
ಜೈಪುರ: ಭಾರತದ ಮಹಿಳೆಯರು ಎದುರಿಸುತ್ತಿರುವ ಅತ್ಯಂತ ಗಂಭೀರ ಆರೋಗ್ಯದ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಒಂದಾಗಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಕ್ಯಾನ್ಸರ್ ತಡೆಗಟ್ಟಲು ಜಾಗೃತಿ, ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಲಸಿಕೆ ಮತ್ತು ಆರಂಭಿಕ ತಪಾಸಣೆಯ ತುರ್ತು ಅಗತ್ಯತೆಗಳ ಕುರಿತು ವೈದ್ಯಕೀಯ ತಜ್ಞರು ಮಾಹಿತಿ ನೀಡಿದ್ದಾರೆ.
ಜೈಪುರದಲ್ಲಿ ಭಾನುವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸ್ತ್ರೀರೋಗ ತಜ್ಞೆ ಡಾ. ವೀಣಾ ಆಚಾರ್ಯ, ಗರ್ಭಕಂಠ ಕ್ಯಾನ್ಸರ್ ಕುರಿತು ಆರಂಭದಲ್ಲೇ ಎಚ್ಚರಿಕೆ ವಹಿಸುವುದು ಉತ್ತಮ. ತಡವಾದರೆ ಇದು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
‘ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ. ರೋಗವನ್ನು ತಡವಾಗಿ ಪತ್ತೆ ಹಚ್ಚುತ್ತಿರುವುದರಿಂದ ಅನೇಕರು ಸಾಯುತ್ತಿದ್ದಾರೆ’ ಎಂದು ಅವರು ಹೇಳಿದರು.
‘ಗರ್ಭಕಂಠ ಕ್ಯಾನ್ಸರ್ ಪ್ರಾಥಮಿಕವಾಗಿ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುತ್ತದೆ. ಸದ್ಯ, ಈ ರೋಗಕ್ಕೆ ಪರಿಣಾಮಕಾರಿ ಹೆಚ್‌ಪಿವಿ ಲಸಿಕೆ ಲಭ್ಯವಿರುವುದು ನಮ್ಮ ಅದೃಷ್ಟ. 9 ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಈ ಲಸಿಕೆ ನೀಡುವುದರಿಂದ ಭವಿಷ್ಯದಲ್ಲಿ ಶೇ 90ರಷ್ಟು ಗರ್ಭಗಂಠದ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು’ ಎಂದು ಅವರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ (WHO) ನವೆಂಬರ್ 17ನ್ನು ವಿಶ್ವ ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನ ದಿನವೆಂದು ಗುರುತಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.