ADVERTISEMENT

ಬೆಳಗಿನ ತಿಂಡಿ ಹೇಗಿರಬೇಕು?

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 19:47 IST
Last Updated 18 ನವೆಂಬರ್ 2018, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಿನ ತಿಂಡಿ ಬಗೆಗೆ ಒಂದು ಬಗೆಯ ಅಸಡ್ಡೆ ಇರುತ್ತದೆ. ಏನೋ ಒಂದು ಚಿತ್ರಾನ್ನ ತದುಕಿದರಾಯಿತು, ಉಪ್ಪಿಟ್ಟು ಕೆದುಕಿದರಾಯಿತು ಎನ್ನುವ ಮನೋಭಾವವೇ ಹೆಚ್ಚು.

ಆದರೆ ಬೆಳಗಿನ ತಿಂಡಿಯಲ್ಲಿ ಪ್ರೋಟೀನು, ಕಾರ್ಬೊಹೈಡ್ರೇಟು ಹಾಗೂ ಕ್ಯಾಲ್ಶಿಯಂ ಹಾಗೂ ಐರನ್‌ ಕಂಟೆಂಟ್‌ ಇರುವಂತೆ ಆಯೋಜಿಸಬೇಕು. ಬೆಳಗಿನ ತಿಂಡಿಗೆ ಮಹತ್ವ ನೀಡದೇ ಇದ್ದಲ್ಲಿ ಇಡಿಯ ದಿನದ ಡಯೆಟ್‌ ಏರುಪೇರಾಗುವ ಸಾಧ್ಯತೆ ಇರುತ್ತದೆ.

ತೂಕ ನಿಯಂತ್ರಣ, ತೂಕ ಕಳೆದುಕೊಳ್ಳುವಿಕೆ, ತೂಕ ನಿರ್ವಹಣೆಯಲ್ಲಿಯೂ ಅತಿ ಮಹತ್ವದ ಪಾತ್ರ ಬೆಳಗಿನ ತಿಂಡಿಯದ್ದು. ರಾತ್ರಿ ಇಡೀ ಉಪವಾಸವಿರುವ ದೇಹ ಹಾಗೂ ಮನಸಿಗೆ ಇಂಧನ ದೊರೆಯುವ ಮೂಲವೇ ಈ ಬ್ರೇಕ್‌ ಫಾಸ್ಟು. (ಫಾಸ್ಟನ್ನು ಬ್ರೇಕ್‌ ಮಾಡುವುದೇ ಬ್ರೇಕ್‌ ಫಾಸ್ಟ್‌). ತಿಂಡಿ ಇಲ್ಲದೇ ದಿನದ ಆರಂಭವನ್ನು ಮಾಡಿದರೆ ಅದು ಇಂಧನವಿಲ್ಲದೇ ಕಾರು ಚಾಲು ಮಾಡಲು ಯತ್ನಿಸಿದಂತೆ. ಮಿದುಳಿನ ಮೇಲೂ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಚಯಾಪಚಯ ಕ್ರಿಯೆಯ ಮೇಲೆಯೂ ಪರಿಣಾಮ ಬೀರುತ್ತದೆ.

ADVERTISEMENT

ನಮ್ಮ ತಿಂಡಿಯನ್ನು ಆಯೋಜಿಸಿಕೊಳ್ಳುವುದು ಜಾಣ್ಮೆಯ ಕೆಲಸ. ಬಹುತೇಕ ಜನರು ಬೆಳಗಿನ ತಿಂಡಿಗೆ ಮೈದಾ ಇರುವ ಬ್ರೆಡ್‌, ಸಿದ್ಧ ಜೂಸು ಸಿದ್ಧಪಡಿಸಿಕೊಂಡಿರುತ್ತಾರೆ. ಅದರ ಬದಲಿಗೆ ತಾಜಾ ಹಣ್ಣುಗಳ ಸೇವನೆ, ಸಕ್ಕರೆ ರಹಿತ ಜೂಸು ಸೇವಿಸುವುದು ಒಳಿತು. ಬ್ರೆಡ್‌ ತಿನ್ನುವುದಾದರೆ ಬ್ರೆಡ್‌ ಜೊತೆಗೆ ಮೊಟ್ಟೆಯ ಬಿಳಿಯ ಭಾಗ ಇಲ್ಲವೇ ಬೇಯಿಸಿದ ಮೊಟ್ಟೆ ತಿನ್ನಬೇಕು.

ಸಸ್ಯಾಹಾರಿಗಳಾಗಿದ್ದಲ್ಲಿ ಮೊಳಕೆಯೊಡೆದ ಕಾಳಿನ ಉಸುಳಿ, ಫುಲ್ಕಾ, ಹಾಗೂ ಮೊಸರು ತಿಂಡಿಯಲ್ಲಿ ಅಳವಡಿಸಿಕೊಂಡಿರಬೇಕು. ಉಪ್ಪಿಟ್ಟಿನಲ್ಲಿ ಧಾರಾಳವಾಗಿ ತರಕಾರಿ ಹೆಚ್ಚಿ ಹಾಕಬೇಕು. ಅನ್ನದ ತಿನಿಸು ಮಾಡುವುದಾದರೆ ಅತಿ ಹೆಚ್ಚು ತರಕಾರಿ ಬಳಸಿ, ಪಲಾವ್‌, ಬಿಸಿಬೇಳೆಭಾತ್‌ ಮಾಡುವುದು ಒಳಿತು. ಪೊಂಗಲ್‌ ಬೆಳಗಿನ ತಿಂಡಿಗಿಂತ ಸಂಜೆಯ ಊಟಕ್ಕೆ ಹೆಚ್ಚು ಹಿತವಾಗಿರುತ್ತದೆ.

ಇಡ್ಲಿ–ಸಾಂಬರ್‌ ಸೇವಿಸುವುದಾದರೆ ಸಾಂಬರ್‌ ತಿಳಿಸಾರಿನ ಬದಲು ತರಕಾರಿ ಸಾಂಬರ್‌ ಮಾಡಿಕೊಳ್ಳುವುದು ಒಳ್ಳೆಯದು. ಬೆಳಗಿನ ತಿಂಡಿಯಲ್ಲಿ ಡೈರಿ ಉತ್ಪನ್ನಗಳ ಮಿತವಾದ ಬಳಕೆ ಇರಬೇಕು. ಒಣಹಣ್ಣುಗಳ ಸೇವನೆಯೂ ಒಳ್ಳೆಯ ಆಯ್ಕೆ. ಆದರೆ ಅದೂ ಒಂದು ಮಿತಿಯಲ್ಲಿರಬೇಕು.

ಬೆಳಗಿನ ತಿಂಡಿ ಅರಸನಂತೆಯೂ, ಮಧ್ಯಾಹ್ನದ ಊಟ ಕಾರ್ಮಿಕನಂತೆಯೂ ರಾತ್ರಿಯೂಟ ಸಂತನಂತೆಯೂ ಮಾಡಬೇಕು ಎಂಬ ಲೋಕಾರೂಢಿ ಮಾತು ಇದೇ ಕಾರಣಕ್ಕೆ ಪ್ರಚಲಿತದಲ್ಲಿದೆ. ಊಟ ಬಿಟ್ಟರೂ ಚಿಂತೆಯಿಲ್ಲ, ತಿಂಡಿಯನ್ನು ತಪ್ಪಿಸಬಾರದು. ತಪ್ಪಿಸಕೂಡದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.