ADVERTISEMENT

ಹಬ್ಬಕ್ಕಿರಲಿ ಸಿಹಿ ತಿನಿಸಿನ ಸಂಭ್ರಮ: ಏನೇನು ಮಾಡಬಹುದು?

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 3:29 IST
Last Updated 2 ನವೆಂಬರ್ 2021, 3:29 IST
ಚಾಕೊಲೇಟ್‌ ಪೀನಟ್ ಬಟರ್ ಕಪ್‌
ಚಾಕೊಲೇಟ್‌ ಪೀನಟ್ ಬಟರ್ ಕಪ್‌   

ಹಬ್ಬಗಳ ಸಮಯದಲ್ಲಿ ಮನೆಯಲ್ಲೇ ಬಗೆ ಬಗೆ ತಿಂಡಿ–ತಿನಿಸುಗಳನ್ನು ತಯಾರಿಸುವುದು ವಾಡಿಕೆ. ಹಬ್ಬ ಎಂದರೆ ಸಿಹಿ. ಯಾವುದೇ ಹಬ್ಬವಾಗಲಿ ಸಿಹಿ ಇಲ್ಲದೆ ಹಬ್ಬ ಪರಿಪೂರ್ಣವಾಗುವುದಿಲ್ಲ. ದೀಪಾವಳಿ ಹಬ್ಬದಲ್ಲೂ ಕಜ್ಜಾಯ, ಹೋಳಿಗೆ, ಬಾಸುಂದಿಯಂತಹ ಸಿಹಿ ತಿನಿಸುಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಸಾಂಪ್ರದಾಯಿಕ ತಿನಿಸುಗಳ ಜೊತೆ ಕಾಂಟಿನೆಂಟಲ್ ಖಾದ್ಯಗಳನ್ನು ತಯಾರಿಸುವ ಮೂಲಕ ಹಬ್ಬದ ರಂಗನ್ನು ಇನ್ನಷ್ಟು ಹೆಚ್ಚಿಸಬಹುದು. ಕಾಂಟಿನೆಂಟಲ್ ಸಿಹಿ ತಿನಿಸುಗಳು ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.

ಚಾಕೊಲೇಟ್‌ ಪೀನಟ್ ಬಟರ್ ಕಪ್‌

ಈ ಚಾಕೊಲೇಟ್ ಪೀನಟ್ ಬಟರ್ ಕಪ್‌ ಅನ್ನು ಸರಳವಾಗಿ, ಸುಲಭವಾಗಿ ತಯಾರಿಸಬಹುದು. ಇದನ್ನು ತಯಾರಿಸಲು ಕಡಿಮೆ ಸಾಮಗ್ರಿಗಳು ಸಾಕು. ಇದನ್ನು ಅಂಗಡಿಯಲ್ಲಿ ಖರೀದಿಸಿ ತಿನ್ನುವುದಕ್ಕಿಂತ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಪೀನಟ್ ಬಟರ್ ಕಪ್‌ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವಷ್ಟರ ಮಟ್ಟಿಗೆ ಚೆನ್ನಾಗಿರುತ್ತದೆ. ಇದರ ರುಚಿಯೂ ಭಿನ್ನವಾಗಿದ್ದು ನೀವು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ.

ADVERTISEMENT

ಬೇಕಾಗುವ ಸಾಮಗ್ರಿಗಳು: ಚಾಕೊಲೇಟ್‌ – 250 ಗ್ರಾಂ, ಪೀನಟ್‌ ಬಟರ್‌ – 200 ಗ್ರಾಂ, ಸಕ್ಕರೆ ಪುಡಿ – ಕಾಲು ಕಪ್‌, ವೆನಿಲ್ಲಾ ಎಕ್ಸ್‌ಟ್ರ್ಯಾಕ್ಟ್‌ – ಅರ್ಧ ಟೀ ಚಮಚ, ಉಪ್ಪು – ಚಿಟಿಕೆ.

ತಯಾರಿಸುವ ವಿಧಾನ: ಮೊದಲು ಕಪ್‌ ಕೇಕ್ ಪೇಪರ್‌ ಅನ್ನು ಸಿದ್ಧಗೊಳಿಸಿ ಇರಿಸಿಕೊಳ್ಳಿ. ಒಂದು ಕಪ್‌ಗೆ ಪೀನಟ್ ಬಟರ್ ಹಾಕಿ ಅದಕ್ಕೆ ಸಕ್ಕರೆ ಪುಡಿ ಸೇರಿಸಿ ಸಕ್ಕರೆ ಕರಗುವವರೆಗೂ ಚೆನ್ನಾಗಿ ತಿರುಗಿಸಿ. ಕಪ್‌ ಕೇಕ್‌ ಪೇಪರ್‌ ಮೇಲೆ ಮೊದಲು 2 ಚಮಚ ಚಾಕೊಲೇಟ್ ಹಾಕಿ, ಚಾಕೊಲೇಟ್ ಮೇಲೆ ಪೀನಟ್ ಬಟರ್ ಹಾಕಿ. ಮತ್ತೆ ಅದರ ಮೇಲೆ ಚಾಕೊಲೇಟ್ ಹಾಕಿ ಚೆನ್ನಾಗಿ ಕವರ್ ಮಾಡಿ. ಇದನ್ನು ಒಂದು ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಈಗ ನಿಮ್ಮ ಮುಂದೆ ಚಾಕೊಲೇಟ್‌ ಪೀನಟ್ ಬಟರ್ ಕಪ್‌ ತಿನ್ನಲು ಸಿದ್ಧ‌.

ಕೊಕೊನಟ್ ಕ್ಯಾರಾಮೆಲ್ ಬರ್ಫಿ

ತೆಂಗಿನಕಾಯಿ ಬರ್ಫಿ ಎಂದರೆ ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಹಬ್ಬಕ್ಕೆ ಕೊಕೊನಟ್ ಕ್ಯಾರಾಮೆಲ್ ಬರ್ಫಿ ತಯಾರಿಸುವ ಮೂಲಕ ಬಾಯಿ ಸಿಹಿ ಮಾಡಿಕೊಳ್ಳಬಹುದು. ಇದು ಭಿನ್ನ ರುಚಿಯನ್ನು ಹೊಂದಿದ್ದು, ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿಗಳು: ತೆಂಗಿನತುರಿ – ಸ್ವಲ್ಪ, ದಪ್ಪ ತೆಂಗಿನಹಾಲು – 2 ಕಪ್‌ನಷ್ಟು, ಸಕ್ಕರೆ ಪುಡಿ – 400 ಗ್ರಾಂ, ಕಾರ್ನ್ ಸಿರಪ್‌ – ಕಾಲು ಕಪ್‌, ಉಪ್ಪು – ಅರ್ಧ ಚಮಚ, ಶುಂಠಿ ಪುಡಿ – 1 ಚಮಚ, ಏಲಕ್ಕಿ ಪುಡಿ – ಸ್ವಲ್ಪ.

ತಯಾರಿಸುವ ವಿಧಾನ: ಅಗಲವಾದ ಚೌಕಾಕಾರದ ಪಾತ್ರೆಗೆ ಸುತ್ತಲೂ ಬೆಣ್ಣೆ ಸವರಿ. ತೆಂಗಿನತುರಿಯನ್ನು ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಆ ತುರಿಯನ್ನು ಬೆಣ್ಣೆ ಸವರಿದ ಪಾತ್ರೆ ಮೇಲೆ ಹರಡಿ. ಈ ತೆಂಗಿನಹಾಲನ್ನು ದಪ್ಪ ತಳದ ಪಾತ್ರೆಗೆ ಹಾಕಿ ಅದಕ್ಕೆ ಸಕ್ಕರೆ, ಉಪ್ಪು, ಕಾರ್ನ್ ಸಿರಪ್ ಸೇರಿಸಿ ಒಲೆಯ ಮೇಲೆ ಇರಿಸಿ ಚೆನ್ನಾಗಿ ಕಲೆಸಿ. ಅದು ಮಂದವಾಗುವವರೆಗೂ ಕುದಿಸಬೇಕು. ಚಿಕ್ಕ ಕಪ್‌ವೊಂದರಲ್ಲಿ ಏಲಕ್ಕಿ ಪುಡಿ, ಶುಂಠಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಒಲೆಯ ಮೇಲಿರುವ ಮಿಶ್ರಣ ಕುದಿದು ಮಂದವಾದ ಮೇಲೆ ಅದಕ್ಕೆ ಶುಂಠಿ, ಏಲಕ್ಕಿ ಮಿಶ್ರಣ ಸೇರಿಸಿ ಕಲೆಸಿ. ನಂತರ ಆ ಮಿಶ್ರಣವನ್ನು ತೆಂಗಿನತುರಿ ಉದುರಿಸಿದ ಪಾತ್ರೆಗೆ ಸುರಿಯಿರಿ. ಅದರ ಮೇಲೆ ಮತ್ತೆ ತೆಂಗಿನತುರಿ ಉದುರಿಸಿ, ಸ್ವಲ್ಪ ಹೊತ್ತು ಇಡಿ. ಅದು ಗಟ್ಟಿಯಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.