ADVERTISEMENT

ಈರುಳ್ಳಿ ಗೆಣಿ ಆರೋಗ್ಯದ ಗಣಿ

ಡಾ.ಶಶಿಕಲಾ ಕೃಷ್ಣಮೂರ್ತಿ
Published 22 ನವೆಂಬರ್ 2013, 19:30 IST
Last Updated 22 ನವೆಂಬರ್ 2013, 19:30 IST

ರುಳ್ಳಿ ಗೆಣಿಯ (ಈರುಳ್ಳಿ ಹೂವು/ ಸ್ಪ್ರಿಂಗ್ ಆನಿಯನ್) ಘಮಘಮ ಪರಿಮಳ, ಜೊತೆಗೆ ಸವಿರುಚಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಈರುಳ್ಳಿ ಬೆಳೆಯಲು ಶುರುವಾದಾಗಲೇ ಕಿತ್ತರೆ ಈರುಳ್ಳಿ ಹೂ ಹಾಗೂ ಹಸಿರು ಎಲೆಯಂತಹ ಭಾಗ ತಿನ್ನಲು ಲಭ್ಯ. ಈರುಳ್ಳಿ ಗೆಣಿಯಿಂದ ಗೊಜ್ಜು, ಸಾಂಬಾರ್, ಪಲ್ಯ ಮುಂತಾದ ರುಚಿಕರ ಖಾದ್ಯಗಳ ಜೊತೆಗೆ, ಸಲಾಡ್ ಹಾಗೂ ವಿವಿಧ ರೀತಿಯ ಅನ್ನಗಳನ್ನೂ ತಯಾರಿಸುತ್ತಾರೆ.

ಏನು ಲಾಭ?
ಬಾಯಿಗೆ ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಕೆಲವು ಪೋಷಕಾಂಶ­ಗ­ಳನ್ನು ಸಹ ಇದು ಒದಗಿಸುತ್ತದೆ. ಬಿ ಕಾಂಪ್ಲೆಕ್ಸ್, ವಿಟಮಿನ್‌ಗಳಾದ ಥಯಮಿನ್, ರಿಬೋಫ್ಲೇವಿನ್ ಮತ್ತು ಮೆಗ್ನೀಷಿಯಂ, ಫಾಸ್ಫರಸ್, ತಾಮ್ರದ ಅಂಶ ಇದರಲ್ಲಿದೆ. ಸುಮಾರು ಶೇ 10ರಷ್ಟು ನಾರಿನಂಶ ಹೊಂದಿದೆ. 100 ಗ್ರಾಂ ಸೇವನೆಯಿಂದ ಕೇವಲ ಅಲ್ಪ ಪ್ರಮಾಣದ ಕ್ಯಾಲೊರಿ ಲಭ್ಯ.

ಈ ಗೆಣಿಯ ಸೇವನೆಯಿಂದ ಈರುಳ್ಳಿ ಹಾಗೂ ಅದರ ಹಸಿರೆಲೆ ಎರಡೂ ಭಾಗದ ಪೋಷಕಾಂಶಗಳು ಲಭಿಸುತ್ತವೆ. ಹೃದಯದ ಆರೋಗ್ಯ, ರಕ್ತದಲ್ಲಿನ ಕೊಬ್ಬಿನ ಅಂಶ ಕಡಿತ, ರಕ್ತನಾಳಗಳ ಆರೋಗ್ಯ, ರಕ್ತದೊತ್ತಡ ನಿಗ್ರಹ, ರೋಗ ನಿರೋಧಕ ಶಕ್ತಿ ವೃದ್ಧಿ ಸೇರಿದಂತೆ ಇದರ ಉಪಯೋಗ ಹಲವಾರು. ಎಲೆಗಳನ್ನು ಹೆಚ್ಚಿದಾಗ, ಜಜ್ಜಿದಾಗ, ಅದರೊಳಗಿರುವ ಡೈ ಅಲೈಲ್ ಡೈ ಸಲ್ಫೈಡ್, ಟ್ರೈ ಸಲ್ಫೈಡ್, ಅಲೈಲ್ ಪ್ರೊಪೈಲ್ ಡೈ ಸಲ್ಫೈಡ್ ಎಂಬ ಥಯೋಸಲ್ಫಿನೇಟ್ ಅಂಶಗಳು ಕಿಣ್ವಗಳ ಸಹಾಯದಿಂದ `ಆಲಿಸಿನ್' ಎಂಬ ವಸ್ತುವಾಗಿ ಮಾರ್ಪಾಡಾಗುತ್ತವೆ.

ಆಲಿಸಿನ್ ಅಂಶವು, ಪಿತ್ತಕೋಶದ ಜೀವಕೋಶದಲ್ಲಿ ಇದ್ದುಕೊಂಡು ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವ ಕಿಣ್ವವನ್ನು ನಿಷ್ಕ್ರಿಯಗೊಳಿಸುತ್ತದೆ.  ಆಲಿಸಿನ್‌ಗೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರಗಳನ್ನು ಹೊಡೆದೋಡಿಸುವಂತಹ ರೋಗ ನಿರೋಧಕ ಶಕ್ತಿ ಇದೆ. ರಕ್ತನಾಳಗಳು ಸಂಕುಚಿತ ಆಗದಂತೆ ತಡೆಯುವ ಶಕ್ತಿಯೂ ಇದೆ. ಇದರಲ್ಲಿರುವ ಕೆರೋಟಿನ್, ಜೀ ಜ್ಯಾನ್‌ಥೀನ್ ಹಾಗೂ ಲೂಟಿನ್ ಅಂಶಗಳು ಕ್ಯಾನ್ಸರ್ ತಡೆಗಟ್ಟುವಲ್ಲೂ ಸಹಕಾರಿ.

100 ಗ್ರಾಂ ಈರುಳ್ಳಿ ಗೆಣಿಯಲ್ಲಿ ಸಾಕಷ್ಟು ಫೋಲಿಕ್ ಆಮ್ಲ, ನಿಯಾಸಿನ್, ರೈಬೋಫ್ಲೆವಿನ್, ಥಯಮಿನ್ ಮುಂತಾದ ಬಿ ಕಾಂಪ್ಲೆಕ್ಸ್, ವಿಟಮಿನ್‌ಗಳು ಇರುತ್ತವೆ. ಅತಿಯಾಗಿ ಬಲಿತ ಈರುಳ್ಳಿ ಎಲೆಗಳು ಅಷ್ಟು ರುಚಿಕರವಲ್ಲ. ಈರುಳ್ಳಿಯ ಬುಡದಲ್ಲಿನ ಬೇರು ಹಾಗೂ ಮೇಲಿನ ತುದಿಯಲ್ಲಿನ ಹೂಗಳನ್ನು ಕತ್ತರಿಸಿ, ಹಸಿರು ಭಾಗವನ್ನು ಚೆನ್ನಾಗಿ ತೊಳೆದು ಅಡುಗೆಗೆ ಬಳಸಿ. ವರ್ಷ ಪೂರ್ತಿ ದೊರಕುವ ಈರುಳ್ಳಿ ಗೆಣಿ ಅಥವಾ ಸೊಪ್ಪು ರುಚಿಯ ಜೊತೆಗೆ ದೇಹಾರೋಗ್ಯವನ್ನೂ ಕಾಪಾಡುತ್ತದೆ.

ADVERTISEMENT

100 ಗ್ರಾಂ ಈರುಳ್ಳಿ ಗೆಣಿಯಲ್ಲಿ ಇರುವ ಅಂಶಗಳು
ಪ್ರೊಟೀನ್   1.83 ಗ್ರಾಂ.
ಕೊಬ್ಬು, ಕೊಲೆಸ್ಟ್ರಾಲ್  ಇಲ್ಲ
ನಾರಿನಾಂಶ 2.6 ಗ್ರಾಂ.
ಫೋಲಿಕ್ ಆ್ಯಸಿಡ್ 64 ಮೈಕ್ರೊ ಗ್ರಾಂ.
ನಿಯಾಸಿನ್ 0.525 ಮಿ.ಗ್ರಾಂ.
ವಿಟಮಿನ್  ಎ  997 ಐ.ಯು.
ವಿಟಮಿನ್  ಸಿ  18.8 ಮಿ.ಗ್ರಾಂ.
ವಿಟಮಿನ್  ಇ  0.55 ಮಿ.ಗ್ರಾಂ.
ವಿಟಮಿನ್  ಕೆ  207 ಮೈಕ್ರೊ ಗ್ರಾಂ.
ಸೋಡಿಯಂ 16 ಮಿ.ಗ್ರಾಂ.
ಪೊಟಾಷಿಯಂ 276 ಮಿ.ಗ್ರಾಂ.
ಕ್ಯಾಲ್ಸಿಯಂ 72 ಮಿ.ಗ್ರಾಂ.
ಕಬ್ಬಿಣ, ಮೆಗ್ನೀಷಿಯಂ, ಮ್ಯಾಂಗನೀಸ್, ಸೆಲಿನಿಯಂ, ಫಾಸ್ಫರಸ್, ಜಿಂಕ್ ಮುಂತಾದ ಖನಿಜಗಳು ಅಲ್ಪ ಪ್ರಮಾಣದಲ್ಲಿ ಇರುತ್ತವೆ.

–ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.