ADVERTISEMENT

Teeth Cleaning: ಹಲ್ಲುಜ್ಜಲು ಹಲವು ಹಸಿಕಡ್ಡಿಗಳು!

ಡಾ.ಸತ್ಯನಾರಾಯಣ ಭಟ್ ಪಿ
Published 21 ಅಕ್ಟೋಬರ್ 2025, 0:30 IST
Last Updated 21 ಅಕ್ಟೋಬರ್ 2025, 0:30 IST
   
ಪದೇ ಪದೇ ಕಾಡುವ ಹಲ್ಲುನೋವಿನ ಸಮಸ್ಯೆ ಕಿರಿಯರ, ಹಿರಿಯರ ಅನುದಿನದ ಬವಣೆ. ‌ಬಾಯಿ, ಹಲ್ಲು ಮತ್ತು ವಸಡುಗಳ ಹಲವು ಸಮಸ್ಯೆಗಳನ್ನು ಸರಳವಾದ ಮನೆಮದ್ದಿನಿಂದ ಪರಿಹರಿಸಬಹುದಾಗಿದೆ

ದೇಹದ ಹೆಬ್ಬಾಗಿಲು ಬಾಯಿ. ದೈನಂದಿನ ಚಟುವಟಿಕೆಯ ಆರಂಭವಾಗುವುದು ದಂತಧಾವನ, ಅರ್ಥಾತ್ ಹಲ್ಲುಜ್ಜುವುದರ ಮೂಲಕ ತಾನೇ.

ಹಲ್ಲುಜ್ಜಲು ಬಳಸುವ ಹಸಿಕಡ್ಡಿಗಳ ಆಯ್ಕೆ ಋತುವಿಗೆ ಅನುಗುಣವಾಗಿ ಬದಲಾಗ ಬೇಕಾಗುತ್ತದೆ. ಬಹುತೇಕ ಕಫದೋಷವೇ ಬಾಯಿಯ ಬಗೆ ಬಗೆಯ ಕಾಯಿಲೆಗಳಿಗೆ ಮೂಲ. ಆಯಾ ಪ್ರಕೃತಿಗೆ ಅನುಗುಣವಾಗಿ ನಾನಾ ಕಡ್ಡಿಗಳನ್ನು ಬಳಸುವ ಆಯ್ಕೆ ಇದೆ. ಆಲ, ಅತ್ತಿ, ಎಕ್ಕ. ಬೇವು, ಬಿಳಿಮತ್ತಿ, ಕಗ್ಗಲಿ, ರಂಜೆ, ಕಾಚು ಮತ್ತು ಹೊಂಗೆ ಮರದ ಕಿರುಬೆರಳಿನಾಕಾರದ ಕಡ್ಡಿಗಳನ್ನು ಟೂತ್ ಬ್ರಷ್‌ಗಳಂತೆ ಬಳಸಬಹುದು. ತಾಜಾತನದ ಈ ಹಸಿರು ಪರಿಸರಸ್ನೇಹಿ ದಂತ
ಕೂರ್ಚ(ಕುಂಚ)ದಿಂದ ಉಜ್ಜುವ ಹಲ್ಲು ಮಿರಮಿರನೆ ಮಿಂಚುವುದಷ್ಟೆ ಅಲ್ಲ, ದಂತಮೂಲ, ಎಂದರೆ ವಸಡಿನ ಭಾಗಕ್ಕೆ ಒಂದಿನಿತೂ ಗಾಯವಾಗದಂತೆ ಎಚ್ಚರದಿಂದ ಹಲ್ಲು ಮಾತ್ರ ಶುಚಿಗೊಳಿಸುವ ಆದೇಶ ಆಯುರ್ವೇದ ಸಂಹಿತೆಗಳ ಸಂದೇಶ; ರೋಗ ಬರದಂತೆ ತಡೆಯುವ ಅದ್ಭುತ ತಡೆಗೋಡೆ. ಮುಂಜಾನೆಯ ಇಂತಹ ದಂತಧಾವನದಿಂದ ಇಡೀ ದಿನದ ‘ಗಟ್’ (ಕರುಳು) ಆರೋಗ್ಯ ಕಾಪಾಡಲು ಸಾಧ್ಯ.

ಉಂಡ ಅನ್ನವು ಪಯಣಿಸುವ ದೇಹದ ಅತಿ ದೀರ್ಘ ಅವಯವ ಅನ್ನವಹ ಸ್ರೋತಸ್ (ಚಾನೆಲ್). ನಾಲಿಗೆ ಕೇವಲ ಮಾತನಾಡುವ ಅಂಗ ಮಾತ್ರ ಅಲ್ಲ, ಉಂಡ ಆಹಾರದ ರುಚಿಯ ಅರಿವಿಗೆ ನಾಲಗೆಯ ನಾನಾ ಭಾಗದಲ್ಲಿದೆ ಅದ್ಭುತ ವ್ಯವಸ್ಥೆ. ಷಡ್ರಸೋಪೇತ ಆಹಾರದ ಅರಿವು ಆಗುತ್ತದೆಯೇ? ಅದರ ಆರೋಗ್ಯಕ್ಕೆ ಗಮನವಿಡಿ. ಅದರಿಂದಲೂ ದೇಹಾರೋಗ್ಯ ಕಾಪಾಡಲು ಸಾಧ್ಯ. ನಾಲಿಗೆ ಶುಚಿಗೊಳಿಸಲು ಹಲ್ಲುಗಳನ್ನು ಶುಚಿಗೊಳಿಸುವ ಕಡ್ಡಿಗಳನ್ನು ಬಳಸಲಾದೀತು. ಚಿನ್ನ, ಬೆಳ್ಳಿಯ ಟಂಗ್‌ಕ್ಲೀನರ್ ಸಹ ಹಿಂದಿನ ಕಾಲದಲ್ಲಿ ಬಳಕೆಯಲ್ಲಿತ್ತು. ‘ಜಿಹ್ವಾ ನಿರ್ಲೇಖನ’ ಎಂಬ ದಿನಚರಿಯ ಭಾಗವದು.

ADVERTISEMENT

ಹಲ್ಲಿನ ರಚನೆಗೆ ಕ್ಯಾಲ್ಸಿಯಂ ಎಂಬ ಪೂರಕವಾದ ಖನಿಜ ಅಂಶ ಬೇಕೇ ಬೇಕು. ಬಿಳಿಮತ್ತಿ, ಕರಿಮತ್ತಿ ಮರದ ತೊಗಟೆಯಲ್ಲಿದೆ ಇಂತಹ ಖನಿಜ. ಹಾಗಾಗಿಯೇ ಮೈಕ್ರೋಗ್ರಾಂ ರೂಪದಲ್ಲಿ ಸಹ ಇಂತಹ ಮರದ ಕಡ್ಡಿಗಳಿಂದ ಮಾಡುವ ದಂತಮಾರ್ಜನದಿಂದ ಹಲ್ಲುಗಳಿಗಿದೆ ಲಾಭ. ವಸಡಿನ ಮೂಲಕ ಮತ್ತಿ ಮರದ ಹಸಿರಸ ಹಲ್ಲಿನ ಬೇರಿಗಿಳಿದು ಕ್ಯಾಲ್ಸಿಯಂ ರೂಪದಲ್ಲಿ ತನ್ನ ಉಪಕಾರಗೈಯುತ್ತದೆ. ತಂಬಾಕುರಹಿತ ತಾಂಬೂಲ ಚರ್ವಣದಿಂದ ಸುಣ್ಣದಂಶದ ಹಿತಮಿತ ಸೇವನೆಯ ವಿಧಾನವೂ ಆಯುರ್ವೇದದ ದಿನಚರಿಯ ಭಾಗ; ಆದರೆ ಅದು ಚಟವಾಗಬಾರದು. ಬಕುಳ ಅಥವಾ ರೆಂಜೆ(ಪಗಡೆ) ಮರದ ದಂತಾರೋಗ್ಯದ ಬಳಕೆಗಳಿಗೆ ಒದಗುತ್ತದೆ ಎನ್ನುತ್ತದೆ, ಆಯುರ್ವೇದ. ಅದರ ತೊಗಟೆಯ ಪುಡಿ ಉತ್ತಮ ದಂತಧಾವನ ಚೂರ್ಣ. ಅತಿಮಧುರ ಎಂಬ ಅಂಗಡಿಯಲ್ಲಿ ಸಿಗುವ ಪುಡಿಯನ್ನು ಖರೀದಿಸಿ. ಸಕ್ಕರೆಗಿಂತ ನೂರ್ಮಡಿ ಸಿಹಿಯಾದ ವನಸ್ಪತಿ ಇದು. ಬಾಯಿಯ ಹುಣ್ಣು, ವಸಡು ಕುರ, ರುಚಿಗೆಟ್ಟ ನಾಲಗೆ, ಅತಿ ಕೆಂಪಾದ ಉರಿಯುವ ನಾಲಗೆಯ ತೊಂದರೆಯೇ? ಈ ಅತಿಮಧುರ ಕಷಾಯದ ಬಾಯಿಮುಕ್ಕುಳಿಸುವಿಕೆಯಂತೂ ಅಪರಿಮಿತ ಗುಣಗಳ ಖನಿ. ಸರಳ ಮನೆಮದ್ದು. ಜ್ಯೇಷ್ಠ(ಹಿರಿಯ) ಮಧು ಎಂಬ ಹಾಲೂಡಿಸುವ ತಾಯಂದಿರ ಮದ್ದಿನ ಪೆಟ್ಟಿಗೆಯ ಸರಕಾಗಿತ್ತು ಈ ಅತಿಮಧುರ. ಜೇನುಗೂಡಿಸಿ ಈ ಪುಡಿ ಹಚ್ಚಿದರೂ ಬಾಯಿ ಹುಣ್ಣು, ವಸಡು ಕುರದ ಬಾಧೆ ಉಪಶಮನ.

ಪದೇ ಪದೇ ಕಾಡುವ ಹಲ್ಲುನೋವಿನ ಸಮಸ್ಯೆ ಕಿರಿಯರ, ಹಿರಿಯರ ಅನುದಿನದ ಬವಣೆ. ಬಳಸಲಾಗುವ ಅತಿ ಸರಳ ಮನೆಮದ್ದು ಹೀಗಿದೆ. ತೆಂಗಿನೆಣ್ಣೆ, ಎಳ್ಳೆಣ್ಣೆ ಅಥವಾ ತುಪ್ಪವನ್ನು ಒಂದು ಚಮಚೆಯಷ್ಟು ಬಾಯಿಗೆ ಹಾಕಿಕೊಳ್ಳಿರಿ. ನಾಕಾರು ನಿಮಿಷ ಚೆನ್ನಾಗಿ ಬಾಯಿಮುಕ್ಕುಳಿಸುವ ಸರಳ ವಿಧಾನ. ಅದಾದ ಅನಂತರ ಬಿಸಿನೀರು ಹಾಕಿ ಬಾಯಿಮುಕ್ಕುಳಿಸುವ ಮನೆಮದ್ದು ಉಪಕಾರಿ ಮಾತ್ರ ಅಲ್ಲ. ಬಾಯಿಯ ಒಳಭಾಗದ ಆರೋಗ್ಯಕ್ಕೆ ಪೂರಕ. ಹೀಗಿವೆ ಹಲ್ಲುನೋವುಗಳಿಗೆ ಪರಿಹಾರ ಕ್ರಮಗಳು.

ಗಂಟಲುನೋವು ಮತ್ತು ಆಗಾಗ ಕಾಡುವ ವಸಡು ರಕ್ತಸ್ರಾವ ಕೂಡ ‘ಹೀಟ್’ ಎನ್ನುವ ಪಾರಿಭಾಷಿಕ ಪದ ಅನ್ವಯದ ತೊಂದರೆ. ಇದಕ್ಕೆ ‘ಯಮಕ ಸ್ನೇಹ’ ಎಂಬ ಸರಳ ಚಿಕಿತ್ಸೆ. ತೆಂಗಿನೆಣ್ಣೆ ಹಾಗೂ ತುಪ್ಪವನ್ನು ಮಿಶ್ರಮಾಡಿರಿ. ಸೌಟಿನ ಸಹಾಯದಿಂದ ಚೆನ್ನಾಗಿ ಬಿಸಿಮಾಡಿರಿ. ನೆತ್ತಿಗೆ ಹಚ್ಚಿ ಮಾಲೀಶು ಮಾಡಬೇಕು. ಕೂಡಲೇ ತಲೆಯನ್ನು ತೊಳೆದು ಸ್ನಾನ ಮಾಡಿ ಒಣಗಿಸಿಕೊಳ್ಳಿರಿ. ಕಿವಿ, ಗಂಟಲು, ಮೂಗು ಮತ್ತು ಬಾಯೊಳಗಣ ಅಂಗಗಳಿಗೆ ರಕ್ತಸ್ರಾವ ಹೆಚ್ಚಳ. ಅಲ್ಲಿ ಸೇರಿದ ಅನಗತ್ಯ ಲೋಳೆಯಂತಹ ಕಫದ ನಿರ್ಮೂಲನೆಯಾಗುತ್ತದೆ. ಆಗ ಸಮಸ್ಯೆಗೆ ಉತ್ತಮ ಪರಿಹಾರವಂತೂ ಶತಸ್ಸಿದ್ಧ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.