ADVERTISEMENT

ಹಿರಿಯರಲ್ಲಿ ಕೊರೊನಾ ಆತಂಕ: ದೂರ ಮಾಡಲು ಐದು ಸರಳ ಸೂತ್ರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 19:32 IST
Last Updated 23 ಜುಲೈ 2020, 19:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇಡೀ ಜಗತ್ತನ್ನು ಆವರಿಸಿರುವ ಕೋವಿಡ್‌–19 ವೈರಸ್ ಜನಜೀವನವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೊರೊನಾದಿಂದಾಗಿ ಹೊಸ ಜೀವನಶೈಲಿಗೆ ನಾವು ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಸಂಕಷ್ಟದ ಸಮಯದಲ್ಲಿ ಕೊರೊನಾ ಸೋಂಕಿಗೆ ತುತ್ತಾಗುವ ಭೀತಿಯಲ್ಲಿರುವ ವಯಸ್ಸಾದ ಅಪ್ಪ, ಅಮ್ಮಂದಿರ ಆರೋಗ್ಯ ರಕ್ಷಣೆ ಮಕ್ಕಳಿಗೆ ನಿಜಕ್ಕೂ ಸವಾಲಿನ ಕೆಲಸ. ಪ್ರತಿದಿನ ಮಾಧ್ಯಮಗಳಲ್ಲಿ ಸೋಂಕಿತರ ಮತ್ತು ಸಾವಿನ ಸಂಖ್ಯೆ ಕೇಳಿ ಮನೆಯಲ್ಲಿರುವ ಹಿರಿಯ ಜೀವಗಳು ನಮಗೆ ಗೊತ್ತಾಗದಂತೆ ಒಳಗೊಳಗೆ ಭಯದ ನೆರಳಲ್ಲಿ ಬದುಕುತ್ತಿದ್ದಾರೆ.

ಒಂದು ವೇಳೆ ಪೋಷಕರು, ಮಕ್ಕಳೊಂದಿಗೆ ವಾಸವಾಗಿರದಿದ್ದರೆ ಒಂಟಿತನದ ಜತೆಗೆ ದುಗುಡ ಕೂಡ ಅವರನ್ನು ಕಾಡುತ್ತಿರುತ್ತದೆ. ಇಂಥ ಕಠಿಣ ಸಮಯದಲ್ಲಿ ಅವರು ಒತ್ತಡ, ಆತಂಕಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಮಕ್ಕಳ ಜವಾಬ್ದಾರಿ. ಅದಕ್ಕಾಗಿ ಮನೋರೋಗ ತಜ್ಞರು ರೂಪಿಸಿರುವ ಐದು ಸರಳ ಸೂತ್ರಗಳು ಇಲ್ಲಿವೆ.

ADVERTISEMENT

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯರು ಹಾಯ್ದುಹೋಗುತ್ತಿರುವ ಮಾನಸಿಕ ಹಂತಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ. ಹೆತ್ತವರ ಮಾತು, ವರ್ತನೆ ಮತ್ತು ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಅವರಲ್ಲಿಯಬದಲಾವಣೆಗಳನ್ನು ಗುರುತಿಸಿ, ಅವರುನಿಮ್ಮಿಂದ ಯಾವ ನೆರವು ಬಯಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಪ್ರಯತ್ನಿಸಿ. ನಿಧಾನವಾಗಿ ಅವರನ್ನು ಆತಂಕದಿಂದ ಹೊರತಂದು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಯುತ ಜೀವನ ರೂಪಿಸುವ ಹೊಣೆ ನಿಮ್ಮದಾಗಲಿ.

* ಪೋಷಕರಿಗೆ ಇರಲಿ ಸರಿಯಾದ ಮಾಹಿತಿ
ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಮಾಹಿತಿಗಳ ಪ್ರವಾಹವೇ ಹರಿದು ಬರುತ್ತಿವೆ. ಕೈಯಲ್ಲಿರುವ ಮೊಬೈಲ್‌ ಮತ್ತು ಮನೆಯಲ್ಲಿರುವ ಟಿ.ವಿಗಳಲ್ಲಿ ಬರುವ ಇಂಥ ಭಯಾನಕ ಮತ್ತು ನಕಾರಾತ್ಮಕ ಮಾಹಿತಿಗಳಿಂದ ವಯಸ್ಸಾದ ಪೋಷಕರು ಮಾನಸಿಕವಾಗಿ ಘಾಸಿಗೊಳಗಾಗುತ್ತಾರೆ. ಹಾಗಾಗಿ ಸಮರ್ಪಕ ಮತ್ತು ಸಕಾರಾತ್ಮಕ ಮಾಹಿತಿಗಳನ್ನು ಮಾತ್ರಅವರೊಂದಿಗೆ ಹಂಚಿಕೊಳ್ಳಬೇಕು. ಕೊರೊನಾದಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ಸಮಪರ್ಕವಾದ ಮಾಹಿತಿ ನೀಡುವ ಸುದ್ದಿ, ವಿಡಿಯೊ, ಲೇಖನಗಳನ್ನು ಮಾತ್ರ ಅವರೊಂದಿಗೆ ಹಂಚಿಕೊಳ್ಳಿ. ಪ್ರವಾಹ ರೂಪದಲ್ಲಿ ಬಂದು ಬೀಳುವ ಅತಿಯಾದ ಮಾಹಿತಿ ಅವರಲ್ಲಿ ಅನಗತ್ಯ ಗೊಂದಲ ಮೂಡಿಸಬಹುದು.

* ಪೋಷಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಿ
ಒಂದು ವೇಳೆ ಪೋಷಕರು ನಿಮ್ಮಿಂದ ದೂರದಲ್ಲಿದ್ದರೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಅದಕ್ಕಾಗಿ ಲಭ್ಯವಿರುವ ತಂತ್ರಜ್ಞಾನ, ಸಂಪರ್ಕ ಸಾಧನಗಳನ್ನು ಬಳಸಿಕೊಳ್ಳಿ. ಮೊಬೈಲ್‌ ಫೋನ್‌ ಮತ್ತು ವಿಡಿಯೊ ಕಾಲ್‌ ಮೂಲಕ ಅವರೊಂದಿಗೆ ದಿನವೂ ಮಾತನಾಡಿ. ಪ್ರೀತಿಯಿಂದ ಮಾತನಾಡಿಸಿ,ಆರೋಗ್ಯ ವಿಚಾರಿಸಿಕೊಳ್ಳಿ. ನೀವು ತೋರುವ ಕಾಳಜಿ ಅವರಲ್ಲಿರುವ ಮಾನಸಿಕ ಒತ್ತಡ, ಆತಂಕಗಳನ್ನು ದೂರ ಮಾಡಿ ನೆಮ್ಮದಿ ನೀಡಬಲ್ಲದು. ನೀವು ತೋರಿಸುವ ಅಕ್ಕರೆ ಮತ್ತು ಆರೈಕೆ ಅವರಲ್ಲಿ ಮನೋಬಲ ತುಂಬುತ್ತದೆ. ಆಗಾಗ ಅವರು ತೆಗೆದುಕೊಳ್ಳುವ ಔಷಧಿಗಳ ಬಗ್ಗೆ ವಿಚಾರಿಸಿ. ಹಾಲು, ಹಣ್ಣು, ಕಿರಾಣಿ ಮುಂತಾದ ಜೀವನಾವಶ್ಯಕ ವಸ್ತುಗಳ ಖರೀದಿಸುವ ಜವಾಬ್ದಾರಿಯನ್ನು ನೀವೆ ನೋಡಿಕೊಳ್ಳಿ.

* ಸಾಮಾಜಿಕ ಅಂತರ: ಇರಲಿ ನಿರಂತರ
ಇವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದಿನಮಾನಗಳು. ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಪೋಷಕರಿಗೆ ತಿಳಿಹೇಳಿ. ಈ ಸಮಯದಲ್ಲಿ ಆದಷ್ಟೂ ಜನಸಂಪರ್ಕ ಕಡಿಮೆಗೊಳಿಸುವಲ್ಲಿ ಇರುವ ಲಾಭಗಳ ಬಗ್ಗೆ ಮನವರಿಕೆ ಮಾಡಿ.

* ತಂತ್ರಜ್ಞಾನ ಬಳಕೆ ಕಲಿಸಿಕೊಡಿ
ಎಲ್ಲರೊಂದಿಗೆ ವರ್ಚುವಲ್‌ ಆಗಿ ಸಂಪರ್ಕದಲ್ಲಿರಲು ಹೊಸ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುವುದನ್ನು ಅವರಿಗೆ ಕಲಿಸಿಕೊಡಿ. ವಿಡಿಯೊ ಕಾಲ್‌, ವಾಟ್ಸ್ ಆ್ಯಪ್‌, ಫೇಸ್‌ಬುಕ್‌, ಝೂಮ್‌ ಮುಂತಾದ ತಂತ್ರಜ್ಞಾನ ಬಳಕೆ ಅಭ್ಯಾಸ ಮಾಡಿಸಿ.

* ಆಪತ್ಬಾಂಧವರ ಸಂಪರ್ಕ ಸಂಖ್ಯೆಗಳು ಸದಾ ಜೊತೆಗಿರಲಿ
ಹೆತ್ತವರಿಂದ ದೂರ ಇರುವ ಮಕ್ಕಳು ತಮ್ಮ ಪೋಷಕರಿಗೆ ತುರ್ತು ಸಂದರ್ಭದಲ್ಲಿ ಯಾರೆಲ್ಲ ನೆರವಿಗೆ ಬರಬಹುದು ಎಂಬ ಪಟ್ಟಿ ತಯಾರಿಸಿ. ಮನೆಯ ಸುತ್ತಮುತ್ತಲಿನ ಮತ್ತು ತಕ್ಷಣ ನೆರವಿಗೆ ಬರಬಹುದಾದ ವ್ಯಕ್ತಿಗಳ ಸಂಪರ್ಕ ಸಂಖ್ಯೆಗಳನ್ನು ಯಾವಾಗಲು ನಿಮ್ಮ ಬಳಿ ಇಟ್ಟುಕೊಳ್ಳಿ. ಪೋಷಕರ ಮೊಬೈಲ್‌ಗಳ ಸ್ಪೀಡ್‌ ಡಯಲ್‌ನಲ್ಲಿ ಅಂಥ ಸಂಖ್ಯೆಗಳನ್ನು ಫೀಡ್‌ ಮಾಡಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.