ADVERTISEMENT

ಮಮತೆಯ ಕಡಲು ಆರೋಗ್ಯದ ಒಡಲು

ಕೆ.ಸಿ.ರಘು
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಮಮತೆಯ ಕಡಲು ಆರೋಗ್ಯದ ಒಡಲು
ಮಮತೆಯ ಕಡಲು ಆರೋಗ್ಯದ ಒಡಲು   

ಪ್ರಸಿದ್ಧ ಇತಿಹಾಸಕಾರ ವಿಲ್ ಡ್ಯುರಂಟ್‌ ‘ತಾಯಿಯ ಮಮತೆಯಿಂದ ನಾಗರಿಕತೆ ಹುಟ್ಟಿತು’ ಎನ್ನುತ್ತಾನೆ. ಆಕೆ ಗಂಡಸಿನ ಶಿಕಾರಿ ಮತ್ತು ಪ್ರಾಣಹಾನಿಯನ್ನು ಗಮನಿಸಿ ಗುಹೆಯ ಹೊಸ್ತಿಲಲ್ಲಿ ಬೀಜ ಬಿತ್ತಿ ಬೆಳೆ ಬೆಳೆಯುವುದ ತೋರಿಸಿದಳು. ಹಾಗೆಯೇ ತಬ್ಬಲಿ ಕರುಗಳನ್ನು ಕರುಣೆಯಿಂದ ಕಾಪಾಡಿ ಸಾಕಿ ಸಲುಹಿದಳು. ಈ ರೀತಿ ಹಸು, ನಾಯಿ, ಬೆಕ್ಕು, ಎಮ್ಮೆ, ಕತ್ತೆ ಮತ್ತು ಕೊನೆಗೆ ಗಂಡಸನ್ನು ಪಳಗಿಸಿದಳು. ಅವರೇ ಹೇಳುವಂತೆ ‘Man is her last domesticated animal, but still straying around’. ಒಂದು ಕಡೆ ನೆಲೆನಿಂತು ಬಾಳಿದ್ದರಿಂದ ನಾಗರಿಕತೆಯ ಉಗಮಕ್ಕೆ ನಾಂದಿಯಾಯಿತು. ಅಲ್ಲದೇ ಮನುಷ್ಯರ ದೀರ್ಘ ಬಾಲ್ಯವಸ್ಥೆಗೆ ತಾಯಿ ಮಡಿಲಾಗಿ ನಾಗರಿಕತೆಗೆ ತೊಟ್ಟಿಲಾದಳು. ಕವಿ ವಾಲ್ಟ್ ವಿಟ್‍ಮನ್ ಹೀಗೆ ಹೇಳುತ್ತಾನೆ:

I SEE the sleeping babe, nestling the breast of its mother;
The sleeping mother and babe hush’d, I study them long and long.
ತ್ಯಾಗ, ಕರುಣೆ, ಮಮತೆಗೆ ತಾಯಿಗಿಂತ ವಿಶೇಷ ಪ್ರತೀಕವಿಲ್ಲ. ಪೋಷಿಸಿ ಪಾಲನೆ ಮಾಡುವಂತಹದನ್ನೆಲ್ಲಾ ಮಾತೃಭೂಮಿ, ಭೂತಾಯಿ, ಪ್ರಕೃತಿಮಾತೆ ಎನ್ನುತ್ತೇವೆ. ಇನ್ನೊಂದು ರೀತಿಯಲ್ಲಿ ಆಕೆ ಶಕ್ತಿಯ ಸ್ವರೂಪ ಕೂಡ. ಶಕ್ತಿಯಿಲ್ಲದ ಶಿವ ಕೂಡ ಶವ ಎನ್ನುವುದುಂಟು. ತಾತ್ವಿಕವಾಗಿ ಹೀಗಿದ್ದು, ವಾಸ್ತವವಾಗಿ ತಾಯಿಯ ಸೂಕ್ಷ್ಮ ಸ್ವಭಾವಕ್ಕೆ ಆಕೆಯ ನೋವು ಸಂಕಷ್ಟಗಳು ಕಾರಣವಿರಬಹುದು. ಆಕೆಯ ಹೆರಿಗೆನೋವಿನ ತೀವ್ರತೆ 10 ಡೊಲ್ಸ್ ಎನ್ನುತ್ತಾರೆ. ಗಂಡಸು ಹೆಚ್ಚೆಂದರೆ 6 ಡೊಲ್ಸ್ ನೋವಿಗಿಂತ ಹೆಚ್ಚು ನೋವು ಅನುಭವಿಸುವುದೇ ಇಲ್ಲ. ನೋವನ್ನು ಡೋಲೊಮೀಟರ್‌ನಲ್ಲಿ ಅಳೆದು ಇಷ್ಟು ಡೊಲ್ಸ್ ಎನ್ನುತ್ತಾರೆ.

ಹೀಗಿದ್ದಾಗ ಒಂದು ಸಮಾಜದ ಸ್ವಾಸ್ಥ್ಯಕ್ಕೆ ಮಾನದಂಡ ಎಂದರೆ ಅಲ್ಲಿ ತಾಯಂದಿರ ಮರಣ ಪ್ರಮಾಣ ಅತ್ಯಂತ ಕಡಿಮೆ ಇರತಕ್ಕದ್ದು. ಗರ್ಭಿಣಿಯಾಗಿದ್ದಾಗ ಅಥವಾ ತದನಂತರ 42ದಿನದಲ್ಲಿ ಉಂಟಾಗುವ ಸಾವನ್ನು ‘ತಾಯಂದಿರ ಮರಣ ಪ್ರಮಾಣ’ ಎನ್ನುತ್ತಾರೆ.

ಮುಂದುವರೆದ ರಾಷ್ಟ್ರಗಳಲ್ಲಿ ಇದು ಒಂದು ಲಕ್ಷಕ್ಕೆ ಕೇವಲ ಸುಮಾರು 5ರಷ್ಟಿರುತ್ತದೆ. ಭಾರತದಲ್ಲಿ ಈಗ ಈ ಪ್ರಮಾಣ ಸುಮಾರು 112. ಶ್ರೀಲಂಕಾದಲ್ಲಿ 30. ನಾವುಗಳು ನಮ್ಮ ಸಂಸ್ಕೃತಿಯನ್ನು ಹಾಡಿ ಹೊಗಳುತ್ತೇವೆ. ಆದರೆ ವಾಸ್ತವದಲ್ಲಿ ನಮ್ಮ ಪರಿಸ್ಥಿತಿ ಇನ್ನೂ ಬಹಳಷ್ಟು ಸುಧಾರಿಸಬೇಕಾಗಿದೆ. ನಿಷ್ಪ್ರಯೋಜಕನನ್ನೂ ದುಷ್ಟನನ್ನೂ ’ನಿನ್ನ ಹುಟ್ಟಿನ ಸಾರ್ಥಕತೆ ಎಂದರೆ ಅದು ಕೇವಲ ನಿನ್ನ ತಾಯಿಯ ಯೌವನವನ್ನು ಕಸಿದುಕೊಂಡದಷ್ಟೇ’ ಎಂದು ಹಿಯಾಳಿಕೆಯ ಮಾತು ನಮ್ಮ ಪ್ರಾಚೀನ ವಾಙ್ಮಯದಲ್ಲಿದೆ. ಆದರೆ ತಾಯಿಯ ಪ್ರಾಣಕ್ಕೆ ಕುತ್ತು ಬರುವುದು, ಅದರಲ್ಲು ತಡೆಗಟ್ಟಬಹುದಾದ ದುರುಂತ ಬೇರೆಯೇ ಕಥೆಯನ್ನು ಹೇಳುತ್ತದೆ. ತಾಯಿಯನ್ನು ಪ್ರತ್ಯಕ್ಷ ದೇವರು ಎಂದುಕೊಂಡು ಭಾರತದಲ್ಲಿ ವರ್ಷಕ್ಕೆ 21ಲಕ್ಷ ಹೆಣ್ಣುಮಕ್ಕಳನ್ನು ಭ್ರೂಣಾವಸ್ಥೆಯಲ್ಲಿಯೇ ಹತ್ಯೆ ಮಾಡಲಾಗುತ್ತಿದೆ. ಈಗ ‘ಬೇಟಿ ಬಾಚಾವ್’ ಮತ್ತು ‘ಮಾತೃದೈವ’ – ಈ ಎರಡು ಘೋಷಣೆಗಳೂ ಒಟ್ಟಿಗೆ ಇರುವುದು ದುರಂತವೇ ಸರಿ. ಸಾಮಾಜಿಕವಾಗಿ ಇಂದಿಗೂ ಮಹಿಳೆಯರಿಗೆ ಗಂಡಸಿನಷ್ಟೇ ಕೆಲಸ ಮಾಡಿದರೂ ಕಡಿಮೆ ಸಂಬಳ. ಅದೂ ಕೇವಲ ಕೃಷಿ ಕಾರ್ಮಿಕರಲ್ಲಿ ಮಾತ್ರವಲ್ಲ. ಇಂದಿನ ಐಟಿ ಉದ್ಯಮದಲ್ಲೂ ಅದೇ ಪರಿಸ್ಥಿತಿ. ಮೈಕ್ರೊಸಾಫ್ಟ್‌ ಕಂಪನಿಯ ಚೇರ್‌ಮನ್‌ ಇದಕ್ಕೆ ಉತ್ತರಿಸಿದ್ದು ಹೀಗೆ: ‘ಅವರು ಮಕ್ಕಳು ಹಡೆಯುತ್ತಾರೆ, ಅದಕ್ಕೆ ಆ ರೀತಿ!’

ADVERTISEMENT

ಆರೋಗ್ಯದ ದೃಷ್ಟಿಯಿಂದ ಶೇ 70 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇನ್ನೂ ಶೇ 30ರಷ್ಟು ಮಹಿಳೆಯರು ಅನಕ್ಷರಸ್ಥರು. 18 ವರ್ಷದ ವಯೋಮಿತಿಯೊಳಗೆ ಮದುವೆಯಾಗುವವರು ಶೇ 20. ಗರ್ಭಿಣಿಯರಾಗಿದ್ದಾಗ ಕಬ್ಬಿಣ ಮತ್ತು ಫೋಲಿಕ್‌ ಆಸಿಡ್ ಮಾತ್ರೆಯನ್ನು 100 ದಿನ ಸರಿಯಾಗಿ ತೆಗೆದುಕೊಳ್ಳುವವರು ಕೇವಲ ಶೇ 30ರಷ್ಟು ಮಾತ್ರ. ತಾಯಿಯ ಹಾಲು ಮಗುವಿಗೆ ಶ್ರೇಷ್ಠ. ಆದರೆ ತಾಯಿಯ ಊಟ ಇನ್ನೂ ಮುಖ್ಯ. ಇತ್ತೀಚಿನ ವೈಜ್ಞಾನಿಕ ಮಾಹಿತಿಯ ಪ್ರಕಾರ ನಮ್ಮ ಆರೋಗ್ಯ ನಮ್ಮ ಅಜ್ಜಿಯು ಮಾಡಿದ ಊಟದ ಮೇಲೂ ಅವಲಂಬಿಸಿದೆ ಎನ್ನುತ್ತಾರೆ. ಇದು ಕೇವಲ ನಿಮ್ಮ ಊಟಕ್ಕೆ ಸೀಮಿತವಲ್ಲ. ಕಾರಣ ನಿಮ್ಮ ಅಜ್ಜಿಯ ಊಟದ ಕೊರತೆಯಿಂದ ಕೆಲವು ಉತ್ತಮ ಜೀನ್ಸ್‌ಗಳು ಕಾರ್ಯಸ್ಥಗಿತಗೊಂಡು ನಿಮಗೆ ದಾಟಿರಬಹುದು. ಇದನ್ನು ‘ಎಪಿಜೆನೆಟಿಕ್ ಕಾರ್ಯತಂತ್ರ’ ಎನ್ನುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಅನೇಕ ಜೀವನಶೈಲಿ ರೋಗಗಳಿಗೆ ಭ್ರೂಣವಸ್ಥೆಯೇ ಮೂಲಕಾರಣ ಎನ್ನುವುದುಂಟು. ಕವಿ ವರ್ಡ್ಸ್‌ವರ್ತ್‌ ‘ಮಗುವೇ ಮಾನವನ ತಂದೆ’ ಎಂದು ರೂಪಕವಾಗಿ ಉದ್ಗರಿಸಿದ್ದರೆ, ವೈದ್ಯಕೀಯವಾಗಿ ‘ಭ್ರೂಣವೇ ತಂದೆ’ ಎನ್ನುತ್ತಾರೆ (Fetus is the father of man). ಕಾರಣ ಭ್ರೂಣವಸ್ಥೆಯಲ್ಲಿ ಅಪೌಷ್ಟಿಕತೆ ಇದ್ದಾಗ ಕಡಿಮೆ ಪೌಷ್ಟಿಕಾಂಶದಲ್ಲಿ ಬದುಕುವ ವ್ಯವಸ್ಥೆಗೆ ತನ್ನನ್ನು ತಾನು ಹೊಂದಿಸಿಕೊಳ್ಳುತ್ತದೆ. ಹಾಗೆ ಜನಿಸಿದ ಮಗುವಿನ ತೂಕ ಕಡಿಮೆ ಇದ್ದು, ತನ್ನ ಇಕ್ಕಟ್ಟಾದ ಬದುಕಿನ ಹಾದಿ ತಾನೇ ನಿರ್ಮಿಸಿಕೊಂಡಿದ್ದಾಗ ಮುಂದೆ ಹೆಚ್ಚು ಆಹಾರಸೇವನೆಯು ಸರಿಯಾಗಿ ಪಚನಗೊಳ್ಳದೆ ಬೊಜ್ಜಿಗೆ ಕಾರಣವಾಗಬಹುದು. ಇದನ್ನು ‘ಬಾರ್ಕರ್ ಸಿದ್ಧಾಂತ’ ಎನ್ನುತ್ತಾರೆ. ವಯಸ್ಕಜೀವನದ ಪೌಷ್ಟಿಕಾಂಶ ಪರಿಸ್ಥಿತಿಗೂ ಭ್ರೂಣಾವಸ್ಥೆಯ ಪರಿಸ್ಥಿತಿಗೂ ಹೊಂದಿಕೊಳ್ಳಲಾಗದ ಜೀನ್ ಪ್ರೋಗ್ರಾಂನಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದು. ನಮ್ಮಲ್ಲಿ ಸುಮಾರು ಶೇ 25 ಮಹಿಳೆಯರು ಕನಿಷ್ಠ ತೂಕದ ಮಾಪನ ಮಟ್ಟಕಿಂತ ಕಡಿಮೆ ಇದ್ದಾರೆ. ಹಾಗೆಯೇ ಇತ್ತೀಚೆಗೆ ಬೊಜ್ಜುರೋಗ ಕೂಡ ಅಷ್ಟೇ ಪ್ರಮಾಣಕ್ಕೇರಿದೆ. ಈ ಎರಡು ಪರಿಸ್ಥಿತಿ ಒಳ್ಳೆಯದಲ್ಲ. ಸಾಮಾಜಿಕವಾಗಿಯೂ ಮಹಿಳೆಯರು ‘Eat last and least’ ಎನ್ನುವುದುಂಟು. ಹೀಗಾಗಿ ತಾಯಿಯನ್ನು ಕುರಿತ ಪ್ರೀತಿ ಬರೀ ಕಾವ್ಯ, ಕವಿತೆ, ಪುರಾಣಕ್ಕೆ ಸೀಮಿತವಾಗದೆ ವಾಸ್ತವ ಸ್ಥಿತಿಗತಿಗಳಲ್ಲಿ ಕಾಣುವುದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.