ADVERTISEMENT

ನಳಪಾಕ: ಗಣೇಶನ ಹಬ್ಬಕ್ಕೆ ಡ್ರೈಫ್ರೂಟ್ಸ್‌ ಕರಿಗಡುಬು

ವೇದಾವತಿ ಎಚ್.ಎಸ್.
Published 3 ಸೆಪ್ಟೆಂಬರ್ 2021, 19:30 IST
Last Updated 3 ಸೆಪ್ಟೆಂಬರ್ 2021, 19:30 IST
ಕರಿಗಡುಬು
ಕರಿಗಡುಬು   

ಕರಿಗಡುಬು

ಬೇಕಾಗುವ ಸಾಮಗ್ರಿಗಳು: ಕಣಕಕ್ಕೆ: ಮೈದಾ – 1 ಕಪ್, ಚಿರೋಟಿ ರವೆ – ಅರ್ಧ ಕಪ್, ಉಪ್ಪು ಚಿಟಿಕೆ, ತುಪ್ಪ – 2 ಚಮಚ, ನೀರು ಸ್ವಲ್ಪ.

ಹೂರಣಕ್ಕೆ: ಹುರಿಗಡಲೆ – 1 ಕಪ್, ಸಕ್ಕರೆ – ಮುಕ್ಕಾಲು ಕಪ್, ಗಸಗಸೆ – 1 ಟೀ ಚಮಚ, ಕೊಬ್ಬರಿತುರಿ – ಅರ್ಧ ಕಪ್, ಗೋಡಂಬಿ – 20, ಬಾದಾಮಿ – 20, ಪಿಸ್ತಾ – 20, ಏಲಕ್ಕಿ ಪುಡಿ – ಅರ್ಧ ಟೀ ಚಮಚ.

ADVERTISEMENT

ತಯಾರಿಸುವ ವಿಧಾನ: ಬೌಲಿನಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಎರಡು ಚಮಚ ತುಪ್ಪವನ್ನು ಬಿಸಿ ಮಾಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿರುವಷ್ಟು ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಕಲೆಸಿಕೊಂಡ ಹಿಟ್ಟನ್ನು 20 ನಿಮಿಷ ಮುಚ್ಚಿಡಿ.

ಹುರಿಗಡಲೆ ಮತ್ತು ಸಕ್ಕರೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಣಕೊಬ್ಬರಿಯನ್ನು ಬಾಣಲೆಗೆ ಹಾಕಿ 1 ನಿಮಿಷ ಹುರಿಯಿರಿ. ಗಸಗಸೆಯನ್ನು ಕೊಬ್ಬರಿಯೊಂದಿಗೆ ಕೆಲವು ಸೆಕೆಂಡು ಹುರಿಯಿರಿ. ಹುರಿದ ಕೊಬ್ಬರಿ ಮತ್ತು ಗಸಗಸೆಯನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ಪುಡಿ ಮಾಡಿ. ಬಾದಾಮಿ, ಗೋಡಂಬಿ, ಪಿಸ್ತಾವನ್ನು 2 ನಿಮಿಷ ಹುರಿಯಿರಿ. ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿಕೊಂಡ ಮಿಶ್ರಣವನ್ನು ಬೌಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕಣಕದ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ. ಉಂಡೆಗಳನ್ನು ತೆಳ್ಳಗೆ ಮತ್ತು ದುಂಡಗೆ ಲಟ್ಟಿಸಿಕೊಳ್ಳಿ. ಹೂರಣವನ್ನು ಒಂದರಿಂದ 2 ಚಮಚ ಹಾಕಿ. ಅಂಚಿನ ಸುತ್ತಲೂ ನೀರನ್ನು ಸವರಿ. ಅಂಚನ್ನು ಗಟ್ಟಿಯಾಗಿ ಅಂಟಿಸಿ. ಅಂಚಿನ ಕೊನೆಯನ್ನು ನಿಮಗೆ ಬೇಕಾದ ಹಾಗೆ ಅಲಂಕರಿಸಿ. ನಂತರ ಕಾದ ಎಣ್ಣೆಗೆ ತಯಾರಿಸಿಕೊಂಡ ಕರಿಗಡುಬು ಹಾಕಿ. ಎರಡೂ ಬದಿಯನ್ನು ಕೆಂಬಣ್ಣ ಬರುವರೆಗೆ ಕರಿಯಿರಿ.

ಗಸಗಸೆ ಪಾಯಸ

ಬೇಕಾಗುವ ಸಾಮಗ್ರಿಗಳು: ಗಸಗಸೆ – 50 ಗ್ರಾಂ, ಅಕ್ಕಿ – 2 ಟೇಬಲ್ ಚಮಚ, ಬಾದಾಮಿ – 5, ಗೋಡಂಬಿ – 5, ಏಲಕ್ಕಿ ಬೀಜ– 4, ಒಣಕೊಬ್ಬರಿತುರಿ – ಅರ್ಧ ಕಪ್, ತೆಂಗಿನತುರಿ – 1 ಕಪ್, ಬೆಲ್ಲ – 2 ಕಪ್, 10 ರಿಂದ 15 ಕೇಸರಿದಳವನ್ನು 2 ಟೇಬಲ್ ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ. ಹಾಲು ಅರ್ಧ ಲೀಟರ್‌, 1 ಟೀ ಚಮಚ ತುಪ್ಪ, ಹುರಿದು ಪಾಯಸಕ್ಕೆ ಹಾಕಲು ಗೋಡಂಬಿ 10 ರಿಂದ 15, ಒಣದ್ರಾಕ್ಷಿ 20 ರಿಂದ 25.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಗಸಗಸೆ ಮತ್ತು ಅಕ್ಕಿಯನ್ನು ಹಾಕಿ ಹುರಿಯಿರಿ. ನಂತರ ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಗೋಡಂಬಿಯನ್ನು ಹುರಿಯಿರಿ. ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ. ಏಲಕ್ಕಿ ಸಿಪ್ಪೆ ತೆಗೆದು ಅವುಗಳೊಂದಿಗೆ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದರ ಜೊತೆಗೆ ಒಣಕೊಬ್ಬರಿ, ತೆಂಗಿನತುರಿ ಮತ್ತು ಅರ್ಧ ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಅರ್ಧ ಲೀಟರ್‌ ನೀರನ್ನು ಹಾಕಿ. ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲವನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ಬೆಲ್ಲ ಕರಗಿ ಕುದಿ ಬಂದ ನಂತರ ಹಾಲು ಮತ್ತು ನೆನೆಸಿಟ್ಟ ಕೇಸರಿ ಹಾಲನ್ನು ಸೇರಿಸಿ. ಸಣ್ಣ ಉರಿಯಲ್ಲಿ ಕುದಿಸಿ. ಕುದಿ ಬಂದ ನಂತರ ಒಲೆಯನ್ನು ಆರಿಸಿ.

ಬಾಣಲೆಗೆ 1 ಟೀ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಗೋಡಂಬಿ ಮತ್ತು ದ್ರಾಕ್ಷಿಯನ್ನು ಕೆಂಬಣ್ಣ ಬರುವರೆಗೆ ಹುರಿಯಿರಿ. ಪಾಯಸಕ್ಕೆ ಸೇರಿಸಿ. ರುಚಿಕರವಾದ ಮತ್ತು ಆರೋಗ್ಯಕರವಾದ ಗಸಗಸೆ ಪಾಯಸ ಸವಿಯಲು ಸಿದ್ಧ.

ಮೋದಕ

ಬೇಕಾಗುವ ಸಾಮಗ್ರಿಗಳು: ಹಿಟ್ಟು ತಯಾರಿಸಿಕೊಳ್ಳಲು: ಅಕ್ಕಿ – 1 ಕಪ್, ಉಪ್ಪು – ಕಾಲು ಟೀ ಚಮಚ.

ಹೂರಣಕ್ಕೆ: ತೆಂಗಿನಕಾಯಿಯ ಬಿಳಿಯ ಭಾಗ – 1 ಕಪ್, ಬೆಲ್ಲದ ಪುಡಿ – ಅರ್ಧ ಕಪ್, ಏಲಕ್ಕಿಪುಡಿ – ಅರ್ಧ ಟೀ ಚಮಚ.

ತಯಾರಿಸುವ ವಿಧಾನ: ಅಕ್ಕಿಯನ್ನು 1 ಗಂಟೆ ನೆನೆಸಿಡಿ. ನಂತರ ಕಾಲು ಕಪ್ ನೀರು ಮತ್ತು ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಬಾಣಲೆಗೆ ಹಾಕಿ. ಒಂದೂವರೆ ಕಪ್ ನೀರನ್ನು ಸೇರಿಸಿ. ಹಿಟ್ಟು ಗಟ್ಟಿಯಾದ ನಂತರ ಸಣ್ಣ ಉರಿಯಲ್ಲಿ ಐದು ನಿಮಿಷ ಮುಚ್ಚಿಡಿ. ನಂತರ ಮುಚ್ಚಳವನ್ನು ತೆಗೆದು ಒಲೆಯನ್ನು ಆರಿಸಿ. ಕಾಲು ಟೀ ಚಮಚ ತುಪ್ಪವನ್ನು ಹಾಕಿ. ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ.

ತೆಂಗಿನತುರಿಯನ್ನು ಬಾಣಲೆಗೆ ಹಾಕಿ. ಬೆಲ್ಲದ ಪುಡಿಯನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ. ಬೆಲ್ಲ ಕರಗಿ ಒಂದೆಳೆ ಪಾಕ ಬಂದಾಗ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಒಲೆಯನ್ನು ಆರಿಸಿ. ಅಕ್ಕಿಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ. ಕೊನೆಯ ಅಂಚನ್ನು ಒತ್ತುತ್ತಾ ಹೋಗಿ ಬಟ್ಟಲು ಆಕಾರದಲ್ಲಿ ತಯಾರಿಸಿಕೊಳ್ಳಿ. ನಂತರ ಮೂರು ಬೆರಳಿನಿಂದ ಅಂಚಿನ ತುದಿಯನ್ನು ಒತ್ತಿಕೊಳ್ಳಿ. ಮಧ್ಯದಲ್ಲಿ ಹೂರಣವನ್ನು ತುಂಬಿ. ಮೋದಕವನ್ನು ನಿಧಾನ ತಿರುಗಿಸುತ್ತಾ ಗಟ್ಟಿಯಾಗಿ ಮುಚ್ಚಿ. ತಯಾರಿಸಿದ ಮೋದಕವನ್ನು ಹಬೆ ಮಡಿಕೆಯಲ್ಲಿಟ್ಟು 10 ನಿಮಿಷ ಬೇಯಿಸಿ. ಮೋದಕ ನೈವೇದ್ಯಕ್ಕೆ ರೆಡಿ.

ಲೇಖಕಿ: ‘ಮನೆ ಅಡುಗೆ ವಿಥ್‌ ವೇದಾ’ ಯೂಟ್ಯೂಬ್ ಚಾನೆಲ್ ನಿರ್ವಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.