
ಪ್ರಾತಿನಿಧಿಕ ಚಿತ್ರ
ಮಕ್ಕಳಿಗೆ ಚಾಕೊಲೇಟ್, ಐಸ್‌ಕ್ರೀಂ ಇತರ ಸಿಹಿತಿನಿಸುಗಳನ್ನು ನೀಡುವುದು ರೂಢಿಯಾಗಿಬಿಟ್ಟಿದೆ. ಹಠ ಮಾಡಿದರೆ, ಊಟ ಮಾಡದಿದ್ದರೆ, ಓದಲು ಚಾಕೊಲೇಟ್ ನೀಡುವ ಆಮಿಷ ಒಡ್ಡುತ್ತೇವೆ. ತಿನ್ನಲು ಸಿಹಿ ತಿನಿಸು ಸಿಗಬಹುದೆಂದು ಮಕ್ಕಳೂ ಹಠ ಮಾಡುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.
ಸಕ್ಕರೆ ಅಂಶವು ನಮ್ಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅತ್ಯಗತ್ಯವೂ ಹೌದು. ವಿಶೇಷವಾಗಿ ಮೆದುಳಿಗೆ. ಕಾರ್ಬೋಹೈಡ್ರೇಟ್‌ನ ಒಂದು ರೂಪವಾಗಿರುವ ಸಕ್ಕರೆಯನ್ನು ನಮ್ಮ ದೇಹವು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಗ್ಲೂಕೋಸ್ ರಕ್ತದಲ್ಲಿ ಸೇರಿ ಮಿದುಳು, ನರಮಂಡಲ ಮತ್ತು ಕೆಂಪು ರಕ್ತ ಕಣಗಳಿಗೆ ಶಕ್ತಿಯನ್ನು ಒದಗಿಸುತ್ತದೆ.
ಹಲವು ಆಹಾರಗಳ ಮೂಲಕ ಸಕ್ಕರೆ ನಮ್ಮ ದೇಹವನ್ನು ಸೇರುತ್ತದೆ. ಸುಕ್ರೋಸ್ ನಾವು ದಿನನಿತ್ಯ ಬಳಸುವ ಸಾಮಾನ್ಯ ಟೇಬಲ್ ಸಕ್ಕರೆಯಾಗಿದೆ. ಲ್ಯಾಕ್ಟೋಸ್ ಮತ್ತು ಗ್ಯಾಲಕ್ಟೋಸ್ ಹಾಲಿನಲ್ಲಿ ಕಂಡುಬರುವ ಸಕ್ಕರೆಯ ರೂಪಗಳಾಗಿವೆ. ಫ್ರಕ್ಟೋಸ್ ಸಾಮಾನ್ಯವಾಗಿ ಹಣ್ಣುಗಳಿಂದ ದೇಹಕ್ಕೆ ಸೇರುವ ಸಕ್ಕರೆಯ ಅಂಶವಾಗಿದೆ.
ಅತಿಯಾದ ಸಕ್ಕರೆಯಿಂದ ಅಪಾಯವೇ ಹೆಚ್ಚು
ಅತಿಯಾದ ಸಕ್ಕರೆ ಸೇವನೆ ಮಧುಮೇಹ, ಬೊಜ್ಜು ಸೇರಿದಂತೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅತಿಯಾದ ಸಕ್ಕರೆ ಸೇವನೆ ಮಕ್ಕಳ ಅರಿವಿನ ಸಾಮರ್ಥ್ಯ ದುರ್ಬಲಗೊಳಿಸಿ ಮಿದುಳು ಮೇಲೆ ಪರಿಣಾಮ ಬೀರುತ್ತದೆ.
ಸ್ಮರಣಶಕ್ತಿ ಮತ್ತು ಕಲಿಕೆಗೆ ಕಾರಣವಾಗುವ ಮೆದುಳಿನ ಭಾಗವಾದ ಹಿಪೊಕ್ಯಾಂಪಸ್ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಕಲಿತ, ಗಮನಿಸಿದ ಮಾಹಿತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಕಷ್ಟವಾಗುತ್ತದೆ.
ನೈಸರ್ಗಿಕ ಆಹಾರಗಳಲ್ಲಿನ ಸಕ್ಕರೆಯೇ ದೇಹಕ್ಕೆ ಸಾಕು
ಜೇನುತುಪ್ಪ, ಸಿರಪ್‌ಗಳು ಮತ್ತು ಸಕ್ಕರೆ ಸೇರಿಸದ ಹಣ್ಣು ಮತ್ತು ತರಕಾರಿ ರಸಗಳು, ಸ್ಮೂಥಿಗಳಲ್ಲಿ ನೈಸರ್ಗಿಕವಾಗಿ ಸಿಗುವ ಸಕ್ಕರೆ ನಮ್ಮ ದೇಹದ ಅಗತ್ಯಕ್ಕೆ ಸಾಕಾಗುತ್ತದೆ.
ಮಕ್ಕಳ ಸಿಹಿ ಸೇವನೆ ಬಗ್ಗೆ ಎಚ್ಚರ ಇರಲಿ
ಅಧ್ಯಯನಗಳ ಪ್ರಕಾರ, 7 ರಿಂದ 10 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 24 ಗ್ರಾಂಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. 4 ರಿಂದ 6 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 19 ಗ್ರಾಂಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. 2 ರಿಂದ 3 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 14 ಗ್ರಾಂಗಿಂತ ಹೆಚ್ಚು ಸಕ್ಕರೆ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ. 1 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 10 ಗ್ರಾಂಗಿಂತ ಹೆಚ್ಚು ಸಕ್ಕರೆ ತಿನ್ನಬಾರದು. 2-18 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ ಗರಿಷ್ಠ 6 ಟೀ ಚಮಚ ಅಥವಾ 25 ಗ್ರಾಂ ಸಕ್ಕರೆಯನ್ನು ಸೇವಿಸಬಹುದು ಎನ್ನುತ್ತದೆ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಎಎಪಿ). ಇದರರ್ಥ ನೇರವಾಗಿ ಸಿಹಿ ಅಥವಾ ಸಕ್ಕರೆ ತಿನ್ನುವುದು ಎಂದಲ್ಲ. ಎಲ್ಲ ಆಹಾರಗಳಿಂದ ದೇಹ ಸೇರುವ ಒಟ್ಟು ಸಕ್ಕರೆ ಅಂಶವಿದು. ಶುಗರ್‌ಲೆಸ್ ಕಾಫಿ ಕುಡಿದರೂ ಹಾಲಿನಿಂದ ಒಂದಷ್ಟು ಸಕ್ಕರೆ ನಮ್ಮ ದೇಹ ಸೇರುತ್ತದೆ ಎಂಬುದನ್ನು ಮರೆಯಬಾರದು.
ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ನೀಡುವ ಆಹಾರ ಅಥವಾ ಪಾನೀಯಗಳಿಗೆ ಸಕ್ಕರೆಯನ್ನು ಸೇರಿಸಲೇಬಾರದು ಎನ್ನುತ್ತಾರೆ ವೈದ್ಯರು. ಹೀಗಾಗಿ ಮಕ್ಕಳಿಗೆ ಸಿಹಿ ಪದಾರ್ಥ ನೀಡುವಲ್ಲಿ ಎಚ್ಚರಿಕೆವಹಿಸುವುದು ಪೋಷಕರ ಕರ್ತವ್ಯವಾಗಿದೆ.
(ಲೇಖಕ: ಡಾ. ಪ್ರಶಾಂತ್ ಎಸ್ ಅರಸ್. ಹಿರಿಯ ಸಲಹೆಗಾರ ನವಜಾತ ಶಿಶುವೈದ್ಯರು ಮತ್ತು ಮಕ್ಕಳ ವೈದ್ಯರು, ಅಪೋಲೋ ಆಸ್ಪತ್ರೆ ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.