ADVERTISEMENT

 ಚುಮು ಚುಮು ಚಳಿಯೋಡಿಸಲು ಬಿಸಿ  ಬಿಸಿ ಕಷಾಯ!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 6:45 IST
Last Updated 21 ಡಿಸೆಂಬರ್ 2019, 6:45 IST
   

ಬೆಳಿಗ್ಗೆಯೋ ಸಂಜೆಯೋ ಮನೆಯಿಂದಾಚೆ ಹೋದರೆ ಸಾಕು ಮೈಸೂರಿನಲ್ಲಿ ಎದುರಾಗುವ ಮೊದಲ ಪ್ರಶ್ನೆ ಆಯ್ತಾ ಕಾಫಿ? ಎಂಬುದೇ. ಆದರೆ ಪದೇ ಪದೇ ಕಾಫಿ ಕುಡಿದರೆ ಹೆಚ್ಚಿನವರಿಗೆ ಉಷ್ಣತೆ ಹೆಚ್ಚಾಗಿ ನಾಲಿಗೆಯಲ್ಲಿ ಹುಣ್ಣಾಗುವುದು, ಮಲಬದ್ಧತೆಯಾಗುವುದು. ಕಾಫಿ ಸೇವಿಸುವ ಬದಲು ಅಥವಾ ಕಾಫಿ ಸೇವನೆಯನ್ನು ಮಿತಗೊಳಿಸಲು ಆರೋಗ್ಯಕ್ಕೆ ಹಿತಕರವಾದ ಕಷಾಯ ಕುಡಿಯುವುದನ್ನು ರೂಢಿಸಿಕೊಳ್ಳುವುದು ಒಳಿತು. (ಇನ್ನು ಕೆಲವರು ಕಾಫಿಯ ಬದಲು ಚಹಾ ಪ್ರೀತಿಯವರೂ ಇದ್ದಾರೆನ್ನಿ. ಚಹಾ ಕುಡಿಯುವವರೂ ಪಿತ್ತ ಹೆಚ್ಚಾಗಿ ತಲೆನೊವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರೂ ಕಷಾಯಕ್ಕೆ ಶಿಫ್ಟ್‌ ಆಗುವುದು ಒಳ್ಳೆಯದು.) ವರುಷದ ಕೂಸಿನಿಂದ ಮುಪ್ಪಿನ ಮುದುಕರವರೆಗೆ ಎಲ್ಲರೂ ದಿನದ ಯಾವುದೇ ಸಮಯದಲ್ಲಿ ಕಷಾಯ ಕುಡಿಯಬಹುದು.

ಕೊತ್ತಂಬರಿ ಕಷಾಯ ಪುಡಿ

ಏನೇನು ಎಷ್ಟೆಷ್ಟು?: ‌ಕೊತ್ತಂಬರಿ ಬೀಜ ಎರಡು ಬಟ್ಟಲು, ಜೀರಿಗೆ ಅರ್ಧ ಬಟ್ಟಲು, ಬಡೇಸೊಪ್ಪು ಎರಡು ಚಮಚ, ಒಂದು ಚಮಚ ಕಾಳು ಮೆಣಸು, ಎರಡು ಲವಂಗ, ಒಂದು ಚಮಚ ಒಣ ಶುಂಠಿಪುಡಿ, ಒಂದು ಚಮಚ ಜೇಷ್ಠಮಧುವಿನ ಪುಡಿ. ಒಂದು ಚಮಚ ಸಕ್ಕರೆ ಅಥವಾ ಬೆಲ್ಲ.

ADVERTISEMENT

ಮಾಡುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಬಡೇಸೊಪ್ಪು, ಕಾಳುಮೆಣಸು, ಲವಂಗವನ್ನು ಕ್ರಮವಾಗಿ ಹಾಕುತ್ತಾ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಬೇಕು. ಆರಿದ ಮೇಲೆ ನುಣ್ಣಗೆ ಪುಡಿ ಮಾಡಬೇಕು. ಅದಕ್ಕೆ ಶುಂಠಿಪುಡಿ ಜೇಷ್ಠ ಮಧುವಿನ ಪುಡಿಯನ್ನು ಬೆರೆಸಿ ಗಾಳಿ ಆಡದ ಡಬ್ಬಿಯಲ್ಲಿ ತುಂಬಿಡಿ. ಈ ಕಷಾಯದ ಪುಡಿ ಒಂದು ತಿಂಗಳಿನವರೆಗಿಟ್ಟು ಬಳಸಬಹುದು. ಒಂದು ಕಪ್ ನೀರಿಗೆ ಕಾಲು ಚಮಚ ಕಷಾಯ ಪುಡಿ, ಒಂದು ಚಮಚ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುದಿಸಿ ಐದಾರು ಚಮಚದಷ್ಟು ಹಾಲು ಸೇರಿಸಿ ಕುಡಿಯಬಹುದು. ದಿನಕ್ಕೊಮ್ಮೆ ಈ ಬಗೆಯ ಕಷಾಯ ಕುಡಿಯುವುದು ನೆಗಡಿ, ಕೆಮ್ಮ, ಅಜೀರ್ಣದ ತೊಂದರೆ ಬಾರದಂತೆ ರಕ್ಷಿಸಿಕೊಳ್ಳುವ ವಿಧಾನವೂ ಹೌದು. ಉಷ್ಣ ಪ್ರವೃತ್ತಿಯವರಾದರೆ ಕಾಳುಮೆಣಸು, ಶುಂಠಿ ಪುಡಿಯನ್ನು ಕಡಿಮೆ ಹಾಕಬೇಕು.

ಮೆಂತ್ಯದ ಕಷಾಯ

ಏನೇನು ಎಷ್ಟೆಷ್ಟು?: ನೂರು ಗ್ರಾಂ ಮೆಂತ್ಯ, ಐದು ಚಮಚ ಹಾಲು, ಎರಡು ಚಮಚ ಬೆಲ್ಲ. ಒಂದು ಕಪ್ ನೀರು.

ಮಾಡುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ಮೆಂತ್ಯವನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದು ಆರಿದ ಮೇಲೆ ಪುಡಿ ಮಾಡಿಟ್ಟು ಕೊಳ್ಳಬೇಕು. (ಒಂದು ತಿಂಗಳವರೆಗೂ ಬಳಸಬಹುದು) ಬೆಲ್ಲ ಸೇರಿಸಿದ ನೀರನ್ನು ಕುದಿಸಲು ಇಡಬೇಕು. ಕಾಲು ಚಮಚ ಪುಡಿಯನ್ನು ಸೇರಿಸಿ ಕುದಿಸಿ ಸೋಸಿ ಹಾಲು ಬೆರೆಸಬೇಕು. ರುಚಿಯಲ್ಲಿ ಕೊಂಚ ಕಹಿ ಎನಿಸುವುದಾದರೂ ಇದು ಆರೋಗ್ಯಕ್ಕೆ ಹಿತಕರ. ಮೆಂತ್ಯದ ಕಷಾಯ ಕುಡಿಯುವವರಿಗೆ ಮಲಬದ್ಧತೆ ಕಾಡದು. ಋತುಚಕ್ರದ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತಹೀನತೆಗೂ ಮದ್ದು.

ಮಜ್ಜಿಗೆ ಹುಲ್ಲಿನ ಕಷಾಯ

ಏನೇನು ಎಷ್ಟೆಷ್ಟು?: ಎರಡು ಎಸಳು ಲೆಮನ್ ಗ್ರಾಸ್ (ಮಜ್ಜಿಗೆ ಹುಲ್ಲು) ಅರ್ಧ ಇಂಚು ಶುಂಠಿ, ಅರ್ಧ ಚಮಚ ಜೀರಿಗೆ, ಅರ್ಧಚಮಚ ಹವೀಜ, ಎರಡು ಚಮಚ ಸಕ್ಕರೆ.

ಮಾಡುವ ವಿಧಾನ: ಎರಡು ಗ್ಲಾಸ್ ನೀರನ್ನು ಕುದಿಸಲು ಇಡಿ. ಕತ್ತರಿಸಿದ ಲೆಮನ್ ಗ್ರಾಸಿನೊಂದಿಗೆ ಜಜ್ಜಿದ ಶುಂಠಿ, ಜೀರಿಗೆ, ಕೊತ್ತಂಬರಿ ಬೀಜ ಸಕ್ಕರೆ ಹಾಕಿ ಕುದಿಸಿ ಹಾಲು ಬೆರೆಸಿ ಕುಡಿಯಬಹುದು. ಘಮಘಮಿಸುವ ಈ ಕಷಾಯ ನೆಗಡಿ ಕೆಮ್ಮಿನಿಂದ ಬಳಲುವವರಿಗೆ ರಾಮಬಾಣ. ಲೆಮನ್ ಗ್ರಾಸ್ ಲಭ್ಯವಿಲ್ಲದವರು ತುಳಸಿ ಕುಡಿಯನ್ನು ಹಾಕಿ ಕಷಾಯ ಮಾಡಿಕೊಂಡು ಕುಡಿಯಬಹುದು.

ಮನೆಮದ್ದು: ಕಾಲಿಗೆ ಅಣಿಯಾಗಿದೆಯೇ? ಲವಳಸರದ ಹಸಿರು ಭಾಗವನ್ನು ತೆಗೆದು ಬಿಳಿಯ ಚೂರಿಗೆ ಅರಿಶಿನದ ಪುಡಿ ಸೇರಿಸಿ ಅಣಿಯಾದ ಜಾಗಕ್ಕೆ ಕಟ್ಟಿ. ಒಂಬತ್ತು ರಾತ್ರಿ ಹೀಗೆ ಕಟ್ಟುವುದರಿಂದ ಅಣಿಯ ತೊಂದರೆ ನಿವಾರಣೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.