
ಸರಳಾ, ಒಬ್ಬ ಗೃಹಿಣಿ; ಎರಡು ಮಕ್ಕಳ ತಾಯಿ. ಪದೇ ಪದೇ ಮೂತ್ರ ಸೋಂಕಿಗೆ ಒಳಗಾಗುವ ಸರಳಾ, ಮೂತ್ರಸೋಂಕಿನ ಲಕ್ಷಣ ಕಂಡ ತಕ್ಷಣವೇ ವೈದ್ಯರು ಕೊಟ್ಟ ಎರಡು ಗುಳಿಗೆಗಳನ್ನು ನುಂಗಿ, ಸೋಂಕು ಕಡಿಮೆಯಾದ ತಕ್ಷಣವೇ ಮಾತ್ರೆಯನ್ನು ನಿಲ್ಲಿಸಿಬಿಡುತ್ತಿದ್ದಳು. ಆದರೆ ಈ ಬಾರಿ ಮಾತ್ರೆ ತೆಗೆದುಕೊಂಡರೂ ಸೋಂಕು ಕಡಿಮೆಯಾಗಲಿಲ್ಲ. ಹತ್ತಿರದ ವೈದ್ಯರಲ್ಲಿ ಮೂತ್ರ ಪರೀಕ್ಷೆ ಮಾಡಿಸಿದಾಗ ‘ಇ-ಕೊಲಿ’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗಿರುವ ಸೋಂಕು ಎಂದು ತಿಳಿಯಿತು. ಯಾವ ಮಾತ್ರೆಗಳಿಗೂ ತಗ್ಗದ ಸೋಂಕಿಗೆ ಕೊನೆಗೂ ಇಂಜೆಕ್ಷನ್ನಿನ ಮೊರೆ ಹೋಗಬೇಕಾಯಿತು.
ಪ್ರತಿ ವರ್ಷ ನವೆಂಬರ್ ತಿಂಗಳ ಮೂರನೇ ವಾರವನ್ನು ‘ವಿಶ್ವ ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧ’ದ ವಾರವಾಗಿ ಆಚರಿಸಲಾಗುತ್ತದೆ.
ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧವೆಂದರೇನು?
‘ಆ್ಯಂಟಿಮೈಕ್ರೋಬಿಯಲ್’ ಎಂದರೆ ರೋಗಾಣುಗಳಾದ ಬ್ಯಾಕ್ಟಿರೀಯಾ, ವೈರಸ್, ಫಂಗಸ್, ಪ್ಯಾರಾಸೈಟ್‌ಗಳ ವಿರುದ್ಧ ಹೋರಾಡುವ ಅಥವಾ ಕೊಲ್ಲುವ ಔಷಧಗಳು. ಎಂದರೆ ನಾವು ಬಳಸುವ ಆ್ಯಂಟಿಬಯಾಟಿಕ್ಸ್, ಆ್ಯಂಟಿಫಂಗಲ್, ಆ್ಯಂಟಿವೈರಲ್ ಔಷಧಗಳು. ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧವೆಂದರೆ – ರೋಗಾಣುಜೀವಿಗಳು ಔಷಧಗಳಿಗೆ ಪ್ರತಿರೋಧವನ್ನು ತೋರುವುದು. ಎಂದರೆ- ಔಷಧಗಳು ಕೆಲಸ ಮಾಡದೇ ಹೋಗುವುದು, ರೋಗಾಣುಗಳು ಸಾಯದೇ ಹೋಗುವುದು ಅಥವಾ ನಿಯಂತ್ರಣಕ್ಕೆ ಬಾರದೇ ಇರುವುದು.
ಉದಾಹರಣೆಗೆ ಹೇಳುವುದಾದರೆ, ಸುಲಭವಾಗಿ ಗುಣವಾಗುತ್ತಿದ್ದ ಸಾಮಾನ್ಯ ಸೋಂಕುಗಳು ಗುಣವಾಗದೇ ಇರುವುದು. ಕ್ಷಯರೋಗವು ಮೊದಲೆಲ್ಲಾ ಆರು ತಿಂಗಳ ಅವಧಿಯ ಚಿಕಿತ್ಸೆ ನೀಡಿದರೆ ಗುಣವಾಗುತ್ತಿತ್ತು. ಈಗ ಕ್ಷಯ ರೋಗಕ್ಕೆ ಡ್ರಗ್ ರೆಸಿಸ್ಟೆಂಟ್, ಏಕ್ಸ್‌ಟೆನ್ಸಿವ್ ಡ್ರಗ್ ರೆಸಿಸ್ಟೆಂಟ್ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಸರಳಾರ ಮೂತ್ರನಾಳದ ಸೋಂಕು ‘ಇ-ಕೊಲಿ’ ಎಂಬ ರೋಗಾಣುವಿನಿಂದ ಉಂಟಾಗಿರಬಹುದು. ಈ ರೋಗಾಣುವೂ ಹಲವಾರು ಔಷಧಗಳಿಗೆ ಪ್ರತಿರೋಧವನ್ನು ತೋರುತ್ತದೆ.
ಯಾಕೆ ಈ ಪ್ರತಿರೋಧ?
ಔಷಧಗಳ ತಪ್ಪು ಅಥವಾ ಅತಿಯಾದ ಬಳಕೆಯಿಂದ ಈ ರೀತಿಯ ಪ್ರತಿರೋಧದ ಪರಿಸ್ಥಿತಿ ಉಂಟಾಗಬಲ್ಲದು. ನಾವು ಮಾಡುವ ತಪ್ಪುಗಳ ಪಟ್ಟಿ ಹೀಗಿದೆ:
l ವೈದ್ಯರ ಸಲಹೆಯಿಲ್ಲದೇ ಆ್ಯಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದು. ಸ್ವಲ್ಪ ಗುಣವಾದಂತೆ ಅನ್ನಿಸಿದ ತಕ್ಷಣವೇ , ಈ ಆ್ಯಂಟಿಬಯಾಟಿಕ್ ಬಳಕೆಯನ್ನು ನಿಲ್ಲಿಸುವುದು.
l ಸಣ್ಣ ಜ್ವರ, ಕೆಮ್ಮುಗಳಿಗೂ ಆ್ಯಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದು.
l ಸ್ವಚ್ಛತೆಯ ಕೊರತೆ. ಆಸ್ಪತ್ರೆಯಲ್ಲಿ ಸೋಂಕು ಉಂಟಾಗುವ ಅಪಾಯ.
ಪರಿಣಾಮಗಳು
l ಸಾಮಾನ್ಯ ಸೋಂಕುಗಳು, ರೋಗಗಳು ಗುಣವಾಗದೇ ಉಳಿಯುತ್ತವೆ. ಇದರಿಂದ ಚಿಕಿತ್ಸೆಯ ಸಮಯ ದೀರ್ಘಗೊಳ್ಳುತ್ತದೆ. ಚಿಕಿತ್ಸೆಯ ವೆಚ್ಚ ಹೆಚ್ಚುತ್ತದೆ.
l ಹೊಸ ಔಷಧಗಳನ್ನು ಅಭಿವೃದ್ಧಿ ಪಡಿಸಬೇಕಾಗಬಹುದು. ಆಸ್ಪತ್ರೆಯಲ್ಲಿ ಹೆಚ್ಚು ದಿನಗಳ ಕಾಲ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮತ್ತು ಹೆರಿಗೆಯ ಸಮಯದಲ್ಲಿ ಸೋಂಕು ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಸಾವಿನ ಪ್ರಮಾಣವೂ ಹೆಚ್ಚಾಗಬಹುದು.
ಹೀಗೆ ಮಾಡಿ
l ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಅನೇಕ ಭಾರತೀಯರು ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಖರೀದಿಸಿ, ಸೇವಿಸುತ್ತಾರೆ. ಔಷಧಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಸಲಹೆಯನ್ನು ಪಾಲಿಸಿ.
l ಉಳಿಕೆ ಔಷಧಗಳನ್ನು ಬಳಸುವುದು ಅಥವಾ ಬೇರೆಯವರ ಔಷಧಗಳನ್ನು ಬಳಸುವುದನ್ನು ಮಾಡಬಾರದು.
l ಕೊಟ್ಟಿರುವ ಅವಧಿಗೆ ಮಾತ್ರ ಆ್ಯಂಟಿಬಯಾಟಿಕ್‌ಗಳನ್ನು ಬಳಸಬೇಕು. ಐದು ಅಥವಾ ಏಳು ದಿನಗಳಿಗೆ ಔಷಧವನ್ನು ನೀಡಿದರೆ, ಅದನ್ನು ಸಂಪೂರ್ಣವಾಗಿ ತೆಗೆದುಕೊಳ್ಳಬೇಕು.
l ಪ್ರಾಣಿಗಳಲ್ಲಿ ಆ್ಯಂಟಿಬಯಾಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಸ್ವಚ್ಛತೆಯನ್ನು ಪಾಲಿಸಬೇಕು. ಶುದ್ಧ ಆಹಾರ ಮತ್ತು ನೀರನ್ನು ಬಳಸಬೇಕು. ರೋಗನಿರೋಧಕ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಅಗತ್ಯ.
ಆರೋಗ್ಯ ಸಂಸ್ಥೆಗಳ ಪಾತ್ರ
ಸರ್ಕಾರ ಪಶುವೈದ್ಯಕೀಯ, ಜಿಲ್ಲಾ ಆಸ್ಪತ್ರೆಗಳಲ್ಲಿ ಆ್ಯಂಟಿ ಬಯಾಟಿಕ್ ಸ್ಟೀವರ್ಡ್ ಷಿಪ್ ಕಾರ್ಯಕ್ರಮ ಹಮ್ಮಿಕೊಂಡಿದೆ . ಔಷಧಗಳ ಬಳಕೆ ಯಾವ ಸಂದರ್ಭಕ್ಕೆ ಹೇಗಿರಬೇಕು, ಯಾವಾಗ ಬಳಸಬಾರದೆಂಬ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಿದೆ.
ರೈತರ ಮತ್ತು ಪಶುಪಾಲಕರ ಪಾತ್ರ
ಪ್ರಾಣಿಗಳಿಗೆ ಹೆಚ್ಚು ಆ್ಯಂಟಿಬಯಾಟಿಕ್‌ಗಳನ್ನು ಕೊಟ್ಟರೆ, ಈ ಅಂಶ ಅವುಗಳ ಹಾಲು, ಮಾಂಸ ಹಾಗೂ ಪರಿಸರದಲ್ಲಿಯೂ ಉಳಿದುಬಿಡುತ್ತದೆ. ಇದರಿಂದ ಪ್ರತಿರೋಧದ ಪ್ರಮಾಣ ಹೆಚ್ಚುತ್ತದೆ. ಆಹಾರ ಸರಪಳಿ, ನೀರಿನ ಮೂಲಕ ಈ ಸಮಸ್ಯೆ ಉಲ್ಬಣಿಸಬಹುದು. ಹಾಗಾಗಿ ಕೃಷಿಕರು ಕೆಲವು ಮಾರ್ಗಸೂಚಿಯನ್ನು ಅನುಸರಿಸಬೇಕಾಗುತ್ತದೆ.
ಕೀಟನಾಶಕ/ರಾಸಾಯನಿಕಗಳ ಬಳಕೆಯಲ್ಲಿ ನಿಯಂತ್ರಣ, ಸಹಜ ಕೃಷಿ ಪದ್ಧತಿ ಅನುಸರಿಸುವುದು, ಪಶುಗಳಿಗೆ ಸರಿಯಾದ ಲಸಿಕೆ ಹಾಕುವುದು ಮತ್ತು ಆ್ಯಂಟಿಬಯಾಟಿಕ್‌ಗಳನ್ನು ಸೇವಿಸುವ ಪ್ರಾಣಿಗಳ ಹಾಲು ಅಥವಾ ಮಾಂಸವನ್ನು ತಕ್ಷಣಕ್ಕೆ ಬಳಸಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.