ADVERTISEMENT

ಮಾವಿನ ಸೀಸನ್‌ನಲ್ಲಿ ಸೂಪರ್ ಅಡುಗೆ

ಸಹನಾ ಕಾಂತಬೈಲು
Published 3 ಮೇ 2019, 19:30 IST
Last Updated 3 ಮೇ 2019, 19:30 IST
   

ಮಾವಿನ ಹಣ್ಣಿನ ಸಾರು

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು – 3, ಅರಸಿನಪುಡಿ – ಚಿಟಿಕೆ, ಇಂಗು – ಕಡಲೆ ಗಾತ್ರ, ಕೊತ್ತಂಬರಿ-ಜೀರಿಗೆ ಪುಡಿ – 1/2 ಚಮಚ, ಸೀಳಿದ ಹಸಿಮೆಣಸು – 3, ಉಪ್ಪು – ರುಚಿಗೆ ತಕ್ಕಷ್ಟು, ಬೆಲ್ಲ – ರುಚಿಗೆ.

ಒಗ್ಗರಣೆಗೆ: ಸಾಸಿವೆ – 1 ಚಮಚ, ಎಣ್ಣೆ – 1 ಚಮಚ, ಬೆಳ್ಳುಳ್ಳಿ – 4 ಎಸಳು, ಒಣಮೆಣಸು – 1, ಕರಿಬೇವು – 2 ಎಸಳು.
ತಯಾರಿಸುವ ವಿಧಾನ: ಮಾವಿನ ಹಣ್ಣನ್ನು ಹೋಳು ಮಾಡಿ ಗೊರಟು ಸಹಿತ 4 ಕಪ್ ನೀರಿನಲ್ಲಿ ಅರಸಿನ ಪುಡಿ, ಕೊತ್ತಂಬರಿ-ಜೀರಿಗೆ ಪುಡಿ, ಉಪ್ಪು, ಬೆಲ್ಲ, ಇಂಗು, ಹಸಿಮೆಣಸು ಹಾಕಿ ಬೇಯಿಸಿ. ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ತಿನ್ನಲು ರುಚಿ.

ADVERTISEMENT

ಮಾವಿನಹಣ್ಣಿನ ರಸಾಯನ

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿದ ಮಾವಿನ ಹಣ್ಣಿನ ಹೋಳುಗಳು – 2 ಕಪ್, ಬೆಲ್ಲದ ಪುಡಿ – 6 ಚಮಚ, ಸಕ್ಕರೆ – 6 ಚಮಚ, ತೆಂಗಿನ ಹಾಲು – 2 ಕಪ್, ಎಳ್ಳು – 2 ಚಮಚ.

ತಯಾರಿಸುವ ವಿಧಾನ: ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು ಹಾಗೆಯೇ ಕುಡಿಯಬಹುದು. ಇಲ್ಲವೇ ಇಡ್ಲಿ, ಉದ್ದಿನ ದೋಸೆ, ಒತ್ತು ಶ್ಯಾವಿಗೆ ಜೊತೆ ಸೇರಿಸಿ ತಿನ್ನಲೂ ಬಹಳ ಚೆನ್ನಾಗಿರುತ್ತದೆ.

ಮಾವಿನಕಾಯಿ ಶರಬತ್

ಬೇಕಾಗುವ ಸಾಮಗ್ರಿಗಳು: ಬಲಿತ ಮಾವಿನಕಾಯಿ – 1, ನೀರು – 3 ಕಪ್, ಸಕ್ಕರೆ – ಸಿಹಿಗೆ ತಕ್ಕಷ್ಟು, ಉಪ್ಪು – ಚಿಟಿಕೆ, ಜೀರಿಗೆ ಪುಡಿ – 1/4 ಚಮಚ.

ತಯಾರಿಸುವ ವಿಧಾನ: ಮಾವಿನಕಾಯಿ ಬೇಯಿಸಿ, ಗೊರಟಿನಿಂದ ಬೇರ್ಪಡಿಸಿ. ಮಿಕ್ಸಿಗೆ ಹಾಕಿ ತಿರುವಿ ತೆಗೆಯಿರಿ. ನೀರು, ಚಿಟಿಕೆ ಉಪ್ಪು, ಜೀರಿಗೆ ಪುಡಿ, ಸಿಹಿಗೆ ಬೇಕಷ್ಟು ಸಕ್ಕರೆ ಹಾಕಿ ಕಲಕಿ ಕುಡಿಯಿರಿ. ಈ ಶರಬತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಆಯಾಸ ಪರಿಹರಿಸುತ್ತದೆ.

ಮಾವಿನ ಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣಿನ ರಸ – 4 ಕಪ್, ಸಕ್ಕರೆ – 3 ಕಪ್, ತೆಂಗಿನಕಾಯಿ ತುರಿ – 1 ಕಪ್, ಸಣ್ಣ ರವೆ – 3/4 ಕಪ್, ತುಪ್ಪ – 2 ಕಪ್, ಏಲಕ್ಕಿ – 1/2 ಚಮಚ.

ತಯಾರಿಸುವ ವಿಧಾನ: ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ತಿರುಳನ್ನು ಕಿವುಚಿ ಇಡಿ. ರವೆಯನ್ನು 4 ಚಮಚ ತುಪ್ಪ ಹಾಕಿ ನಸು ಕಂದು ಬಣ್ಣವಾಗುವ ತನಕ ಹುರಿಯಿರಿ. ತೆಂಗಿನತುರಿಯನ್ನು ಚೂರು ನೀರು ಹಾಕಿ ನುಣ್ಣಗೆ ರುಬ್ಬಿ. ಮಾವಿನ ರಸಕ್ಕೆ ಸಕ್ಕರೆ ಹಾಕಿ ಬಾಣಲೆಯಲ್ಲಿ ಕುದಿಸಿ ನೂಲು ಪಾಕ ಬಂದಾಗ ರುಬ್ಬಿದ ತೆಂಗಿನಕಾಯಿ ಮತ್ತು ಹುರಿದಿಟ್ಟ ರವೆ ಹಾಕಿ ಸೌಟಿನಿಂದ ಚೆನ್ನಾಗಿ ಮಗುಚಿ. ಆಗಾಗ ತುಪ್ಪ ಹಾಕಿ. ತಳ ಬಿಟ್ಟು ಪಾಕ ಒಂದೇ ಮುದ್ದೆಯಾದಾಗ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಗುಚಿ ತುಪ್ಪ ಸವರಿದ ತಟ್ಟೆಗೆ ಹರಡಿ ನಸು ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ತುಂಡು ಮಾಡಿ.

ಮಾವಿನಹಣ್ಣಿನ ಸಾಸಿವೆ

ಬೇಕಾಗುವ ಸಾಮಗ್ರಿಗಳು: ಕಾಡು ಮಾವಿನಹಣ್ಣು – 8, ಬೆಲ್ಲ – ನಿಂಬೆ ಗಾತ್ರ, ತೆಂಗಿನತುರಿ – 1 ಕಪ್, ಒಣಮೆಣಸು – 1, ಉಪ್ಪು – ರುಚಿಗೆ, ಸಾಸಿವೆ – 1 ಚಮಚ.

ತಯಾರಿಸುವ ವಿಧಾನ: ಕಾಡು ಮಾವಿನಹಣ್ಣನ್ನು ತೊಟ್ಟು ತೆಗೆದು ತೊಳೆದು ಕಿವುಚಿ ಸಿಪ್ಪೆಯನ್ನು ಸ್ವಲ್ಪ ನೀರು ಹಾಕಿ ಕಿವುಚಿ ಹಿಂಡಿ ತೆಗೆದು ಬೆಲ್ಲ ಹಾಕಿಡಿ. ತೆಂಗಿನತುರಿಗೆ ಒಣಮೆಣಸು, ಸಾಸಿವೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿ ಕಿವುಚಿಟ್ಟ ಮಾವಿನ ಹಣ್ಣಿಗೆ ಬೆರೆಸಿ. ಇದು ಹೆಚ್ಚು ನೀರಾಗಬಾರದು. ಸ್ವಲ್ಪ ಹೆಚ್ಚೇ ಊಟ ಹೊಟ್ಟೆಗೆ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.