ADVERTISEMENT

ಪಟಾಕಿ ಹಚ್ಚುವ ಮುನ್ನ ಇರಲಿ ಎಚ್ಚರ

ಡಾ.ಸತ್ಯಪ್ರಸಾದ್ ಬಾಲ್ಕಿ
Published 1 ನವೆಂಬರ್ 2021, 21:15 IST
Last Updated 1 ನವೆಂಬರ್ 2021, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೂರು ಕೋಟಿಯಷ್ಟು ಕೋವಿಡ್‌ ಲಸಿಕೆಯ ಡೋಸ್‌ಗಳನ್ನು ದೇಶದಲ್ಲಿ ಜನರಿಗೆ ಇಲ್ಲಿಯ ವರೆಗೆ ನೀಡಲಾಗಿದೆ. ನಿಧಾನವಾಗಿ ಸೋಂಕಿತರ ಪ್ರಮಾಣಯೂ ಇಳಿಯುತ್ತಿದೆ. ಷೇರು ಮಾರುಕಟ್ಟೆಯಲ್ಲಿಯೂ ಏರಿಕೆ ಕಂಡಿದೆ. ಜನರು ಪ್ರವಾಸ ಹೊರಡಲು ಮತ್ತೆ ಶುರು ಮಾಡಿದ್ದಾರೆ. ಜನರಲ್ಲಿ ಒಂದು ರೀತಿಯ ಉತ್ಸಾಹ ಮತ್ತು ಆರಾಮ ಮನೆ ಮಾಡಿದೆ. ಇಂಥ ಹೊತ್ತಿನಲ್ಲಿ ಬಂದಿರುವ ಹಬ್ಬಗಳು ಜನರಲ್ಲಿನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದೇ ಹೇಳಬಹುದು. ದೀಪಾವಳಿಯನ್ನು ‘ಧಮಾಕ’ ರೀತಿಯಲ್ಲಿ ಆಚರಿಸಲು ಜನರು ಸಿದ್ಧತೆ ನಡೆಸಿದ್ದಾರೆ.

ದೀಪಾವಳಿಯನ್ನು ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಕೊರೊನಾವು ನಮ್ಮನ್ನು ಒತ್ತಡಕ್ಕೆ ತಳ್ಳಿತ್ತು ಮತ್ತು ಆ ಸಮಯದಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಿತ್ತು. ಆದ್ದರಿಂದ ಈ ಬಾರಿ ಜನರು ದೀಪಾವಳಿಯನ್ನು ಬಹಳ ವಿಜೃಂಭಣೆ ಆಚರಿಸುತ್ತಾರೆ ಎನ್ನುವುದರಲ್ಲಿ ಅನುಮಾನ ಇಲ್ಲ. ದೀಪಾವಳಿಯು ನೇತ್ರತಜ್ಞರಿಗೆ ಬಹಳ ಒತ್ತಡದ ಸಮಯ. ಅಡುಗೆ ಮನೆಯಲ್ಲಿ ಹೆಚ್ಚು ಹೊತ್ತು ನಿಲ್ಲುವುದು, ಹೆಚ್ಚು ಹೆಚ್ಚು ದೀಪಗಳನ್ನು, ವಿದ್ಯುತ್‌ ದೀಪಾಲಂಕಾರಗಳನ್ನು ನೋಡುವುದು, ಪಟಾಕಿ.. ಮುಂತಾದವುಗಳ ಕಾರಣ ಕಣ್ಣುಗಳಿಗೆ ಹೆಚ್ಚು ಅಪಾಯವಿದೆ. ಸಂಭ್ರಮಾಚರಣೆಯ ಜೊತೆಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ತನಗೆ ಆಪತ್ತು ಇದೆ ಎಂದುಕಣ್ಣಿಗೆ ತಿಳಿದ ತಕ್ಷಣದಲ್ಲಿ ರೆಪ್ಪೆ ಮುಚ್ಚಿಕೊಳ್ಳುವ ಸಹಜವಾದ ವ್ಯವಸ್ಥೆ ನಮ್ಮ ದೇಹದಲ್ಲಿ ಇದೆ. ಆದರೆ, ಕೆಲವೊಮ್ಮೆ ಈ ವ್ಯವಸ್ಥೆ ಕೈಕೊಡುವುದೂ ಉಂಟು. ಕಣ್ಣಿನ ಹೊರಪದರ ಕಾರ್ನಿಯಾವು (cornea) ಪಾರದರ್ಶಕವಾಗಿ ಇರುತ್ತದೆ ಮತ್ತು ಬೆಳಕನ್ನು ಕಣ್ಣಿನೊಳಗೆ ಬಿಟ್ಟುಕೊಂಡು ದೃಷ್ಟಿಯನ್ನು ನೀಡುತ್ತದೆ. ಕಣ್ಣಿನ ಅಂತರ್ಗತ ಒತ್ತಡದಿಂದ ಅದು ವೃತ್ತಾಕಾರದಲ್ಲೇ ಇರುತ್ತದೆ. ಕಣ್ಣಿನ ಹತ್ತಿರದಲ್ಲೇ ಪಟಾಕಿ ಸಿಡಿಯುತ್ತಿದ್ದರೆ ಕಣ್ಣಿನ ನರಗಳಿಗೆ ಹಾನಿ ಉಂಟಾಗುತ್ತದೆ ಮತ್ತು ಈ ಹಂತದಲ್ಲಿ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ.

ADVERTISEMENT

ಅಡುಗೆ ಮಾಡುವಾಗ ಬಿಸಿ ಎಣ್ಣೆ ಕಣ್ಣಿಗೆ ಬಿದ್ದರೆ ಕಣ್ಣಿನ ಹೊರ ಪದರ ಸುಟ್ಟುಹೋಗುತ್ತದೆ. ದೀಪಾವಳಿಗೆ ವಿದ್ಯುತ್ತಿನ ದೀಪಾಲಂಕಾರ ಮಾಡುವುದು ಸಹಜ. ವೈರಿಂಗ್‌ನಲ್ಲಿ ತೊಂದರೆ ಆಗಿ ಕಣ್ಣಿಗೆ ಹಾನಿಯಾಗಬಹುದು. ಈ ಎಲ್ಲದಕ್ಕಿಂತ ಪಟಾಕಿಯಿಂದ ಆಗುವ ಅಪಾಯವೇ ಹೆಚ್ಚು ಹಾನಿಕರವಾದದ್ದು.

ಕಣ್ಣಿಗೆ ಗಾಯವಾದ ತಕ್ಷಣ ಮಾಡಬೇಕಾದದ್ದು ಏನು?

ಕಣ್ಣಿಗೆ ಏನೋ ಬಿದ್ದ ಅನುಭವವಾದರೆ, ಬಿಸಿ ಎಣ್ಣೆ ಕಣ್ಣಿಗೆ ಬಿದ್ದರೆ, ತಕ್ಷಣದಲ್ಲಿ ಶುದ್ಧ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಬೇಕು ಅಥವಾ ಒಂದು ಬಟ್ಟಲಿನಲ್ಲಿ ನೀರನ್ನು ತುಂಬಿಕೊಂಡು ಕಣ್ಣನ್ನು ಅದ್ದಿ ಕಣ್ಣನ್ನು ಮಿಟುಕಿಸಬೇಕು.

ನಂತರದಲ್ಲಿ ವೈದ್ಯರನ್ನು ಸಂಪರ್ಕಿಸಿ ಕಣ್ಣಿಗೆ ಬಿದ್ದ ವಸ್ತುವನ್ನು ತಕ್ಷಣದಲ್ಲಿ ತೆಗೆಸಿಕೊಳ್ಳಬೇಕು. ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು.

ಪಟಾಕಿ ಸಿಡಿದು ಕಣ್ಣನಿಂದ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ, ಶುದ್ಧ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಬೇಕು. ಶುದ್ಧವಾದ ಹತ್ತಿ ಬಟ್ಟೆಯನ್ನು ಕಣ್ಣಿಗೆ ಸುತ್ತಿಕೊಳ್ಳಬೇಕು. ತಕ್ಷಣವೇ ವೈದ್ಯರಲ್ಲಿಗೆ ಹೋಗಬೇಕು. ಶಸ್ತ್ರಚಿಕಿತ್ಸೆಯೂ ಬೇಕಾಗಬಹುದು.

ಮುಂಜಾಗ್ರತೆ ವಹಿಸುವುದು..

ಅಡುಗೆ ಮಾಡುವಾಗ ಬಿಸಿ ಎಣ್ಣೆ ಹಾರದಂತೆ ಕಣ್ಣಿಗೆ ಕನ್ನಡಕವನ್ನು ಹಾಕಿಕೊಳ್ಳುವುದು ಉತ್ತಮ. ಬಾಣಲೆಯಿಂದ ಸ್ವಲ್ಪ ದೂರದಲ್ಲಿ ಇರುವುದುಉತ್ತಮ. ಜೊತೆಗೆ ಸೊಂಟಕ್ಕಿಂತ ಮೇಲಿನ ಮಟ್ಟದಲ್ಲಿ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವುದುಉತ್ತಮ.

ಪಟಾಕಿ ಸಿಡಿಯುವಾಗ ದೂರ ನಿಲ್ಲಬೇಕು. ಮುಖಕ್ಕೆ ಫೇಸ್‌ಶೀಲ್ಡ್‌ ಹಾಕಿಕೊಳ್ಳುವುದು ಉತ್ತಮ. ಕೋವಿಡ್‌ ಕಾರಣದಿಂದ ಇಂಥ ಶೀಲ್ಡ್‌ಗಳು ಧಾರಾಳವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಪಟಾಕಿ ಹಚ್ಚಿ ಕೈಯಲ್ಲಿ ಹಿಡಿದುಕೊಳ್ಳುವುದು, ಗಾಳಿಯಲ್ಲಿ ಬಿಸಾಡುವುದು ಒಳ್ಳೆಯ ನಡೆಯಲ್ಲ.

ಪಟಾಕಿ ಹಚ್ಚುವ ವೇಳೆ ಮಕ್ಕಳು ದೊಡ್ಡವರ ನಿಗಾದಲ್ಲಿ ಇರುವುದು ಉತ್ತಮ.

ಇಂಥ ಸಮಯದಲ್ಲಿ ಹತ್ತಿರದಲ್ಲಿಯೇ ಬಕೆಟ್‌ನಲ್ಲಿ ನೀರನ್ನು ಇಟ್ಟುಕೊಳ್ಳುವುದು ಒಳಿತು.

ಹೆಚ್ಚಿನವರು ರಸ್ತೆಯಲ್ಲಿಯೇ ಪಟಾಕಿ ಸಿಡಿಸುವುದರಿಂದ ದ್ವಿಚಕ್ರ ಸವಾರರು ಹೆಲ್ಮೆಟ್‌ ಧರಿಸುವುದು ಸೂಕ್ತ.

ಕಣ್ಣಿಗೆ ತೊಂದರೆ ಆದಾಗ ತಾವಾಗಿಯೇ ಚಿಕಿತ್ಸೆ ಮಾಡಿಕೊಳ್ಳುವುದು, ಮನೆಯಲ್ಲೇ ಇರುವ ಕಣ್ಣಿನ ಡ್ರಾಪ್‌ಗಳನ್ನು ಬಳಸುವುದು ತಪ್ಪು. ವೈದ್ಯರ ಬಳಿ ಹೋಗುವುದೇ ಉತ್ತಮ.

‘ಚಿಕಿತ್ಸೆಗಿಂತ ಎಚ್ಚರಿಕೆಯೇ ಉತ್ತಮವಾದುದು’ ಎನ್ನುವಂತೆ ಎಚ್ಚರಿಕೆ ವಹಿಸಿ ಹಬ್ಬಗಳನ್ನು ಆಚರಿಸುವುದು ಒಳಿತು. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು!

(ಲೇಖಕರು: ಕನ್ಸಲ್ಟೆಂಟ್‌ ನೇತ್ರತಜ್ಞ, ಮ್ಯಾಕ್ಸಿವಿಷನ್‌ ಕಣ್ಣಿನ ಆಸ್ಪತ್ರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.