ADVERTISEMENT

ಮೀನನ್ನು ಹುರಿಯಬೇಕೇ.. ಕರಿಯಬೇಕೇ?

ಮನಸ್ವಿ
Published 27 ಸೆಪ್ಟೆಂಬರ್ 2020, 19:45 IST
Last Updated 27 ಸೆಪ್ಟೆಂಬರ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೀನಿನ ಖಾದ್ಯಗಳ ಹೆಸರು ಕೇಳಿದರೆ ಸಾಕು, ಮಾಂಸಾಹಾರಿಗಳ ಬಾಯಲ್ಲಿ ನೀರೂರುವುದು ಸಹಜ. ಮೀನಿನ ಸೇವನೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದರಲ್ಲಿ ಅತ್ಯಧಿಕ ಪ್ರೊಟೀನ್ ಅಂಶವಿದೆ. ಅಲ್ಲದೇ ಮೀನಿನಲ್ಲಿ ಒಮೆಗಾ– 3 ಕೊಬ್ಬಿನಂಶ, ವಿಟಮಿನ್ ಡಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು ಸೇರಿದಂತೆ ಹಲವು ಬಗೆಯ ಪೌಷ್ಟಿಕಾಂಶಗಳಿವೆ.

ತಜ್ಞರ ಪ್ರಕಾರ ವಾರದಲ್ಲಿ ಎರಡು ಬಾರಿ ಮೀನು ತಿನ್ನುವುದು ಉತ್ತಮ. ಆದರೆ ಮೀನಿನ ಖಾದ್ಯ ತಿನ್ನುವ ಮೊದಲು ಅದರಲ್ಲಿರುವ ಪೌಷ್ಟಿಕಾಂಶಗಳು ಹಾಗೇ ಉಳಿಯಬೇಕು ಎಂದರೆ ಸರಿಯಾದ ಬೇಯಿಸುವ, ಹುರಿಯುವ ಅಥವಾ ಕರಿಯುವ ಕ್ರಮಗಳನ್ನು ಅನುಸರಿಸಬೇಕು.

ಹಬೆಯಲ್ಲಿ ಬೇಯಿಸುವುದು: ಮೀನನ್ನು ಹಬೆಯಲ್ಲಿ ಬೇಯಿಸುವುದರಿಂದ ಯಾವುದೇ ಕೊಬ್ಬಿನಾಂಶ ಸೇರಿಸುವ ಅಥವಾ ಎಣ್ಣೆಯಲ್ಲಿ ಬೇಯಿಸುವ ಅವಶ್ಯಕತೆ ಬೀಳುವುದಿಲ್ಲ. ಹಬೆಯಲ್ಲಿ ಬೇಯಿಸುವಾಗ ನೀರು ಸೇರಿಸಿ ಬೇಯಿಸುತ್ತೇವೆ. ಕೆಲವು ಕಡೆ ಬಿಸಿನೀರು ಅಥವಾ ಕುದಿಯುವ ನೀರಿನಲ್ಲಿ ಮೀನನ್ನು ಬೇಯಿಸುವ ಕ್ರಮವೂ ಇದೆ. ಕಡಿಮೆ ಉಷ್ಣತೆಯಲ್ಲಿ ಮೀನನ್ನು ಬೇಯಿಸುವುದರಿಂದ ಒಮೆಗಾ– 3 ಕೊಬ್ಬಿನಂಶ ಸೇರಿದಂತೆ ಅನೇಕ ರೀತಿ ಪೌಷ್ಟಿಕಾಂಶಗಳು ಉಳಿಯುತ್ತವೆ.

ADVERTISEMENT

ಪೌಚಿಂಗ್‌: ಪೌಚಿಂಗ್ ಎನ್ನುವುದು ಮೀನನ್ನು ಬೇಯಿಸುವ ಇನ್ನೊಂದು ರೀತಿ. ನೀರು, ಹಾಲು ಅಥವಾ ವೈನ್‌ನಲ್ಲಿ ಮೀನಿನ ತುಂಡುಗಳನ್ನು ಹಾಕಿ ಬೇಯಿಸುವುದು. ಈ ರೀತಿ ಮೀನನ್ನು ಬೇಯಿಸುವುದು ತುಂಬಾ ಉತ್ತಮ ವಿಧಾನ. ಈ ರೀತಿ ಬೇಯಿಸುವಾಗ ಯಾವುದೇ ಎಣ್ಣೆ ಅಥವಾ ಕೊಬ್ಬಿನಂಶ ಸೇರಿಸದೆ ಸಣ್ಣ ಉರಿಯಲ್ಲಿ ಬೇಯಿಸುತ್ತಾರೆ. ಇದರಿಂದ ಒಮೆಗಾ– 3 ಕೊಬ್ಬಿನಂಶ ಉಳಿದುಕೊಳ್ಳುತ್ತದೆ.

ಸುಡುವುದು (ಗ್ರಿಲ್ಲಿಂಗ್‌): ಮೀನನ್ನು ಸುಡುವುದರಿಂದ ಯಾವುದೇ ಕೊಬ್ಬಿನಂಶ ಸೇರಿಸುವ ಅವಶ್ಯಕತೆ ಇಲ್ಲ. ಆದರೆ ಮೀನನ್ನು ಗ್ರಿಲ್ಲಿಂಗ್ ಮಾಡುವುದರಿಂದ ಹೆಟೆರೊಸೈಕ್ಲಿಕ್‌ ಅಮೈನ್ಸ್ ಮತ್ತು ಪಾಲಿಸಿಕ್ಲಿಕ್‌ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ಎಂಬ ಹಾನಿಕಾರಕ ಅಂಶಗಳ ಉತ್ಪತಿಗೆ ಕಾರಣವಾಗಬಹುದು ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಆ ಕಾರಣಕ್ಕೆ ತೆರೆದ ಬೆಂಕಿಯಲ್ಲಿ ಕಡಿಮೆ ಉಷ್ಣಾಂಶ ಅಥವಾ ಉರಿಯಲ್ಲಿ ಮೀನನ್ನು ಬೇಯಿಸುವುದು ಉತ್ತಮ.

ಡೀಪ್ ಫ್ರೈ: ಡೀಪ್ ಫ್ರೈ ವಿಧಾನದಲ್ಲಿ ಮೀನನ್ನು ಬೇಯಿಸುವುದರಿಂದ ಹೆಚ್ಚು ಕೊಬ್ಬಿನಂಶ ಸಂಗ್ರಹವಾಗುತ್ತದೆ. ಈ ರೀತಿ ಬೇಯಿಸುವ ವಿಧಾನದಲ್ಲಿ ಮೀನಿನ ಮಾಂಸ ಹೆಚ್ಚು ಕೊಬ್ಬಿನಾಂಶವನ್ನು ಹೀರಿಕೊಳ್ಳುತ್ತದೆ. ಇದು ಕ್ಯಾಲೊರಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಈ ರೀತಿ ಮಾಡುವುದರಿಂದ ಇಪಿಎ ಹಾಗೂ ಡಿಎಚ್‌ಎ ಅಂಶಗಳು ಕೂಡ ಮಾಂಸದಲ್ಲಿ ಉಳಿಯುವುದಿಲ್ಲ. ಅಲ್ಲದೇ ಕೆಲವು ಮೀನುಗಳನ್ನು ಡೀಪ್ ಫ್ರೈ ಮಾಡುವುದರಿಂದ ಮೀನಿನಲ್ಲಿರುವ ಒಮೆಗಾ– 3 ಕೊಬ್ಬಿನಾಂಶದ ನಾಶಕ್ಕೂ ಕಾರಣವಾಗಬಹುದು.

ಬ್ರೈಲಿಂಗ್‌: ಮೀನನ್ನು ಬೇಯಿಸುವ ಇನ್ನೊಂದು ವಿಧಾನ ಬ್ರೈಲಿಂಗ್‌. ಇದರಲ್ಲಿ ಅತಿ ಹೆಚ್ಚು ಉಷ್ಣಾಂಶದಲ್ಲಿ ಮೀನನ್ನು ಬೇಯಿಸುತ್ತಾರೆ. ಸಾಮಾನ್ಯವಾಗಿ ಈ ವಿಧಾನದಲ್ಲಿ ಒವೆನ್ ಬಳಸುತ್ತಾರೆ. ಈ ವಿಧಾನದಿಂದ ತಯಾರಿಸಿದ ಮೀನಿನ ಸೇವನೆಯಿಂದ ಹೃದಯದ ರಕ್ತನಾಳಗಳು ಸ್ವಚ್ಛಗೊಳ್ಳುತ್ತವೆ.ಅಲ್ಲದೇ ಶುದ್ಧ ರಕ್ತದ ಹರಿವನ್ನು ಸುಧಾರಿಸಲು ಸಾಧ್ಯ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.

ಮೈಕ್ರೊವೇವ್‌: ಕಡಿಮೆ ಉಷ್ಣಾಂಶದಲ್ಲಿ ಅತಿ ಬೇಗನೆ ಬೇಯಿಸಲು ಸಾಧ್ಯವಾಗುವುದು ಮೈಕ್ರೊಒವೆನ್‌ನಲ್ಲಿ. ಅಧ್ಯಯನದ ಪ್ರಕಾರ ಮೈಕ್ರೊಒವೆನ್‌ನಲ್ಲಿ ಮೀನನ್ನು ಬೇಯಿಸುವುದರಿಂದ ಒಮೆಗಾ– 3 ಕೊಬ್ಬಿನಾಂಶವನ್ನು ಉಳಿಸಿಕೊಳ್ಳಬಹುದು.

ಪ್ಯಾನ್‌ನಲ್ಲಿ ಹುರಿಯುವುದು: ಪ್ಯಾನ್‌ನಲ್ಲಿ ಮೀನನ್ನು ಹುರಿಯುವುದು ಸಾಮಾನ್ಯ ಎಲ್ಲರೂ ಅನುಸರಿಸುವ ವಿಧಾನ. ಹೆಚ್ಚಿನ ಉಷ್ಣಾಂಶದಲ್ಲಿ ಮೀನನ್ನು ಪ್ಯಾನ್‌ನ ಮೇಲೆ ಹುರಿದು ತಿನ್ನುವುದು ಆರೋಗ್ಯ ಪದ್ಧತಿ.

ಮೀನನ್ನು ಸುಡುವುದು ಹಾಗೂ ಡೀಪ್‌ಫ್ರೈ ಮಾಡುವುದಕ್ಕಿಂತ ಹಬೆಯಲ್ಲಿ ಬೇಯಿಸುವುದು, ಪೌಚಿಂಗ್ ಹಾಗೂ ಮೈಕ್ರೊಒವೆನ್‌ನಲ್ಲಿ ಬೇಯಿಸುವುದು ಉತ್ತಮ. ಅದರೊಂದಿಗೆ ಬೇಯಿಸುವ ವಿಧಾನ, ಮೀನಿನ ಬಗೆ, ಬಳಸುವ ಎಣ್ಣೆ ಹಾಗೂ ಸಮಯವು ಮೀನಿನ ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.