ಸ್ತನ ಕ್ಯಾನ್ಸರ್
ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್ ಎಂದರೆ ಅದು ಸ್ತನ ಕ್ಯಾನ್ಸರ್. ಈಗೀಗ ಜಾಗೃತಿಯ ಹೆಚ್ಚಳದಿಂದ ಮತ್ತು ವೈದ್ಯಕೀಯ ವ್ಯವಸ್ಥೆಯ ಆಧುನೀಕರಣದಿಂದಾಗಿ ಭಾರತದಲ್ಲಿ ಸುಮಾರು ಶೇ 76ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳು ಆರಂಭಿಕ ಹಂತದಲ್ಲಿಯೇ ಪತ್ತೆಯಾಗುತ್ತವೆ. ಆರಂಭಿಕ ಹಂತ ಎಂದರೆ ಸ್ತನದಲ್ಲಿ ಅಥವಾ ಸ್ತನದ ಹತ್ತಿರದ ಲಿಂಫ್ ನೋಡ್‌ಗಳಲ್ಲಿ ಕ್ಯಾನ್ಸರ್ ಗಂಟು ಕಾಣಿಸಿಕೊಳ್ಳುವುದು, ದೇಹದ ಇತರ ಭಾಗಗಳಿಗೆ ಇನ್ನೂ ಹರಡಿಲ್ಲದೇ ಇರುವುದು. ಈ ಸ್ತನ ಕ್ಯಾನ್ಸರ್ 0, 1, 2 ಅಥವಾ 3ನೇ ಹಂತದಲ್ಲಿ ಇರಬಹುದು. ಆತಂಕಕಾರಿ ವಿಚಾರವೆಂದರೆ, ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಬಳಿಕವೂ ಈ ಕ್ಯಾನ್ಸರ್ ಮತ್ತೆ ಮರುಕಳಿಸಬಹುದು.
‘ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್’ನಲ್ಲಿ ಪ್ರಕಟವಾದ ಒಂದು ಅಧ್ಯಯನ ವರದಿಯ ಪ್ರಕಾರ, ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಸುಮಾರು ಶೇ 20ರಷ್ಟು ಮಹಿಳೆಯರಲ್ಲಿ, ಮುಂದಿನ 10 ವರ್ಷಗಳ ಒಳಗೆ ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯ ಸಾಧ್ಯತೆ ಇರುತ್ತದೆ. ಹಾಗಾಗಿ, ಅಪಾಯಗಳನ್ನು ಮೊದಲೇ ಅರ್ಥಮಾಡಿಕೊಳ್ಳುವುದು ಮುಖ್ಯ.
ಕ್ರಿಯಾಶೀಲ ಜೀವನಶೈಲಿ ಪಾಲಿಸುವುದು ಮುಖ್ಯ. ಅತಿಯಾದ ದೇಹ ತೂಕ ಮತ್ತು ನಿಷ್ಕ್ರಿಯ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯ ಹೆಚ್ಚಿರುತ್ತದೆ. ಹಾಗಾಗಿ, ಹಾರ್ಮೋನ್‌ಗಳನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ನಿಯಮಿತ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಅವಶ್ಯ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ನಿಂದ ಕೂಡಿದ ಸಮತೋಲಿತ ಆಹಾರ ಸೇವನೆ ಕಡೆಗೆ ಗಮನ ಹರಿಸಬೇಕು. ಈ ಮೂಲಕ ಉತ್ತಮ ತೂಕ ಇರುವಂತೆ ನೋಡಿಕೊಳ್ಳಬೇಕು. ಇವೆಲ್ಲವೂ ಕ್ಯಾನ್ಸರ್ ಮರಳಿ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ.
ಕ್ಯಾನ್ಸರ್ ಮರುಕಳಿಸುವಿಕೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಮತ್ತು ಉತ್ತಮ ಫಲಿತಾಂಶಕ್ಕೆ ಕಾರಣವಾಗಬಹುದು. ಇಮೇಜಿಂಗ್, ಲ್ಯಾಬ್ ಟೆಸ್ಟ್‌ಗಳು ಮತ್ತು ದೈಹಿಕ ತಪಾಸಣೆ ನಡೆಸಲು ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಹಾಗೆ ಮಾಡುವುದರಿಂದ ದೇಹದಲ್ಲಾಗುವ ಯಾವುದೇ ಬದಲಾವಣೆಗಳನ್ನು ಆರಂಭದಲ್ಲಿಯೇ ಕಂಡುಹಿಡಿಯಲು ಸಹಾಯವಾಗುತ್ತದೆ. ಗಂಟು, ನೋವು, ವಿವರಿಸಲಾಗದ ಆಯಾಸ... ಹೀಗೆ ಯಾವುದೇ ಹೊಸ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ತಜ್ಞರನ್ನು ಭೇಟಿ ಮಾಡಿ.
ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯರಿಗೆ ಹಾರ್ಮೋನ್ ಆಧಾರಿತ ಔಷಧಿಗಳು ಮತ್ತು ನಿರ್ದಿಷ್ಟ ಚಿಕಿತ್ಸೆಯಂತಹ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಬಹುದು. ಈ ಮೂಲಕ ಅವರ ಜೀವನದ ಗುಣಮಟ್ಟವನ್ನು ಕಾಪಾಡಿಕೊಂಡು ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು. ಭಾರತದಲ್ಲಿ ಈ ಕುರಿತು ಇನ್ನಷ್ಟು ಚಿಕಿತ್ಸೆಯ ಲಭ್ಯತೆ ಮತ್ತು ಜಾಗೃತಿಯನ್ನು ಉಂಟುಮಾಡಬೇಕಾದ ಅಗತ್ಯ ಬಹಳಷ್ಟಿದೆ.
ದೈಹಿಕ ಚೇತರಿಕೆ ಮತ್ತು ದೀರ್ಘಕಾಲ ಬದುಕುಳಿಯುವ ಸಲುವಾಗಿ ಭಾವನಾತ್ಮಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾಜಿಕ ಬೆಂಬಲ, ಕೌನ್ಸೆಲಿಂಗ್ ಮತ್ತು ಒತ್ತಡ ನಿರ್ವಹಣೆ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಆತಂಕ, ಖಿನ್ನತೆ ಅಥವಾ ಕ್ಯಾನ್ಸರ್
ಮರುಕಳಿಸುವಿಕೆಯ ಭಯದಿಂದ ಒದ್ದಾಡುತ್ತಿದ್ದರೆ, ಮನೋವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.
ಧೂಮಪಾನ ಮತ್ತು ಅತಿಯಾದ ಮದ್ಯಪಾನವು ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ, ನೀವು ಧೂಮಪಾನ ಮಾಡುತ್ತಿದ್ದರೆ ಅದನ್ನು ಬಿಡಬೇಕು. ಮದ್ಯಪಾನವನ್ನು ಸಹ ಸಂಪೂರ್ಣವಾಗಿ ಬಿಟ್ಟುಬಿಡಿ.
ಲೇಖಕ: ಮುಖ್ಯಸ್ಥ, ಆಂಕಾಲಜಿ ವಿಭಾಗ, ಆಸ್ಟರ್ ಆಸ್ಪತ್ರೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.