
ಮಧುಮೇಹ
ಬೆಂಗಳೂರು: ಬದಲಾದ ಜೀವನಶೈಲಿ, ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಮಧುಮೇಹ ಸಮಸ್ಯೆಗೆ ಒಳಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಯು ‘ಗೃಹ ಆರೋಗ್ಯ’ ಯೋಜನೆಯಡಿ ನಡೆಸಿದ ತಪಾಸಣೆಯಲ್ಲಿ 27.62 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ‘ಗೃಹ ಆರೋಗ್ಯ’ ಯೋಜನೆಯಡಿ ರಾಜ್ಯದಾದ್ಯಂತ ತಪಾಸಣೆ ನಡೆಸಲಾಗುತ್ತಿದೆ. ಮನೆ ಬಾಗಿಲಲ್ಲಿಯೇ ವಿವಿಧ ಅನಾರೋಗ್ಯ ಸಮಸ್ಯೆಗಳ ಪತ್ತೆಗೆ ಈ ಯೋಜನೆಯನ್ನು ಪ್ರಾಯೋಗಿಕವಾಗಿ 2024ರ ಅಕ್ಟೋಬರ್‌ನಲ್ಲಿ ಕೋಲಾರದಲ್ಲಿ ಪ್ರಾರಂಭಿಸಲಾಗಿತ್ತು. 2025ರ ಜೂನ್‌ನಲ್ಲಿ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗಿತ್ತು. ಮಧುಮೇಹ ಪತ್ತೆಗೆ ಸಂಬಂಧಿಸಿದಂತೆ ನವೆಂಬರ್‌ವರೆಗೆ ನಡೆಸಲಾದ ತಪಾಸಣೆಯಲ್ಲಿ 13.29 ಲಕ್ಷ ಪುರುಷರಲ್ಲಿ ಮಧುಮೇಹ ದೃಢಪಟ್ಟರೆ, 14.33 ಲಕ್ಷ ಮಹಿಳೆಯರಲ್ಲಿ ಈ ರೋಗ ಪತ್ತೆಯಾಗಿದೆ.
ಈ ವರ್ಷ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ತಪಾಸಣೆಗೆ ಒಳಪಟ್ಟ 32.99 ಲಕ್ಷ ಪುರುಷರಲ್ಲಿ 3.64 ಲಕ್ಷ ಮಂದಿ, 33.92 ಲಕ್ಷ ಮಹಿಳೆಯಲ್ಲಿ 4 ಲಕ್ಷ ಮಂದಿಯಲ್ಲಿ ಮಧುಮೇಹ ಸಮಸ್ಯೆ ಹೊಸದಾಗಿ ಪತ್ತೆಯಾಗಿದೆ. ಯೋಜನೆಯಡಿ ಮಧುಮೇಹಿಗಳಿಗೆ ಅಗತ್ಯ ಔಷಧಗಳನ್ನು ಒದಗಿಸಿ, ಚಿಕಿತ್ಸೆಗಳನ್ನು ನೀಡಲಾಗಿದೆ. ಆರಂಭಿಕ ಹಂತದ ಸಮಸ್ಯೆ ಎದುರಿಸುತ್ತಿರುವವರಿಗೆ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಸೇರಿ ವಿವಿಧ ಮಾರ್ಗದರ್ಶನವನ್ನು ವೈದ್ಯರನ್ನು ಒಳಗೊಂಡ ತಂಡ ನಿಯಮಿತವಾಗಿ ನೀಡುತ್ತಿದೆ.
20.50 ಲಕ್ಷ ಮನೆ ಭೇಟಿ:
ಯೋಜನೆಯಡಿ ವೈದ್ಯರನ್ನೊಳಗೊಂಡ ತಂಡವು ಗ್ರಾಮೀಣ ಪ್ರದೇಶಗಳಲ್ಲಿ 30 ವರ್ಷ ಮೇಲ್ಪಟ್ಟವರನ್ನು ತಪಾಸಣೆ ಮಾಡುತ್ತಿದೆ. ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡವು 20.50 ಲಕ್ಷಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನೂ ನೀಡಲಾಗುತ್ತಿದೆ. ಈ ಔಷಧವನ್ನು ಪ್ರತಿ ತಿಂಗಳು ಪರಿಶೀಲಿಸಿ, ಮುಂದುವರಿಕೆಗೆ ಅಗತ್ಯವಿರುವ ಮಾತ್ರೆಗಳನ್ನು ಒದಗಿಸಲಾಗುತ್ತಿದೆ.
‘ಯೋಜನೆಯು ಸದ್ಯ ಗ್ರಾಮೀಣ ಪ್ರದೇಶದಲ್ಲಿ ಜಾರಿಯಲ್ಲಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಗೆ ಯೋಜನೆ ಸಹಕಾರಿಯಾಗಿದೆ’ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ. ರಘುನಂದನ್ ತಿಳಿಸಿದರು.
ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಿಂದ ಮರಣ ತಡೆಯಲು ಸಾಧ್ಯ. ಆರೋಗ್ಯ ಭರವಸೆ ಒದಗಿಸುವ ಈ ಯೋಜನೆಯಡಿ ವಿವಿಧ ಅನಾರೋಗ್ಯ ಸಮಸ್ಯೆ ಪತ್ತೆ ಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
14 ರೋಗಗಳ ಪತ್ತೆಗೆ ತಪಾಸಣೆ
ಗೃಹ ಆರೋಗ್ಯ ಯೋಜನೆಯಡಿ 14 ಸಾಂಕ್ರಾಮಿಕವಲ್ಲದ ರೋಗಗಳ ಪತ್ತೆಗೆ ತಪಾಸಣೆ ಮಾಡಲಾಗುತ್ತಿದೆ. ಮಧುಮೇಹ ಅಧಿಕ ರಕ್ತದೊತ್ತಡ ಬಾಯಿ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಮಾನಸಿಕ ಅಸ್ವಸ್ಥತೆ ಮೂತ್ರಪಿಂಡ ಸಮಸ್ಯೆ ಶ್ವಾಸಕೋಶ ಕಾಯಿಲೆ ರಕ್ತಹೀನತೆ ಕಣ್ಣಿನ ಸಮಸ್ಯೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಅಗತ್ಯ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಯನ್ನೂ ಒದಗಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಶಂಕಿತ ಪ್ರಕರಣಗಳನ್ನು ದೃಢಪಡಿಸಿ ಹೆಚ್ಚಿನ ಶಿಕಿತ್ಸೆಗೆ ಶಿಫಾರಸು ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.