ADVERTISEMENT

24 ಗಂಟೆಯೊಳಗೆ ರಕ್ತ ಪರೀಕ್ಷೆ ಫಲಿತಾಂಶ: ಕೊರೊನಾ ಬಗ್ಗೆ ಸಂಪೂರ್ಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:30 IST
Last Updated 28 ಜನವರಿ 2021, 19:30 IST
   

ಕೋವಿಡ್‌–19 ರೋಗಿಗಳಲ್ಲಿ ತಲೆದೋರಬಹುದಾದ ಸಂಕೀರ್ಣವಾದ ಸಮಸ್ಯೆಗಳನ್ನು ಸರಳವಾದ ರಕ್ತದ ಪರೀಕ್ಷೆಯಿಂದ ಕಂಡು ಹಿಡಿಯಬಹುದು ಎಂದಿರುವ ಅಮೆರಿಕದ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಮೆಡಿಸಿನ್ ವಿಜ್ಞಾನಿಗಳು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ.

ರೋಗಿ ಆಸ್ಪತ್ರೆ ಸೇರಿದ ದಿನವೇ ಸರಳವಾದ ಹಾಗೂ ಕ್ಷಿಪ್ರವಾದ ರಕ್ತದ ಪರೀಕ್ಷೆಯಿಂದ ಕೊರೊನಾ ಸೋಂಕಿತ ಹೆಚ್ಚಿನ ಸಮಸ್ಯೆಗಳಿಂದ ಬಳಲುತ್ತಾನೆಯೇ ಎಂಬುದನ್ನು ಮಾತ್ರವಲ್ಲ, ಸಾವಿನ ಸಾಧ್ಯತೆಯನ್ನೂ ಕಂಡು ಹಿಡಿಯಬಹುದು ಎಂದಿರುವ ಸಂಶೋಧಕರು, ಇದರ ವರದಿಯನ್ನು ಜೆಸಿಐ ಇನ್‌ಸೈಟ್‌ ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ಕೋವಿಡ್‌ನಿಂದ ಆಸ್ಪತ್ರೆ ಸೇರಿದ ನೂರಾರು ರೋಗಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಧಕ್ಕೆಯಾದ ಅಂಗಾಂಗಗಳ ಮೈಟೊಕಾಂಡ್ರಿಯಲ್‌ ಡಿಎನ್‌ಎ ಯನ್ನು ಪರಿಶೀಲಿಸಿದ್ದಾರೆ. ಇದು ಉರಿಯೂತಕ್ಕೆ ಕಾರಣವಾದ ಮಾರ್ಕರ್‌ ಆಗಿರುತ್ತದೆ. ಕೋವಿಡ್‌ನಿಂದ ಸಾವಿಗೀಡಾದ ಅಥವಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಅಥವಾ ಇನ್ನಿತರ ಗಂಭೀರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಮೈಟೊಕಾಂಡ್ರಿಯಲ್‌ ಡಿಎನ್‌ಎ ಹೆಚ್ಚಿನ ಮಟ್ಟದಲ್ಲಿರುವುದು ಕಂಡು ಬಂದಿದೆ. ವಯಸ್ಸು, ಲಿಂಗ ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿರುವ ಎಲ್ಲರಲ್ಲೂ ಈ ಮಟ್ಟ ಹೆಚ್ಚಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ದೇಹದಲ್ಲಿ ಉರಿಯೂತವನ್ನು ಕಂಡು ಹಿಡಿಯಲು ಮೈಟೊಕಾಂಡ್ರಿಯಲ್ ಡಿಎನ್‌ಎ ನಿಖರವಾದ ಸೂಚ್ಯಂಕ. ಕೋವಿಡ್‌ ರೋಗಿಗಳ ಸ್ಥಿತಿಯನ್ನು ಆದಷ್ಟು ಶೀಘ್ರ ಕಂಡು ಹಿಡಿದರೆ ಸೂಕ್ತ ಚಿಕಿತ್ಸೆ ನೀಡುವುದು ವೈದ್ಯರಿಗೆ ಸುಲಭ. ಕೆಲವೊಂದು ಚಿಕಿತ್ಸೆ, ಉದಾಹರಣೆಗೆ ಮೊನೊಕೊಲೊನಲ್‌ ಪ್ರತಿಕಾಯಗಳ ಪೂರೈಕೆಯಲ್ಲಿ ಕೊರತೆ ತಲೆದೋರಿದೆ. ಹಾಗೆಯೇ ಕೆಲವು ರೋಗಿಗಳು ತೀವ್ರ ನಿಗಾ ಘಟಕದ ನೆರವಿಲ್ಲದೇ ಚೇತರಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ಅಧ್ಯಯನ ತಂಡದ ಸಹ ಸಂಶೋದಕ ಆ್ಯಂಡ್ರ್ಯೂ ಇ. ಜೆಲ್ಮನ್‌ ವರದಿಯಲ್ಲಿ ಹೇಳಿದ್ದಾರೆ.

ಹೀಗಾಗಿ ಕ್ಷಿಪ್ರವಾಗಿ ರಕ್ತ ಪರೀಕ್ಷೆ ಮಾಡಿದರೆ ಸಮಸ್ಯೆ ತೀವ್ರವಾಗುವುದನ್ನು ತಪ್ಪಿಸಬಹುದು. ಸೂಕ್ತ ಚಿಕಿತ್ಸೆಗೆ ಸ್ಪಂದಿಸಬಹುದು. ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗಾಗಿ ಅವರಿಗೆ ಡಯಾಲಿಸಿಸ್‌ ಅಥವಾ ಕೃತಕ ಉಸಿರಾಟ ವ್ಯವಸ್ಥೆ ಬೇಕೆ ಅಥವಾ ರಕ್ತದ ಒತ್ತಡ ಕಡಿಮೆಯಾಗದಂತಹ ಔಷಧಿಯ ಅಗತ್ಯವಿದೆಯೇ ಎಂಬುದನ್ನು ತೀರ್ಮಾನಿಸಿ ಜೀವ ಉಳಿಸಬಹುದು. ಈ ನಿಟ್ಟಿನಲ್ಲಿ ಇಂತಹ ತುರ್ತು ರಕ್ತ ತಪಾಸಣೆ ವಿಧಾನವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.