ADVERTISEMENT

ಸಂತಸದ ವೃದ್ಧಾಪ್ಯ

ಶಶಿ ಕುಟ್ಟಪ್ಪ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST
ಸಂತಸದ ವೃದ್ಧಾಪ್ಯ
ಸಂತಸದ ವೃದ್ಧಾಪ್ಯ   

ವಿಶ್ವದಲ್ಲಿನ ಕ್ಷಿಪ್ರ ಆರ್ಥಿಕ ಪ್ರಗತಿಯೊಂದಿಗೆ ಬದುಕಿನ ನಿರೀಕ್ಷೆಗಳೂ ಹೆಚ್ಚಾಗುತ್ತಿವೆ. ಮುಪ್ಪಾದ ವ್ಯಕ್ತಿಗಳ ಸಂಖ್ಯೆ ಸಹ ಹೆಚ್ಚಿದೆ. 2050ರ ವೇಳೆಗೆ ಭಾರತದಲ್ಲಿ ವಯೋವೃದ್ಧರ ಸಂಖ್ಯೆ 62 ದಶಲಕ್ಷದಿಂದ 240 ದಶಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ವಯಸ್ಸಾಗುವುದು ಸಹಜ ಮತ್ತು ನಿರಂತರ ಪ್ರಕ್ರಿಯೆ. ಅದು ಹುಟ್ಟಿನಿಂದಲೇ ಆರಂಭವಾಗುತ್ತದೆ. ಯಾರೂ ವಯಸ್ಸಿನಿಂದ ತಪ್ಪಿಸಿಕೊಳ್ಳಲು, ವಯೋಮಾನದ ಪರಿಣಾಮಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಯುವಕರಾಗಿದ್ದಾಗ ವಯೋಮಾನ ಎಲ್ಲ ಧನಾತ್ಮಕ ಕ್ರಿಯೆಗಳೊಂದಿಗೆ ಹೊಂದಿಕೊಂಡಿರುತ್ತದೆ.

ಬೆಳವಣಿಗೆ, ಪರಿಪಕ್ವತೆ ಮತ್ತು ಆವಿಷ್ಕಾರಗಳು ಯೌವನದೊಂದಿಗೆ ಥಳಕು ಹಾಕಿಕೊಂಡಿರುತ್ತವೆ. ಮನುಷ್ಯನ ಹಲವಾರು ಸಾಮರ್ಥ್ಯಗಳು 30 ವರ್ಷಕ್ಕಿಂತ ಮೊದಲು ಉಚ್ಛ್ರಾಯ ಸ್ಥಿತಿಯಲ್ಲಿರುತ್ತವೆ. ಆದರೆ ನಂತರ ವಯೋಮಾನ ಅಂಗಾಂಗಗಳಲ್ಲಿ ತರುವ ಬದಲಾವಣೆಗಳನ್ನು ನಾವು ಕಡೆಗಣಿಸುತ್ತೇವೆ.

ವಯಸ್ಸಾಗುತ್ತಾ ಹೋದಂತೆ ಕೂದಲು ತೆಳುವಾಗಿ ಬೂದು ಬಣ್ಣಕ್ಕೆ ತಿರುಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ. 30 ವರ್ಷದ ಬಳಿಕ ಸ್ನಾಯುಗಳ ಶಕ್ತಿ ಕುಂದಲು ಆರಂಭವಾಗುತ್ತದೆ. 40 ವರ್ಷದ ನಂತರ ಮೂಳೆಯ ಶಕ್ತಿ ಕುಗ್ಗುತ್ತದೆ. ಈಗಿನ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದುದು ಅವಶ್ಯ.

ಭಾರತ, ಚೀನಾದಂಥ ಮುಂಚೂಣಿ ರಾಷ್ಟ್ರಗಳಲ್ಲಿ ಬದುಕಿನ ನಿರೀಕ್ಷೆಗಳು ಹೆಚ್ಚುತ್ತಿರುವುದರ ಜೊತೆಗೇ, ವಯಸ್ಸಾದಂತೆ ಗ್ಲೂಕೋಸ್ ಮಟ್ಟದಲ್ಲಿ ಏರಿಳಿತ, ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಭಾರತೀಯರು ಸಾಮಾನ್ಯವಾಗಿ ಮಧುಮೇಹ, ಹೃದಯಾಘಾತ, ಕೊಲೆಸ್ಟ್ರಾಲ್, ಪಿತ್ತಜನಕಾಂಗದ ಸಮಸ್ಯೆಗಳಿಂದ ಬಳಲುತ್ತಾರೆ. ಆನುವಂಶೀಯತೆ, ಪೌಷ್ಟಿಕ ಆಹಾರ ಸೇವನೆಯ ಕೊರತೆ, ಜೀವನಶೈಲಿ ಮೊದಲಾದವು ಆರೋಗ್ಯ ಸಮಸ್ಯೆಗೆ ಎಡೆ ಮಾಡುತ್ತಿವೆ.

ವಿಶ್ವ ಆರೋಗ್ಯ ಸಂಘಟನೆಯು ಭಾರತವನ್ನು ಮಧುಮೇಹದ ರಾಜಧಾನಿ ಎಂದು ಘೋಷಿಸಿದೆ. 35 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ಮಂದಿಯಲ್ಲಿ ಗರಿಷ್ಠ ಪ್ರಮಾಣದ ಹೃದಯಾಘಾತಕ್ಕೆ ದೇಶ ಸಾಕ್ಷಿಯಾಗಿದೆ. 2020ರ ವೇಳೆಗೆ ಇಲ್ಲಿನ ಶೇ 30ರಷ್ಟು ಮಂದಿ ಸ್ಥೂಲಕಾಯದವರಾಗಿರುತ್ತಾರೆ ಎಂದು ಅಂದಾಜು ಮಾಡಲಾಗಿದೆ. ದೇಶದಲ್ಲಿ ಕೋಟ್ಯಂತರ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಮುಂದಿನ ಎರಡು ದಶಕಗಳಲ್ಲಿ ಈ ಪ್ರಮಾಣ ಮೇರೆ ಮೀರಲಿರುವ  ಎಚ್ಚರಿಕೆಯ ಗಂಟೆ ಈಗಾಗಲೇ ನಮಗೆ ಲಭಿಸಿದೆ.

ಆದ್ದರಿಂದ ವಯಸ್ಸಾಗುತ್ತಿದ್ದಂತೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕಾದುದು ಅನಿವಾರ್ಯ. ಆದರೆ ಅದಕ್ಕಾಗಿ ಯಾರದೋ ಮರ್ಜಿಗಾಗಿ ಕಾಯಬೇಕಾಗಿಲ್ಲ. ಅಂತಹ ಅವಕಾಶ ನಮ್ಮ ಕೈಯಲ್ಲೇ ಇದೆ. ದೈಹಿಕ ಚಟುವಟಿಕೆ, ಸಮತೋಲಿತ ಆಹಾರ, ಧನಾತ್ಮಕ ವರ್ತನೆ, ಸೂಕ್ತ ವಿಶ್ರಾಂತಿ, ದುಶ್ಚಟಗಳಿಂದ ದೂರ ಇರುವುದರಿಂದ ಇದನ್ನು ಕಾರ್ಯರೂಪಕ್ಕೆ ತರಬಹುದು.

ವಯಸ್ಕರಿಗೆ ಆರೋಗ್ಯದ ಕೀಲಿಕೈ ಇಲ್ಲಿದೆ:
-ಸಮತೋಲಿತ ಆಹಾರ, ಪ್ರತಿನಿತ್ಯ ಮೂರು ಹೊತ್ತಿನ ಊಟ, ಸಾಕಷ್ಟು ದ್ರವಾಹಾರ (ನೀರು ಇತ್ಯಾದಿ) ಸೇವಿಸಿ
-ಪ್ರತಿನಿತ್ಯ ನಡಿಗೆ, ಕನಿಷ್ಠ 30 ನಿಮಿಷ ದೈಹಿಕ ವ್ಯಾಯಾಮ ಮಾಡಿ
-ಆರೋಗ್ಯಯುತ ಪ್ರಮಾಣದಲ್ಲಿ ದೇಹದ ತೂಕ ಕಾಪಾಡಿಕೊಳ್ಳಿ
-ಮೆದುಳನ್ನು ಸದಾ ಕ್ರಿಯಾಶೀಲವಾಗಿಡಿ- ಓದು, ಬರಹ, ಸಂಗೀತ, ಆಟ ಆಡುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ
-ಧೂಮಪಾನ ಬಿಡಿ
-ಮದ್ಯ ಸೇವನೆಗೆ ಕಡಿವಾಣ ಹಾಕಿ
-ಪ್ರತಿನಿತ್ಯ 7-8 ತಾಸು ನಿದ್ರಿಸಿ
-ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಸಮಸ್ಯೆಯನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವುದು ಒಳ್ಳೆಯದು
-ಸಾಮಾಜಿಕವಾಗಿ ಕ್ರಿಯಾಶೀಲರಾಗಿ ಮತ್ತು ಕೆಲಸದಲ್ಲಿ ಮಗ್ನರಾಗಿ
-ಸಕಾರಾತ್ಮಕ ವರ್ತನೆ ರೂಢಿಸಿಕೊಳ್ಳಿ
-ಪೌಷ್ಟಿಕ, ಸಮತೋಲಿತ ಆಹಾರ ಸೇವನೆ ಅವಶ್ಯ

ಇದನ್ನೆಲ್ಲ ಅನುಸರಿಸಲು ಈಗಾಗಲೇ ತಡವಾಯಿತು ಎಂದುಕೊಳ್ಳಬೇಡಿ. ಆರೋಗ್ಯಯುತ ಜೀವನಶೈಲಿಯನ್ನು ಇಂದಿನಿಂದಲೇ ಅಳವಡಿಸಿಕೊಳ್ಳಲು ಆರಂಭಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.