ADVERTISEMENT

ವಾತ, ಕಫ ಹೆಚ್ಚಿಸುವವರ್ಷ ಋತು

ಡಾ.ರಾಘವೇಂದ್ರ ಎನ್.ಚಿಂತಾಮಣಿ
Published 13 ಜುಲೈ 2019, 11:09 IST
Last Updated 13 ಜುಲೈ 2019, 11:09 IST
Sick woman blowing her nose - Stock image
Sick woman blowing her nose - Stock image   

ಗ್ರೀಷ್ಮ ಋತುವಿನ ತಾಪಕ್ಕೆ ಬಸವಳಿದ ಇಳೆಗೆ ವರ್ಷ ಋತುವಿನ ಮಳೆಯ ಸಿಂಚನ ಅತ್ಯಂತ ಚೈತನ್ಯದಾಯಕ. ಸೂರ್ಯನ ದಕ್ಷಿಣಾಭಿಮುಖ ಪಥಸಂಚಲನದಿಂದ ವರ್ಷ, ಶರದ್, ಹೇಮಂತ ಋತುಗಳನ್ನು ದಕ್ಷಿಣಾಯನವೆಂದು ಪರಿಗಣಿಸುತ್ತೇವೆ. ಸಾಧಾರಣವಾಗಿ ಜೂನ್ 15ರಿಂದ ಆಗಸ್ಟ್ 15ರವರೆಗಿನ ಎರಡು ತಿಂಗಳನ್ನು ವರ್ಷ ಋತುವೆಂದು ಆಯುರ್ವೇದದಲ್ಲಿ ಪರಿಗಣಿಸಲಾಗುತ್ತದೆ.

ವರ್ಷದಲ್ಲಿ ಒಟ್ಟು ಆರು ಋತುಗಳು, ಅವುಗಳಲ್ಲಿ ಮೂರು ಋತುಗಳು ಆರೋಗ್ಯದ ಏರುಪೇರಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೇಮಂತ (ಚಳಿಗಾಲ)- ನವೆಂಬರ್‌ನಿಂದ ಜನವರಿ, ವಸಂತ (ಬೇಸಿಗೆ ಆರಂಭ) ಹಾಗೂ ವರ್ಷ ಋತು ಅಂದರೆ ಮಳೆಗಾಲ.

ಮಳೆಗಾಲದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಹಾಗೂ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಮನೆಮದ್ದುಗಳನ್ನು ಬಳಸಿಕೊಂಡು ನಿವಾರಣೆ ಮಾಡಿಕೊಳ್ಳುವ ಕೆಲವು ಉಪಾಯಗಳನ್ನು ಅರಿಯೋಣ.

ADVERTISEMENT

ಬೇಸಿಗೆಯಿಂದ ಮಳೆಗಾಲಕ್ಕೆ ಕಾಲಿಡುವ ಸಮಯದಲ್ಲಿ ಮೊದಲ ಮಳೆಯಿಂದಾಗಿ ಕಲುಷಿತ ಪ್ರದೇಶಗಳಲ್ಲಿ ನೀರು ಶೇಖರಣೆಗೊಳ್ಳುವ ಕಾರಣ ತರಕಾರಿ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಅದರಲ್ಲೂ ಸೊಪ್ಪುಗಳು ಕ್ರಿಮಿಕೀಟಗಳಿಂದ ಕೂಡಿರುವುದು ಹೆಚ್ಚು. ಹೀಗಾಗಿ ಸೊಪ್ಪುಗಳನ್ನು ಉದಾ: ದಂಟು, ಹರಿವೆ, ಪಾಲಕ್, ಮೆಂತ್ಯ ಇತ್ಯಾದಿಗಳನ್ನು ಬಳಸುವಾಗ ಅವುಗಳ ಗುಣಮಟ್ಟ ನೋಡಿಕೊಂಡು ಚೆನ್ನಾಗಿ ಉಪ್ಪು ನೀರಿನಲ್ಲಿ ತೊಳೆದು ಬಳಸಬೇಕು.

ಸೊಳ್ಳೆಗಳು ಹೆಚ್ಚುವ ಕಾರಣ ನಿಮಗೆ ಗೊತ್ತೇ ಇದೆ ಯಾವೆಲ್ಲಾ ಜ್ವರಗಳು ಬರಬಹುದೆಂದು. ಉದಾ: ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ, ವೈರಲ್ ಆರ್ಥರೈಟಿಸ್ ಹೀಗೆ ಅನೇಕ. ವರ್ಷ ಋತುವಿನಲ್ಲಿ ಮೊದಲ ಭಾಗದಲ್ಲಿ ವಿವಿಧ ರೀತಿಯ ಜ್ವರಗಳು ಹೆಚ್ಚಲು ಪ್ರಮುಖ ಕಾರಣವೇ ಕಲುಷಿತ ನೀರು.

ಈ ಋತುವಿನಲ್ಲಿ ಸಹಜವಾಗಿ ಜಠರಾಗ್ನಿ (ಹಸಿವು) ಕಡಿಮೆ ಇರುವುದರಿಂದ ಅಜೀರ್ಣ, ಹೊಟ್ಟೆಯುಬ್ಬರ ಸಹಜ.

ಮಳೆಗಾಲದಲ್ಲಿ ವಾತದೋಷವು ಪ್ರಕೋಪಗೊಳ್ಳುವ ಕಾರಣ ಮೈಕೈನೋವು, ಸೊಂಟನೋವು, ಮಂಡಿನೋವು (ಆಮವಾತ ಹಾಗೂ ಸಂಧಿವಾತ), ಚರ್ಮವಿಕಾರಗಳಾದ ಸೋರಿಯಾಸಿಸ್, ತಲೆಹೊಟ್ಟು, ಕೂದಲುದುರುವಿಕೆ, ಒಣಚರ್ಮ ಇತ್ಯಾದಿಗಳು ತಲೆದೋರುವ ಅಥವಾ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.

ಮಳೆಯಲ್ಲಿ ನೆನೆಯುವುದರಿಂದ ಶೀತದೋಷವು ಅರ್ಥಾತ್ ಕಫ ದೋಷವು ವಾತದೊಂದಿಗೆ ಅಧಿಕವಾಗುವ ಕಾರಣ ಅನೇಕ ಕಫವಾತ ಸಂಬಂಧಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆಷಾಢ ಮಾಸದಲ್ಲಿ ಅಧಿಕಗೊಳ್ಳುವ ಗಾಳಿ ಮತ್ತು ಮೋಡಗಳು ವಾತ ಮತ್ತು ಕಫ ದೋಷಗಳು ಹೆಚ್ಚುವಂತೆ ಮಾಡುವ ಕಾರಣ ಉಬ್ಬಸ, ಕೆಮ್ಮು, ನೆಗಡಿ, ಸೈನಸೈಟಿಸ್, ತಲೆಭಾರ, ತಲೆನೋವು ಇತ್ಯಾದಿಗಳಿಗೆ ಎಡೆಮಾಡಿ ಕೊಡುತ್ತವೆ ಹಾಗೂ ಉಬ್ಬಸ ಇದ್ದವರಲ್ಲಿ ಅದು ಉಲ್ಬಣಗೊಳ್ಳುತ್ತದೆ.

ಚಿಕಿತ್ಸೆಗಳು

ವಾತವನ್ನು ನಿಯಂತ್ರಿಸುವ ಪ್ರಮುಖ ಅಸ್ತ್ರ ತೈಲ ಅರ್ಥಾತ್ ಎಣ್ಣೆ, ಯಾರು ಎಣ್ಣೆಸ್ನಾನವನ್ನು ಪ್ರತಿನಿತ್ಯ ಅಥವಾ ಈಗಿನ ಕಾಲಕ್ಕೆ ಕನಿಷ್ಠ ವಾರಕ್ಕೆರಡು ಬಾರಿಯಾದರೂ ಮಾಡಿಕೊಳ್ಳುವರೋ ಅವರನ್ನು ಸಹಜವಾಗಿ ವೃದ್ಧಾಪ್ಯ ಕಾಡುವುದಿಲ್ಲ, ಅಂತೆಯೇ ಸಹಜವಾಗಿ ಯಾವುದೇ ರೋಗಗಳು ಸುಳಿಯುವುದಿಲ್ಲ ಎನ್ನುತ್ತದೆ ಆಯುರ್ವೇದ ಶಾಸ್ತ್ರ.

ಯಾವ ಎಣ್ಣೆ ಸೂಕ್ತ?

ಎಲ್ಲಕ್ಕಿಂತ ಶ್ರೇಷ್ಠ ಎಳ್ಳೆಣ್ಣೆ. ಕೊಬ್ಬರಿಯೆಣ್ಣೆ, ಹರಳೆಣ್ಣೆ, ಸೂರ್ಯಕಾಂತಿ ಎಣ್ಣೆ ಹೀಗೆ ದಿನನಿತ್ಯ ಬಳಸುವ ಎಣ್ಣೆಗಳನ್ನೇ ಅಭ್ಯಂಗಕ್ಕೆ ಬಳಸಬಹುದು.

ಪ್ರಮಾಣ: ಅವರವರ ದೇಹಕ್ಕೆ ತಕ್ಕಂತೆ ಕನಿಷ್ಠ ಐದಾರು ಚಮಚ ಎಣ್ಣೆಯನ್ನು ಬಿಸಿ ಮಾಡಿ ಸೂಕ್ತವಾಗಿ ಲೇಪಿಸಿಕೊಳ್ಳುವುದು. ನಂತರ ಬಿಸಿನೀರಿನ ಸ್ನಾನ ಕಡ್ಡಾಯ.

ಬಿಸಿನೀರು

ನೀರು ನೀರಸವಲ್ಲ, ಅದನ್ನು ದಿವ್ಯೌಷಧಿಯಾಗಿಯೂ ಪರಿಗಣಿಸಬಹುದು. ಕೇವಲ ಬಿಸಿನೀರಿನ ಸೇವನೆಯಿಂದ ಅನೇಕ ವಾತಜ ಹಾಗು ಕಫಜ ತೊಂದರೆಗಳಿಗೆ ಕಡಿವಾಣ ಹಾಕಬಹುದು. ಕೇವಲ ನೀರನ್ನು ತಾತ್ಕಾಲಿಕವಾಗಿ ಬಿಸಿ ಮಾಡಿ ಸೇವಿಸುವುದು ಸೂಕ್ತವಲ್ಲ. ನೀರನ್ನು ಚೆನ್ನಾಗಿ ಕುದಿಸಿ ನಾಲ್ಕನೇ ಒಂದು ಭಾಗದಷ್ಟು ಇಂಗಿಸಿ. ಕುಡಿಯುವಷ್ಟು ಹಿತವಾದ ಬಿಸಿಯಲ್ಲಿ ನೀರನ್ನು ಸೇವಿಸಿವುದು ಉತ್ತಮ.

ತಣ್ಣೀರಿಗೆ ಸಾಂದ್ರತೆ ಹೆಚ್ಚು. ಹೀಗಾಗಿ ತಣ್ಣೀರಿನ ಸಾಂದ್ರತೆ ಕಫವೃದ್ಧಿಗೆ ಮತ್ತು ಶೀತಗುಣ ವಾತವೃದ್ಧಿಗೆ ಕಾರಣವಾಗುತ್ತದೆ.

ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಶುಂಠಿ, ಹಿಪ್ಪಲಿ ಅಥವಾ ಮೆಣಸು ಸೇರಿಸಿ ಚೆನ್ನಾಗಿ ಕುದಿಸಿ ಬಳಸಿದರೆ ಕಫವಾತಜ ತೊಂದರೆಗಳಿಗೆ ಸಹಕಾರಿ. ಅಂತೆಯೇ ಲಾವಂಚ ಅಥವಾ ಜೀರಿಗೆ ಸೇರಿಸಿ ಕುದಿಸಿ ಬಳಸಿದರೆ ಪಿತ್ತಜ ವ್ಯಾಧಿಗಳಲ್ಲಿ ಸಹಕಾರಿಯಾಗುತ್ತದೆ.

ಮಳೆಗಾಲದಲ್ಲಿ ಈ ರೀತಿಯ ಪಥ್ಯ ಸದಾ ಸೂಕ್ತ.

ಬೇಡ: ಅಡಿಕೆ, ಆಲೂಗೆಡ್ಡೆ, ಅವರೆ, ಹಲಸಿನಹಣ್ಣು, ತಣ್ಣೀರು, ತಂಗಳು ಪದಾರ್ಥ, ಮೊಸರು, ಅತಿಶೀತ ದ್ರವ್ಯಗಳ ಸೇವನೆ, ಬೇಕರಿ ಪದಾರ್ಥ, ಜಂಕ್‌ಫುಡ್‌ಗಳು ಸೂಕ್ತವಲ್ಲ. ತಣ್ಣೀರಿನಲ್ಲಿ ಓಡಾಟ, ರಾತ್ರಿ ಜಾಗರಣೆ, ಅಧಿಕ ಪರಿಶ್ರಮ ಹಿತವಲ್ಲ.

ಬಳಸಿ: ತೊಗರಿ, ಹೆಸರುಕಾಳು, ಬಿಸಿ ಆಹಾರ, ಪೊಂಗಲ್, ಮೆಣಸುಸಾರು, ಹೀರೇಕಾಯಿ, ಬಿಸಿನೀರು, ಮಜ್ಜಿಗೆ, ಸೈಂಧವ ಲವಣ, ಕಾಳುಮೆಣಸು, ಶುಂಠಿ, ಬೆಳ್ಳುಳ್ಳಿ, ತುಪ್ಪ ಇವುಗಳ ಸೇವನೆ ಹಿತಕರ. ಅಭ್ಯಂಗ, ಬಿಸಿನೀರಿನ ಸ್ನಾನ ಸೂಕ್ತ.

ಕೆಲವು ಮನೆಮದ್ದುಗಳು

ನೆಗಡಿ, ಕೆಮ್ಮು, ದಮ್ಮು ಇತ್ಯಾದಿಗಳಿಗೆ: ಬಿಸಿ ನೀರು ಸೇವನೆ, ಲಘು ಆಹಾರ, ಬಿಸಿ ಆಹಾರದೊಂದಿಗೆ ಶುಂಠಿ ಕಷಾಯ, ಮೆಣಸು, ಬೆಳ್ಳುಳ್ಳಿ, ಜೇನುತುಪ್ಪ ಹಿತಕರ. ತ್ರಿಕಟು (ಶುಂಠಿ+ಮೆಣಸು+ಹಿಪ್ಪಲಿ 1:1:1) ಚೂರ್ಣ 1/4 ಚಮಚಕ್ಕೆ 1/2 ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಆಹಾರದ ನಂತರ ಸೇವಿಸಿ. ರಾತ್ರಿ ಬಿಸಿನೀರು ಕುಡಿಯಿರಿ.

ಮಂಡಿನೋವು, ಸೊಂಟನೋವು, ಹಿಮ್ಮಡಿನೋವು ಇತ್ಯಾದಿಗಳಿಗೆ: ಸ್ವಲ್ಪ ಪ್ರಮಾಣದಲ್ಲಿ ಹರಳೆಣ್ಣೆಯನ್ನು ಬಿಸಿಮಾಡಿ ನೋವಿರುವ ಜಾಗಕ್ಕೆ ಲೇಪಿಸಿ ಕಲ್ಲುಪ್ಪು ಅಥವಾ ಮರಳನ್ನು ಹುರಿದು ಬಟ್ಟೆಯಲ್ಲಿ ಗಂಟು ಹಾಕಿ ಶಾಖ ನೀಡುವುದು ಹೆಚ್ಚು ಲಾಭದಾಯಕ.

ತಲೆಹೊಟ್ಟು, ಕೂದಲುದುರುವಿಕೆ ಇತ್ಯಾದಿಗಳಲ್ಲಿ: ಕರಿಬೇವು ಆಹಾರದಲ್ಲಿ ಹೆಚ್ಚಾಗಿ ಬಳಸಿ. ಬಿಳಿ ದಾಸವಾಳದ ಹೂ ಸೇವನೆ ಉತ್ತಮ. ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕೇವಲ ಎರಡು ಗಂಟೆ ಬಿಟ್ಟು ಸ್ನಾನ ಮಾಡುವುದು ಸೂಕ್ತ. ರಾತ್ರಿ ತಲೆಗೆ ಎಣ್ಣೆ ಹಚ್ಚಿಕೊಂಡು ಮಲಗುವುದು ಅಥವಾ ಐದಾರು ಗಂಟೆ ಕಾಲ ಬಿಟ್ಟು ಸ್ನಾನ ಮಾಡುವುದು ಹೆಚ್ಚು ಪರಿಣಾಮ ಬೀರುವುದಿಲ್ಲ. ರಕ್ತದಲ್ಲಿ ಕಬ್ಬಿಣ ಅಂಶದ ಕೊರತೆ ಸಹಾ ಕೂದಲು ಉದುರುವಿಕೆಗೆ ಕಾರಣವಾಗುವುದರಿಂದ ಕಬ್ಬಿಣದ ಅಂಶ ಹಾಗೂ ಕ್ಯಾಲ್ಸಿಯಂ ಭರಿತ ಆಹಾರ ಸೇವನೆ ಮುಖ್ಯ.

(ಲೇಖಕ ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.