ADVERTISEMENT

Recipes & Food| ಅಣಬೆ ತವಾ ಗ್ರಿಲ್, ಗೋಲ್ಡನ್ ಫ್ರೈಡ್ ಬೇಬಿಕಾರ್ನ್

ನಿತ್ಯಾ ಅಶೋಕ್‌
Published 28 ಮೇ 2021, 19:30 IST
Last Updated 28 ಮೇ 2021, 19:30 IST
ನಳಪಾಕ
ನಳಪಾಕ   

ಅಣಬೆ ತವಾ ಗ್ರಿಲ್

ಬೇಕಾಗುವ ಸಾಮಗ್ರಿಗಳು

ಬಟನ್ ಅಣಬೆ - ಕಾಲು ಕೆ.ಜಿ., ಗಟ್ಟಿ ಮೊಸರು – 1 ಬಟ್ಟಲು, ಖಾರದಪುಡಿ – 1 ಚಮಚ, ಸಾಸಿವೆ ಪುಡಿ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – ಅರ್ಧ ಚಮಚ ‌

ADVERTISEMENT

ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ಮೊಸರು, ಖಾರದ ಪುಡಿ, ಉಪ್ಪು, ಮೆಣಸು ಮತ್ತು ಸಾಸಿವೆ ಪುಡಿ ಇವೆಲ್ಲವನ್ನು ಕಲೆಸಿಕೊಳ್ಳಿ. ಇದಕ್ಕೆ ಅಣಬೆಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು 20 ನಿಮಿಷಗಳ ಕಾಲ ಹಾಗೇ ಇಡಿ. ನಂತರ ಅಣಬೆಗಳನ್ನು ಕಾವಲಿಯ ಮೇಲೆ ಇಟ್ಟು, ಅಣಬೆಯಲ್ಲಿರುವ ನೀರಿನ ಅಂಶ ಹೋಗುವ ತನಕ ಕಾಯಿಸಬೇಕು. ಈಗ ಅಣಬೆ ತವಾ ಗ್ರಿಲ್ ಸವಿಯಲು ಸಿದ್ಧ. ಇದು ಸಂಜೆ ವೇಳೆ ತಿನ್ನಲು ಚೆನ್ನಾಗಿರುತ್ತದೆ. ಬಿಸಿಯಾಗಿದ್ದಾಗಲೇ ತಿನ್ನುವುದು ಸೂಕ್ತ.

ಗೋಲ್ಡನ್ ಫ್ರೈಡ್ ಬೇಬಿಕಾರ್ನ್

ಬೇಕಾಗುವ ಸಾಮಗ್ರಿಗಳು

ಎಳೆ ಬೇಬಿಕಾರ್ನ್ – ಕಾಲು ಕೆ.ಜಿ., ಬಿಳಿ ಎಳ್ಳು – 1 ಚಮಚ, ಖಾರದ ಪುಡಿ – 1 ಚಮಚ, ಧನಿಯಾ ಪುಡಿ – ಅರ್ಧ ಚಮಚ, ಜೀರಿಗೆ ಪುಡಿ – ಅರ್ಧ ಚಮಚ, ಹಸಿಮೆಣಸಿನಕಾಯಿ ಪೇಸ್ಟ್ – ಅರ್ಧ ಚಮಚ, ಮೆಣಸಿನ ಪುಡಿ – ಅರ್ಧ ಚಮಚ, ಕಾರ್ನ್ ಫ್ಲೋರ್ – ಒಂದೂವರೆ ಚಮಚ, ಕಡಲೆಹಿಟ್ಟು – 1 ಕಪ್‌, ಅಕ್ಕಿಹಿಟ್ಟು – ಕಾಲು ಕಪ್‌, ಅರಿಸಿನ ಪುಡಿ – 1/4 ಚಮಚ, ಕೊತ್ತಂಬರಿ ಸೊಪ್ಪು – 1 ಚಮಚ (ಸಣ್ಣಗೆ ಹೆಚ್ಚಿದ್ದು), ಕರಿಬೇವು – 1 ಚಮಚ (ಸಣ್ಣಗೆ ಹೆಚ್ಚಿದ್ದು), ಉ‍ಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ಬೇಬಿಕಾರ್ನ್‌, ಉಪ್ಪು, ಕಾರ್ನ್ ಫ್ಲೋರ್‌, ಖಾರದ ಪುಡಿ ಹಾಕಿ ಚೆನ್ನಾಗಿ ಕಲೆಸಿಕೊಂಡು ಪ‍ಕ್ಕಕ್ಕೆ ಇಡಿ. ಮತ್ತೊಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಧನಿಯಾಪುಡಿ, ಹಸಿಮೆಣಸಿನಕಾಯಿ ಪೇಸ್ಟ್‌, ಖಾರದ ಪುಡಿ, ಬಿಳಿಎಳ್ಳು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, ಅರಿಸಿನ ಪುಡಿ ಎಲ್ಲವನ್ನೂ ಸೇರಿಸಿ ಬಜ್ಜಿ ಹಿಟ್ಟಿನಂತೆ ತಯಾರಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಒಂದೊಂದೇ ಬೇಬಿ ಕಾರ್ನ್‌ಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಬಣ್ಣ ಬದಲಾಗುವವರೆಗೂ ಸಣ್ಣ ಉರಿಯಲ್ಲಿ ಕರಿಯಿರಿ. ಈಗ ನಿಮ್ಮ ಮುಂದೆ ಬಿಸಿ ಬಿಸಿ ಫ್ರೈಡ್ ಬೇಬಿಕಾರ್ನ್ ತಿನ್ನಲು ಸಿದ್ಧ.

***

ಚೀಸ್ ಸ್ಟಫ್ಡ್ ಮಶ್ರೂಮ್

ಬೇಕಾಗುವ ಸಾಮಗ್ರಿಗಳು: ಅಣಬೆ – ಕಾಲು ಕೆ.ಜಿ., ಈರುಳ್ಳಿ – 1 ಬಟ್ಟಲು (ಸಣ್ಣಗೆ ಹೆಚ್ಚಿದ್ದು), ಶುಂಠಿ – 1 ಚಮಚ (ಸಣ್ಣಗೆ ಹೆಚ್ಚಿದ್ದು), ಬೆಳ್ಳುಳ್ಳಿ – 1 ಚಮಚ ಸಣ್ಣಗೆ ಹೆಚ್ಚಿದ್ದು, ಬೆಳ್ಳುಳ್ಳಿ – 1 ಚಮಚ ಸಣ್ಣಗೆ ಹೆಚ್ಚಿದ್ದು, ಹಸಿಮೆಣಸಿನ ಕಾಯಿ – 1 ಚಮಚ (ಹೆಚ್ಚಿದ್ದು), ಟೊಮೆಟೊ – 1 ಕಪ್‌ (ಹೆಚ್ಚಿದ್ದು), ಅಣಬೆ ಕಾಂಡ – ಸಣ್ಣಗೆ ಹೆಚ್ಚಿದ್ದು, ದೊಣ್ಣೆ ಮೆಣಸಿನ ಕಾಯಿ – ಅರ್ಧ ಕಪ್ ಸಣ್ಣಗೆ ಹೆಚ್ಚಿದ್ದು, ಜೀರಿಗೆ ಪುಡಿ – 1/4 ಚಮಚ, ಅರಿಸಿನ ಪುಡಿ – 1/4 ಚಮಚ, ಚೀಸ್‌ – 1 ಬಟ್ಟಲು, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

ಒಂದು ಬಾಣಲೆಯಲ್ಲಿ ಬೆಣ್ಣೆಯ ಜೊತೆಗೆ ಎಣ್ಣೆಯನ್ನು ಹಾಕಿ ಅದರಲ್ಲಿ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ 30 ಸೆಕೆಂಡ್‌ಗಳ ಕಾಲ ಬಾಡಿಸಿಕೊಳ್ಳಬೇಕು. ನಂತರ ಅದರಲ್ಲಿ ಸಣ್ಣಗೆ ಹೆಚ್ಚಿರುವ ಈರುಳ್ಳಿ, ಟೊಮೆಟೊ, ದೊಣ್ಣೆ ಮೆಣಸಿನ ಕಾಯಿ, ಅಣಬೆಯ ಕಾಂಡಗಳನ್ನು ಹಾಕಿ 2 ನಿಮಿಷಗಳ ಕಾಲ ಬಾಡಿಸಿಕೊಳ್ಳಬೇಕು. ಅದಾದ ನಂತರ ಅರಿಸಿನ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೆರೆಸಿಕೊಳ್ಳಬೇಕು. ಈಗ ಗ್ಯಾಸ್‌ ಆರಿಸಿ. ಕಾಲು ಭಾಗ ತುರಿದಿರುವ ಚೀಸ್‌ ಹಾಕಿ ಬೆರೆಸಿಕೊಳ್ಳಬೇಕು. ಈ ಮಿಶ್ರಣವನ್ನು ಅಣಬೆಯ ಒಳ ಭಾಗದಲ್ಲಿ ತುಂಬಿಸಿ ಅದರ ಮೇಲೆ ಚೀಸ್‌ ಹಾಕಿ ತವಾದ ಮೇಲೆ ಅಣಬೆ ಬೇಯುವ ತನಕ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಹುರಿದ ಮೇಲೆ ಈ ಚೀಸ್ ಸ್ಟಫ್ಡ್ ಮಶ್ರೂಮ್ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.