
ನಾಲ್ಕು ವರ್ಷದ ಮಗುವೊಂದು ಏನು ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ನೀರು ಕುಡಿದರೂ ವಾಂತಿಯಾಗುತ್ತಿತ್ತು. ಪೋಷಕರ ಪ್ರಶ್ನೆ ಒಂದೇ: ‘ಯಾಕೆ ಹೀಗಾಗುತ್ತದೆ?’ ಜೀರ್ಣಕ್ರಿಯೆಯಲ್ಲಿ ಅತೀವ ಸಮಸ್ಯೆಯಾದಾಗ, ಹೈಪರ್ ಅಸಿಡಿಟಿಯಂಥ ಸಮಸ್ಯೆ ಕಾಣಿಸಿಕೊಂಡಾಗ ಮಕ್ಕಳು ಏನು ತಿಂದರೂ ಕಕ್ಕಿಕೊಳ್ಳುವುದು ಸಹಜವಾಗಿರುತ್ತದೆ.
ಎದೆಯುರಿ, ಹೊಟ್ಟೆ ಉಬ್ಬರ, ಅಸ್ವಸ್ಥತೆ, ಹೊಟ್ಟೆನೋವು, ಮಲ ವಿಸರ್ಜನೆ ಮಾಡಬೇಕು ಎಂದು ಪದೇಪದೇ ಅನ್ನಿಸುವುದು, ವಾಕರಿಕೆ, ಹಸಿವು ಕಡಿಮೆಯಾಗುವುದು ಅಜೀರ್ಣದ ಲಕ್ಷಣ
ಗಳಾಗಿರುತ್ತವೆ. ಮಕ್ಕಳಲ್ಲಿ ಇಂಥ ಲಕ್ಷಣಗಳು ಕಂಡುಬಂದಾಗ ಪೋಷಕರು ಕಳವಳಗೊಳ್ಳುವುದು ಸಹಜವೇ. ಮಲಬದ್ಧತೆ, ಅಸಿಡಿಟಿ ಹಾಗೂ ಅಜೀರ್ಣ ಸಮಸ್ಯೆಗಳು ಮಕ್ಕಳ ದೈನಂದಿನ ಚಟುವಟಿಕೆ ಗಳಿಗೂ ತೊಂದರೆ ಉಂಟುಮಾಡಬಲ್ಲವು.
ಅತಿಯಾಗಿ ತಿನ್ನುವುದು, ಬೇಗ ತಿನ್ನುವುದು, ನಾರಿನಂಶವಿರುವ ಕೆಲವು ಉಪಯುಕ್ತವಾದ ಆಹಾರಗಳನ್ನು ತಿನ್ನದೇ ಇರುವುದು, ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವುದು, ಹೋಟೆಲ್ ಆಹಾರದ ಮೇಲೆ ಅತಿಯಾದ ಅವಲಂಬನೆ, ಜಂಕ್‌ಫುಡ್ ಸೇವಿಸುವುದು, ಮಸಾಲೆಯುಕ್ತ, ಜಿಡ್ಡಿನ ಅಥವಾ ಸಕ್ಕರೆಯಿಂದ ಮಾಡಿದ ಪದಾರ್ಥ ಗಳನ್ನು ಹೆಚ್ಚು ಸೇವಿಸುವುದು. ಸೋಡಾ, ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದರಿಂದಲೂ ಅಜೀರ್ಣ ಸಮಸ್ಯೆಗಳು ಉಂಟಾಗಬಹುದು.
ವಿರಳ ಕಾರಣಗಳು ಹೀಗಿವೆ: ಹಾಲಿನ ಉತ್ಪನ್ನಗಳು (ಲ್ಯಾಕ್ಟೋಸ್), ಇತರೆ ಆಹಾರ ಪದಾರ್ಥಗಳ ಸೇವನೆಯಿಂದಾಗುವ ಅಲರ್ಜಿಯಿಂದ ಅಜೀರ್ಣ ಉಂಟಾಗಬಹುದು. ಮಾನಸಿಕ ಒತ್ತಡ, ಮಲಬದ್ಧತೆ, ಆಮ್ಲದ ಹಿಮ್ಮುಖ ಹರಿವು (Reflux) ಅಂದರೆ ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿದು ಅಜೀರ್ಣವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
ಮಗುವು ಅಜೀರ್ಣದಿಂದ ಪದೇ ಪದೇ ವಾಂತಿ ಮಾಡಿಕೊಳ್ಳುತ್ತಿದ್ದರೆ, ಸುಸ್ತಾಗಿದ್ದರೆ ಪೋಷಕರು ಗಾಬರಿಯಾಗದೆ, ಮೊದಲಿಗೆ ಮಗುವಿಗೆ ಲಘುವಾದ ಆಹಾರವನ್ನು ತಿನ್ನಿಸಬೇಕು. ನಂತರ ಎಳನೀರಿನಂಥ ದ್ರವ ಆಹಾರವನ್ನು ನೀಡಬೇಕು. ಖಾಲಿ ಹೊಟ್ಟೆಗೆ ನೀರು ಕುಡಿಸಿದರೆ, ಮತ್ತೆ ವಾಂತಿಯಾಗುವ ಸಾಧ್ಯತೆಯೇ ಹೆಚ್ಚು. ಲಘು ಆಹಾರವನ್ನು ಮಗು ನಿಧಾನವಾಗಿ ತಿನ್ನುವಂತೆ ನೋಡಿಕೊಳ್ಳಿ. ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಇರಿಸಿ.
ಮಗುವಿನ ಜೀರ್ಣಕ್ರಿಯೆಗೆ ಹೊಂದಿಕೆಯಾಗದ ಆಹಾರವನ್ನು ನೀಡಬೇಡಿ. ಚಾಕೊಲೇಟ್ ಹಾಗೂ ಕಾಫಿ, ಟೀ ಅಭ್ಯಾಸ ಮಾಡಿಸಬೇಡಿ. ಸಿಟ್ರಸ್‌ನಂಥ ಹುಳಿ ಅಂಶವಿರುವ ಹಣ್ಣು
ಗಳಲ್ಲಿರುವ ಆಮ್ಲವು ಜೀರ್ಣಾಂಗದ ಕಾರ್ಯವೈಖರಿಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ, ಇಂಥ ಹಣ್ಣುಗಳ ಸೇವನೆಯನ್ನು ಸೀಮಿತಗೊಳಿಸಿ. ಊಟವಾಗಿ ಎರಡು ತಾಸಿನ ನಂತರ ಮಗು
ಮಲಗಿಕೊಳ್ಳುವಂತೆ ಮಾಡಿ.
ಜೀರ್ಣಕ್ರಿಯೆಗೆ ನೆರವಾಗುವ ಆಹಾರಗಳು: ಎಳನೀರು, ಸೂಪ್, ಮಜ್ಜಿಗೆ, ಶುಂಠಿ ಬೆರೆಸಿದ ನೀರು, ಜೀರಿಗೆನೀರು ಮಗುವಿನ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತವೆ. ಮಗು ಸಾಕಷ್ಟು ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಿ. ಮಕ್ಕಳ ಪರಿಸರವು ಒತ್ತಡಮುಕ್ತ ಆಗಿರುವಂತೆ ನೋಡಿಕೊಳ್ಳುವುದು ಪೋಷಕರ ಆದ್ಯ ಕರ್ತವ್ಯ
ವಾಗಲಿ. ಮಾನಸಿಕ ಒತ್ತಡ ಹಾಗೂ ವರ್ತನೆಯ ಕಾರಣಗಳಿಂದಲೂ ಮಕ್ಕಳಲ್ಲಿ ಅಜೀರ್ಣ ಸಮಸ್ಯೆ ಉಂಟಾಗಬಹುದು. ಅಜೀರ್ಣದ ಜತೆಗೆ ತೀವ್ರವಾದ ಹೊಟ್ಟೆನೋವು, ವಾಂತಿ ಅಥವಾ ಜ್ವರದಂಥ ಸಮಸ್ಯೆಗಳು ಕಾಣಿಸಿಕೊಂಡರೆ, ಮಕ್ಕಳು ಅಸಹಜ ನಡವಳಿಕೆಯನ್ನು ತೋರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಅವಶ್ಯ ಔಷಧಗಳನ್ನು ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.