
ಸಾಂದರ್ಭಿಕ ಚಿತ್ರ
ನವದೆಹಲಿ: 3 ತಿಂಗಳಿಗಿಂತ ಹೆಚ್ಚು ಕಾಲ ಇರುವ ದೀರ್ಘಕಾಲದ ನೋವಿನ ಸಮಸ್ಯೆಯಿಂದ ಉಂಟಾಗುವ ಖಿನ್ನತೆ ಮತ್ತು ಉರಿಯೂತ ಸಮಸ್ಯೆ ವಯಸ್ಕರಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಇಂಗ್ಲೆಂಡ್ ಬಯೋಬ್ಯಾಂಕ್‌ನ 2 ಲಕ್ಷಕ್ಕೂ ಅಧಿಕ ವಯಸ್ಕರ ಡೇಟಾವನ್ನು ಪರಿಶೀಲಿಸಿದ ಬಳಿಕ ಅಧಿಕ ರಕ್ತದೊತ್ತಡ ಜರ್ನಲ್ ವರದಿಯೊಂದನ್ನು ಪ್ರಕಟಿಸಿದೆ. ಸರಾಸರಿ 13.5 ವರ್ಷಗಳ ಮೇಲ್ವಿಚಾರಣೆಯ ಬಳಿಕ ಸುಮಾರು ಶೇ 10ರಷ್ಟು ವ್ಯಕ್ತಿಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿರುವುದು ತಿಳಿದು ಬಂದಿದೆ.
ದೀರ್ಘಕಾಲದ ನೋವು ಹೆಚ್ಚಿರುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಸಾಮಾನ್ಯವಾಗಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ. ನೋವು ಇಲ್ಲದವರಿಗೆ ಹೋಲಿಸಿದರೆ ಶೇ 75ರಷ್ಟು ಹೆಚ್ಚಿನ ಅಧಿಕ ರಕ್ತದೊತ್ತಡದ ಅಪಾಯವನ್ನು ನೋವು ಇರುವವದರು ಎದುರಿಸುತ್ತಿದ್ದಾರೆ.
ಅಲ್ಪಾವಧಿಯ ನೋವು ಶೇ 10ರಷ್ಟು ಅಧಿಕ ರಕ್ತದೊತ್ತಡದ ಅಪಾಯವನ್ನು ಸೂಚಿಸಿದರೆ, ದೀರ್ಘಕಾಲದ ನೋವು ಶೇ 20ರಷ್ಟು ಹೆಚ್ಚಿನ ಅಪಾಯವನ್ನು ಸೂಚಿಸಿದೆ ಎಂದು ಅಧ್ಯಯನ ತಿಳಿಸಿದೆ.
‘ಜನರಲ್ಲಿ ನೋವಿನ ತೀವ್ರತೆ ಹೆಚ್ಚಾದಷ್ಟು ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಾಗುತ್ತದೆ’ ಎಂದು ಯುಕೆಯ ಗ್ಲ್ಯಾಸ್ಗೋ ವಿವಿಯ ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕ ಹಾಗೂ ಲೇಖಕ ಜಿಲ್ ಪೆಲ್ ಹೇಳಿದ್ದಾರೆ.
ಪೆಲ್ ಪ್ರಕಾರ, ಈ ಸಂಶೋಧನೆಯಲ್ಲಿ ತಿಳಿದು ಬಂದ ಅಂಶವೇನೆಂದರೆ ದೀರ್ಘಕಾಲದ ನೋವು ಜನರನ್ನು ಖಿನ್ನತೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಖಿನ್ನತೆಯಿಂದಾಗಿ ಜನರಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗುತ್ತದೆ ಎಂದಿದ್ದಾರೆ.
‘ನೋವು ಇರುವ ವ್ಯಕ್ತಿಗಳು ಸರಿಯಾದ ಚಿಕಿತ್ಸೆ ಪಡೆಯುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು’ ಎಂದು ಪೆಲ್ ತಿಳಿಸಿದ್ದಾರೆ..
ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ 35ಕ್ಕಿಂತ ಹೆಚ್ಚು ಜನರು ದೀರ್ಘಕಾಲದ ಸ್ನಾಯು–ಅಸ್ಥಿಪಂಜರದ ನೋವನ್ನು ಅನುಭವಿಸುತ್ತಿದ್ದಾರೆ. ಶೇ 62.2ರಷ್ಟು ಜನರು ದೇಹದ ಒಂದು ಭಾಗದಲ್ಲಿ ದೀರ್ಘಕಾಲದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಉರಿಯೂತ ಮತ್ತು ಖಿನ್ನತೆ ಎರಡೂ ಕೂಡ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ತಿಳಿದಿದ್ದರೂ ಈ ಬಗ್ಗೆ ಹಿಂದಿನ ಯಾವುದೇ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಧ್ಯಯನಗಳು ಗಮನಹರಿಸಿಲ್ಲ ಎಂದು ಪೆಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.