ADVERTISEMENT

ಕೋವಿಡ್‌ ಲಸಿಕೆಮುಟ್ಟು, ಫಲವಂತಿಕೆ ಮೇಲೆ ಪರಿಣಾಮವಿದೆಯೆ?

ರೇಷ್ಮಾ
Published 30 ಏಪ್ರಿಲ್ 2021, 19:30 IST
Last Updated 30 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹದಿನೆಂಟು ವರ್ಷಕ್ಕಿಂತ ಮೇಲಿನವರಿಗೂ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಲಿದೆ. ಈ ವಯಸ್ಸಿನ ಹೆಣ್ಣುಮಕ್ಕಳೆಂದರೆ ಋತುಸ್ರಾವ, ಗರ್ಭಧಾರಣೆ ಮೊದಲಾದ ಅಂಶಗಳ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಲಸಿಕೆ ತೆಗೆದುಕೊಳ್ಳುವುದರಿಂದ ಋತುಚಕ್ರ ಏರುಪೇರಾಗುತ್ತದೆಯೇ, ಗರ್ಭಧಾರಣೆಗೆ ಯೋಜನೆ ಹಾಕಿಕೊಂಡಿದ್ದರೆ ಅದಕ್ಕೆ ತೊಂದರೆ ಆಗಬಹುದೇ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸುತ್ತಿರುವವರಿಗೆ ರಕ್ತ ಗರಣೆ (ಬ್ಲಡ್‌ ಕ್ಲಾಟಿಂಗ್‌) ಕಟ್ಟುವಂತಹ ಸಮಸ್ಯೆ ಉಂಟಾಗಬಹುದೇ ಎಂಬಂತಹ ಅನುಮಾನಗಳು ಯುವತಿಯರಲ್ಲಿ ಇರಬಹುದು.

ಲಸಿಕೆ ತೆಗೆದುಕೊಳ್ಳುವುದರಿಂದ ಋತುಚಕ್ರದಲ್ಲಿ ಏರುಪೇರಾದರೂ ಭಯ ಪಡುವ ಅಗತ್ಯವಿಲ್ಲ. ಅಮೆರಿಕದಲ್ಲಿ ಜಾನ್ಸನ್‌ ಅಂಡ್‌ ಜಾನ್ಸನ್‌ ಕೋವಿಡ್ ಲಸಿಕೆ ಪಡೆದ ಕೆಲವರಲ್ಲಿ ಈ ಏರುಪೇರು ಕಂಡು ಬಂದಿದೆ ಎಂಬ ವರದಿಯಿದೆ. ಲಸಿಕೆ ತೆಗೆದುಕೊಂಡಾಗ ಕೆಲವರಲ್ಲಿ ಒಂದೆರಡು ದಿನಗಳ ಕಾಲ ಜ್ವರ ಕಾಣಿಸಿಕೊಳ್ಳಬಹುದು; ಹಾಗಂತ ಅದೇನೂ ಕಾಯಂ ಅಲ್ಲವಲ್ಲ. ಅದೇ ರೀತಿ ಮುಟ್ಟಿನಲ್ಲಾಗುವ ಏರುಪೇರು ಕೂಡ ತಾತ್ಕಾಲಿಕ. ಲಸಿಕೆ ತೆಗೆದುಕೊಂಡ ತಿಂಗಳಲ್ಲಿ ಮುಟ್ಟು ನಾಲ್ಕಾರು ದಿನಗಳ ಕಾಲ ಮುಂಚಿತವಾಗಿ ಅಥವಾ ತಡವಾಗಿ ಆಗಬಹುದು. ಮುಟ್ಟಾದ ಸಂದರ್ಭದಲ್ಲೂ ಲಸಿಕೆ ಹಾಕಿಸಿಕೊಳ್ಳಲು ಅಡ್ಡಿಯಲ್ಲ. ಬೇರೆನೂ ತೊಂದರೆಯಾಗದು. ಒತ್ತಡ ಕೂಡ ಈ ಏರುಪೇರಿಗೆ ಕಾರಣ ಇರಬಹುದು. ‘ಆದರೆ ಈ ವಿಷಯವನ್ನು ಉತ್ಪ್ರೇಕ್ಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು’ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಹಾಗೂ ಪ್ರಸೂತಿ ತಜ್ಞೆ ಡಾ. ವಿದ್ಯಾ ವಿ. ಭಟ್‌.

ಹಾಗೆಯೇ ಲಸಿಕೆಯಿಂದ ಫಲವಂತಿಕೆ ಕಡಿಮೆಯಾಗುತ್ತದೆ ಎಂಬ ಸುದ್ದಿ ಕೂಡ ಸುಳ್ಳು. ಇದಕ್ಕೆ ಪುಷ್ಟಿ ಕೊಡುವಂತಹ ಯಾವುದೇ ಸಾಕ್ಷಿಯೂ ಇಲ್ಲ. ಗರ್ಭಧಾರಣೆಗೆ ಯೋಜನೆ ಹಾಕಿಕೊಳ್ಳುತ್ತಿರುವವರೂ ಕೂಡ ಲಸಿಕೆ ಹಾಕಿಸಿಕೊಳ್ಳಬಹುದು. ಲಸಿಕೆ ಹಾಕಿಸಿಕೊಂಡ ನಂತರ ಒಂದು ಋತುಚಕ್ರ ಏರುಪೇರಾದರೂ ಮುಂದಿನ ತಿಂಗಳಲ್ಲೇ ಸರಿ ಹೋಗುತ್ತದೆ, ಹೀಗಾಗಿ ನಂತರದ ತಿಂಗಳಲ್ಲಿ ಗರ್ಭಧಾರಣೆಗೆ ಯತ್ನಿಸಬಹುದು ಎಂದೂ ತಜ್ಞರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಅಮೆರಿಕದಲ್ಲಿ ಜಾನ್ಸನ್‌ ಅಂಡ್‌ ಜಾನ್ಸನ್‌ ಲಸಿಕೆಯನ್ನು ಗರ್ಭಿಣಿಯರಿಗೂ ನೀಡಲಾಗಿದ್ದು, ಹುಟ್ಟಿದ ಮಗುವಿನಲ್ಲೂ ಪ್ರತಿಕಾಯಗಳು ಕಂಡುಬಂದಿದ್ದು ಆಶಾದಾಯಕ ಬೆಳವಣಿಗೆ ಎನ್ನಲಾಗಿದೆ. ಭಾರತದಲ್ಲಿ ಇದುವರೆಗೆ ಗರ್ಭಿಣಿಯರಿಗೆ ಈ ಲಸಿಕೆ ನೀಡಿರಲಿಲ್ಲ. ‘ಗರ್ಭಿಣಿಯರಿಗೂ ಲಸಿಕೆ ನೀಡಬೇಕು ಎಂದು ಸರ್ಕಾರದಿಂದ ಆದೇಶ ಬಂದಿದೆ. ಹೀಗಾಗಿ ಇನ್ನು ಮುಂದೆ ಗರ್ಭಿಣಿಯರಿಗೆ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ’ ಎನ್ನುತ್ತಾರೆ ಡಾ. ವಿದ್ಯಾ ಭಟ್‌.

ಇನ್ನು ಗರ್ಭ ನಿರೋಧಕ ಮಾತ್ರೆ ಸೇವಿಸುತ್ತಿರುವ ಯುವತಿಯರಲ್ಲಿ ಈ ಕೋವಿಡ್ ಲಸಿಕೆಯಿಂದ ರಕ್ತ ಗರಣೆ ಕಟ್ಟುವಂತಹ ಸಮಸ್ಯೆ ತಲೆದೋರಬಹುದೇ ಎಂಬ ಅನುಮಾನಗಳೂ ಕೆಲವರಲ್ಲಿ ಇರಬಹುದು. ಕೋವಿಡ್‌ನಿಂದ ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆ ಬರುತ್ತದೆಯೇ ಹೊರತು ಲಸಿಕೆಯಿಂದ ಇಂತಹ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.