ADVERTISEMENT

PV Web Exclusive: ಉಪ್ಪಿಟ್ಟಿನ ಗಮ್ಮತ್ತು

ಸುಮಾ ಬಿ.
Published 3 ಅಕ್ಟೋಬರ್ 2020, 6:34 IST
Last Updated 3 ಅಕ್ಟೋಬರ್ 2020, 6:34 IST
ಉಪ್ಪಿಟ್ಟು
ಉಪ್ಪಿಟ್ಟು   

ಎರಡು ವರ್ಷದ ಲೀಸಾಗೆ ‘ಇವತ್ತು ಏನು ತಿಂಡಿ ಮಾಡೋಣ’ ಎಂದರೆ ಥಟ್ಟಂತ ‘ಉಪ್ಪಿತ್ತು’ ಎಂದು ತೊದಲುತ್ತ ನುಡಿದಳು. ಆರು ವರ್ಷದ ಆಕೆಯ ಅಣ್ಣನಿಗೆ ಉಪ್ಪಿಟ್ಟೆಂದರೆ ವರ್ಜ್ಯ. ಅವನಿಗೆ ಇಡ್ಲಿಯೇ ಆಗಬೇಕು. ಎರಡನ್ನೂ ಮಾಡಲು ಬಳಸುವುದು ರವೆಯೇ ಆದರೂ ಮಾಡುವ, ಬೇಯುವ ವಿಧಾನದಿಂದ ಭಿನ್ನ ರುಚಿ ಕೊಡುತ್ತವೆ. ಅಮ್ಮ ಲೀಸಾ ಆಸೆಯನ್ನೇ ಪೂರೈಸಿದಳು. ದಿಢೀರ್‌ ಮಾಡಬಹುದಾದ, ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶಯುಕ್ತ ಉಪ್ಪಿಟ್ಟೇ ಅಂದಿನ ತಿಂಡಿಯಾಯಿತು.

ಹೀಗೆ ಅಭಿರುಚಿಯಲ್ಲಿ ಪ್ರತಿ ಮನೆಯಲ್ಲೂ ಭಿನ್ನ ನಿಲುವುಗಳು. ಒಬ್ಬರಿಗೆ ಉಪ್ಪಿಟ್ಟೆಂದರೆ ಪಂಚಪ್ರಾಣ, ಮಗದೊಬ್ಬರಿಗೆ ದೋಸೆ, ಪುಳಿಯೋಗರೆ... ಆದರೆ ಉಪ್ಪಿಟ್ಟು ಅಡುಗೆಮನೆಯಲ್ಲಿ ಎಂದಿಗೂ ತನ್ನ ಅಧಿಪತ್ಯ ಬಿಟ್ಟುಕೊಟ್ಟಿಲ್ಲ. ಅವಸರಕ್ಕೆ ರುಚಿಕರ ತಿಂಡಿ ತಯಾರಿಸಬೇಕೆಂದರೆ ಹೆಣ್ಣುಮಕ್ಕಳ ಕೈ ಹಿಡಿಯುವುದು ಉಪ್ಪಿಟ್ಟೇ.

ಮನೆಗೆ ಹೆಚ್ಚು ನೆಂಟರು ಬಂದಾಗ, ಸೀಮಂತ, ನಾಮಕರಣ, ಮದುವೆ ನಿಶ್ಚಿತಾರ್ಥಗಳಂತಹ ಸಣ್ಣಪುಟ್ಟ ಸಮಾರಂಭಗಳಿಂದ ಹಿಡಿದು ಮದುವೆಯಂತಹ ದೊಡ್ಡ ಸಮಾರಂಭಗಳಲ್ಲೂ ಬೆಳಗಿನ ತಿಂಡಿಗೆ ಉಪ್ಪಿಟ್ಟಿನ ಹಾಜರಿ ಇದ್ದೇ ಇರುತ್ತದೆ. ಈಗೀಗ ಉಪ್ಪಿಟ್ಟಿನ ಜಾಗದಲ್ಲಿ ಮಸಾಲೆ ದೋಸೆ, ಇಡ್ಲಿ–ವಡಾ ಇತ್ಯಾದಿ ಬಂದು ಕುಳಿತಿದ್ದರೂ ಸಮಾರಂಭಕ್ಕೆ ಬೆಳಿಗ್ಗೆಯೇ ಬೀಗರು ಹೆಚ್ಚಾಗಿ ಬಂದು ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟು ಖಾಲಿಯಾದರೆ ಉಪ್ಪಿಟ್ಟೇ ಆಪ್ತಮಿತ್ರನ ಸ್ಥಾನ ತುಂಬುತ್ತದೆ.

ADVERTISEMENT

ಅಷ್ಟೇ ಏಕೆ, ಬ್ರಹ್ಮಚಾರಿಗಳ, ಉದ್ಯೋಗ ನಿಮಿತ್ತ ಕುಟುಂಬದಿಂದ ದೂರವಿದ್ದು ಪರ ಊರಿನಲ್ಲಿ ವಾಸಿಸುವ ವಿವಾಹಿತರಿಗೂ ಆಪತ್ಭಾಂಧವ ಈ ಉಪ್ಪಿಟ್ಟು. ಕೆಲಸಕ್ಕೆ ಬೇಗ ಹೋಗಬೇಕೆಂದಾಗ, ರಾತ್ರಿ ತಡವಾಗಿ ಮನೆಗೆ ಬಂದಾಗ ದಿಢೀರನೆ ಉಪ್ಪಿಟ್ಟು ರೆಡಿಯಾಗುತ್ತದೆ. ತಿಂಡಿ ತಯಾರಿಗೆ ಸಾಕಷ್ಟು ಸಮಯವಿಲ್ಲದಾಗ, ಮನೆಯಲ್ಲಿ ತರಕಾರಿಯೆಲ್ಲಾ ಖಾಲಿಯಾದಗಲೂ ಉಪ್ಪಿಟ್ಟು ನೆರವಿಗೆ ಬರುತ್ತದೆ.

ಉಪ್ಮಾ, ಉಪ್ಪುಮವು, ಉಪ್ಪಿಂಡಿ, ಖಾರಾಭಾತ್‌, ಉಪೀಟ್‌ ಹೀಗೆ ವಿವಿಧ ನಾಮಾವಳಿಗಳನ್ನು ಅಂಟಿಸಿಕೊಂಡಿರುವ ಉಪ್ಪಿಟ್ಟನ್ನು ಅತಿ ಶ್ರೀಮಂತವಾಗಿಯೂ, ಅತಿ ಬಡವನ ರೀತಿಯೂ ತಯಾರಿಸಬಹುದು. ಆದ್ದರಿಂದಲೇ ಉಪ್ಪಿಟ್ಟು ಎಲ್ಲರ ಮನೆಯ ಅಧಿಪತಿಯಾಗಿ ಮೆರೆಯುತ್ತಿದೆ. ರವೆ, ಸ್ವಲ್ಪ ಎಣ್ಣೆ, ಸಾಸಿವೆ, ಈರುಳ್ಳಿ, ಹಸಿಮೆಣಸು ಇಷ್ಟೇ ಪದಾರ್ಥಗಳಲ್ಲೂ ತಯಾರಿಸಬಹುದು. ಇನ್ನೂ ಹೆಚ್ಚು ಸಮಯವಿದ್ದರೆ, ಮನೆಯಲ್ಲಿ ಸಾಕಷ್ಟು ತರಕಾರಿ, ಪದಾರ್ಥಗಳಿದ್ದರೆ ಅದ್ದೂರಿಯಾಗೂ ಸಿದ್ಧಗೊಳಿಸಬಹುದು.

ಕೆಲವರು ಉಪ್ಪಿಟ್ಟು ಎಂದರೆ ಮಾರುದ್ದ ಸರಿಯುತ್ತಾರೆ. ಉಪ್ಪಿಟ್ಟು ದ್ವೇಷಿಗಳಿಂದ ‘ಕಾಂಕ್ರೀಟ್‌’ ಎನ್ನುವ ಪರಿಭಾಷೆಯೂ ಅದಕ್ಕೆ ಒದಗಿಬಂದಿದೆ. ಉಪ್ಪಿಟ್ಟು ಪ್ರೇಮಿಗಳಿಂದ ಹಿಂದೊಮ್ಮೆ ‘ಉಪ್ಪಿಟ್ಟನ್ನು ದೇಶದ ತಿಂಡಿಯಾಗಿ ಪರಿಗಣಿಸಬೇಕು’ ಎಂಬ ಕೂಗೂ ಕೇಳಿಬಂದಿತ್ತು. ಈ ಬಗ್ಗೆ ಒಂದಷ್ಟು ಪರ– ವಿರೋಧಗಳು ಚರ್ಚೆಯಾಗಿ ಆ ವಿಚಾರ ಹಿನ್ನೆಲೆಗೆ ಸರಿಯಿತು. ಒಂದು ವೇಳೆ ದೇಶದ ತಿನಿಸನ್ನು ಘೋಷಿಸಲು ಸರ್ಕಾರವೇನಾದರೂ ಮುಂದಾದರೆ ಉಪ್ಪಿಟ್ಟೂ ಸಹ ರೇಸಿನಲ್ಲಿ ಮುಂದಿರಲು ಶತಸಿದ್ಧ. ಆ ಮಟ್ಟಿನ ಅಭಿಮಾನಿಗಳನ್ನೂ ಉಪ್ಪಿಟ್ಟು ಗಳಿಸಿದೆ.

ಶಿಕ್ಷಣತಜ್ಞ ಎಚ್‌.ನರಸಿಂಹಯ್ಯ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದಾಗ ಅಲ್ಲಿದ್ದ ಮೂರು ವರ್ಷಗಳ ಕಾಲವೂ ಅವರು ಮೂರು ಹೊತ್ತು ಉಪ್ಪಿಟ್ಟು ತಿಂದೇ ದಿನ ದೂಡಿದರಂತೆ. ವಿದೇಶಿ ಆಹಾರ ಅವರಿಗೆ ಸಹ್ಯವೆನಿಸದ ಕಾರಣ ಅವರು ಈ ಮಾರ್ಗ ಕಂಡುಕೊಂಡಿದ್ದರು. ಸತತ ಮೂರು ವರ್ಷ ಉಪ್ಪಿಟ್ಟು ಅವರಿಗೆ ಬೇಸರ ತರಿಸಲಿಲ್ಲವೆಂದರೆ ಅದರ ಕರಾಮತ್ತನ್ನು ಮೆಚ್ಚಲೇಬೇಕು.

ಉಪ್ಪಿಟ್ಟಿನ ವಿವಿಧ್ಯ: ಮೇಲೆ ಹೇಳಿದಂತೆ ಉಪ್ಪಿಟ್ಟು ನಮ್ಮ ಅನುಕೂಲಕ್ಕೆ ತಕ್ಕಂತೆ ಒದಗಿಬರುತ್ತದೆ. ಹೋಟೆಲ್‌ಗಳಲ್ಲಿ ಮೊದಲು ತಯಾರಿಸಿದ ಉಪ್ಪಿಟ್ಟು ಮೆತ್ತಗೆ ಇರುತ್ತದೆ. ಗ್ರಾಹಕರು ಹೆಚ್ಚಾದಂತೆ ಉದುರುದುರಾಗಿರುತ್ತದೆ! ಏಕೆ ಎಂದು ಯೋಚಿಸಿದ್ದೀರಾ? ಮೆತ್ತಗಿರುವ ಉಪ್ಪಿಟ್ಟಿಗೇ ಇನ್ನೊಂದಿಷ್ಟು ರವಾ ಹಾಕಿದರೆ ಮತ್ತಷ್ಟು ಒದಗುತ್ತದೆ ಎನ್ನುವ ಗುಟ್ಟು ಅದರ ಹಿಂದಿರಬಹುದು. ಕೆಲವರಿಗೆ ಮೆತ್ತಗಿನ ಉಪ್ಪಿಟ್ಟಿಷ್ಟ, ಮಗದೊಬ್ಬರಿಗೆ ಉದುರುದುರು; ಕೆಲವರಿಗೆ ಗೋಧಿ ರವಾ, ಸೂಜಿ ರಾವಾ ಉಪ್ಪಿಟ್ಟೇ ಆಗಬೇಕು, ಇನ್ನು ಕೆಲವರಿಗೆ ಅಕ್ಕಿ ರವಾದ್ದೇ ಬೇಕು.

ತರಕಾರಿ ಉಪ್ಪಿಟ್ಟೆಂದರೆ ಕೆಲವರಿಗೆ ಆಪ್ಯಾಯಮಾನ. ಇನ್ನು ಕೆಲವರಿಗೆ ತರಕಾರಿ ರಹಿತ ಉಪ್ಪಿಟ್ಟೆಂದರೆ ಪ್ರೀತಿ. ಅವರೆಕಾಳು ಉಪ್ಪಿಟ್ಟೆಂದರೆ ಹಲವರಿಗೆ ಎರಡು ಹೊಟ್ಟೆ. ಹೀಗೆ ಬೇಕೆಂದವರಿಗೆ ಬೇಕಾದ ರೀತಿಯಲ್ಲಿ ‘ರುಚಿ’ ನೀಡುವ ವೈಶಿಷ್ಟ್ಯ ಇರುವುದು ಉಪ್ಪಿಟ್ಟಿಗೆ ಎಂದರೆ ಅತಿಶಯೋಕ್ತಿ ಆಗಲಾರದು.

ಪುದಿನಾ ಉಪ್ಪಿಟ್ಟು, ಬಟಾಣಿ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು, ಹೆಸರುಬೇಳೆ ಉಪ್ಪಿಟ್ಟು... ಒಂದೇ ಎರಡೇ ಇದರ ವೈವಿಧ್ಯ ಹೆಳುತ್ತಾ ಹೋದರೆ ದಿನ ಸಾಲದು. ಲಾಕ್‌ಡೌನ್‌ ಅವಧಿಯಲ್ಲಿ ನಟ, ಪಾಕಪ್ರಿಯ, ಸಿಹಿಕಹಿ ಚಂದ್ರು 12 ಬಗೆಯ ಉಪ್ಪಿಟ್ಟು ಮಾಡಿ ಮನೆಯವರ ಮನ ಗೆದ್ದಿದ್ದಾರಂತೆ. ಹೀಗೆ ನಮ್ಮ ಪ್ರಯೋಗಗಳಿಗೂ ಉಪ್ಪಿಟ್ಟೇ ಒದಗಿಬರುತ್ತದೆ.

ಬನ್ಸಿ ರವಾ, ಗೋಲ್ಡನ್‌ ಬನ್ಸಿ ರವಾ, ಗೋಧಿ ರವಾ, ಅಕ್ಕಿ ರವಾ, ಸಣ್ಣ ರವಾ, ದಪ್ಪ ರವಾ ಈಗೀಗ ಉಪ್ಪಿಟ್ಟಿನ ರವಾ ಎಂತಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ. ನಮಗಾವುದು ಇಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಶ್ಯಾವಿಗೆ, ಮಕ್ಕಳು ಇಷ್ಟಪಟ್ಟು ತಿನ್ನುವ ಮ್ಯಾಗಿ, ನೂಡಲ್ಸ್‌ ಎಲ್ಲವೂ ಇದರ ಸಹೋದರರೇ ಅನ್ನಿ.

ಕಡ್ಲೆ ಎಣ್ಣೆ ಹಾಕಿ, ಕಾಳು ಮೆಣಸು ಕುಟ್ಟಿ, ಶುಂಠಿ ಬೆರೆಸಿದ ಅವರೆಕಾಳು ಉಪ್ಪಿಟ್ಟು ಒಲೆ ಮೇಲೆ ಬೇಯುತ್ತಿದ್ದರೆ ಅದರ ಘಮಲು ಪಕ್ಕದ ಮನೆಗೂ ಪಸರಿಸದೆ ಇರದು. ಮೇಲೊಂದಿಷ್ಟು ತುಪ್ಪ ಹನಿಸಿ, ಮೆಲ್ಲಲು ಕೊಟ್ಟರೆ ವ್ಹಾ! ಸ್ವರ್ಗಕ್ಕೆ ಮೂರೇ ಗೇಣು.

ಉಪ್ಪಿಟ್ಟನ್ನು ಎರಡು ಬಗೆಯಲ್ಲಿ ಮಾಡಬಹುದು. ಕೆಲವರು ರವೆಯನ್ನು ಮೊದಲೇ ಹುರಿದಿಟ್ಟುಕೊಂಡು ಒಗ್ಗರಣೆ ಹಾಕಿ ನೀರು ಹಾಕಿ ಕುದ್ದ ಮೇಲೆ ರವೆ ಹಾಕುತ್ತಾರೆ. ಇದು ಬಹುತೇಕರು ಅನುಸರಿಸುವ ವಿಧಾನ. ಇನ್ನು ಕೆಲವರು ಒಗ್ಗರಣೆ ಹಾಕಿ ಅದರ ಜತೆಗೆ ರವೆಯನ್ನೂ ಹಾಕುತ್ತಾರೆ. ರವೆ ಚೆನ್ನಾಗಿ ಹುರಿದಾದ ಬಳಿಕ ನೀರು ಹಾಕುತ್ತಾರೆ. ಇವೆರಡರಲ್ಲಿ ಯಾವುದು ಹೆಚ್ಚು ರುಚಿಕರ ಎಂಬ ಬಗ್ಗೆ ಜಿಜ್ಞಾಸೆ ಇದೆ. ಅವರವರ ಭಾವಕ್ಕೆ ತಕ್ಕಂತೆ ಉಪ್ಪಿಟ್ಟು ತಯಾರಾಗುತ್ತದೆ.

ಇಂತಿಪ್ಪ ಉಪ್ಪಿಟ್ಟಿಗೆ ಸಂಗಾತಿಗಳೂ ಉಂಟು. ಕಾಲಮಾನಕ್ಕೆ, ಅಭಿರುಚಿಗೆ, ಪ್ರಾದೇಶಿಕತೆಗೆ ಅನುಗುಣವಾಗಿ ಸಂಗಾತಿಗಳು ಬದಲಾಗುತ್ತಾರೆ! ಉಪ್ಪಿಟ್ಟು–ಕೇಸರಿಭಾತ್‌ ಅನ್ಯೋನ್ಯ ಸಂಗಾತಿಗಳು. ಈ ಅನ್ಯೋನ್ಯ ‘ಚೌಚೌ ಭಾತ್‌’ ಎಂದೇ ಜನಪ್ರಿಯವಾಗಿದೆ. ಯಾವ ಹೋಟೆಲ್‌ಗೆ ಹೋದರೂ ಬೆಳಗಿನ ತಿಂಡಿಗೆ ಚೌಚೌಭಾತ್‌ನ ಆಯ್ಕೆ ಇದ್ದೇ ಇರುತ್ತದೆ. ಹೋಟೆಲ್‌ ಮಾಣಿ ಏನೇನು ತಿಂಡಿಗಳಿವೆ ಎಂದು ಗ್ರಾಹಕರಿಗೆ ಹೇಳುವಾಗ ಆತನ ಬಾಯಲ್ಲಿ ಬರುವ ಮೊದಲ ತಿನಿಸುಗಳೂ ಇವೇ. ‘ಖಾರಾಭಾತ್‌... ಚೌಚೌಭಾತ್‌... ಬಿಸಿಬೇಳೆಭಾತ್‌...’ ಹೀಗೆ.

ಇನ್ನು ಉಪ್ಪಿಟ್ಟಿನ ಜತೆಗೆ ಚಟ್ನಿ ಅತ್ಯುತ್ತಮ ಸಂಗಾತಿ. ಕಾಯಿ ಚಟ್ನಿ, ಕಡಲೆಕಾಯಿ ಚಟ್ನಿ, ಈರುಳ್ಳಿ– ಟೊಮೆಟೊ ಚಟ್ನಿಗಳು ಜತೆಯಾಗುತ್ತವೆ. ಉಡುಪಿ ಕಡೆ ಉಪ್ಪಿಟ್ಟಿನ ಜತೆಗೆ ಖಾರ ಅವಲಕ್ಕಿ ಕೊಡುತ್ತಾರೆ. ಉಪ್ಪಿನಕಾಯಿ, ಮಿರ್ಚಿ, ವಿವಿಧ ಬಗೆಯ ಚಟ್ನಿಪುಡಿಗಳು, ಬೆಣ್ಣೆ, ತುಪ್ಪ, ಮಿಕ್ಸ್ಚರ್‌ಗಳೂ ಉಪ್ಪಿಟ್ಟಿನ ಸಂಗಾತಿಗಳೇ.

ಉಪ್ಪಿಟ್ಟನ್ನು ಹದವಾಗಿ ಬೇಯಿಸಲು ಕೆಲ ಟಿಪ್ಸ್‌

* ತರಕಾರಿ ಉಪ್ಪಿಟ್ಟು ಮಾಡುವಾಗ ಚಿಟಿಕೆ ಸಕ್ಕರೆ ಹಾಕಿದರೆ ಉಪ್ಪಿಟ್ಟು ಬೆಂದಾದಮೇಲೂ ತರಕಾರಿಗಳ ಬಣ್ಣ ಮಾಸುವುದಿಲ್ಲ.

* ಅವರೆಕಾಳು ಉಪ್ಪಿಟ್ಟು ತಯಾರಿಸುವಾಗ ಮೊದಲೇ ಅವರೆಕಾಳುಗಳನ್ನು ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ

* ಈರುಳ್ಳಿ, ತರಕಾರಿ ಒಗ್ಗರಣೆಗೆ ಹಾಕಿದ ಮೇಲೆ ಸ್ವಲ್ಪ ಮಾತ್ರ ಉಪ್ಪು ಬೆರೆಸಿ. ನೀರು ಕುದಿಯುವ ಸಮಯದಲ್ಲಿ ರುಚಿಗೆ ಬೇಕಾಗುವಷ್ಟು ಉಪ್ಪು ಬೆರೆಸಿದರೆ ಉತ್ತಮ.

* ಜೀರಿಗೆಯನ್ನು ಒಗ್ಗರಣೆಗೆ ಬದಲು ನೀರು ಕುದಿಯುವಾಗ ಹಾಕಿದರೆ ಉತ್ತಮ ಘಮಲು ಕೊಡುತ್ತದೆ.

* ಉಪ್ಪಿಟ್ಟು ಒಲೆಯಿಂದ ಕೆಳಗಿಳಿಸಿದ ಬಳಿಕ ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಕಿದರೆ ಅವುಗಳ ಹಸಿ ಸ್ವಾದ ಹಾಗೆಯೇ ಸವಿಯಬಹುದು.

* ರವೆ ಹುರಿದುಕೊಳ್ಳುವಾಗ ಸಣ್ಣ ಚಮಚ ಜೀರಿಗೆ ಬೆರೆಸಿ ಹುರಿದುಕೊಂಡರೆ ಉತ್ತಮ ಘಮಲು ಕೊಡುತ್ತದೆ. ರವೆ ಸ್ವಲ್ಪ ಹುರಿದಾದ ಮೇಲೆ ಸ್ವಲ್ಪ ತುಪ್ಪ ಹಾಕಿ ಹುರಿದರೆ ಉಪ್ಪಿಟ್ಟಿನ ಸ್ವಾದ ಹೆಚ್ಚುತ್ತದೆ.

* ಪೌಷ್ಟಿಕಾಂಶಯುಕ್ತವಾಗಿಸಲು ಗೋಡಂಬಿ, ದ್ರಾಕ್ಷಿ, ತುರಿದ ಬಾದಾಮಿ ಸಹ ಬಳಸಬಹುದು.

* ಒಗ್ಗರಣೆ ಹಾಕಿದ ಬಳಿಕ ತಣ್ಣೀರಿನ ಬದಲು ಬಿಸಿ ನೀರನ್ನು ಬೆರೆಸಿದರೆ ರವೆ ಹದವಾಗಿ ಬೇಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.