚ್ಚಗೆ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಚೆನ್ನಾಗಿ ನಾದಿಕೊಳ್ಳಿ. ನಂತರ ನಿಪ್ಪಟ್ಟಿನ ಆಕಾರದಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಿರಿ. ಈಗ ಟೀ, ಕಾಫಿ ಜೊತೆಗೆ ನಿಪ್ಪಟ್ಟು ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.