ಒತ್ತಡ, ಅನಾರೋಗ್ಯಕರ ಜೀವನಶೈಲಿ, ನಿದ್ರೆಯ ಕೊರತೆ ಮುಂತಾದ ಕಾರಣಗಳಿಂದ ಹಲವಾರು ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಕಣ್ಣಿನ ಸುತ್ತಲೂ ಕಪ್ಪಾಗುವ ಸಮಸ್ಯೆ ಮುಖದ ಅಂದಗೆಡಿಸುತ್ತದೆ. ಕೆಲವರಿಗೆ ಒಮ್ಮೆ ಇದು ಕಾಣಿಸಿಕೊಂಡರೆ ಬೇಗ ನಿವಾರಣೆಯಾಗುವುದಿಲ್ಲ. ಆದರೆ ಇದರ ನಿವಾರಣೆಗೆ ಹರಳೆಣ್ಣೆ ಮದ್ದು.ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಸೇರಿದಂತೆ ಇನ್ನೂ ಕೆಲವು ಕಣ್ಣಿನ ಸಮಸ್ಯೆಗಳಿಗೆ ಹರಳೆಣ್ಣೆ ಔಷಧಿ. ಇದರಲ್ಲಿರುವ ಔಷಧೀಯ ಗುಣವು ಕಣ್ಣಿನ ಸುತ್ತಲಿನ ಕಪ್ಪು ವರ್ತುಲವನ್ನು ನಿವಾರಿಸಿ ಮುಖದ ಅಂದ ಹೆಚ್ಚಿಸುತ್ತದೆ.
ಹರಳೆಣ್ಣೆ ಹಾಗೂ ಹಾಲು
ಒಂದು ಚಿಕ್ಕ ಬೌಲ್‌ನಲ್ಲಿ ಒಂದು ಚಮಚ ಹರಳೆಣ್ಣೆ ಹಾಗೂ ಒಂದು ಟೀ ಚಮಚ ಕೊಬ್ಬಿನಂಶ ಇರುವ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ. ಒಂದು ಗಂಟೆ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ದಿನಕ್ಕೊಮ್ಮೆ ಇದನ್ನು ಪಾಲಿಸುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಇದ್ದು ಇದು ಚರ್ಮದ ಹೊಳಪು ಹೆಚ್ಚಲು ಸಹಾಯ ಮಾಡುತ್ತದೆ. ಅಲ್ಲದೇ ಸತ್ತ ಚರ್ಮದ ಪದರವನ್ನು ಅಳಿಸಿ ಹಾಕುತ್ತದೆ.
ಹರಳೆಣ್ಣೆ ಹಾಗೂ ಬಾದಾಮಿ ಎಣ್ಣೆ
ಒಂದು ಬೌಲ್‌ನಲ್ಲಿ 4 ಹನಿ ಹರಳೆಣ್ಣೆ ಹಾಗೂ 4 ಹನಿ ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ. ನಿಧಾನಕ್ಕೆ ಮಸಾಜ್ ಮಾಡಿ. ಇಡೀ ರಾತ್ರಿ ಹಾಗೇ ಬಿಡಿ. ಪ್ರತಿದಿನ ಮಲಗುವ ಮೊದಲು ಹೀಗೆ ಮಾಡಿ. ಇದರಿಂದ ಶೀಘ್ರವೇ ಕಪ್ಪು ವರ್ತುಲದ ಸಮಸ್ಯೆಯಿಂದ ಪಾರಾಗಬಹುದು.
ಹರಳೆಣ್ಣೆ ಹಾಗೂ ತೆಂಗಿನೆಣ್ಣೆ
ಹರಳೆಣ್ಣೆ ಹಾಗೂ ತೆಂಗಿನೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಕಣ್ಣಿನ ಸುತ್ತಲೂ ಕಪ್ಪಾದ ಜಾಗಕ್ಕೆ ಹಚ್ಚಿ. ನಿಧಾನಕ್ಕೆ ಎರಡು ನಿಮಿಷ ಉಜ್ಜಿ. ರಾತ್ರಿ ಹಾಗೇ ಇಡಿ. ತೆಂಗಿನೆಣ್ಣೆಯಲ್ಲಿ ಕೊಬ್ಬಿನಾಂಶ ಅಧಿಕವಾಗಿದೆ. ಇದು ಕಪ್ಪಾದ ಜಾಗದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಧಾನಕ್ಕೆ ಕಪ್ಪು ಬಣ್ಣವನ್ನು ತಿಳಿಗೊಳಿಸಿ ಅಂದವನ್ನು ಮರಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.