
ಕುಟುಂಬದಲ್ಲಿ ಸಮಸ್ಯೆಗಳು ಎದುರಾದಾಗ, ಸ್ನೇಹಿತೆಯರು ಮಾನಸಿಕವಾಗಿ ನೊಂದಿದ್ದಾಗ ಖುದ್ದು ಕೌನ್ಸೆಲಿಂಗ್ ಮಾಡುತ್ತಿದ್ದೆ. ಈಗ ನಾನೇ ನನ್ನ ಬದುಕಿನ ಜಂಜಾಟದಲ್ಲಿ ಸಿಲುಕಿಕೊಂಡು ನಲುಗುತ್ತಿದ್ದೇನೆ. ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇನೆ. ನನ್ನನ್ನು ನಾನೇ ಸಂತೈಸಿಕೊಳ್ಳಲಾಗದೆ ಅನ್ಯರಿಂದ ಕೌನ್ಸೆಲಿಂಗ್ ಪಡೆಯುವ ಹಾಗೆ ಆಗಿದೆ. ಇದು ನನ್ನಲ್ಲಿ ಒಂದು ಬಗೆಯ ಕೀಳರಿಮೆ ಹುಟ್ಟಿಸುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ?
ಹೇಮಾ, ಬೆಂಗಳೂರು
ಎಷ್ಟೋ ಮಂದಿಗೆ ತಾವು ಇತರರಿಗೆ ಕೌನ್ಸೆಲಿಂಗ್ ಮಾಡುತ್ತೇವೆ ಎನ್ನುವುದರ ಕುರಿತು ಅಭಿಮಾನದ ಜೊತೆಗೆ ಅಹಂಕಾರವೂ ಇರುತ್ತದೆ. ತಾನು ಇತರರಿಗೆ ಸಲಹೆ ಕೊಡುತ್ತಿದ್ದೇನೆ, ತಾನು ಅವರಿಗಿಂತ ಹೆಚ್ಚು ಚೆನ್ನಾಗಿ ಯೋಚಿಸಬಲ್ಲೆ, ಸಮಸ್ಯೆಗಳನ್ನು ಪರಿಹರಿಸಬಲ್ಲೆ, ಕೌನ್ಸೆಲಿಂಗ್ ಪಡೆದುಕೊಳ್ಳುತ್ತಿರುವವರಿಗಿಂತ ತನಗೆ ಹೆಚ್ಚು ತಿಳಿದಿದೆ ಎಂದೆಲ್ಲ. ಕೌನ್ಸೆಲಿಂಗ್ ಮಾಡುವವರು ದೊಡ್ಡವರಲ್ಲ ಅಥವಾ ಕೌನ್ಸೆಲಿಂಗ್ ಪಡೆಯುವವರು ಸಣ್ಣವರೇನಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು.
ನಾವೆಲ್ಲರೂ ಮನುಷ್ಯರೇ ಮತ್ತು ನಮ್ಮ ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ನಮಗೆಲ್ಲರಿಗೂ ಒಂದು ಹಂತದವರೆಗೆ ಸಮಸ್ಯೆಯನ್ನು ಪರಿಹರಿಸುವ ಸಾಮರ್ಥ್ಯ ಇರುತ್ತದೆ. ಆದರೆ, ಅದು ಒಂದು ಹಂತ ಮೀರಿ ಹೋದಾಗ ನಮಗೆ ಇತರರ ಸಹಾಯ ಬೇಕಾಗುತ್ತದೆ. ನಾವು ಮೊದಲಿಗೆ ಸುಲಭವಾಗಿ ನಮ್ಮ ಸ್ನೇಹಿತರಿಂದ ಸಹಾಯವನ್ನು ಪಡೆಯುತ್ತೇವೆ. ಆದರೆ ಆಮೇಲೆ ಹೆಚ್ಚಿನ ಸಹಾಯ ಬೇಕಾದಾಗ ತಜ್ಞರ ಬಳಿಗೆ ತೆರಳುತ್ತೇವೆ. ತಜ್ಞತೆ ಇರುವವರು ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಏನೆಂದರೆ, ನಾವು ಕೌನ್ಸೆಲಿಂಗ್ ಅಥವಾ ಸೈಕೊಥೆರಪಿ ಮಾಡುವ ಮೂಲಕ ನಮ್ಮ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಸ್ವತಃ ಪರಿಹರಿಸಿಕೊಳ್ಳು ವುದಕ್ಕೆ ಸಮರ್ಥರಾಗುವಂತೆ ಮಾಡುವಲ್ಲಿ ಸಹಾಯಕರಾಗಿರುತ್ತೇವೆಯೇ ವಿನಾ ನಾವೇ ಅವರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ತೊಡಗಬಾರದು. ಪರಿಹಾರ ಕಂಡುಕೊಳ್ಳುವಲ್ಲಿ ಅವರಿಗೆ ಮಾರ್ಗದರ್ಶನ ಮಾಡಬಹುದೇ ವಿನಾ ‘ಇದೇ ನಿನ್ನ ಸಮಸ್ಯೆಗೆ ಪರಿಹಾರ’ ಎಂದು ಹೇಳುವ ತಪ್ಪನ್ನು ಮಾಡಬಾರದು.
ನಾವು ಯಾವಾಗ ಒಂದು ಸಮಸ್ಯೆಯ ಭಾಗವಾಗಿರುತ್ತೇವೆಯೋ, ಆಗ ನಮಗೆ ಆ ಸಮಸ್ಯೆಯ ವಿಭಿನ್ನ ಆಯಾಮಗಳು ಕಾಣಿಸದೇ ಇರಬಹುದು. ಆದರೆ, ಆ ಸಮಸ್ಯೆಯಿಂದ ಹೊರಗೆ ಹೋಗಿ ನೋಡಿದಾಗ, ಆ ಎಲ್ಲ ಆಯಾಮಗಳೂ ಗೋಚರವಾಗಬಹುದು ಮತ್ತು ಅವುಗಳಿಂದಲೇ ನಾವು ಪರಿಹಾರವನ್ನು ಕಂಡುಕೊಳ್ಳಬಹುದು. ಮೊದಲನೆಯದಾಗಿ, ಕೌನ್ಸೆಲಿಂಗ್ ಪಡೆಯುತ್ತಿರುವುದರ ಬಗ್ಗೆ ಕೀಳರಿಮೆಯನ್ನು ಬಿಡಿ. ಮನಃಶಾಸ್ತ್ರವನ್ನು ಕಲಿತು ಹತ್ತು ವರ್ಷಗಳಿಂದ ನಾನು ವೃತ್ತಿಪರನಾಗಿದ್ದರೂ, ನನ್ನ ಜೀವನದಲ್ಲಿ ಸಮಸ್ಯೆಗಳು ಬಂದಾಗ ನಾನೂ ಥೆರಪಿಗೆ ಒಳಪಟ್ಟಿದ್ದೇನೆ ಮತ್ತು ಆ ಮೂಲಕ ಅನೇಕ ಸುಧಾರಣೆಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಒಬ್ಬ ಉತ್ತಮ ಥೆರಪಿಸ್ಟ್ ಆಗಲು ಮೊದಲು ನಾವು ಥೆರಪಿ ಪಡೆಯಬೇಕು. ನಮ್ಮಲ್ಲಿರುವ ಟ್ರಾಮಾಗಳನ್ನು ಹೀಲ್ ಮಾಡಿಕೊಳ್ಳಬೇಕು, ವೃತ್ತಿಪರರ ಅವಶ್ಯಕತೆ ಬಂದಲ್ಲಿ, ತತ್‍ಕ್ಷಣ ಅವರಿಂದ ಸಲಹೆ, ಸೂಚನೆಗಳನ್ನು ಪಡೆಯಬೇಕು. ಒಬ್ಬ ವೈದ್ಯನಿಗೆ ಇನ್ನೊಬ್ಬ ವೈದ್ಯನ ಅವಶ್ಯಕತೆ ಹೇಗೆ ಇರುತ್ತದೊ ಹಾಗೆಯೇ ಒಬ್ಬ ಥೆರಪಿಸ್ಟ್‌ಗೆ ಇನ್ನೊಬ್ಬ ಥೆರಪಿಸ್ಟ್‌ನ ಅಗತ್ಯ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.