ADVERTISEMENT

ಸಂಧಿವಾತದಲ್ಲಿ ತೂಕದ ಪಾತ್ರವೇನು? ಆರೋಗ್ಯಕರ ತೂಕ ನಿರ್ಧರಿಸುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2025, 11:30 IST
Last Updated 13 ಅಕ್ಟೋಬರ್ 2025, 11:30 IST
<div class="paragraphs"><p>ಚಿತ್ರ: ಪ್ರಜಾವಾಣಿ ಫೈಲ್</p></div>
   

ಚಿತ್ರ: ಪ್ರಜಾವಾಣಿ ಫೈಲ್

ಅಧಿಕ ದೇಹದ ತೂಕವು ಸಂಧಿವಾತಕ್ಕೆ, ವಿಶೇಷವಾಗಿ ಮೊಣಕಾಲುಗಳ ಅಸ್ಥಿ ಸಂಧಿವಾತಕ್ಕೆ ಕಾರಣವಾಗಬಹುದಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರತೀ 5 ಕೆ.ಜಿ ತೂಕ ನಷ್ಟದಿಂದ ಮೊಣಕಾಲು ಸಂಧಿವಾತದ ಅಪಾಯವು ಶೇ. 50 ಕ್ಕಿಂತ ಅಧಿಕ ಕಡಿಮೆಯಾಗುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ಆರೋಗ್ಯಕರ ತೂಕವನ್ನು ಬಿಎಂಐ - ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮೂಲಕ ನಿರ್ಧರಿಸಲಾಗುತ್ತದೆ. ಭಾರತೀಯರಲ್ಲಿ, ಬಿಎಂಐ 23 ಅಥವಾ ಕಡಿಮೆ ಇರುವುದನ್ನು ಸಾಮಾನ್ಯ ಅಥವಾ ಆರೋಗ್ಯಕರ, 23 ರಿಂದ 24.9 ಅನ್ನು ಅಧಿಕ ತೂಕ ಮತ್ತು 25 ಅಥವಾ ಅಧಿಕ ಬಿಎಂಐ ಅನ್ನು ಸ್ಥೂಲಕಾಯ ಅಥವಾ ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರಿಂದ ಕೀಲುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ಊತದ ಗುರುತುಗಳು ಕೂಡ ಕಡಿಮೆಯಾಗುತ್ತವೆ.

ಗಾಯಗಳು, ಪೆಟ್ಟುಗಳು ಸಂಧಿವಾತಕ್ಕೆ ಕಾರಣವಾಗಬಹುದೇ?

ADVERTISEMENT

ಕೀಲುಗಳ ಗಾಯಗಳು, ಪೆಟ್ಟು ಸಂಧಿವಾತದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಪದೇ ಪದೇ ಕೀಲು ಗಾಯಗಳಿಂದಾಗಿ ಅಸ್ಥಿಸಂಧಿವಾತದ ಅಪಾಯವು ಶೇ. 20 ರಿಂದ 50 ರಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಕೆಲವು ಅಧಿಕ ಶ್ರಮ ಬೇಡುವ ಕ್ರೀಡೆಗಳು, ವೃತ್ತಿಪರ ಚಟುವಟಿಕೆಗಳಿಂದ ಪುನರಾವರ್ತಿತ ಒತ್ತಡವು ಕಾಲಾನಂತರದಲ್ಲಿ ಕಾರ್ಟಿಲೆಜ್ ಅನ್ನು ಹಾನಿಗೊಳಿಸುತ್ತದೆ. ಸರಿಯಾದ ದೇಹ ಚಲನೆಯನ್ನು ಬಳಸುವುದು ಮತ್ತು ಪುನರಾವರ್ತಿತ ಚಟುವಟಿಕೆಗಳ ಸಮಯದಲ್ಲಿ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಕೀಲುಗಳನ್ನು ರಕ್ಷಿಸಲು, ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಕೀಲು ಸ್ನೇಹಿ ಆಹಾರ ಪದ್ಧತಿ ಎಂದರೇನು?

ಸಂಧಿವಾತದ ವಿಚಾರ ಬಂದಾಗ, ಸಾಕಷ್ಟು ತಪ್ಪು ಕಲ್ಪನೆಗಳಿಂದ ಜನ ಪೌಷ್ಟಿಕಾಂಶಯುಕ್ತ ಆಹಾರವನ್ನೇ ತ್ಯಜಿಸುತ್ತಾರೆ. ಅದರಲ್ಲೂ ಮೊಸರು, ಮೊಟ್ಟೆ, ಬದನೆಕಾಯಿಯಂತಹ ಉತ್ತಮ ಆಹಾರಗಳನ್ನು ಕಡೆಗಣಿಸಲಾಗುತ್ತದೆ. ಆದರೆ ನೆನಪಿರಲಿ ಸಂಧಿವಾತಕ್ಕೆ ಯಾವುದೇ ಆಹಾರ ನಿರ್ಬಂಧನೆಗಳಿಲ್ಲ. ಸಮತೋಲಿತ ಆಹಾರದ ಪ್ರಮುಖ ಅಂಶಗಳೆಂದರೆ ವಾರಕ್ಕೆ ಎರಡು ಬಾರಿ ಒಮೆಗಾ-3 ಸಮೃದ್ಧ ಮೀನು (ಸಾಲ್ಮನ್, ಸಾರ್ಡೀನ್‌ಗಳು), ಉತ್ತಮ ಹಣ್ಣುಗಳು ಮತ್ತು ತರಕಾರಿಗಳು (ಹಣ್ಣುಗಳು, ಎಲೆಗಳ ಸೊಪ್ಪು), ಬೀಜಗಳು, ಆಲಿವ್ ಎಣ್ಣೆ ಮತ್ತು ಗ್ರೀನ್‌ ಚಹಾ ಸೇವಿಸುವುದು. ಈ ಆಹಾರಗಳು ದೇಹದಲ್ಲಿ ಸಿ-ರಿಯಾಕ್ಟಿವ್ ಪ್ರೋಟೀನ್ ಮತ್ತು ಇಂಟರ್ಲ್ಯೂಕಿನ್-6 ನಂತಹ ಊತದ ಅಂಶಗಳನ್ನು ಕಡಿಮೆ ಮಾಡುತ್ತವೆ.

ಧೂಮಪಾನ, ಅತಿಯಾದ ಮದ್ಯಪಾನವು ಸಂಧಿವಾತದ ಅಪಾಯವನ್ನು ಹೆಚ್ಚಿಸುತ್ತದೆಯೇ?

ಧೂಮಪಾನವು ಸಂಧಿವಾತದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ, ವಿಶೇಷವಾಗಿ ಮಹಿಳೆಯರಲ್ಲಿ. ಹಾಗೆ ರೋಗದ ಪ್ರಗತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ದೀರ್ಘಕಾಲದ ಧೂಮಪಾನವು ಊತ ಮತ್ತು ಕೀಲು ಹಾನಿಯನ್ನು ಹೆಚ್ಚಿಸುತ್ತದೆ. ನಿಯಂತ್ರಿತ (ಮಧ್ಯಮ ಪ್ರಮಾಣದಲ್ಲಿ) ಮದ್ಯ ಸೇವನೆಯು ಕೆಲವು ರೀತಿಯ ಸಂಧಿವಾತದೊಂದಿಗೆ ಸಂಕೀರ್ಣ ಸಂಬಂಧವನ್ನು ತೋರಿಸಬಹುದು, ಆದರೆ ಅತಿಯಾದ ಮದ್ಯಪಾನ (ದಿನಕ್ಕೆ 25 ಗ್ರಾಂ ಅಥವಾ ಎರಡು ಸ್ಟ್ಯಾಂಡರ್ಡ್ ಡ್ರಿಂಕ್ ಗಿಂತ ಹೆಚ್ಚು) ನಿರಂತರವಾಗಿ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ ಮತ್ತು ಸಂಧಿವಾತ ಔಷಧಿಗಳೊಂದಿಗೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತವೆ.

ಗಮನಿಸಬೇಕಾದ ಆರಂಭಿಕ ಲಕ್ಷಣಗಳು ಯಾವವು?

ಸಂಧಿವಾತವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ನಿರಂತರ ಕೀಲು ನೋವು (ಬೆಳಿಗ್ಗೆ ಹೆಚ್ಚಾಗಿ ಉಲ್ಬಣಗೊಳ್ಳುತ್ತದೆ), ವಿಶ್ರಾಂತಿಯ ನಂತರ 30 ನಿಮಿಷಗಳಿಗಿಂತ ಹೆಚ್ಚು ಕಾಲ ಉಳಿಯುವ ಬಿಗಿತ, ಕೀಲುಗಳ ಸುತ್ತ ಹೆಚ್ಚಿದ ಉಷ್ಣತೆ ಮತ್ತು ಊತ, ಚಲನೆಯ ವ್ಯಾಪ್ತಿ ಕಡಿಮೆಯಾಗುವುದು ಮತ್ತು ಆಯಾಸದ ಬಗ್ಗೆ ಎಚ್ಚರದಿಂದಿರಿ. ಬೆಳಗಿನ ಬಿಗಿತ ಮತ್ತು ನೋವ ವಿಶೇಷವಾಗಿ ಗಮನಾರ್ಹ ಎಚ್ಚರಿಕೆ ಸಂಕೇತಗಳಾಗಿವೆ.

ತೂಕ ನಿರ್ವಹಣೆ, ಕೀಲು ರಕ್ಷಣೆ, ಊತ ನಿವಾರಕ ಪೋಷಣೆ, ಧೂಮಪಾನ ನಿಷೇಧ ಮತ್ತು ನಿರಂತರ ಕಾಡುವ ಲಕ್ಷಣಗಳಿಗೆ ತ್ವರಿತ ವೈದ್ಯಕೀಯ ಆರೈಕೆಯ ಮೂಲಕ ಆರಂಭಿಕ ಚಿಕಿತ್ಸೆಯು ಸಂಧಿವಾತದ ಬೆಳವಣಿಗೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

(ಲೇಖಕರು: ಹೆಚ್‌ಒಡಿ ಮತ್ತು ಕನ್ಸಲ್ಟೆಂಟ್‌ - ರ್‍ಯುಮೆಟೊಲಾಜಿ ಮತ್ತು ಕ್ಲಿನಿಕಲ್‌ ಇಮ್ಯುನೊಲಾಜಿ , ಮಣಿಪಾಲ್‌ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.