ADVERTISEMENT

Sankranti Recipes: ಅಡುಗೆ ಕೋಣೆಯಲ್ಲಿ Some ಕ್ರಾಂತಿ!

ಸುಮಾ ಬಿ.
Published 9 ಜನವರಿ 2026, 22:30 IST
Last Updated 9 ಜನವರಿ 2026, 22:30 IST
<div class="paragraphs"><p><strong>ಉಂದಿಯು</strong></p></div>

ಉಂದಿಯು

   

ಧನುರ್ಮಾಸ ಮುಗಿಯುತ್ತಿದ್ದಂತೆಯೇ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಕ್ರಮಿಸುತ್ತಾನೆ. ಈ ಕ್ರಮಿಸುವ ಆರಂಭದ ಹಾದಿಯಲ್ಲಿ ‘ಸಂಕ್ರಾಂತಿ’ ಹಬ್ಬ ಕಳೆಗಟ್ಟುತ್ತದೆ. ವರ್ಷಪೂರ್ತಿ ಎಲ್ಲ ಹಬ್ಬಗಳ ದ್ವಾರದಂತಿರುವ ಸಂಕ್ರಾಂತಿ, ಆಹಾರ ವೈವಿಧ್ಯಕ್ಕೂ ಹೆಬ್ಬಾಗಿಲು. ಮಾಗಿ ಚಳಿಯ ಈ ಸಮಯದಲ್ಲಿ ದೇಹವನ್ನು ಬೆಚ್ಚಗಿಡುವ ಖಾದ್ಯಗಳಿಗೇ ಆದ್ಯತೆ.

ರೈತ ಬಿತ್ತಿದ ಬೀಜ ಫಲ ಕೊಡುವ ಸಮಯವೂ ಸುಗ್ಗಿಯ ಹಿಗ್ಗೂ ಕಟಾವು ಮಾಡಿದ ಪೈರನ್ನು ಸಂಸ್ಕರಿಸಿ, ಖಾದ್ಯ ತಯಾರಿಸಿ ಸೂರ್ಯನಿಗೆ ನೈವೇದ್ಯ ಅರ್ಪಿಸುವ ಭಕ್ತಿಯೂ ಇಲ್ಲಿ ಸಮ್ಮಿಳಿತಗೊಳ್ಳುತ್ತವೆ. ಎಳ್ಳು, ಬೆಲ್ಲ, ಕಬ್ಬು, ಹೆಸರುಕಾಳು, ಅವರೆಕಾಳು, ಹೊಸ ಅಕ್ಕಿಯಿಂದ ತಯಾರಿಸಿದ ಸಿಹಿ ಮತ್ತು ಖಾರದ ಖಾದ್ಯಗಳೇ ಪ್ರಾಧಾನ್ಯ. ದೇಹಕ್ಕೆ ಉಷ್ಣಕಾರಕ ಹಾಗೂ ಶಕ್ತಿ ವೃದ್ಧಿಸುವ ಈ ಖಾದ್ಯಗಳು ಚಳಿಗಾಲಕ್ಕೆ ಪೂರಕ. ವೈವಿಧ್ಯದ ಭಾರತದಲ್ಲಿ ವೈವಿಧ್ಯಮಯ ಆಹಾರ, ಆಚರಣೆಗೆ ಒತ್ತು. ಬರುವ ಸಂಕ್ರಾಂತಿ ಹಬ್ಬಕ್ಕೆ ನಮ್ಮ ಪೊಂಗಲ್‌ ಜೊತೆಗೆ ಸವಿಯಲು ವಿವಿಧ ರಾಜ್ಯಗಳ ಈ ಖಾದ್ಯಗಳನ್ನೂ ನೀವು ಟ್ರೈ ಮಾಡಬಹುದು.

ADVERTISEMENT

ತಿಲ್‌ ಪೀತ

ಅಸ್ಸಾಂನ ಸಾಂಪ್ರದಾಯಿಕ ಸಿಹಿ ಖಾದ್ಯವಿದು. ಅಲ್ಲಿನ ಸುಗ್ಗಿ ಹಬ್ಬವಾದ ‘ಬೊಹಾಗ್‌ ಬಿಹು’ ಸಮಯದಲ್ಲಿ ಇದನ್ನು ತಯಾರಿಸುತ್ತಾರೆ. ಅಕ್ಕಿಹಿಟ್ಟು, ಎಳ್ಳು, ಬೆಲ್ಲದಿಂದ ತಯಾರಿಸುವ ವಿಶಿಷ್ಟ ಖಾದ್ಯ.

ಏನೇನು ಬೇಕು? ಅಕ್ಕಿ ಎರಡು ಕಪ್‌, ಎಳ್ಳು ಒಂದು ಕಪ್‌, ಬೆಲ್ಲ ರುಚಿಗೆ ಅಗತ್ಯವಿದ್ದಷ್ಟು.

ಹೀಗೆ ಮಾಡಿ: ಅಕ್ಕಿಯನ್ನು ನೀರಿನಲ್ಲಿ ತೊಳೆದು ಸ್ವಲ್ಪ ಹೊತ್ತು ನೆನೆಸಿ, ಬಳಿಕ ಒಣ ಬಟ್ಟೆ ಮೇಲೆ ಆರಲು ಬಿಡಬೇಕು (ಸ್ವಲ್ಪ ಆರಿದರೆ ಸಾಕು). ಬಳಿಕ ಅದನ್ನು ಸಣ್ಣಗೆ ರುಬ್ಬಿಕೊಂಡು ಜರಡಿ ಹಿಡಿದಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಎಳ್ಳನ್ನು ಹುರಿದು, ಬೆಲ್ಲ ಸೇರಿಸಿ ತರಿತರಿಯಾಗಿ ರುಬ್ಬಿಕೊಂಡು ಹುಡಿಹುಡಿಯಾದ ಹೂರಣ ತಯಾರಿಸಿಕೊಳ್ಳಬೇಕು.

ಬಳಿಕ ಬಿಸಿ ತವಾ ಮೇಲೆ ಸಾಣಿಸಿ ಇಟ್ಟಿದ್ದ ಅಕ್ಕಿಹಿಟ್ಟನ್ನು ತೆಳ್ಳಗೆ ಸಿಲಿಂಡರ್‌ ಆಕಾರದಲ್ಲಿ ಹರಡಬೇಕು (ಹೀಗೆ ಮಾಡಲು ಚಹಾ ಸೋಸುವ ಜಾಲರಿಯ ಸಹಾಯ ಪಡೆಯಬಹುದು. ಜಾಲರಿಯಲ್ಲಿ ಹಿಟ್ಟು ಹಾಕಿ ತವಾ ಮೇಲೆ ಮೆಲ್ಲಗೆ ಸಿಲಿಂಡರ್‌ ಆಕಾರದಲ್ಲಿ ಹಿಟ್ಟನ್ನು ಉದುರಿಸಬೇಕು). ಅದರ ಮೇಲೆ ಎಳ್ಳು, ಬೆಲ್ಲದ ಮಿಶ್ರಣವನ್ನು ಉದ್ದಕ್ಕೂ ಇಟ್ಟು ಅಕ್ಕಿಹಿಟ್ಟಿನ ಅಂಚನ್ನು ಸುರುಳಿಯಾಗಿ ಸುತ್ತಬೇಕು– ಅಕ್ಕಿಹಿಟ್ಟು ಹಸಿಯಾಗಿ ಇರುವುದರಿಂದ ಸುರುಳಿ ಸುತ್ತಲು ಸಾಧ್ಯವಾಗುತ್ತದೆ– ಬಳಿಕ ತವಾಮೇಲೆ ಮೂರ್ನಾಲ್ಕು ನಿಮಿಷ ಹೊರಳಾಡಿಸಿ ತೆಗೆಯಬೇಕು.

ಹೊರಗಿನಿಂದ ಗರಿಗರಿಯಾಗಿ, ಒಳಭಾಗದಲ್ಲಿ ಸಿಹಿ ರುಚಿ ನೀಡುವ ತಿಲ್‌ ಪೀತಾ ಮಕ್ಕಳಿಗಂತೂ ಅತ್ಯಾಪ್ತವಾಗುತ್ತದೆ. ಎಳ್ಳು, ಬೆಲ್ಲದ ಜಾಗದಲ್ಲಿ ಬೇರೆ ಬೇರೆ ಹೂರಣಗಳನ್ನೂ ಇಟ್ಟು ಪ್ರಯೋಗಕ್ಕೆ ಇಳಿಯಬಹುದು.

ತಿಲ್‌ ಪೀತ


ಪಂಜಾಬಿ ಪಂಜಿರಿ

ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಗಳಲ್ಲೊಂದು. ಗೋಧಿಹಿಟ್ಟು, ತುಪ್ಪ, ಬೆಲ್ಲ, ಒಣಹಣ್ಣುಗಳನ್ನು ಬೆರೆಸಿ ಮಾಡುವ ಇದು, ಚಳಿಗಾಲದಲ್ಲಿ ಪರಿಪೂರ್ಣ ಪೌಷ್ಟಿಕಾಂಶ ನೀಡುವ ಖಾದ್ಯ. ಮನೆಯಲ್ಲಿ ಬಾಣಂತಿ ಇದ್ದಾಗ ಹಾಗೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಈ ಖಾದ್ಯದ ಹಾಜರಿ ಇದ್ದೇ ಇರುತ್ತದೆ.

ಏನೇನು ಬೇಕು? ಗೋಧಿಹಿಟ್ಟು, ತುಪ್ಪ, ಬೆಲ್ಲ, ಒಣಹಣ್ಣುಗಳು (ಬಾದಾಮಿ,  ಗೋಡಂಬಿ,  ಪಿಸ್ತಾ,  ಮಖಾನ್‌,  ಆಕ್ರೂಟ್‌,  ಕಲ್ಲಂಗಡಿ ಬೀಜ– ಎಲ್ಲವೂ ಸಮ ಪ್ರಮಾಣ), ಅಂಟು ಎರಡು ಕಪ್‌, ಒಂದು ಬಟ್ಟಲು ಒಣಕೊಬ್ಬರಿ, ಒಣಶುಂಠಿ ಪುಡಿ, ಗಸಗಸೆ, ಒಣದ್ರಾಕ್ಷಿ.

ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ ಅಂಟನ್ನು ಹರಳು ಬರುವ ಹಾಗೆ ಹುರಿದು ತೆಗೆದಿಟ್ಟುಕೊಳ್ಳಬೇಕು. ಬಳಿಕ ಈ ಅಂಟಿನ ಜೊತೆಗೆ ಎಲ್ಲ ಒಣಹಣ್ಣುಗಳು ಹಾಗೂ ಕೊಬ್ಬರಿತುರಿಯನ್ನು ತುಪ್ಪ ಹಾಕಿ ಹುರಿದುಕೊಳ್ಳಬೇಕು. ಇವು ತಣಿದಾದ ಬಳಿಕ ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.

ಬಳಿಕ ಒಂದು ಪಾತ್ರೆಯಲ್ಲಿ ತುಪ್ಪ, ಗೋಧಿಹಿಟ್ಟು ಹಾಕಿ ಹುರಿದುಕೊಳ್ಳಬೇಕು. ಅದಕ್ಕೆ ಗಸಗಸೆ, ಒಣದ್ರಾಕ್ಷಿ ಹಾಕಿ ಮಿಕ್ಸ್‌ ಮಾಡಿಕೊಂಡು, ತರಿತರಿಯಾಗಿ ರುಬ್ಬಿಕೊಂಡ ಒಣಹಣ್ಣುಗಳ ಮಿಶ್ರಣ, ಶುಂಠಿ ಪುಡಿ, ಬೆಲ್ಲ ಹಾಕಿ ಬಿಸಿ ಮಾಡಬೇಕು. ಕಾಲು ಭಾಗದಷ್ಟು ಹುರಿದ ಒಣಹಣ್ಣುಗಳನ್ನು ತೆಗೆದಿಟ್ಟುಕೊಂಡು ಕೊನೆಯಲ್ಲಿ ಬೆರೆಸಬೇಕು. ಪೌಷ್ಟಿಕಾಂಶಯುಕ್ತ ಪಂಜಿರಿ ಸವಿಯಲು ಸಿದ್ಧ.

ಇದನ್ನು ಹುಡಿಹುಡಿಯಾಗೂ ಸವಿಯಬಹುದು ಅಥವಾ ಉಂಡೆಯನ್ನೂ ಕಟ್ಟಿಡಬಹುದು. ಗೋಧಿಹಿಟ್ಟಿನ ಬದಲು ಹೆಸರುಬೇಳೆ ಹಿಟ್ಟನ್ನೂ ಹಾಕಬಹುದು. ಮಸಾಲೆ ಪದಾರ್ಥ ಇಷ್ಟಪಡುವವರು, ಸ್ವಲ್ಪ ಪ್ರಮಾಣದಲ್ಲಿ ಚಕ್ಕೆ, ಲವಂಗವನ್ನು ಬೆರೆಸಿಕೊಳ್ಳಬಹುದು.

ಪಂಜಾಬಿ ಪಂಜಿರಿ


ಉಂದಿಯು

ಗುಜರಾತ್‌ನ ಸಾಂಪ್ರದಾಯಿಕ ಖಾರದ ಖಾದ್ಯ ಇದು. ಚಳಿಗಾಲದಲ್ಲಿ ಲಭ್ಯವಿರುವ ಬಹುವಿಧದ ತರಕಾರಿಗಳನ್ನು ಬಳಸಿ ಮಾಡುತ್ತಾರೆ. ಸಂಕ್ರಾಂತಿ ಹಬ್ಬದಲ್ಲಿ ಎಲ್ಲ ಗುಜರಾತೀಯರ ಮನೆಗಳಲ್ಲೂ ಇದರ ಹಾಜರಿ ಇರುತ್ತದೆ. ಕಡಲೆಹಿಟ್ಟು, ಮೆಂತ್ಯ ಸೊಪ್ಪಿನಿಂದ ತಯಾರಿಸುವ ‘ಮುಠಿಯಾ’ ಪ್ರಮುಖ ಪಾತ್ರಧಾರಿ. ಇದನ್ನು ಪೌಷ್ಟಿಕಾಂಶಯುಕ್ತ ಪಲ್ಯ ಎಂದೇ ಹೇಳಬಹುದು. ಹೆಚ್ಚು ಪದಾರ್ಥಗಳನ್ನು ಬಳಸುವ ಈ ಖಾದ್ಯ ಅಷ್ಟೇ ಸಮಯವನ್ನೂ ಬೇಡುತ್ತದೆ.

ಬೇಕಾಗುವ ತರಕಾರಿ: ಸಿಹಿಗೆಣಸು, ಮರಗೆಣಸು, ಆಲೂಗೆಡ್ಡೆ, ಬದನೆಕಾಯಿ, ಬಾಳೆಕಾಯಿ, ಚಪ್ಪರದ ಅವರೆಕಾಯಿ, ಹಸಿ ಬಟಾಣಿ ಇವು ಪ್ರಮುಖ. ಇನ್ನಷ್ಟು ತರಕಾರಿ ಬೇಕಿದ್ದರೆ ಬಳಸಬಹುದು.

‘ಮುಠಿಯಾ’ವನ್ನು ಹೀಗೆ ತಯಾರಿಸಿ: ಸಣ್ಣಗೆ ಕತ್ತರಿಸಿದ ಮೆಂತ್ಯ ಸೊಪ್ಪು, ಕಡಲೆಹಿಟ್ಟು, ಗೋಧಿಹಿಟ್ಟು, ಉಪ್ಪು, ಅಜ್ವಾನ, ಖಾರದ ಪುಡಿ, ಜೀರಿಗೆ ಪುಡಿ, ಅರಸಿನ, ಸಕ್ಕರೆ, ಎಣ್ಣೆ, ಅಡುಗೆ ಸೋಡಾ ಸೇರಿಸಿ ಗಟ್ಟಿಯಾಗಿ ಕಲೆಸಿ, ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಬೇಕು.

ಬಳಿಕ ಮಸಾಲೆಗೆ ತೆಂಗಿನತುರಿ, ಕಡಲೆಬೀಜ, ಎಳ್ಳು, ಕೊತ್ತಂಬರಿ ಪುಡಿ, ಶುಂಠಿ, ಬೆಳ್ಳುಳ್ಳಿಯನ್ನು ಹಾಕಿ ತರಿತರಿಯಾಗಿ ರುಬ್ಬಿ ಪೇಸ್ಟ್‌ ಮಾಡಿ. ಇದಕ್ಕೆ ಅರಸಿನ, ಖಾರದ ಪುಡಿ, ಗರಂ ಮಸಾಲ, ಉಪ್ಪು, ಸಕ್ಕರೆ, ಎಣ್ಣೆ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಬಳಿಕ ಮೇಲೆ ಹೇಳಿದ ತರಕಾರಿಗಳನ್ನು ಮಧ್ಯಮ ಗಾತ್ರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಫ್ರೈ ಮಾಡಿಟ್ಟುಕೊಳ್ಳಬೇಕು (ಬದನೆಕಾಯಿಯನ್ನು ಎಣ್ಣೆಗಾಯಿ ರೀತಿ ಕತ್ತರಿಸಬೇಕು).

ಉಂದಿಯು

ಹೀಗೆ ಮಾಡಿ: ದಪ್ಪ ತಳ ಇರುವ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಕರಿಬೇವು, ಫ್ರೈ ಮಾಡಿದ ತರಕಾರಿ, ಮುಠಿಯಾ ಹಾಗೂ ಮೊದಲೇ ತಯಾರಿಸಿ ಇಟ್ಟುಕೊಂಡಿದ್ದ ಮಸಾಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ 10ರಿಂದ 15 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಬೇಕು.

ಬಿಸಿಬಿಸಿಯಾದ ಉಂದಿಯುವನ್ನು ಪೂರಿ ಅಥವಾ ಚಪಾತಿ ಜೊತೆ ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.