ADVERTISEMENT

ಹೀಗಿರಲಿ ಹಿರಿಯರ ಆಹಾರ

ಡಾ.ಶಶಿಕಲಾ ಕೃಷ್ಣಮೂರ್ತಿ
Published 30 ನವೆಂಬರ್ 2012, 20:33 IST
Last Updated 30 ನವೆಂಬರ್ 2012, 20:33 IST
ಹೀಗಿರಲಿ ಹಿರಿಯರ ಆಹಾರ
ಹೀಗಿರಲಿ ಹಿರಿಯರ ಆಹಾರ   

ಮುಪ್ಪು ಯಾರನ್ನೂ ಬಿಡುವುದಿಲ್ಲ. ವಯಸ್ಸಾಗುತ್ತಿದ್ದಂತೆ ಅನೇಕ ಕಾಯಿಲೆಗಳು ನಮ್ಮನ್ನು ಬೆನ್ನಟ್ಟಿ ಬರುತ್ತವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮೂಳೆ ಸವೆತ, ದೇಹದ ವಿವಿಧ ಭಾಗಗಳು ಸವೆಯುತ್ತಾ ಕಾರ್ಯವೈಖರಿ ಕ್ಷೀಣಿಸತೊಡಗಿದಂತೆ ಕಾಣಿಸಿಕೊಳ್ಳುವ ಕಾಯಿಲೆಗಳು, ಜೊತೆಗೆ ಬೊಜ್ಜಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

ಹಾಗಿದ್ದರೆ ವಯಸ್ಸಾದವರು ಎಂತಹ ಆಹಾರ ಸೇವಿಸಬೇಕು ಎಂಬುದು ಅವರ ದಿನಚರಿ, ಕಾರ್ಯ ವೈಖರಿಯ ಜೊತೆಗೆ ಮೇಲೆ ತಿಳಿಸಿದಂಥ ರೋಗಗಳು ಅವರಿಗಿವೆಯೇ ಎಂಬುದನ್ನು ಆಧರಿಸಿರುತ್ತದೆ.

ವಯಸ್ಸಾದಂತೆ, ದೇಹಕ್ಕೆ ಶಕ್ತಿಯ ಅವಶ್ಯಕತೆ ಕಡಿಮೆಯಾಗುವುದಂತೂ ನಿಜ. ಅದಕ್ಕಾಗಿ ಅವರ ಆಹಾರ ಸೇವನೆಯೂ ಕಡಿಮೆ ಇರಬೇಕಾಗುತ್ತದೆ. ಆಹಾರದ ಅವಶ್ಯಕತೆ ಕಡಿಮೆಯಾದಾರೂ ಅವರ ಆರೋಗ್ಯಕ್ಕೆ ಅತ್ಯಧಿಕವಾದ ಜೀವಸತ್ವಗಳು ಹಾಗೂ ಖನಿಜಾಂಶ ಅವಶ್ಯ. ಆದ್ದರಿಂದ ಯಥೇಚ್ಛವಾದ ತರಕಾರಿ, ಸೊಪ್ಪು, ಹಣ್ಣುಗಳ ಸೇವನೆ ಒಳಿತು.

ADVERTISEMENT

ಕರಿದ ಪದಾರ್ಥಗಳು, ಅತಿ ಖಾರದ ಪದಾರ್ಥ, ಜಿಡ್ಡು ಭರಿತ ಆಹಾರ ಸೇವನೆ ಮಿತಿಯಾಗಿರಬೇಕು. ಹೊಟ್ಟೆಭಾರ, ಅಸಿಡಿಟಿ, ತುಂಬಾ ಊಟ ಮಾಡುವುದು ಕಷ್ಟ ಎಂಬಂಥ ತೊಂದರೆಗಳನ್ನು ವಯಸ್ಸಾದವರು ಹೇಳುತ್ತಿರುತ್ತಾರೆ. ಟೀ, ಕಾಫಿ ಸೇವನೆ ಮಿತಿಯಾಗಿರಬೇಕು. ಇತರ ದ್ರವರೂಪದ ಆಹಾರವನ್ನು ಹೆಚ್ಚು ಸೇವಿಸಬಹುದು (ನೀರು, ಮಜ್ಜಿಗೆ, ಹಾಲು, ಸಕ್ಕರೆಯಿಲ್ಲದ ಹಣ್ಣಿನ ರಸ)

ಮದ್ಯಪಾನ ಹಾಗೂ ಯಾವುದೇ ರೀತಿಯ ತಂಬಾಕಿನ ಸೇವನೆಗೆ ವಿದಾಯ ಹೇಳಬೇಕು.
ಒಂದೇ ಬಾರಿ ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದು ಸರಿಯಲ್ಲ. ಹಾಗೂ ಆ ರೀತಿ ಊಟ ಸೇವಿಸುವುದೂ ಕಷ್ಟ. ದಿನದಲ್ಲಿ 3-4 ಬಾರಿ ಸಣ್ಣ ಪ್ರಮಾಣದ ಆಹಾರ ಸೇವನೆ ಒಳಿತು. ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಉಪಾಹಾರ, ರಾತ್ರಿ ಊಟ ಎಂಬಂತೆ 4 ಗಂಟೆಗಳಿಗೊಮ್ಮೆ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಬೇಕು.

ವಯಸ್ಸಾದವರಿಗೆ ಹಲ್ಲಿನ ಸಮಸ್ಯೆಯೂ ಸಾಮಾನ್ಯ. ಅಲುಗಾಡುವ ಹಲ್ಲುಗಳು, ಹಲ್ಲುಗಳಿಲ್ಲದ ದವಡೆ, ಕಟ್ಟಿಸಿಕೊಂಡ ಕೃತಕ ದಂತ ಪಂಕ್ತಿ ಇವೆಲ್ಲವೂ ಪಚನ ಕ್ರಿಯೆಗೆ ತೊಡಕುಂಟು ಮಾಡಬಹುದು. ಸರಿಯಾಗಿ ಆಹಾರವನ್ನು ಜಗಿಯಲಾಗದೇ ಇರುವುದರಿಂದ ಮೆತ್ತಗಿನ ಆಹಾರ ಸೇವನೆ ಒಳ್ಳೆಯದು. ಗಟ್ಟಿಯಾದ ತರಕಾರಿಯನ್ನು ತುರಿದು ಸೇವಿಸಬೇಕು. ಕಿಚಡಿ, ಹಣ್ಣಿನ ರಸ, ಗಂಜಿ ಮುಂತಾದವು ಸೇವನೆಗೆ ಉತ್ತಮ.

ವಯಸ್ಸಾದಂತೆ ಮಲಬದ್ಧತೆಯೂ ಒಂದು ಸಮಸ್ಯೆ. ನಾರಿನಂಶ ಇರುವ ತರಕಾರಿಗಳು, ಹಣ್ಣುಗಳ ಸೇವನೆ, (ಬಾಳೆಹಣ್ಣು, ಮೂಸಂಬಿ, ಕಿತ್ತಳೆ) ದಿನಕ್ಕೆ 8-10 ಲೋಟ ನೀರು, ರಿಫೈನ್ಡ್ ಹಿಟ್ಟಿಗಿಂತ ಧಾನ್ಯಗಳನ್ನು ಬೀಸಿ ತಯಾರಿಸಿದ ಹಿಟ್ಟಿನಿಂದ ಸಿದ್ಧಪಡಿಸಿದ ಆಹಾರ, ಸೊಪ್ಪು, ಸೂಪ್ ಮುಂತಾದವುಗಳನ್ನು ಸೇವಿಸಬೇಕು.

ಕಡಿಮೆ ಕೊಬ್ಬಿನಂಶ ಇರುವ ಹಾಲು, ಸಸ್ಯಜನ್ಯ ಎಣ್ಣೆ (ಸೂರ್ಯಕಾಂತಿ, ಕಾರ್ನ್ ಆಯಿಲ್, ಸೋಯಾ ಎಣ್ಣೆ) ಬಳಸುವುದು ಒಳಿತು.ಅತಿಯಾದ ಸಿಹಿ ಆಹಾರವನ್ನು ವರ್ಜಿಸಬೇಕು. (ಸಿಹಿ ತಿನಿಸುಗಳು, ಮಿಠಾಯಿ, ಕೇಕ್, ಐಸ್‌ಕ್ರೀಂ, ಚಾಕೊಲೇಟ್‌ಗಳು, ಜ್ಯಾಮ್, ತಂಪು ಪಾನೀಯಗಳು)

ಬಾಳೆಹಣ್ಣು, ಮಾವಿನಹಣ್ಣು, ಸಪೋಟ, ಆಲೂಗೆಡ್ಡೆ, ಗೆಣಸು ಮುಂತಾದ ಅತ್ಯಂತ ಸಿಹಿಯಾದ ಹಣ್ಣುಗಳನ್ನು ಬೊಜ್ಜು ಹಾಗೂ ಸಕ್ಕರೆ ಕಾಯಿಲೆ ಇರುವವರು ಬಹಳ ಮಿತಿಯಾಗಿ ತಿನ್ನಬೇಕು.
ಕಡಿಮೆ ಉಪ್ಪು ಸೇವನೆ ದೀರ್ಘಾಯುಷ್ಯದ ಗುಟ್ಟು ಎನ್ನಲಾಗುತ್ತದೆ. ಹೀಗಾಗಿ ಉಪ್ಪು ಸೇವನೆಯನ್ನು ಅಧಿಕ ರಕ್ತಡೊತ್ತಡ  ಇರುವವರಷ್ಟೇ ಅಲ್ಲ, ಎಲ್ಲರೂ ಮಿತಗೊಳಿಸಬೇಕು.

ಉಪ್ಪಿನಕಾಯಿ, ಚಟ್ನಿ, ಸಮೋಸ, ಚಿಪ್ಸ್‌ನಂತಹ ಆಹಾರ ಪದಾರ್ಥಗಳು ಉಪ್ಪುಮಯ ಆಗಿರುತ್ತವೆ ಎಂಬುದನ್ನು ನೆನಪಿಡಿ.ಕಿಂಚಿತ್ತಾದರೂ ದೈಹಿಕ ಚಟುವಟಿಕೆ ಇರಲೇ ಬೇಕು. ನಡಿಗೆಯು ಅತ್ಯಂತ ಉತ್ತಮ ವ್ಯಾಯಾಮ. ದಿನನಿತ್ಯ ನಡಿಗೆ ಆರೋಗ್ಯಕರ. ನಡೆಯಿರಿ, ಆರೋಗ್ಯವಂತರಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.