ADVERTISEMENT

ಕೋವಿಡ್‌ಗೆ ಭಾರತದ ಮೊದಲ ಲಸಿಕೆ ಕೋವಾಕ್ಸಿನ್:‌ ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2020, 7:29 IST
Last Updated 30 ಜೂನ್ 2020, 7:29 IST
ಕೊರೊನಾ ವೈರಸ್‌ ಲಸಿಕೆಯ ಪ್ರಾತಿನಿಧಿಕ ಚಿತ್ರ
ಕೊರೊನಾ ವೈರಸ್‌ ಲಸಿಕೆಯ ಪ್ರಾತಿನಿಧಿಕ ಚಿತ್ರ    

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಕರೋನವೈರಸ್ ಲಸಿಕೆ ಕೋವಾಕ್ಸಿನ್ ಮಾನವರ ಮೇಲಿನ ಚಿಕಿತ್ಸಾ ಪ್ರಯೋಗ (ಹ್ಯೂಮನ್‌ ಕ್ಲಿನಿಕಲ್‌ ಟ್ರಯಲ್‌) ಪ್ರಾರಂಭಿಸಲು ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (ಡಿಸಿಜಿಐ)ಯಿಂದ ಅನುಮೋದನೆ ಪಡೆದಿದೆ. ವಿಸ್‌ಕಾನ್ಸಿನ್‌ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತನ್ನ 3 ಕೋವಿಡ್ -19 ಲಸಿಕೆಗಳನ್ನು ಘೋಷಿಸಲು ಸಂತೋಷವಾಗಿದೆ ಎಂದು ಕೋವಾಕ್ಸಿನ್‌ ತಯಾರಕ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಇಡೀ ಜಗತ್ತನ್ನು ಆವರಿಸಿರುವ, ಕೊರೊನಾ ವೈರಸ್‌ಗೆ ನೀಡಲಾಗುವ ಲಸಿಕೆ - ಕೋವಾಕ್ಸಿನ್. ಇದು ಭಾರತದ ಮೊದಲ ದೇಶಿಯ, ಇನ್ನಷ್ಟೇ ಪ್ರಯೋಗವಾಗಬೇಕಾದ ಸಂಭಾವ್ಯ ಲಸಿಕೆಯಾಗಿದೆ. ವಿಸ್‌ಕಾನ್ಸಿನ್‌ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಇದರ ಪ್ರಯೋಗಕ್ಕೆ ಡಿಸಿಜಿಐನ ಅನುಮೋದನೆ ದೊರಕಿದೆ. ಭಾರತ್‌ ಬಯೋಟೆಕ್‌ ಇದರ ತಯಾರಕ ಸಂಸ್ಥೆ.

ಅಭಿವೃದ್ಧಿಪಡಿಸಿದ್ದು ಎಲ್ಲಿ?

ADVERTISEMENT

ದೇಶಿಯ ಮತ್ತು ಇನ್ನಷ್ಟೇ ಪ್ರಯೋಗಗೊಳ್ಳಬೇಕಾದ ಕೋವಾಕ್ಸಿನ್‌ ಅನ್ನು ಹೈದರಾಬಾದ್‌ನ ಭಾರತ್ ಬಯೋಟೆಕ್ಸ್ ಬಿಎಸ್ಎಲ್ -3 (ಬಯೋ-ಸೇಫ್ಟಿ ಲೆವೆಲ್ 3)ನ ‘ಜಿನೋಮ್‌ ವ್ಯಾಲಿ’ಯಲ್ಲಿ ಅಭಿವೃದ್ಧಪಡಿಸಲಾಗಿದೆ. ಬಿಎಸ್‌ಎಲ್‌–3 ಎಂದರೆ, ವೈರಸ್‌ಗಳನ್ನು ನಿಗ್ರಹಿಸಲಾದ ಮೂರನೇ ಹಂತದ ಜೈವಿಕ ಸುರಕ್ಷತಾ ತಾಣ. ಪುಣೆಯ ಎನ್‌ಐವಿಯಲ್ಲಿ SARSCoV2 ತಳಿಯನ್ನು ಪ್ರತ್ಯೇಕಿಸಿ ಭಾರತ್ ಬಯೋಟೆಕ್‌ಗೆ ವರ್ಗಾಯಿಸಲಾಗಿದೆ.

ಈ ಲಸಿಕೆಯ ವೈದ್ಯಕೀಯ ಅಧ್ಯಯನ ಪೂರ್ವ ಫಲಿತಾಂಶಗಳು ಮತ್ತು ಸುರಕ್ಷತೆ–ರೋಗ ಪ್ರತಿರೋಧಕ ಪ್ರತಿಕ್ರಿಯೆಗಳ ವರದಿಯನ್ನು ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಿಸಿಜಿಐಗೆ ಸಲ್ಲಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಹ್ಯೂಮನ್‌ ಕ್ಲಿನಿಕಲ್‌ ಟ್ರಯಲ್‌ಗೆ ಡಿಸಿಜಿಐ ಅನುಮೋದನೆ ನೀಡಿದೆ.

ಲಸಿಕೆ ಪ್ರಯೋಗ ಯಾವಾಗ?

ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗವು ಜುಲೈನಿಂದ ಪ್ರಾರಂಭವಾಗಲಿದೆ, ಆದ್ದರಿಂದ, ಲಸಿಕೆ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ‘ಕೊರೊನಾ ವೈರಸ್‌ ಲಸಿಕೆ ಮೇಲೆ ಭಾರತದ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಅಧ್ಯಯನಗಳನ್ನು ಪ್ರಪಂಚವು ಗಮನವಿಟ್ಟು ನೋಡುತ್ತಿದೆ. ಈ ವಿಚಾರದಲ್ಲಿ ದೇಶವೂ ಆಶಾಭಾವದಿಂದ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ನಲ್ಲಿ ಹೇಳಿದ್ದಾರೆ.

ಹೆಮ್ಮೆಯ ವಿಚಾರ ಎಂದ ಭಾರತ ಬಯೋಟೆಕ್‌ನ ವ್ಯವಸ್ಥಾಪಕ

‘ಕೋವಿಡ್‌–19 ವಿರುದ್ಧ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಮೊದಲ ಲಸಿಕೆ ಎಂಬ ಶ್ರೇಯ ಕೋವ್ಯಾಕ್ಸಿನ್‌ ಆಗಿದೆ, ಇದು ಹೆಮ್ಮೆ ಪಡುವ ವಿಷಯ’ ಎಂದು ಭಾರತ್‌ ಬಯೊಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಯೆಲ್ಲ ತಿಳಿಸಿದ್ದಾರೆ.

‘ಕಂಪನಿಯು ಔಷಧದ ಸುರಕ್ಷತೆ, ರೋಗ ನಿರೋಧಕತೆ ಫಲಿತಾಂಶ ಮತ್ತು ಚಿಕಿತ್ಸಾ ಪೂರ್ವ ಸ್ಥಿತಿಯ ಮಾಹಿತಿಯನ್ನು ಸಲ್ಲಿಸಲಾಗಿತ್ತು. ಇದನ್ನು ಆಧರಿಸಿ ಮೊದಲ ಮತ್ತು ಎರಡನೇ ಹಂತದ ಪ್ರಾಯೋಗಿಕ ಚಿಕಿತ್ಸೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಮಹಾನಿರ್ದೇಶಕ ಅನುಮತಿ ನೀಡಿದ್ದಾರೆ,’ ಎಂದು ಅವರು ಹೇಳಿದ್ದಾರೆ.
ಜುಲೈ ತಿಂಗಳಿಂದ ದೇಶದಾದ್ಯಂತ ಪ್ರಾಯೋಗಿಕ ಚಿಕಿತ್ಸೆ ನಡೆಸಲಾಗುವುದು. ಲಸಿಕೆಯು ಸುರಕ್ಷಿತವಾಗಿದ್ದು, ಉತ್ತಮ ಫಲಿತಾಂಶ ನೀಡಲಿದೆ ಎಂದು ಅವರು ಹೇಳಿದ್ದಾರೆ.

140 ಲಸಿಕೆಗಳು

ಜಗತ್ತಿನಾದ್ಯಂತ ಸುಮಾರು 140 ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇವುಗಳಲ್ಲಿ 16 ಲಸಿಕೆ ಮಾತ್ರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಚೀನಾದ 5, ಅಮೆರಿಕದ 3, ಇಂಗ್ಲೆಂಡ್‌ನ 2 ಮತ್ತು ಜರ್ಮನಿ, ಆಸ್ತ್ರೇಲಿಯಾ, ರಷ್ಯಾದ ತಲಾ ಒಂದು ಲಸಿಕೆ ಸೇರಿವೆ ಎಂದು ವಿಶ್ವಸಂಸ್ಥೆ ಹೇಳಿತ್ತು.

ಭಾರತ್‌ ಬಯೋಟೆಕ್‌ ಅಲ್ಲದೇ, ಭಾರತದ ಇತರ 5 ಸಂಸ್ಥೆಗಳು ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.