ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಕೋವಿಡ್‌ನಿಂದ ಕಣ್ಣಿಗೂ ಇದೆ ಅಪಾಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 1:30 IST
Last Updated 14 ಅಕ್ಟೋಬರ್ 2020, 1:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಹುಬ್ಬಳ್ಳಿ: ಕಣ್ಣು ಮತ್ತು ಮೂಗು ಪದೇ ಪದೇ ಮುಟ್ಟಿಕೊಳ್ಳುವುದರಿಂದ ಕೊರೊನಾ ಸೋಂಕು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕೋವಿಡ್‌ ಕಾಲದಲ್ಲಿ ಕಣ್ಣಿನ ರಕ್ಷಣೆಗೆ ವಿಶೇಷ ಒತ್ತು ಕೊಡಬೇಕು ಎನ್ನುತ್ತಾರೆ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ನೇತ್ರ ತಜ್ಞ ಶ್ರೀನಿವಾಸ ಎಂ. ಜೋಶಿ.

ಡಾ. ಶ್ರೀನಿವಾಸ ಎಂ. ಜೋಶಿ

ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಪದೇ ಪದೇ ಕಣ್ಣು ಮುಟ್ಟಿಕೊಳ್ಳಬೇಕು ಅನಿಸುವುದು ಇವೆಲ್ಲವೂ ಕಣ್ಣಿನಿಂದ ಕೊರೊನಾ ಬಂದ ಲಕ್ಷಣಗಳು. ಸೋಂಕು ಅಂಟಿಕೊಂಡ ವ್ಯಕ್ತಿಯಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಸದ್ಯದ ಮಟ್ಟಿಗೆ ನಮ್ಮಲ್ಲಿ ಈ ರೀತಿಯ ಪ್ರಕರಣಗಳು ಕಡಿಮೆ. ಈ ಸೋಂಕು ರಕ್ತನಾಳಗಳಲ್ಲಿ ಬ್ಲಾಕೇಜ್‌ಗಳನ್ನು ಮಾಡುವುದರಿಂದ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಕಣ್ಣಿನ ಮೇಲೆ ಪರಿಣಾಮ ಆಗುತ್ತದೆ. ಕಣ್ಣಿನ ರಕ್ತನಾಳಗಳು ಚಿಕ್ಕದಾಗಿರುವ ಕಾರಣ ‌‌‌ಅಕ್ಷಿಪಟಲಕ್ಕೆ ರಕ್ತ ಸಂಚಾರ ಬಂದ್‌ ಆಗುವ ಸಾಧ್ಯತೆ ಇರುತ್ತದೆ. ಇದು ಎಲ್ಲ ವಯಸ್ಸಿನವರಲ್ಲೂ ಕಂಡುಬರುವುದರಿಂದ ಕಣ್ಣಿನ ಬಗ್ಗೆ ಜಾಗರೂಕತೆ ಅಗತ್ಯ ಎಂದು ಜೋಶಿ ಹೇಳಿದರು.

ಈಗ ನಾವೆಲ್ಲ ಮೊಬೈಲ್‌ ಮತ್ತು ಕಂಪ್ಯೂಟರ್‌ ಮುಂದೆ ಕುಳಿತು ಹೆಚ್ಚು ಹೊತ್ತು ಕೆಲಸ ಮಾಡಬೇಕಾದ ಕಾರಣ ಕಣ್ಣು ಪಿಳುಕಿಸುವುದು ಬಹಳಷ್ಟು ಕಡಿಮೆಯಾಗಿದೆ. ಪ್ರತಿ ನಿಮಿಷಕ್ಕೆ 16ರಿಂದ 18 ಸಲ ಪಿಳುಕಿಸದೆ ಹೋದರೆ ಕಣ್ಣು ಒಣಗುತ್ತದೆ. ಇದರಿಂದ ನೇತ್ರಗಳನ್ನು ಉಜ್ಜಿಕೊಳ್ಳಬೇಕು ಅನಿಸುತ್ತದೆ. ಬೇರೆ ವಸ್ತು ಮುಟ್ಟಿ ನಮಗರಿವಿಲ್ಲದಂತೆ ಕಣ್ಣುಗಳನ್ನು ಮುಟ್ಟುವುದರಿಂದ ಸೋಂಕು ಹರಡುವ ಅಪಾಯವೂ ಇರುತ್ತದೆ. ಆದ್ದರಿಂದ ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು ಅಥವಾ ಕಣ್ಣನ್ನು ಸ್ವಚ್ಛವಾಗಿ ತೊಳೆದುಕೊಂಡು ಮುಟ್ಟಬೇಕು ಎಂದರು.

ADVERTISEMENT

ಮೊದಲು ಎಚ್‌ಸಿಆರ್‌ಪಿ (Hospital Cornea Retrieval Programme) ಮೂಲಕ ಮೃತ ವ್ಯಕ್ತಿಯಿಂದ ಕಣ್ಣು ಪಡೆಯಲಾಗುತ್ತಿತ್ತು. ಈಗ ಸೋಂಕಿತ ವ್ಯಕ್ತಿ ಮೃತಪಟ್ಟರೆ ಕಣ್ಣುಗಳನ್ನು ಪಡೆಯಲು ಆಗುವುದಿಲ್ಲ. ವ್ಯಕ್ತಿಯ ದೇಹದ ಜೊತೆಗೆ ಕಣ್ಣುಗಳೂ ನಾಶವಾಗುತ್ತವೆ. ಆದ್ದರಿಂದ ಕೋವಿಡ್‌ ಬಾರದಂತೆ ಎಚ್ಚರಿಕೆ ವಹಿಸಬೇಕು, ಇದರಿಂದ ನೇತ್ರದಾನಕ್ಕೂ ಅನುಕೂಲವಾಗುತ್ತದೆ ಎಂದರು.

ಕಣ್ಣಿನ ದೃಷ್ಟಿ ಬಗ್ಗೆ ಎಚ್ಚರಿಕೆ ವಹಿಸಬೇಕು

*ನೇತ್ರದಾನ ಮಹಾದಾನ. ಆದರೆ, ಕೋವಿಡ್‌ನಿಂದ ಮೃತಪಟ್ಟರೆ ಕಣ್ಣುಗಳನ್ನು ಪಡೆಯಲು ಬರುವುದಿಲ್ಲ. ಆದ್ದರಿಂದ ಕಣ್ಣಿನ ಬಗ್ಗೆ ಎಚ್ಚರಿಕೆ ವಹಿಸಿ.

*50 ವರ್ಷ ಮೇಲಿನವರು ಕಾಚಬಿಂದು ಬಗ್ಗೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡು ಕಣ್ಣಿನ ದೃಷ್ಟಿ ಬಗ್ಗೆ ಎಚ್ಚರಿಕೆ ವಹಿಸಬೇಕು.

*ಕೊರೊನಾ ಇರುವವರಿಗೆ ಮದ್ರಾಸ್‌ ಐ ಬರುವ ಸಾಧ್ಯತೆ ಇರುತ್ತದೆ.

*ಕಣ್ಣಿನ ಕ್ಷಮತೆ ಹೆಚ್ಚಿಸಲು ವಿಟಮಿನ್‌ ಎ ಅಂಶಗಳು ಇರುವ ಹಸಿ ತರಕಾರಿಗಳು, ಮೀನು ತಿನ್ನುವುದು ಉತ್ತಮ. ಮಧುಮೇಹಿಗಳು ಈ ವಿಷಯದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.