ಹಲಸಿನ ಹಣ್ಣಿನ ಹಪ್ಪಳ
ಹಪ್ಪಳ
ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣಿನ ಪ್ಯೂರಿ 2 ಕಪ್, ಬೆಲ್ಲದ ಪುಡಿ 1/2 ಕಪ್ (ಹಲಸಿನ ಹಣ್ಣಿನ ಸಿಹಿಗೆ ಅನುಸಾರವಾಗಿ ಹಾಕಿ), ಏಲಕ್ಕಿಪುಡಿ 1/4 ಟೀ ಚಮಚ, ದಾಲ್ಚಿನ್ನಿ ಚಿಟಿಕೆ ಚಕ್ಕೆ ಪುಡಿ, ತುಪ್ಪ 1 ಟೀ ಚಮಚ.
ತಯಾರಿಸುವ ವಿಧಾನ:
ಬಾಣಲೆಗೆ ಹಲಸಿನ ಹಣ್ಣಿನ ಪ್ಯೂರಿ ಮತ್ತು ಬೆಲ್ಲವನ್ನು ಹಾಕಿ. ಬೆಲ್ಲ ಕರಗುವವರೆಗೆ ಮಿಶ್ರಣ ಮಾಡಿ. ಮಿಶ್ರಣವು ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿಪುಡಿ, ಚಕ್ಕೆಪುಡಿ ಹಾಕಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. ತಟ್ಟೆಗೆ ತುಪ್ಪ ಸವರಿ ತಯಾರಿಸಿದ ಹಲಸಿನ ಹಣ್ಣಿನ ಮಿಶ್ರಣವನ್ನು ಹಾಕಿ ಸಮತಟ್ಟಾಗಿ ಮಾಡಿ. ಎರಡರಿಂದ ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿ ಅಥವಾ ಸುರುಳಿ ಸುತ್ತಿ ಇಡಿ. ಇದನ್ನು ವರ್ಷದವರೆಗೆ ಇಟ್ಟು ಸವಿಯಬಹುದು.
****
ಹಲಸಿನ ಹಣ್ಣಿನ ಕೇಸರಿಬಾತ್
ಕೇಸರಿಬಾತ್
ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ 1 ಕಪ್, ನೀರು 2 ಕಪ್, ಸಕ್ಕರೆ 3/4 ಕಪ್, ಕೇಸರಿದಳ ಚಿಟಿಕೆ (2 ಟೇಬಲ್ ಚಮಚ ಬಿಸಿ ಹಾಲಿನಲ್ಲಿ ನೆನೆಸಿಡಿ), ಹಲಸಿನ ಹಣ್ಣಿನ ಪ್ಯೂರಿ(ಗಟ್ಟಿಯಾದ ರಸ) 1 ಕಪ್, ತುಪ್ಪ 4 ಟೇಬಲ್ ಚಮಚ, ಗೋಡಂಬಿ 10, ಒಣದ್ರಾಕ್ಷಿ 10 ರಿಂದ 20, ಏಲಕ್ಕಿಪುಡಿ 1/2 ಟೀ ಚಮಚ.
ತಯಾರಿಸುವ ವಿಧಾನ:
ಬಾಣಲೆಗೆ ಒಂದು ಟೇಬಲ್ ಚಮಚ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಕೆಂಬಣ್ಣಕ್ಕೆ ಹುರಿದು ತುಪ್ಪದಿಂದ ತೆಗೆದಿಡಿ. ಅದೇ ತುಪ್ಪದಲ್ಲಿ ಚಿರೋಟಿ ರವೆಯನ್ನು ಪರಿಮಳ ಬರುವವರೆಗೆ ಹುರಿದು ತೆಗೆದಿಡಿ. ಬಾಣಲೆಗೆ ನೀರನ್ನು ಹಾಕಿ ಬಿಸಿ ಮಾಡಿ. ಬಳಿಕ ಹುರಿದ ರವೆಯನ್ನು ಹಾಕಿ ಗಂಟಾಗದ ರೀತಿಯಲ್ಲಿ ಮಿಶ್ರಣ ಮಾಡಿ. ನಂತರ ಹಲಸಿನ ಹಣ್ಣಿನ ಪ್ಯೂರಿ, ಹಾಲಿನಲ್ಲಿ ನೆನೆಸಿಟ್ಟ ಕೇಸರಿದಳ ಮತ್ತು ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ಒಂದು ನಿಮಿಷ ಮುಚ್ಚಿ ಬೇಯಿಸಿ. ಬಳಿಕ ಮಿಶ್ರಣ ಮಾಡಿ ತುಪ್ಪವನ್ನು ಸೇರಿಸಿ. ಹೊಂದಿಕೆ ಆಗುವವರೆಗೆ ಮಿಶ್ರಣ ಮಾಡಿ. ಕೊನೆಯಲ್ಲಿ ಏಲಕ್ಕಿಪುಡಿ, ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಿ ಮಿಶ್ರಣ ಮಾಡಿ. ರುಚಿಕರವಾದ ಹಲಸಿನಹಣ್ಣಿನ ಕೇಸರಿಬಾತ್ ಸಿದ್ಧ.
****
ಕಾಯಿ ಹೂರಣ ತುಂಬಿದ ಸ್ಪೇಷಲ್ ರೆಸಿಪಿ
ಕಾಯಿ ಹೂರಣ ಸ್ಪೆಷಲ್
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು 1 ಕಪ್, ಚಿಟಿಕೆ ಉಪ್ಪು, ತುಪ್ಪ 1 ಟೀ ಚಮಚ, ಚಿಟಿಕೆ ಅರಿಶಿನ, ತೆಂಗಿನ ಕಾಯಿ ಬಿಳಿ ಭಾಗ 1 ಕಪ್, ಬೆಲ್ಲದ ಪುಡಿ 1/4 ಕಪ್, ಏಲಕ್ಕಿಪುಡಿ 1/4 ಟೀ ಚಮಚ, ಹಲಸಿನ ಹಣ್ಣಿನ ತೊಳೆಗಳು 20, ಎಣ್ಣೆ ಕರಿಯಲು, ನೀರು ಸ್ವಲ್ಪ.
ತಯಾರಿಸುವ ವಿಧಾನ:
ಬಟ್ಟಲಿಗೆ ಗೋಧಿಹಿಟ್ಟು, ಉಪ್ಪು, ಅರಿಶಿನ, ತುಪ್ಪ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಬಾಣಲೆಗೆ ತೆಂಗಿನತುರಿ ಮತ್ತು ಬೆಲ್ಲ ಹಾಕಿ. ಬೆಲ್ಲ ಕರಗಿ ತೆಂಗಿನತುರಿಯೊಂದಿಗೆ ಸೇರಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಏಲಕ್ಕಿಪುಡಿ ಸೇರಿಸಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. ಆರಲು ಬಿಡಿ. ಹಲಸಿನ ತೊಳೆಯಲ್ಲಿರುವ ಬೀಜವನ್ನು ತೆಗೆಯಿರಿ. ಬೀಜ ತೆಗೆದ ಜಾಗದಲ್ಲಿ ತಯಾರಿಸಿದ ತೆಂಗಿನಕಾಯಿ ಹೂರಣ ತುಂಬಿಸಿ. ಬಳಿಕ ಗೋಧಿ ಹಿಟ್ಟಿನಿಂದ ಸುತ್ತಲೂ ತೆಳುವಾಗಿ ಮುಚ್ಚಿ. ಎಲ್ಲವನ್ನೂ ಹಾಗೇ ತಯಾರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಮಧ್ಯಮ ಉರಿಯಲ್ಲಿ ಬೋಂಡದಂತೆ ಕೆಂಬಣ್ಣ ಬರುವರೆಗೆ ಕರಿಯಿರಿ. ಬಿಸಿ ಬಿಸಿ ಇರುವಾಗಲೇ ಸವಿಯಿರಿ.
****
ಹಲಸಿನ ಹಣ್ಣಿನ ಹಲ್ವಾ
ಹಲ್ವಾ
ಬೇಕಾಗುವ ಸಾಮಗ್ರಿಗಳು:
ಹಲಸಿನಹಣ್ಣಿನ ಪ್ಯೂರಿ ಒಂದೂವರೆ ಕಪ್, ಬೆಲ್ಲದ ಪುಡಿ 3/4 ಕಪ್, ಕಾರ್ನ್‌ಫ್ಲೋರ‍್ 2 ಟೇಬಲ್ ಚಮಚ, ಗೋಡಂಬಿ ಚೂರುಗಳು 1/4 ಕಪ್, ಏಲಕ್ಕಿಪುಡಿ 1/2 ಟೀ ಚಮಚ, ತುಪ್ಪ 4 ಟೇಬಲ್ ಚಮಚ.
ತಯಾರಿಸುವ ವಿಧಾನ:
ಬೆಲ್ಲಕ್ಕೆ ಅರ್ಧ ಕಪ್ ನೀರನ್ನು ಹಾಕಿ ಕುದಿಸಿ ಸೋಸಿಕೊಳ್ಳಿ. ಕಾರ್ನ್‌ಪ್ಲೋರ್‌ಗೆ ಕಾಲು ಕಪ್ ನೀರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಬಾಣಲೆಗೆ 2 ಟೇಬಲ್ ಚಮಚ ತುಪ್ಪವನ್ನು ಹಾಕಿ ಗೋಡಂಬಿಯನ್ನು ಹುರಿದು ತುಪ್ಪದಿಂದ ತೆಗೆದಿಟ್ಟುಕೊಳ್ಳಿ. ಅದೇ ತುಪ್ಪಕ್ಕೆ ಹಲಸಿನಹಣ್ಣಿನ ಪ್ಯೂರಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡು ನಿಮಿಷ ಮಿಶ್ರಣ ಮಾಡಿ. ಬಳಿಕ ಕಾರ್ನ್‌ಫ್ಲೋರ್ ಹಾಕಿ ಗಂಟಾಗದ ರೀತಿಯಲ್ಲಿ ಮಗುಚಿ. ಗಟ್ಟಿಯಾಗುತ್ತಾ ಬರುವಾಗ 2 ಟೇಬಲ್ ಚಮಚ ತುಪ್ಪ, ಏಲಕ್ಕಿಪುಡಿ ಮತ್ತು ಹುರಿದ ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಬಾಣಲೆಯನ್ನು ಬಿಟ್ಟು ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ. ಒಂದು ಗಂಟೆ ಬಿಟ್ಟು ಕತ್ತರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.