
ಹಪ್ಪಳ ಹಾಕುತ್ತಿರುವ ದಂಪತಿ
ಬೇಸಿಗೆ ಬಂತೆಂದರೆ ಸಾಕು ಮೊದಲು ಗೃಹಿಣಿಯರಿಗೆ ಥಟ್ ಅಂತ ನೆನಪಾಗುವುದೇ ಹಪ್ಪಳ. ಉತ್ತರ ಕರ್ನಾಟಕದ ಭಾಗಗಳಲ್ಲಿ ಹೆಚ್ಚಾಗಿ ಗೃಹಿಣಿಯರು ಬೇಸಿಗೆ ಸಮಯದಲ್ಲಿ ಹಪ್ಪಳವನ್ನು ಮನೆಯಲ್ಲಿ ತಯಾರಿಸುತ್ತಾರೆ. ಈ ಹಪ್ಪಳವನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಟ್ಟು ತಿನ್ನುತ್ತಾರೆ. ಇದು ಬಿಸಿಲಿನಲ್ಲಿ ಒಣಗಿಸಿ ತಯಾರಿಸುವ ಸಾಂಪ್ರದಾಯಿಕ ಆಹಾರ ಪದಾರ್ಥ.
ಉದ್ದಿನಬೇಳೆ, ಅಕ್ಕಿ, ಹಲಸಿನಕಾಯಿ, ಬಾಳೆಕಾಯಿ, ಸಬ್ಬಕ್ಕಿ ಹೀಗೆ ಹಲವಾರು ವಿಧದ ಹಪ್ಪಳಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ಸಬ್ಬಕ್ಕಿ ಹಪ್ಪಳವನ್ನು ಹೆಚ್ಚು ಶ್ರಮವಿಲ್ಲದೆ ಕಡಿಮೆ ಸಮಯದಲ್ಲಿ ಮನೆಯಲ್ಲಿ ಬಹಳ ಸುಲಭವಾಗಿ ತಯಾರಿಸಬಹುದು.
ಬಿಸಿಲಿನಲ್ಲಿ ಒಣಗುತ್ತಿರುವ ಹಪ್ಪಳ
ಸಬ್ಬಕ್ಕಿ ಹಪ್ಪಳ ಮಾಡಲು ಬೇಕಾಗಿರುವ ಸಾಮಾಗ್ರಿಗಳು:
ಸಬ್ಬಕ್ಕಿ, ಒಣ ಮೆಣಸಿನ ಬೀಜ, ಜೀರಿಗೆ, ಕಪ್ಪು ಜೀರಿಗೆ, ಉಪ್ಪು
ಮಾಡುವ ವಿಧಾನ
ಮೊದಲು ಸಬ್ಬಕ್ಕಿಯನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ಉಪ್ಪು ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಅದಕ್ಕೆ ಜೀರಿಗೆ, ಕಪ್ಪು ಜೀರಿಗೆ, ಒಣ ಮೆಣಸಿನ ಬೀಜ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಉರಿ ಬಿಸಿಲಲ್ಲಿ ಒಂದು ಉದ್ದನೆಯ ಬಟ್ಟೆ ಹಾಸಿ, ಅದರ ಮೇಲೆ ಮಿಶ್ರಣವನ್ನು ವೃತ್ತಾಕಾರ ರೂಪಕ್ಕೆ ನೀಡಿ ಒಣಗಿಸಿ. ಅದು ಬಿಸಿಲಿನಲ್ಲಿ ಒಣಗಿದ ನಂತರ ಅದನ್ನು ಎಣ್ಣೆಯಲ್ಲಿ ಹುರಿಯಿರಿ. ಈಗ ಗರಿಗರಿಯಾದ ಸಬ್ಬಕ್ಕಿ ಹಪ್ಪಳ ಊಟದ ಜೊತೆಗೆ ಸವಿಯಲು ಸಿದ್ಧ.
ಗಮನಿಸಿ: ಸಬ್ಬಕ್ಕಿಯನ್ನು ನೀರಿನಲ್ಲಿ ನೆನೆಸಹುದು ಅಥವಾ ಕುದಿಸಿ ಕೂಡ ಮಾಡಬಹುದು.
ಗಮನಿಸಿ: ಸಬ್ಬಕ್ಕಿ ಹಪ್ಪಳವನ್ನು ಡಬ್ಬದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.