ADVERTISEMENT

ಕೊರೊನಾ ಸಾಂತ್ವನ: ನಿರ್ಲಕ್ಷ ಬಿಡಿ; ಶೀಘ್ರವೇ ಚಿಕಿತ್ಸೆ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 21:20 IST
Last Updated 26 ಏಪ್ರಿಲ್ 2021, 21:20 IST
ಡಾ.ಹಿರೇಣಪ್ಪ ಉಡನೂರ
ಡಾ.ಹಿರೇಣಪ್ಪ ಉಡನೂರ   

‘ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ನಂತರ ಬಹುತೇಕ ರೋಗಿಗಳು ಶ್ವಾಸಕೋಶ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಉಸಿರಾಡುವಾಗ ವೈರಾಣು, ಮೂಗಿನ ಮೂಲಕ ದೇಹ ಪ್ರವೇಶಿಸುತ್ತದೆ. ಅದು ನಿಧಾನವಾಗಿ ಶ್ವಾಸಕೋಶಕ್ಕೆ ಹಾನಿಯುಂಟುಮಾಡುತ್ತದೆ’.

‘ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಬಹುತೇಕರಲ್ಲಿ ನೆಗೆಟಿವ್‌ ಎಂದು ತೋರಿಸುತ್ತದೆ. ಆರಂಭದಲ್ಲಿ ಐದು ದಿನ ಜ್ವರ ಬಂದು ನಂತರ ಹೋಗಿಬಿಡುತ್ತದೆ. ಎಂಟನೇ ದಿನಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಸಿ.ಟಿ.ಸ್ಕ್ಯಾನ್‌ ಮಾಡಿಸಿದರೆ ದೇಹದೊಳಗೆ ಕೋವಿಡ್‌ ಲಕ್ಷಣಗಳು ಗೋಚರಿಸುತ್ತವೆ. ಕೋವಿಡ್‌ ನ್ಯುಮೋನಿಯಾ ಪತ್ತೆಯಾಗುತ್ತದೆ. ಹೀಗಾಗಿ ಜ್ವರ ಕಾಣಿಸಿಕೊಂಡ ಒಂದೆರಡು ದಿನಗಳಲ್ಲೇ ಸಿ.ಟಿ. ಸ್ಕ್ಯಾನ್‌ ಮಾಡಿಸುವುದು ಉತ್ತಮ. ಜೊತೆಗೆ ಅಗತ್ಯ ಔಷಧಗಳನ್ನು ತೆಗೆದುಕೊಂಡರೆ ಗಂಭೀರ ತೊಂದರೆಯಿಂದ ಪಾರಾಗಬಹುದು’.

‘ನಾನು ಜಿಮ್‌ನಲ್ಲಿ ನಿತ್ಯವೂ ದೇಹ ದಂಡಿಸುತ್ತಿದ್ದೇನೆ. ದಷ್ಟಪುಷ್ಟವಾಗಿಯೂ ಇದ್ದೇನೆ. ನನಗೆ ಸೋಂಕು ತಗಲುವುದಿಲ್ಲ ಎಂಬ ಭಾವನೆ ಬಹುತೇಕರಲ್ಲಿದೆ. ಅವರು ಭ್ರಮಾಲೋಕದಿಂದ ಹೊರಬರಬೇಕು. ಕೋವಿಡ್‌ ನಿಯಂತ್ರಿಸಲು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’.

ADVERTISEMENT

‘14 ವರ್ಷದೊಳಗಿನ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹೀಗಾಗಿ ಅವರಿಗೆ ಸೋಂಕು ತಗಲುವ ಅಪಾಯ ತೀರಾ ಕಡಿಮೆ. ಹಾಗಂತ ನಿರ್ಲಕ್ಷ ಬೇಡ. ಯುವಕರ ಪೈಕಿ ಅನೇಕರು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಕೆಲವರು ತುಂಬಾ ದಪ್ಪಗಿರುತ್ತಾರೆ. ಅವರು ಯಾವ ಬಗೆಯ ದೈಹಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವುದಿಲ್ಲ. ಅಂತಹವರು ತುಂಬಾ ಜಾಗರೂಕವಾಗಿರಬೇಕು’.

‘ಕೋವಿಡ್‌ನಿಂದ ಮೆದುಳು, ಹೃದಯ, ಮೂತ್ರಪಿಂಡ ಸೇರಿದಂತೆ ದೇಹದ ಎಲ್ಲಾ ಅಂಗಗಳಿಗೂ ತೊಂದರೆಯಾಗಬಹುದು. ಇವುಗಳಿಂದ ಬೇಗ ಚೇತರಿಸಿಕೊಳ್ಳಬಹುದು. ಶ್ವಾಸಕೋಶಕ್ಕೆ ಹಾನಿಯಾದರೆ ಗುಣಮುಖರಾಗುವುದು ತುಂಬಾ ಕಷ್ಟ. ಹೀಗಾಗಿ ಇದನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ನಿಲ್ಲಿಸಬೇಕು. ಮನೆಯಲ್ಲಿ ಹಿರಿಯ ಸದಸ್ಯರಿರುತ್ತಾರೆ. ಅವರ ಬಗ್ಗೆಯೂ ಯೋಚಿಸಬೇಕು. ಅಂತರ ಕಾಪಾಡಿಕೊಂಡರೆ ಕೋವಿಡ್‌ ಸರಪಳಿ ಮುರಿಯುವುದು ಸುಲಭ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’.

-ಡಾ.ಹಿರೇಣಪ್ಪ ಉಡನೂರ, ಶ್ವಾಸಕೋಶ ತಜ್ಞ,ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಹೆಬ್ಬಾಳ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.