ಆಟಿಸಂ ಸಮಸ್ಯೆ ಹೊಂದಿರುವ ಮಕ್ಕಳಿಗೆ ಹಾಗೂ ಪಾರ್ಶ್ವವಾಯು ನಂತರ ಸಂವಹನ ಸಾಮರ್ಥ್ಯ ಕಳೆದುಕೊಂಡ ವಯಸ್ಕರಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದೆ ‘ಸಂವಾದ್’ ಸೆಂಟರ್ ಫಾರ್ ಸ್ಪೀಚ್ ಆ್ಯಂಡ್ ಎಬಿಎ ಥೆರಪಿ ಸಂಸ್ಥೆ.
ಆಟಿಸಂನಿಂದ ಬಳಲುವ ಮಕ್ಕಳಿಗೆ ನೆರವಾಗಲು ಸ್ಪೀಚ್ ಥೆರಪಿಯೊಂದೇ ಸಾಕಾಗುವುದಿಲ್ಲ ಎಂಬ ಅರಿವಿನ ಮೂಲಕವೇ ಸಂವಾದ್ ಅಸ್ತಿತ್ವಕ್ಕೆ ಬಂದಿದೆ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕಿ ರಾಧಿಕಾ ಪೂವಯ್ಯ.
‘2002ರಲ್ಲಿ ಸಂವಾದ್‌ನ ಮೊದಲ ಕೇಂದ್ರ ಆರಂಭಿಸಿದಾಗ, ಆಟಿಸಂ ಕುರಿತ ಅರಿವು ಭಾರತದಲ್ಲಿ ಹೆಚ್ಚಾಗುತ್ತಿತ್ತು. ಆದರೆ, ಬರೀ ಸ್ಪೀಚ್ ಥೆರಪಿಯೊಂದೇ ಈ ಮಕ್ಕಳಲ್ಲಿ ಸಮರ್ಪಕ ಬದಲಾವಣೆ ತರುವುದಿಲ್ಲ ಎಂಬುದು ನನಗೆ ಸ್ಪಷ್ಟವಾಯಿತು. ಆಗಲೇ ‘ಅಪ್ಲೈಡ್ ಬಿಹೇವಿಯರ್ ಅನಾಲಿಸಿಸ್’ (ಎಬಿಎ) ಎಂಬ ನೂತನ ಚಿಕಿತ್ಸಾ ವಿಧಾನವನ್ನು ಅರಿತುಕೊಂಡೆ. ಈ ಕ್ಷೇತ್ರದಲ್ಲಿ ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು, ಭಾರತದ ಮೊದಲ ಬೋರ್ಡ್ ಪ್ರಮಾಣೀಕೃತ ನಡವಳಿಕೆ ವಿಶ್ಲೇಷಕಿ (ಬಿಸಿಬಿಎ) ಮತ್ತು ಭಾಷಣ ರೋಗಶಾಸ್ತ್ರಜ್ಞೆಯಾಗಿ ಪರಿಣತಿಯನ್ನು ಗಳಿಸಿದೆ’ ಎಂದು ಹೇಳುತ್ತಾರೆ.
ಮೊದಲ ಹಂತದಲ್ಲಿಯೇ ಎಬಿಎ ಚಿಕಿತ್ಸೆ ಆರಂಭಿಸಿದ ಮಕ್ಕಳಲ್ಲಿ ಗಮನಾರ್ಹವಾದ ಪ್ರಗತಿ ಕಂಡುಬರುತ್ತದೆ. ಆದರೆ ದೇಶದಲ್ಲಿ ಎಬಿಎ ಚಿಕಿತ್ಸಕರ ಕೊರತೆ ಇದೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯಗಳೇ ಈ ಕೋರ್ಸ್ ಅನ್ನು ನೀಡುವಂತೆ ಆಗಬೇಕು ಎಂಬುದು ಅವರ ಕನಸು.
2005ರಲ್ಲಿ ಸಂವಾದ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಸ್ಥಾಪನೆಯಾಗಿದ್ದು, ಇಂದು ಬೆಂಗಳೂರಿನ ಮೂರು ಕೇಂದ್ರಗಳಲ್ಲಿ 20ಕ್ಕೂ ಹೆಚ್ಚು ತಜ್ಞರನ್ನು ಹೊಂದಿದೆ. ಅಮೆರಿಕದ ಸಿರಾಕ್ಯೂಸ್ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಹೊಂದಿರುವ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದ ಚಿಕಿತ್ಸಾ ಮಾನದಂಡಗಳನ್ನು ಅನುಸರಿಸುತ್ತದೆ.
ಭವಿಷ್ಯದ ದೃಷ್ಟಿಕೋನ: ಆಟಿಸಂ ಹೊಂದಿರುವ ಮಕ್ಕಳಿಗೆ ಇನ್ನಷ್ಟು ಕೇಂದ್ರಗಳನ್ನು ತೆರೆಯುವುದು, ಆನ್‌ಲೈನ್ ಮೂಲಕ ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊಸ ಕೋರ್ಸ್‌ಗಳನ್ನು ಪರಿಚಯಿಸುವುದು.
ಸಂಸ್ಥೆಗೆ ಸೇರಿದ ಸಂವಾದ್ ಫೌಂಡೇಶನ್ ಟ್ರಸ್ಟ್‌ನ ಮುಖಾಂತರ, ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಪಾರ್ಶ್ವವಾಯುವಿನಿಂದ ಬಳಲುವ ವಯಸ್ಕರಿಗೆ ಉಚಿತ ಸ್ಪೀಚ್ ಥೆರಪಿಯನ್ನು ನೀಡಲಾಗುತ್ತಿದೆ. ಕನಿಷ್ಠ ಆರು ತಿಂಗಳ ನಿರಂತರ ಚಿಕಿತ್ಸೆಯ ಫಲವಾಗಿ ಅನೇಕರು ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳಿದ್ದಾರೆ.
ಸಮಾಜದ ವಿವಿಧ ವರ್ಗಗಳನ್ನೂ ತಲುಪುವಂತೆ ಸಂಸ್ಥೆ ಕೈಗೊಂಡಿರುವ ಈ ಪ್ರಯತ್ನ, ನೂರಾರು ಕುಟುಂಬಗಳಿಗೆ ಹೊಸ ಭರವಸೆಯ ಬೆಳಕು ನೀಡಲಿದೆ ಎಂಬ ಆಶಾಭಾವನೆ ರಾಧಿಕಾ ಅವರದು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಈ ಚಿಕಿತ್ಸೆಗಳ ನೆರವು ಪಡೆಯಲು ಹಾಗೂ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು: 9663388623/ 9480295004
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.