
ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ಮಹಾ ಶಿವರಾತ್ರಿ ಫೆಬ್ರುವರಿ 15ರಂದು ಬಂದಿದೆ. ಶಿವರಾತ್ರಿಯ ದಿನ ದೇವಸ್ಥಾನಕ್ಕೆ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಅನೇಕರು ಶಿವರಾತ್ರಿಯ ದಿನದಂದು ಉಪವಾಸ ಇರುತ್ತಾರೆ. ಗೃಹಿಣಿಯರು ಮನೆಯಲ್ಲಿ ಬಗೆ ಬಗೆಯ ಸಿಹಿ ತಿನಿಸುಗಳನ್ನು ಮಾಡುತ್ತಾರೆ.
ಅದರಲ್ಲೂ ಸಾಕಷ್ಟು ಮಂದಿ ಶಿವನ ಧ್ಯಾನ, ಭಜನೆ, ಪಾದಯಾತ್ರೆಗಳನ್ನು ಮಾಡಲು ಮುಂದಾಗುತ್ತಾರೆ. ಮನೆಯಲ್ಲಿರುವ ಮಹಿಳೆಯರು ನೈವೇದ್ಯಕ್ಕೆ ಶ್ರೇಷ್ಠ ಎನಿಸಿಕೊಂಡಿರುವ ತಂಬಿಟ್ಟು, ಗೋಧಿ ತಂಬಿಟ್ಟು, ಶೇಂಗಾ ಉಂಡೆ, ಕಡಲೆಕಾಳು ಉಸುಳಿ, ಹೆಸರುಕಾಳು ಉಸುಳಿಯ ಸಿಹಿತಿಂಡಿಗಳನ್ನು ಮಾಡುತ್ತಾರೆ. ಮನೆಯಲ್ಲೇ ಸುಲಭವಾಗಿ ತಂಬಿಟ್ಟು ಉಂಡೆ ಮಾಡುವುದು ಹೇಗೆ ಎಂದು ತಿಳಿಯೋಣ.
ಬೇಕಾಗಿರುವ ಸಾಮಾಗ್ರಿಗಳು:
ಬೆಲ್ಲ
ಎಳ್ಳು
ಏಲಕ್ಕಿಪುಡಿ
ಶೇಂಗಾ
ಒಣ ತೆಂಗಿನಕಾಯಿ ತುರಿ
ಹುರಿಗಡಲೆ
ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಶೇಂಗಾ, ಹುರಿಗಡಲೆ ಹಾಗೂ ಏಳ್ಳನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಮಿಕ್ಸಿ ಜಾರಿಗೆ ಹುರಿದುಕೊಂಡ ಹುರಿಗಡಲೆ, ಏಲಕ್ಕಿ ಹಾಕಿ ರುಬ್ಬಿಕೊಳ್ಳಿ. ನಂತರ ಶೇಂಗಾವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿ ಮಿಶ್ರಣ ಮಾಡಿಕೊಂಡ ಶೇಂಗಾ, ಹುರಿಗಡಲೆ ಹಾಗೂ ಏಲಕ್ಕಿಗೆ ಏಳ್ಳು ಮತ್ತು ಕೊಬ್ಬರಿ ಪುಡಿಯನ್ನು ಹಾಕಿ. ಮತ್ತೊಂದು ಬಾಣಲೆಯಲ್ಲಿ ಪುಡಿ ಮಾಡಿದ ಬೆಲ್ಲವನ್ನು ಸೇರಿಸಿ. ಬೆಲ್ಲವು ಕರಗಿದ ಬಳಿಕ ಹುರಿಗಡಲೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಆಗ ಸ್ವಲ್ಪ ಬಿಸಿಯಿರುವಾಗಲೇ ಉಂಡೆಗಳನ್ನು ಕಟ್ಟಿಕೊಳ್ಳಿ. ಈಗ ಹುರಿಗಡಲೆ ಉಂಡೆ/ ತಂಬಿಟ್ಟು ಉಂಡೆ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.